ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಕಟ್ಟಡದಲ್ಲಿ ಆರ್‌ಟಿಒ ಕಚೇರಿ

₹9.93 ಕೋಟಿ ವೆಚ್ಚದಲ್ಲಿ ನಿರ್ಮಾಣ; ಸಾರಿಗೆ ಸಚಿವ ಎಂ.ರಾಮಲಿಂಗಾರೆಡ್ಡಿ ಉದ್ಘಾಟನೆ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ ಬಿಡಿಎ ಸಂಕೀರ್ಣದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯು (ಪೂರ್ವ) ಕಸ್ತೂರಿನಗರದಲ್ಲಿ ₹9.93 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಹೊಸ ಕಟ್ಟಡದಲ್ಲಿ ಶನಿವಾರ ಕಚೇರಿಯ ಕಾರ್ಯಗಳು ಆರಂಭವಾದವು.

ಕಚೇರಿಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ಸಾರ್ವಜನಿಕರು ರಸ್ತೆ ಹಾಗೂ ಮೆಟ್ರೊ ರೈಲಿನ ಮೂಲಕ ಸುಲಭವಾಗಿ ಈ ಕಚೇರಿ ತಲುಪಬಹುದು’ ಎಂದರು.

‘ಕಚೇರಿಯ ಪಕ್ಕದ ಜಾಗದಲ್ಲಿ ಅತ್ಯಾಧುನಿಕ ಚಾಲನಾ ತರಬೇತಿ ಟ್ರ್ಯಾಕ್ ನಿರ್ಮಿಸಲಾಗುವುದು. ಇದಕ್ಕೆ ಜಾಗ ನೀಡಲು ಬಿಡಿಎ ಒಪ್ಪಿದೆ. ಐಟಿಐ ಕಾರ್ಖಾನೆಯ 4 ಎಕರೆ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ನಿರ್ಧರಿಸಲಾಗಿದೆ. ಭೋಗ್ಯಕ್ಕೆ ಜಾಗ ನೀಡಲು ಐಟಿಐ ಆಡಳಿತ ಮಂಡಳಿ ಒಪ್ಪಿದೆ’ ಎಂದರು.

ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ, 'ನಗರ ಅಭಿವೃದ್ಧಿ ಹೊಂದಿದಂತೆ ಸಂಚಾರ ಸಮಸ್ಯೆಯೂ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ನಗರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಪ್ರಯತ್ನಿಸುತ್ತಿವೆ’ ಎಂದರು.

***

‘ಕುತಂತ್ರಕ್ಕೆ ಬಿಜೆಪಿ ಪ್ರಸಿದ್ಧಿ

‘ರಾಮ ಮಂದಿರದ ಹೆಸರು ಹೇಳಿಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಕುತಂತ್ರ ರಾಜಕಾರಣ ಚೆನ್ನಾಗಿ ಗೊತ್ತಿದೆ. ಸೇಡಿನ ರಾಜಕಾರಣದಲ್ಲೂ ಅವರು ಎತ್ತಿದ ಕೈ. ಕಾಂಗ್ರೆಸ್‌ಗೆ ಆ ಸಂಸ್ಕೃತಿ ಒಗ್ಗುವುದಿಲ್ಲ’ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಎಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿರುವುದನ್ನು ಸೇಡಿನ ರಾಜಕಾರಣ ಎನ್ನುವುದಾದರೆ, ಸಚಿವ ಡಿ.ಕೆ.ಶಿವಕುಮಾರ್‌ ಮೇಲಿನ ಐ.ಟಿ ದಾಳಿಯನ್ನು ಏನೆನ್ನುವುದು’ ಎಂದು ಬಿಜೆಪಿ ನಾಯಕರ ಆರೋಪಗಳಿಗೆ ಅವರು ತಿರುಗೇಟು ನೀಡಿದರು.

‘ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟಿಸುವುದು ಹಾಸ್ಯಾಸ್ಪದ.ಅವರ ಆಡಳಿತಾವಧಿಯಲ್ಲಿ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಹತ್ತಾರು ಹಗರಣಗಳಲ್ಲಿ ಭಾಗಿಯಾಗಿದ್ದರು. ಅವರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಬದಲು, ಗಾಂಧಿ ಪ್ರತಿಮೆ ಮುಂದೆ ಕುಳಿತು ಅವರ ಆಡಳಿತಾವಧಿಯ ಹಗರಣಗಳ ಬಗ್ಗೆ ಕ್ಷಮೆಯಾಚಿಸುವುದು ಒಳ್ಳೆಯದು’ ಎಂದು ವ್ಯಂಗ್ಯವಾಗಿ ಹೇಳಿದರು.

***

ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಜನಸ್ನೇಹಿಯಾಗಿ ರೂಪಿಸಲು ಹಲವು ಸುಧಾರಣೆ ತರಲಾಗುತ್ತಿದೆ.
–ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ

***

ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಡಿವಿಎಸ್

‘ಡಿನೋಟಿಫಿಕೇಶನ್ ಪ್ರಕರಣಗಳನ್ನು ಮತ್ತೆ ಕೈಗೆತ್ತಿಕೊಳ್ಳುವ ಮೂಲಕ ರಾಜ್ಯದ ಕಾಂಗ್ರೆಸ್ ನಾಯಕರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಡಿ.ವಿ.ಸದಾನಂದಗೌಡ ಕಿಡಿಕಾರಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಸಾಕಷ್ಟು ದೂರುಗಳು ದಾಖಲಾಗಿವೆ. ಆದರೆ, ಇದುವರೆಗೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ದ್ವೇಷದ ರಾಜಕಾರಣವಲ್ಲದೆ, ಮತ್ತೇನು’ ಎಂದು ಪ್ರಶ್ನಿಸಿದರು.

***

2,256 ಚದರ ಮೀಟರ್‌ ನಿವೇಶನದಲ್ಲಿ ಕಟ್ಟಡ

ಕಚೇರಿ ಕಾರ್ಯಕ್ಕೆ ‘ಸಾರಥಿ ಮತ್ತು ‘ವಾಹನ್‌’ ತಂತ್ರಾಂಶ ಬಳಕೆ

ವಾಹನಗಳ ದಾಖಲೆ ಸಂಗ್ರಹಕ್ಕೆ ಪ್ರತ್ಯೇಕ ಕೊಠಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT