ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮನೆಗಳನ್ನು ಒಡೆಯದೇ ಬಿಟ್ಟರು!

Last Updated 20 ಆಗಸ್ಟ್ 2017, 7:12 IST
ಅಕ್ಷರ ಗಾತ್ರ

ಮೈಸೂರು: ಭೋಗಾದಿ ಗ್ರಾಮದ ಬಳಿಯ ದಿವಾನ್‌ ಪೂರ್ಣಯ್ಯ ನಾಲೆಯ ಏರಿಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ಒಡೆಯದೇ ಹಾಗೇ ಬಿಟ್ಟಿರುವ ಜಿಲ್ಲಾಡಳಿತವು, ಧ್ವನಿಯಿಲ್ಲದವರ ಕಟ್ಟಡವನ್ನು ಶನಿವಾರ ಒಡೆದುಹಾಕಿದೆ.

ರಾಜಕೀಯ ಹಿನ್ನೆಲೆ ಇರುವ ವ್ಯಕ್ತಿಯೊಬ್ಬರು ಇಲ್ಲಿ 150 X 40 ಅಡಿ ಅಳತೆಯಲ್ಲಿ ಸರ್ಕಾರಿ ಜಾಗದಲ್ಲಿ 6 ಮನೆಗಳನ್ನು ನಿರ್ಮಿಸಿದ್ದಾರೆ. ಈ ಮನೆಗಳಲ್ಲಿ 6 ಕುಟುಂಬಗಳು ವಾಸಿಸುತ್ತಿವೆ. ಅಕ್ರಮವಾಗಿ ನಿರ್ಮಾಣವಾಗಿರುವ ಈ ಮನೆಗಳ ಪೈಕಿ ಭೋಗಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಾಸಕ್ಕಿರುವುದು ಅಚ್ಚರಿ ಮೂಡಿಸಿದೆ ಎಂದು ಇಲ್ಲಿನ ಸ್ಥಳೀಯರು ಮಾಹಿತಿ ನೀಡಿದರು.

6 ತಿಂಗಳ ಹಿಂದೆಯೇ ನಿರ್ಮಾಣ: ಇಲ್ಲಿ ಒಟ್ಟು 6 ಮನೆಗಳನ್ನು 6 ತಿಂಗಳ ಹಿಂದೆಯೇ ನಿರ್ಮಿಸಲಾಗಿದೆ. 6 ತಿಂಗಳಿಂದಲೂ ಇಲ್ಲಿ ಮನೆಗಳನ್ನು ಬಾಡಿಗೆಗೂ ನೀಡಲಾಗಿದೆ. ಇದರ ಜತೆಗೆ ಮತ್ತಷ್ಟು ಮನೆಗಳನ್ನು ನಿರ್ಮಿಸಲು ಇಲ್ಲಿಗೆ ಹತ್ತಿರವೇ ಸಿದ್ಧತೆಯೂ ನಡೆದಿತ್ತು.

ಇದನ್ನು ‘ಪ್ರಜಾವಾಣಿ’ ವರದಿ ಮಾಡಿತ್ತು. 150 X 40 ಅಡಿ ಅಳತೆಯ ಜಾಗದಲ್ಲೇ ಪಾಯ ತೆಗೆದು ಗೋಡೆ ಏಳಿಸಲಾಗಿತ್ತು. ಜಿಲ್ಲಾಡಳಿತವು ನಿರ್ಮಾಣ ಕಾರ್ಯ ನಿಲ್ಲುವಂತೆ ಆದೇಶಿಸಿದ್ದರೂ ಕಾಮಗಾರಿ ನಿರಾತಂಕವಾಗಿ ಮುಂದುವರಿದಿತ್ತು. ಒಡೆದು ಹಾಕಿದ್ದು ಧ್ವನಿಯಿಲ್ಲದವರ ಮನೆ: ಆದರೆ, 25X 30 ಅಡಿ ಜಾಗದಲ್ಲಿ ಉಗ್ರಾಣಕ್ಕಾಗಿ ಶಾರದಾನಗರ ರೈಲ್ವೆ ಬಡಾವಣೆಯ ನಿವಾಸಿಯೊಬ್ಬರು ನಿರ್ಮಿಸಿಕೊಂಡಿದ್ದ ಕಟ್ಟಡವನ್ನು ಜಿಲ್ಲಾಡಳಿತವು ಶನಿವಾರ ಒಡೆದುಹಾಕಿದೆ.

ಶನಿವಾರ ಜೆಸಿಬಿ ಯಂತ್ರಗಳನ್ನು ತಂದ ತಹಶೀಲ್ದಾರ್‌ ರಮೇಶ್ ಬಾಬು, ಉಪ ವಿಭಾಗಾಧಿಕಾರಿ ಶಿವೇಗೌಡ ಅವರ ತಂಡವು ಕಾಂಪೌಂಡ್‌ ಒಡೆದುಹಾಕಿದೆ. ಇದಕ್ಕೆ ನಿವಾಸಿಯು ಪ್ರತಿರೋಧ ಒಡ್ಡದ ಕಾರಣ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ. ಆದರೆ, ಪ್ರತಿರೋಧ ಒಡ್ಡಿದ ಪ್ರಭಾವಿಗಳ ಕಟ್ಟಡಗಳನ್ನು ಹಾಗೆಯೇ ಬಿಡಲಾಗಿದೆ.

ಮತ್ತೊಂದು ಮನೆ ನಿರ್ಮಾಣಕ್ಕಾಗಿ ಪಾಯ ತೋಡಿ ಗೋಡೆ ಕಟ್ಟಿದ್ದ ಕಾಮಗಾರಿಯನ್ನು ತೆರವುಗೊಳಿಲಾಯಿತು. ಆದರೆ, ನಿರ್ಮಾಣಗೊಂಡಿರುವ ಇತರ 6 ಮನೆಗಳಲ್ಲಿ ಬಾಡಿಗೆದಾರರು ವಾಸವಾಗಿದ್ದಾರೆ ಎಂಬ ಕಾರಣಕ್ಕೆ ತೆರವು ಕಾರ್ಯಾಚರಣೆನ್ನು ಮುಂದೂಡಲಾಗಿದೆ.

ರಾಜಕಾಲುವೆ, ಸರ್ಕಾರದ ಜಾಗ ಒತ್ತುವರಿ ಆಗುತ್ತಿದ್ದು, ತೆರವುಗೊಳಿಸಿ ಎಂದು ಕೇಳಿಕೊಂಡವರ ಮನೆಗಳ ಸಣ್ಣ ಪುಟ್ಟ ಒತ್ತುವರಿಯನ್ನು ಅಧಿಕಾರಿಗಳು ತೆರವು ಮಾಡಿದ್ದರೆ. ಆದರೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ, ಪ್ರಭಾವಿಗಳ ಕಟ್ಟಡಗಳನ್ನು ಮಾತ್ರ ತೆರವುಗಳಿಸಿಲ್ಲ. ಬಲಾಢ್ಯರಿಗೆ ಒಂದು ಕಾನೂನು, ಉಳಿದವಳಿಗೆ ಮತ್ತೊಂದು ಕಾನೂನು ಎನ್ನುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT