ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿನೋಟಿಫೈ: ಹೊಸ ತಿರುವು

ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಲು ಒತ್ತಡ: ಅಧಿಕಾರಿ ಆರೋಪ
Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶಿವರಾಮಕಾರಂತ ಬಡಾವಣೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದು ಯಡಿಯೂರಪ್ಪ ಎಂದು ಹೇಳಿಕೆ ನೀಡುವಂತೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಬಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಬಸವರಾಜೇಂದ್ರ ಆರೋಪ ಮಾಡಿದ್ದಾರೆ.

ಇದರಿಂದಾಗಿ ಈ ಹಗರಣ ಹೊಸ ತಿರುವು ಪಡೆದುಕೊಂಡಿದೆ. ಈ ಮಧ್ಯೆ, ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌.ಐ.ಆರ್‌. ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೊಂದು ರಾಜಕೀಯ ದ್ವೇಷದ ಕ್ರಮ ಎಂದು ಬಿಜೆ‍ಪಿ ನಾಯಕರು ಆರೋಪಿಸಿದ್ದಾರೆ.

ಸದ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಉಪ ಕಾರ್ಯದರ್ಶಿ (ತನಿಖೆ) ಆಗಿ ಕೆಲಸ ಮಾಡುತ್ತಿರುವ ಕೆಎಎಸ್‌ ಅಧಿಕಾರಿ ಎಚ್‌. ಬಸವರಾಜೇಂದ್ರ ಅವರು, ರಾಜ್ಯಪಾಲ ವಜುಭಾಯಿ ವಾಲಾ, ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿಆ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಎಸಿಬಿ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. 

‘ಯಡಿಯೂರಪ್ಪನವರ ವಿರುದ್ಧ ಹೇಳಿಕೆ ಕೊಡಲು ನಿರಾಕರಿಸಿದ್ದಕ್ಕೆ ನನ್ನನ್ನು ಈ ಪ್ರಕರಣದಲ್ಲಿ ಎರಡನೇ ಆರೋಪಿ ಆಗಿ ಮಾಡಲಾಗಿದೆ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ಎಸಿಬಿ ಡಿ.ವೈ.ಎಸ್‌.ಪಿ ಬಾಲರಾಜ್ ಅವರು ಇದೇ 6ರಿಂದ 10ರವರೆಗೆ ಹಲವು ಬಾರಿ ನನಗೆ ಕರೆ ಮಾಡಿ, ಶಿವರಾಮ ಕಾರಂತ ಬಡಾವಣೆ ಡಿ–ನೋಟಿಫಿಕೇಷನ್ ಪ್ರಕರಣದ ಕುರಿತು ಇನ್‌ ಸ್ಪೆಕ್ಟರ್ ಮಂಜುನಾಥ ಅವರ ಬಳಿ ತೆರಳಿ ಹೇಳಿಕೆ ನೀಡುವಂತೆ ತಿಳಿಸಿದ್ದರು. ಅದರಂತೆ ಹಾಜರಾಗಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಬಲರಾಜ್ ಅವರು 10ರಂದು ಮತ್ತೊಮ್ಮೆ ಕರೆ ಮಾಡಿ ಕರೆಸಿಕೊಂಡರು. ಅದೇ ಸಮಯಕ್ಕೆ ಡಿ.ವೈ.ಎಸ್.ಪಿ ಆಂತೋಣಿ ಜಾನ್ ಕೂಡ ಬಂದರು’ ಎಂದು ಬಸವರಾಜೇಂದ್ರ ವಿವರಿಸಿದ್ದಾರೆ.

‘ಇಬ್ಬರೂ ಅಧಿಕಾರಿಗಳ ನಡುವೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಅನಂತರ ಬಾಲರಾಜ್‌, ನನ್ನ ಹೇಳಿಕೆ ದಾಖಲಿಸಿಕೊಳ್ಳಲು ಟೈಪಿಸ್ಟ್ ರಮೇಶ್ ಅವರಿಗೆ ಉಕ್ತಲೇಖನ ನೀಡಲು ಆರಂಭಿಸಿದರು. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಕಾನೂನು ಬಾಹಿರವಾಗಿ ಡಿ–ನೋಟಿಫಿಕಷೇನ್ ಆದೇಶಗಳನ್ನು ಹೊರಡಿಸಿದರು. ಇದರಿಂದ ಸರ್ಕಾರಕ್ಕೆ ಸುಮಾರು ₹ 2,000 ಕೋಟಿ ನಷ್ಟವಾಗಿದೆ. ಯಡಿಯೂರಪ್ಪ ಅವರು ವೈಯಕ್ತಿಕ ಲಾಭ ಮಾಡಿಕೊಂಡಿದ್ದಾರೆ ಎಂದು ನಾನು ಹೇಳಿದ್ದೇನೆ ಎಂಬಂತೆ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾದರು’ ಎಂದು ಹೇಳಿದ್ದಾರೆ.

‘ಕೂಡಲೇ ಮಧ್ಯಪ್ರವೇಶಿಸಿದ ನಾನು,  ಈ ಬಗ್ಗೆ ಏನೂ ಗೊತ್ತಿಲ್ಲ.ಭೂಸ್ವಾಧೀನಾಧಿಕಾರಿಯಾಗಿ ಮೇಲಿನ ಅಧಿಕಾರಿಗಳ ಆದೇಶದಂತೆ ನಾನು ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಹೇಳಿದೆ. ನಾವು ದಾಖಲಿಸಿರುವ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆಯೂ ಒಪ್ಪಿಕೊಳ್ಳಬೇಕು. ಇದಕ್ಕೆ ಒಪ್ಪಿದರೆ ಬಡ್ತಿ ಕೊಡಿಸುತ್ತೇವೆ. ಇಲ್ಲದಿದ್ದರೆ ನಿಮ್ಮನ್ನೂ ಆರೋಪಿಯನ್ನಾಗಿ ಮಾಡುತ್ತೇವೆ ಎಂಬ ಬೆದರಿಕೆ ಹಾಕಿದರು’ ಎಂದು ಅವರು ಆರೋಪಿಸಿದ್ದಾರೆ.

‘ಇದಕ್ಕೆ ನನ್ನ ಒಪ್ಪಿಗೆಯಿಲ್ಲ ಎಂದು ಹೇಳಿ ನಾನು ಅಲ್ಲಿಂದ ಎದ್ದು ಬಂದೆ. ಬಳಿಕ ಇದೇ 17ರಂದು ನನಗೆ ಎಸಿಬಿ  ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಪ್ರಕರಣದಲ್ಲಿ  ನನ್ನನ್ನೂ 2ನೇ ಆರೋಪಿ ಮಾಡಲಾಗಿದೆ ಎಂಬ ಸಂಗತಿ ಗಮನಕ್ಕೆ ಬಂದಿದೆ’ ಎಂದೂ ಅವರು ವಿವರಿಸಿದ್ದಾರೆ.

‘ಎಸಿಬಿ ಅಧಿಕಾರಿಗಳ ಮಾತು ಕೇಳದ ಕಾರಣಕ್ಕೆ 17ರಂದು ದಾಖಲಿಸಿರುವ ಎಫ್‌.ಐ.ಆರ್‌ ನಲ್ಲಿ ನನ್ನನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ನನಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.
*
ಹೈಕೋರ್ಟ್‌ ಕದ ತಟ್ಟಿದ ಬಿಎಸ್‌ವೈ
‘ಸರ್ಕಾರಿ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಎಸಿಬಿ ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸಬೇಕು’ ಎಂದು ಕೋರಿ ಯಡಿಯೂರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಕುರಿತ ರಿಟ್‌ ಅರ್ಜಿಯನ್ನು ಯಡಿಯೂರಪ್ಪ ಪರ ವಕೀಲ ಸಂದೀಪ ಎಸ್‌. ಪಾಟೀಲ ಅವರು ಶನಿವಾರ ಬೆಳಿಗ್ಗೆ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸಲ್ಲಿಸಿ ವಿಚಾರಣೆ ನಡೆಸುವಂತೆ ಕೋರಿದರು. ಇದಕ್ಕೆ ನ್ಯಾಯಮೂರ್ತಿಗಳು, ‘ಇದು ದೈನಂದಿನ ಕಲಾಪಗಳ ಪಟ್ಟಿಯಲ್ಲಿಯೇ ನಮೂದಾಗಲಿ. ಆಮೇಲೆ ನೋಡೋಣ’ ಎಂದು ಹೇಳಿ ವಿಚಾರಣೆ ಮುಂದೂಡಿದರು.

‘ರಾಜಕೀಯ ದ್ವೇಷದಿಂದ ಈ ಪ್ರಕರಣ ದಾಖಲಿಸಲಾಗಿದೆ. ಫಿರ್ಯಾದಿ ಅಯ್ಯಪ್ಪ ಅವರಿಗೂ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ ಎಂದು ಆರೋಪಿಸಲಾಗಿರುವ ಜಮೀನಿಗೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಇಡೀ ಶಿವರಾಮ ಕಾರಂತ ಬಡಾವಣೆಯ ಪ್ರಾಥಮಿಕ ಅಧಿಸೂಚನೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು 2015ರಲ್ಲಿಯೇ ರದ್ದುಪಡಿಸಿದೆ.

ಈ ಆದೇಶ ಹೊರಬಿದ್ದ ಸರಿಸುಮಾರು ಒಂದೂವರೆ ವರ್ಷದ ನಂತರ ಸರ್ಕಾರ ಮತ್ತು ಬೆಂಗಳೂರು ನಗರಾಭಿವೃದ್ಧಿ  ಪ್ರಾಧಿಕಾರ (ಬಿಡಿಎ) ಮೇಲ್ಮನವಿ ಸಲ್ಲಿಸಿದೆ. ಇವೆಲ್ಲಾ ರಾಜಕೀಯ ಪ್ರೇರಿತ ಕ್ರಮಗಳು. ಆದ್ದರಿಂದ ಎಸಿಬಿಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಕೋರಿದ್ದಾರೆ.
*
ವಿಚಾರಣೆಗೆ ಕಾಲಾವಕಾಶ ಕೋರಿದ ಯಡಿಯೂರಪ್ಪ
ಶಿವರಾಮ ಕಾರಂತ ಬಡಾವಣೆ ಡಿ–ನೋಟಿಫಿಕೇಷನ್ ಪ್ರಕರಣ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಬಿ.ಎಸ್. ಯಡಿಯೂರಪ್ಪ 10 ದಿನ ಕಾಲಾವಕಾಶ ಕೋರಿದ್ದಾರೆ.

ಎಸಿಬಿ ಅಧಿಕಾರಿಗಳನ್ನು ಶನಿವಾರ ಭೇಟಿ ಮಾಡಿದ ಯಡಿಯೂರಪ್ಪ ಪರ ವಕೀಲರು, ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದರು. ‘ನೋಟಿಸ್ ಕೊಟ್ಟ ಎರಡು ದಿನದಲ್ಲಿ ವಿಚಾರಣೆಗೆ ಹಾಜರಾಗಲು ಹೇಗೆ ಸಾಧ್ಯ. ನಾವು ಎಲ್ಲ ದಾಖಲೆಗಳನ್ನು ಸಂಗ್ರಹಿಸಿಕೊಳ್ಳಬೇಕು. ಹೀಗಾಗಿ  ಕಾಲಾವಕಾಶ ಕೋರಿದ್ದೇವೆ’ ಎಂದು ಹೈಕೋರ್ಟ್‌ ವಕೀಲೆ ಸ್ವಾಮಿನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿ ಅವಲಳ್ಳಿ ಗ್ರಾಮದ ಸರ್ವೆ ನಂಬರ್ 109/1ರಲ್ಲಿ 3 ಎಕರೆ 6 ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು 2010 ಮೇ 14ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾನೂನು ಬಾಹಿರವಾಗಿ ಆದೇಶಿಸಿದ್ದರು’ ಎಂಬ ಆರೋಪದಲ್ಲಿ ಎಸಿಬಿ ಅಧಿಕಾರಿಗಳು ಇದೇ 10ರಂದು ಯಡಿಯೂರಪ್ಪ ವಿರುದ್ಧ ಮೊದಲ ಎಫ್‌.ಐ.ಆರ್ ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT