ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ದದ ಮೇಲ್ಸೇತುವೆ ಅಗತ್ಯ’

ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಹೇಳಿಕೆ
Last Updated 19 ಆಗಸ್ಟ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ’ಹೆಚ್ಚುತ್ತಿರುವ ದಟ್ಟಣೆ ನಿಯಂತ್ರಣಕ್ಕಾಗಿ ನಗರದಲ್ಲಿ ಉದ್ದದ ಮೇಲ್ಸೇತುವೆಗಳನ್ನು ನಿರ್ಮಿಸಲು ಸರ್ಕಾರವು ಭರವಸೆ ನೀಡಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ತಿಳಿಸಿದರು.

ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ’ಡೆಕ್ಕನ್ ಹೆರಾಲ್ಡ್‘ ಪತ್ರಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ಟ್ರಾಫಿಕ್ಸ್ ಸಿಟಿಜನ್ ಫೋರಂ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯ ಕೆ.ಆರ್‌.ಮಾರುಕಟ್ಟೆ, ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆಯ ಪೀಣ್ಯದಲ್ಲಿ ಮಾತ್ರ ಮೂರು ಉದ್ದದ ಮೇಲ್ಸೇತುವೆಗಳಿವೆ. ಉಳಿದೆಲ್ಲವೂ ಸಣ್ಣ ಮೇಲ್ಸೇತುವೆಗಳು. ಅಲ್ಲೆಲ್ಲ ಓಡಾಡುವ ವಾಹನಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೇಲ್ಸೇತುವೆಗಳ ಉದ್ದವೂ ಹೆಚ್ಚಾಗಬೇಕಿದೆ’ ಎಂದರು.

‘ನಗರದ ಹಲವು ಕಡೆಗಳಲ್ಲಿ ಅಂಥ ಉದ್ದದ ಮೇಲ್ಸೇತುವೆಗಳ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದೇವೆ’ ಎಂದರು.

‘ಸೆಂಟ್ರಲ್ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಿಂದ ಮಾರತ್ತಹಳ್ಳಿಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ನಾಲ್ಕು ಲಕ್ಷ ವಾಹನಗಳು ಸಂಚರಿಸುತ್ತವೆ. ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಅಷ್ಟೇ ವಾಹನಗಳಿರುತ್ತವೆ. ಪ್ರಮುಖ ವೃತ್ತಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಸಂಚರಿಸಿದರೆ, ದಟ್ಟಣೆ ಉಂಟಾಗುತ್ತದೆ. ಈಗಾಗಲೇ ಅದರ ನಿಯಂತ್ರಣಕ್ಕೆ ‌ಕ್ರಮ ಕೈಗೊಳ್ಳಲಾಗಿದ್ದು, ಅಷ್ಟಾದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ’ ಎಂದು ತಿಳಿಸಿದರು.

‘ಕೆ.ಎಸ್‌.ಆರ್‌.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಬಸ್‌ಗಳು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ದಟ್ಟಣೆ ಉಂಟಾಗುತ್ತಿದೆ ಎಂದು ಹಲವರು ದೂರು ನೀಡಿದ್ದಾರೆ. ಈ
ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದರು.

ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ಮಾತನಾಡಿ, ‘2008ರಲ್ಲಿ ನಗರದಲ್ಲಿ 30 ಲಕ್ಷ ವಾಹನಗಳಿದ್ದವು. ಈಗ ಅವುಗಳ ಸಂಖ್ಯೆ 70 ಲಕ್ಷವಾಗಿದೆ. ಅದರಲ್ಲಿ 42 ಲಕ್ಷ ದ್ವಿಚಕ್ರ ವಾಹನಗಳಿವೆ. ನಿತ್ಯವೂ 1.6 ಕೋಟಿ ಜನ ರಸ್ತೆಯಲ್ಲಿ ಎರಡು ಬಾರಿ ಸಂಚರಿಸುತ್ತಿದ್ದಾರೆ’ ಎಂದರು.

‘ಅವರಲ್ಲಿ ಬಿ.ಎಂ.ಟಿ.ಸಿ ಬಸ್‌ಗಳಲ್ಲಿ 50 ಲಕ್ಷ, ಮೆಟ್ರೊದಲ್ಲಿ 3.5 ಲಕ್ಷ ಹಾಗೂ ಉಳಿದ 1.05 ಕೋಟಿ ಮಂದಿ ಆಟೊ, ಟ್ಯಾಕ್ಸಿ ಹಾಗೂ ಇತರೆ ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸುವಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದು, ಅದರಿಂದ ದಟ್ಟಣೆಯನ್ನು ಸ್ವಲ್ಪ ನಿಯಂತ್ರಣ ತರಬಹುದು’ ಎಂದರು.

ಕಾರ್ಯಕ್ರಮದಲ್ಲಿ ನಗರದ ಹಲವು ಪ್ರದೇಶಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT