ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಫಲಿತಾಂಶ ಪ್ರಶ್ನಿಸುವ ಹಕ್ಕು ಮತದಾರನಿಗಿದೆ

ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ರೆಡ್ಡಿ ಪ್ರಕರಣದಲ್ಲಿ ತೀರ್ಪು
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಪಂಚಾಯಿತಿ ಚುನಾವಣೆ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಮತದಾರನಿಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ರೆಡ್ಡಿ ಅವರ ಆಯ್ಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶ ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮತದಾರನಿಗಿರುವ ಹಕ್ಕನ್ನು ಗುರುತಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಮಾತ್ರವಲ್ಲದೇ, ಮತದಾರ ಕೂಡ ಫಲಿತಾಂಶವನ್ನು ಪ್ರಶ್ನಿಸಬಹುದು ಎಂದು ಅದು ಪ್ರತಿಪಾದಿಸಿದೆ.

‘ಒಂದು ವೇಳೆ, ನಿರ್ದಿಷ್ಟ ಪಂಚಾಯಿತಿಯ ಅಧ್ಯಕ್ಷನ ಆಯ್ಕೆಯಿಂದ ಮತದಾರ ಅನ್ಯಾಯಕ್ಕೆ ಒಳಗಾದರೆ ಆತನಿಗೆ ನ್ಯಾಯ ಸಿಗುವಂತಾಗಬೇಕು’ ಎಂದು ಅಭಿಪ್ರಾಯಪಟ್ಟಿದೆ.
ಫಲಿತಾಂಶವನ್ನು ಪ್ರಶ್ನಿಸುವ ಮತದಾರನ ಹಕ್ಕನ್ನು, ನ್ಯಾಯಾಂಗ ಪರಿಶೀಲನೆ ನಡೆಸುವ ತನ್ನ ಅಧಿಕಾರಕ್ಕೆ ಅದು ಹೋಲಿಸಿದೆ.‌

‘ಸಂವಿಧಾನದ 226/227 ವಿಧಿಗಳ ಅಡಿಯಲ್ಲಿ ಲಭ್ಯವಿರುವ ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಯಾರಿಗೂ ಬದಲಾಯಿಸಲು ಸಾಧ್ಯವಿಲ್ಲ ಅಥವಾ ತೆಗೆದು ಹಾಕಲು ಸಾಧ್ಯವಿಲ್ಲ. ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಕ್ಕಾಗಿ ಅದಕ್ಕೆ ತಿದ್ದುಪಡಿ ಮಾಡಲೂ ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌ ಮತ್ತು ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ನ್ಯಾಯಪೀಠ ಹೇಳಿದೆ.

ಸಂವಿಧಾನದ 243–ಒ ವಿಧಿಯ ಪ್ರಕಾರ, 1993ರ ಕರ್ನಾಟಕ ಗ್ರಾಮ ಸ್ವರಾಜ್‌ ಕಾಯ್ದೆಯ ಪ್ರಕಾರ ನಡೆದಿರುವ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಪ್ರಶ್ನಿಸುವಂತಿಲ್ಲ ಎಂಬ ವಾದ ಇಲ್ಲಿ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯನ್ನು ಬಿಟ್ಟು ಉಳಿದವರು ಜಿಲ್ಲಾ ಪಂಚಾಯಿತಿ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಸಂವಿಧಾನದ 243–ಒ ವಿಧಿ ಹೇಳುತ್ತದೆ.

ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಬಿಟ್ಟರೆ ಬೇರೆ ಯಾರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಪ್ರಶ್ನಿಸುವಂತಿಲ್ಲ ಎಂದು ಕರ್ನಾಟಕದ ಕಾನೂನಿನ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು ಕೂಡ ಹೇಳುತ್ತವೆ.

ಆದರೆ, ಆದೇಶದಲ್ಲಿ ಕರ್ನಾಟಕದ ಕಾನೂನನ್ನು ವಿಶ್ಲೇಷಣೆಗೆ ಒಳಪಡಿಸಿರುವ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌, ‘ಸಂವಿಧಾನದ 226/227 ವಿಧಿಗಳ (ಹೈಕೋರ್ಟ್‌ನ ವ್ಯಾಪ್ತಿಯ ರಿಟ್‌ ಅರ್ಜಿ) ಅನುಸಾರ ಜಿಲ್ಲಾ ಪಂಚಾಯಿತಿಯ ಸದಸ್ಯನಲ್ಲದ ಮತದಾರನಿಗೆ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸುವ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಭಾರತಿ ರೆಡ್ಡಿ ಅವರು ನಕಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಆಯ್ಕೆಯನ್ನು ಪ್ರಶ್ನಿಸಿ ಕರ್ನಾಟಕದ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಹೈಕೋರ್ಟ್‌ ಈ ಅರ್ಜಿಗಳನ್ನು ಮಾನ್ಯ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಈ ಅರ್ಜಿಗಳು ಪರಿಗಣನೆಗೆ ಯೋಗ್ಯವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಭಾರತಿ ಅವರಿಗೆ ಅವಕಾಶ ಕಲ್ಪಿಸಿದೆ. ಅಲ್ಲದೇ, ಅವರ ವಿರುದ್ಧದ ಅರ್ಜಿಗಳನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥ ಪಡಿಸುವಂತೆ ಹೈಕೋರ್ಟ್‌ಗೆ ಸೂಚಿಸಿದೆ.

ಹೈಕೋರ್ಟ್‌ ಕೈಗೊಳ್ಳುವ ತೀರ್ಮಾನವು, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸಲ್ಲಿಸಿರುವ ಅರ್ಜಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅವರು ಕೂಡ ನಕಲಿ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT