ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದರಾಮಯ್ಯನನ್ನು ಜೈಲಿಗೆ ಕಳುಹಿಸದಿದ್ದರೆ ನಾ ಯಡಿಯೂರಪ್ಪನಲ್ಲ’

ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ * ಯಡಿಯೂರಪ್ಪ ಶಪಥ
Last Updated 19 ಆಗಸ್ಟ್ 2017, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ, ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸುತ್ತೇನೆ. ಆ ರೀತಿ ಮಾಡದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶಪಥ ಮಾಡಿದರು.

‘ಅಕ್ರಮ ಆಸ್ತಿ ಸಂಪಾದಿಸಿ, ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಗುರಿಯಾದ ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದ ನಂತರ ರಾಜ್ಯ ಕಂಡ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂದು ಅವರು ಸಚಿವರನ್ನು ಸಂಪುಟದಿಂದ ಕೈಬಿಡುತ್ತಿಲ್ಲ. ಸಚಿವರ ಅಕ್ರಮಗಳಿಗೆ ಮುಖ್ಯಮಂತ್ರಿಯೇ ಕುಮ್ಮಕ್ಕು ನೀಡುತ್ತಿದ್ದಾರೆ. ನಗರದಲ್ಲಿ ಮಳೆ ಬಂದು ಜನ ಸಾಯುತ್ತಿದ್ದರೆ, ಮುಖ್ಯಮಂತ್ರಿ ಮಾತ್ರ ಸಚಿವ ಸಂಪುಟ ವಿಸ್ತರಣೆ ಎಂದು ಮೋಜು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕಾಂಗ್ರೆಸ್‌ ವಿರುದ್ಧ ಈಗ ನಿಜವಾದ ಹೋರಾಟ ಆರಂಭಿಸಲಾಗಿದೆ. ಇದನ್ನು ಹತ್ತಿಕ್ಕಲು ನನ್ನ ವಿರುದ್ಧ ಎಸಿಬಿ ಮೂಲಕ ಪ್ರಕರಣ ದಾಖಲಿಸಿದ್ದಾರೆ. ಎಷ್ಟೇ ಪ್ರಕರಣ ದಾಖಲಿಸಿದರೂ ಹೋರಾಟ ನಿಲ್ಲದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಕಾರ್ಯಕರ್ತರು ಗಂಭೀರ ಸ್ವರೂಪದ ಹೋರಾಟ ನಡೆಸಲು ಸಿದ್ಧರಾಗಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಮಾತನಾಡಿ, ‘ಸಿದ್ದರಾಮಯ್ಯ ಅವರಿಗೆ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಟ್ಯೂಷನ್ ಶಿಕ್ಷಕರಿದ್ದಂತೆ. ಅವರ ತಾಳಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು. 

‘ರಾಜ್ಯದಲ್ಲಿ ಬಿಜೆಪಿ, ಆರ್‌ಎಸ್ಎಸ್ ಕಾರ್ಯಕರ್ತರನ್ನು ಹತ್ಯೆ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಸಹಿಸುವುದಿಲ್ಲ’ ಎಂದರು.

***

ವಿಧಾನಸೌಧ ಮುತ್ತಿಗೆಗೆ ಯತ್ನ: ಮುಖಂಡರು ವಶಕ್ಕೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಮೌರ್ಯ ವೃತ್ತ ಹಾಗೂ ಅರಮನೆ ರಸ್ತೆ ಮೂಲಕ ಹೋಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಮೆರವಣಿಗೆಯಲ್ಲಿ ಹೊರಟಿದ್ದ ಅವರನ್ನು ಮೌರ್ಯ ವೃತ್ತ ಬಳಿ ತಡೆದ ಪೊಲೀಸರು, ಪ್ರತಿಭಟನೆಯನ್ನು ಮುಕ್ತಾಯಗೊಳಿಸುವಂತೆ ಕೋರಿದರು. ಅದಕ್ಕೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ ನಡೆಯಿತು.

ಆಗ ಪೊಲೀಸರು, ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಆರ್‌. ಅಶೋಕ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರನ್ನು 10 ಬಸ್‌ಗಳಲ್ಲಿ ವಶಕ್ಕೆ ಪಡೆದರು. ಗಂಟೆಗಳ ಬಳಿಕ ಎಲ್ಲರವೂ ಬಿಡುಗಡೆ ಮಾಡಿದರು.

***

ಸಂಚಾರ ದಟ್ಟಣೆ

ಪ್ರತಿಭಟನೆಯಿಂದಾಗಿ ಸ್ವಾತಂತ್ರ್ಯ ಉದ್ಯಾನ, ಮೌರ್ಯ ವೃತ್ತ, ಆನಂದರಾವ್ ವೃತ್ತ, ಅರಮನೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಬೆಳಿಗ್ಗೆ ಮೈಸೂರು ವೃತ್ತದಿಂದ ಕಾರ್ಯಕರ್ತರು ಪ್ರತ್ಯೇಕ ತಂಡಗಳ ಮೂಲಕ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದರು. ಈ ವೇಳೆ ಶೇಷಾದ್ರಿ ರಸ್ತೆಯಲ್ಲಿ ವಾಹನಗಳು ಸಾಲಾಗಿ ನಿಲ್ಲುವಂತಾಯಿತು.

ಉದ್ಯಾನದಿಂದ ಮೌರ್ಯ ವೃತ್ತದವರೆಗೆ ಮೆರವಣಿಗೆ ಹೊರಟಾಗಲೂ ಶೇಷಾದ್ರಿಪುರ ಮೇಲ್ಸೇತುವೆ, ಗಾಂಧಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ದಟ್ಟಣೆ ಉಂಟಾಯಿತು. ಮೌರ್ಯ ವೃತ್ತದಲ್ಲಿ ದಟ್ಟಣೆಯಲ್ಲಿ ಆಂಬುಲೆನ್ಸ್‌ ಸಿಲುಕಿಕೊಂಡಿತ್ತು. ಅದನ್ನು ಗಮನಿಸಿದ ಪೊಲೀಸರು, ಅದರ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.

***

ಯಡಿಯೂರಪ್ಪ ಜೈಲಿಗೆ ಹೋಗುವುದು ತಪ್ಪಿಸಿಕೊಳ್ಳಲಿ

ತುಮಕೂರು: ‘ಬಿ.ಎಸ್.ಯಡಿಯೂರಪ್ಪ ಅವರು ವಿನಾಕಾರಣ ನನ್ನ ವಿರುದ್ಧ ಆರೋಪ‍ ಮಾಡುತ್ತಿದ್ದಾರೆ. ಅವರು ಜೈಲಿಗೆ ಹೋಗಿ ಬಂದಿರುವುದರಿಂದ ನನ್ನನ್ನೂ ಜೈಲಿಗೆ ಕಳಿಸುತ್ತೇನೆ ಎಂದು ಹತಾಶೆಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಕ್ಕ ಸಿಕ್ಕವರ ಮೇಲೆ ಪ್ರಕರಣ ದಾಖಲಿಸಲು ಆಗುವುದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಪ್ರಕಾರವೇ ಕೆಲಸ ಮಾಡಬೇಕಾಗುತ್ತದೆ ಎಂದರು.

‘ನಾನು ಯಾವುದಾದರೂ ಅಕ್ರಮ ಎಸಗಿದ್ದರ ಬಗ್ಗೆ ದಾಖಲೆಗಳಿದ್ದರೆ ಯಡಿಯೂರಪ್ಪ ತೋರಿಸಲಿ. ಅವರು ಜೈಲಿಗೆ ಹೋಗಿ ಬಂದಿರುವುದರಿಂದ ಅವರಿಗೆ ಸದಾ ಅದೇ ಧ್ಯಾನವಾಗಿದೆ. ನನ್ನನ್ನು ಜೈಲಿಗೆ ಕಳಿಸುವುದಿರಲಿ. ತಾವು ಈಗ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ’ ಎಂದು ಲೇವಡಿ ಮಾಡಿದರು.

ತೆರಿಗೆ ದಾಳಿ: ‘ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಮಾತ್ರಕ್ಕೆ ಶಿವಕುಮಾರ್ ಭ್ರಷ್ಟರು, ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸುವುದು ತಪ್ಪು. ತೆರಿಗೆ ಇಲಾಖೆ ಏನಾದರೂ ದಾಖಲೆ ಕೊಟ್ಟಿದೆಯೇ? ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಂದು ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಚೆನ್ನಾಗಿ ಬೈದು ಹೋಗಿದ್ದಾರೆ. ಹೀಗಾಗಿ, ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಸಂಪುಟ ವಿಸ್ತರಣೆ ಶೀಘ್ರ: ‘ಸಚಿವ ಸಂಪುಟ ವಿಸ್ತರಣೆಯನ್ನು ಶೀಘ್ರ ಮಾಡಲಾಗುವುದು. ಆದರೆ, ಇಂಥದ್ದೇ ದಿನ ಮಾಡುತ್ತೇವೆ ಎಂದು ಈಗಲೇ ಹೇಳಲು ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT