ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ಗಾಳಿ ಸಹಿತ ಮಳೆ: 11 ಕಡೆ ನೆಲಕ್ಕುರುಳಿದ ಮರಗಳು

* ಮೂರು ಕಾರುಗಳು ಜಖಂ * 15 ನಿಮಿಷದಲ್ಲಿ 66 ಮಿ.ಮೀ ಮಳೆ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಪರಿಣಾಮ 11 ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ.

ಶುಕ್ರವಾರ ಸಂಜೆಯೂ ನಗರದಲ್ಲಿ ಮಳೆಯಾಗಿತ್ತು. ಆದರೆ, ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಶನಿವಾರ ಮಳೆ ಸುರಿದ ವೇಳೆ ಗಾಳಿ ವೇಗವಾಗಿ ಬೀಸಿದ್ದರಿಂದ ಮರಗಳು ಬುಡಸಮೇತ ಉರುಳಿಬಿದ್ದಿವೆ.

ರಾಜಭವನ ಬಳಿಯ ಅಲಿ ಆಸ್ಗರ್‌ ರಸ್ತೆ, ಮಾರುತಿ ಸೇವಾನಗರ, ನೃಪತುಂಗ ರಸ್ತೆ, ಬಿಟಿಎಂ ಲೇಔಟ್‌ 2ನೇ ಹಂತ, ತ್ಯಾಗರಾಜನಗರ, ವಸಂತನಗರ, ಪೀಣ್ಯ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮಿ ಲೇಔಟ್‌, ಮಾಗಡಿ ರಸ್ತೆ, ರಾಜಾಜಿನಗರ ಎನ್‌ ಬ್ಲಾಕ್‌ನಲ್ಲಿ ತಲಾ ಒಂದೊಂದು ಮರಗಳು ನೆಲಕ್ಕುರುಳಿವೆ.

ಅಲಿ ಆಸ್ಗರ್‌ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆಯೇ ಮರ ಬಿದ್ದಿದೆ. ಪರಿಣಾಮ ಕಾರುಗಳು ಜಖಂಗೊಂಡಿವೆ. ಸ್ಥಳೀಯರು ಹಾಗೂ ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿ, ಮರವನ್ನು ತೆರವುಗೊಳಿಸಿ ಕಾರುಗಳನ್ನು ಹೊರತೆಗೆದರು. ಈ ರಸ್ತೆಯ ಒಂದೇ ಬದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದರಿಂದ ದಟ್ಟಣೆ ಉಂಟಾಗಿ, ಸವಾರರು ಪಡಿಪಾಟಲು ಅನುಭವಿಸಿದರು.

ನಿತ್ಯವೂ ವಾಹನಗಳ ದಟ್ಟಣೆ ಹೆಚ್ಚಿರುವ ನೃಪತುಂಗ ರಸ್ತೆಯಲ್ಲೂ ಮರ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಮೆಜೆಸ್ಟಿಕ್‌, ಶೇಷಾದ್ರಿಪುರ ರಸ್ತೆ, ವಿಧಾನಸೌಧ ರಸ್ತೆ ಮೂಲಕ ಕಾರ್ಪೊರೇಷನ್‌ ವೃತ್ತಕ್ಕೆ ಹೊರಟಿದ್ದ ವಾಹನಗಳು ಸಾಲಾಗಿ ನಿಲ್ಲುವಂತಾಯಿತು. ಈ ರಸ್ತೆಯ ಸುತ್ತಮುತ್ತಲೆಲ್ಲ ದಟ್ಟಣೆ ಕಂಡುಬಂತು. ಸ್ಥಳಕ್ಕೆ ಬಂದ ಹಲಸೂರು ಗೇಟ್‌ ಸಂಚಾರ ಠಾಣೆಯ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ, ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದ ಸಾರ್ವಜನಿಕರ ಸಂಖ್ಯೆ ಹೆಚ್ಚಿತ್ತು. ಅದೇ ವೇಳೆಯೇ ಜೋರು ಮಳೆಯಾಗಿದ್ದರಿಂದ ಅವರೆಲ್ಲರೂ ಮನೆ ತಲುಪಲು ತೊಂದರೆ ಅನುಭವಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯ ದ್ವಾರದ ಎದುರಿನ ರಸ್ತೆ ಮೇಲೆಯೇ ಮೂರು ಅಡಿಯಷ್ಟು ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ನೀರು ಸರಾಗವಾಗಿ ಹರಿದುಹೋಗಲು ಕಾಲುವೆ ಇಲ್ಲ. ಹೀಗಾಗಿ ಮಳೆ ಬಂದಾಗಲೆಲ್ಲ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಅದೇ ನೀರು ಕಬ್ಬನ್‌ ಉದ್ಯಾನದೊಳಗೆ ಹರಿದು ಹೋಗುತ್ತಿದೆ.

‘ನೀರು ಹರಿಯುವುದರಿಂದ ರಸ್ತೆಯು ಹಾಳಾಗುತ್ತಿದೆ. ತಗ್ಗುಗಳು ಬೀಳುತ್ತಿವೆ. ಈ ರಸ್ತೆಯ ಮಧ್ಯದಲ್ಲಿ ಒಳಚರಂಡಿ ಇದ್ದು, ಕೆಲವು ಬಾರಿ ಅದೇ ಜಾಗದಲ್ಲಿ ರಸ್ತೆಯೂ ಕುಸಿದು ಬಿದ್ದಿದೆ. ಮುಂದೆಯೂ ಕುಸಿಯುವ ಆತಂಕವಿದೆ’ ಎಂದು ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.

ಮೆಜೆಸ್ಟಿಕ್‌, ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರನಗರ, ವಿಜಯನಗರ, ಕೆಂಗೇರಿ, ಹೊಸಕೆರೆಹಳ್ಳಿ, ಜ್ಞಾನಭಾರತಿ, ಪೀಣ್ಯ, ಯಶವಂತಪುರ, ಮಡಿವಾಳ, ಎಚ್‌.ಎಸ್‌.ಆರ್‌ ಲೇಔಟ್‌, ಕೋರಮಂಗಲ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ವಸಂತನಗರ, ಜಯನಗರ, ತ್ಯಾಗರಾಜನಗರ, ಬಸವನಗುಡಿ, ರಾಜರಾಜೇಶ್ವರಿನಗರ ಹಾಗೂ ಸುತ್ತಮುತ್ತ ಉತ್ತಮ ಮಳೆಯಾಗಿದೆ.

66 ಮಿ.ಮೀ ಮಳೆ:

ನಗರದಲ್ಲಿ ಮಧ್ಯಾಹ್ನ 4ರಿಂದ 4.15ರವರೆಗೆ ಭಾರೀ ಮಳೆಯಾಗಿದೆ. 15 ನಿಮಿಷದಲ್ಲೇ ರಾಜರಾಜೇಶ್ವರಿನಗರದ ಮಳೆ ಮಾಪನ ಕೇಂದ್ರದಲ್ಲಿ 66 ಮಿ.ಮೀ ಮಳೆಯಾಗಿದ್ದು ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದರು.

‘ಬೇಗೂರು ಸುತ್ತಮುತ್ತ 66 ಮಿ.ಮೀ, ಕೆಂಗೇರಿ ಸುತ್ತಮುತ್ತ 62 ಮಿ.ಮೀ ಹಾಗೂ ಗೊಟ್ಟಿಗೆರೆ 60 ಮಿ.ಮೀ ಮಳೆ ದಾಖಲಾಗಿದೆ. ರಾತ್ರಿಯೂ ಕೆಲವೆಡೆ ಜಿಟಿ ಜಿಟಿ ಮಳೆಯಾಗಿದೆ. ಭಾನುವಾರ (ಆಗಸ್ಟ್‌ 20) ಸಂಜೆಯೂ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು.

***

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ರಸ್ತೆಯಲ್ಲಿ 3 ಅಡಿಯಷ್ಟು ನೀರು

ನೃಪತುಂಗ ರಸ್ತೆಯಲ್ಲಿ ಸಂಚಾರ ದಟ್ಟಣೆ

ವಾಹನ ಸವಾರರ ಪಡಿಪಾಟಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT