ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ತಡೆದು ಪ್ರತಿಭಟನೆ: ಸವಾರರ ಪಡಿಪಾಟಲು

ಅನುದಾನ ನೀಡಲು ಬಿಜೆಪಿ ಕಾರ್ಯಕರ್ತರ ಒತ್ತಾಯ
Last Updated 19 ಆಗಸ್ಟ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ’ಬೊಮ್ಮನಹಳ್ಳಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲು ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಅರಕೆರೆ ಗೇಟ್‌ ಬಳಿ ಶನಿವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ ದಟ್ಟಣೆ ಉಂಟಾಗಿ ಸವಾರರು ಪಡಿಪಾಟಲು ಅನುಭವಿಸಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಬೆಳಿಗ್ಗೆ ಸಚಿವ ಕೆ.ಜೆ.ಜಾರ್ಜ್‌ ಬರುತ್ತಾರೆ ಎಂಬ ಮಾಹಿತಿ ತಿಳಿದಿದ್ದ ಕಾರ್ಯಕರ್ತರು, ಸ್ಥಳೀಯ ಶಾಸಕ ಬಿಜೆಪಿಯ ಸತೀಶ್‌ ರೆಡ್ಡಿ ‌ನೇತೃತ್ವದಲ್ಲಿ ಮನವಿ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದರು. ಆದರೆ, ಸಚಿವರು ಬರಲಿಲ್ಲ. ಅದರಿಂದಾಗಿ ಆಕ್ರೋಶಗೊಂಡ ಕಾರ್ಯಕರ್ತರು, ಗೇಟ್‌ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಆರಂಭಿಸಿದರು.

ಪರಿಣಾಮ ಅರಕೆರೆ ಗೇಟ್‌, ಬನ್ನೇರುಘಟ್ಟ ಮುಖ್ಯ ರಸ್ತೆ, ಬಿಡಿಎ 80 ಅಡಿ ರಸ್ತೆ, ಪಾಂಡುರಂಗ ನಗರ, ಹುಳಿಮಾವು ಮುಖ್ಯ ರಸ್ತೆ ಹಾಗೂ ಸುತ್ತಮುತ್ತ ದಟ್ಟಣೆ ಉಂಟಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತುಕೊಂಡಿದ್ದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗಲಿಲ್ಲ. ಇದರಿಂದ ಗಂಟೆಗಳವರೆಗೆ ಬಸ್‌, ಕಾರು, ಬೈಕ್‌ ಸೇರಿ ಎಲ್ಲ ಬಗೆಯ ವಾಹನಗಳು ಸಾಲಾಗಿ ನಿಂತಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.

ಬೆಳಿಗ್ಗೆ ಕೆಲಸಕ್ಕೆ ಹೊರಟಿದ್ದ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಅವರೆಲ್ಲ ಪ್ರತಿಭಟನಾಕಾರರ ವಿರುದ್ಧ ಹಿಡಿಶಾಪ ಹಾಕಿದರು. ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.

ಸ್ಥಳಕ್ಕೆ ಬಂದ ಮೈಕೊ ಲೇಔಟ್ ಉಪವಿಭಾಗ ಪೊಲೀಸ್‌ ಅಧಿಕಾರಿಗಳು, ಕಾರ್ಯಕರ್ತರ ಮನವೊಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು. ಗಂಟೆಯ ಬಳಿಕ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಮರಳಿತು.

‘ನಿತ್ಯವೂ ಇದೇ ರಸ್ತೆ ಮೂಲಕ ಕಚೇರಿಗೆ ಹೋಗುತ್ತೇನೆ. ಇಂದು ದಿಢೀರ್‌ ಪ್ರತಿಭಟನೆ ಮಾಡಿದ್ದರಿಂದ ದಟ್ಟಣೆಯಲ್ಲಿ ಸಿಲುಕಿದೆ. ಬೆಳಿಗ್ಗೆ 11 ಗಂಟೆಯ ಬದಲಿಗೆ ಮಧ್ಯಾಹ್ನ 2 ಗಂಟೆಗೆ ಕಚೇರಿಗೆ ಹೋಗುವಂತಾಯಿತು’ ಎಂದು ಖಾಸಗಿ ಕಂಪೆನಿಯ ಉದ್ಯೋಗಿ ಎಂ.ರಘುರಾವ್‌ ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಪಡೆದು ಕ್ರಮ: ‘ಕಾರ್ಯಕರ್ತರು ದಿಢೀರ್‌ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಠಾಣೆಯ ಇನ್‌ಸ್ಪೆಕ್ಟರ್‌ ಅವರಿಂದ ಮಾಹಿತಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು.

ಅನುದಾನ ಬಿಡುಗಡೆಗಾಗಿ ಪ್ರತಿಭಟನೆ: ಪ್ರತಿಭಟನೆ ವೇಳೆ ಮಾತನಾಡಿದ ಸತೀಶ್‌ ರೆಡ್ಡಿ, ‘ಬನ್ನೇರುಘಟ್ಟ ರಸ್ತೆ ಅಗಲೀಕರಣ, ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರವು ಅನುದಾನ ನೀಡುತ್ತಿಲ್ಲ. ಕ್ಷೇತ್ರದ ಹಲವು ಕೆರೆಗಳು ಒತ್ತುವರಿಯಾಗಿದ್ದು, ಅದರ ತೆರವಿಗೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ವಿಧಾನಸಭಾ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದೇವೆ. ಇನ್ನಾದರೂ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾರ್ಪೊರೇಟರ್‌ ರಮೇಶ್‌, ನಾರಾಯಣ್ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT