ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯತ್ರಿಪುರಂ ರಾಜಕಾಲುವೆಗೆ ಒತ್ತುವರಿ ಸಂಕಟ

Last Updated 20 ಆಗಸ್ಟ್ 2017, 7:20 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಹಳೆಯ ಬಡಾವಣೆಗಳಲ್ಲಿ ಒಂದಾದ ಗಾಯತ್ರಿಪುರಂನಲ್ಲಿ ಸುಮಾರು 50 ವರ್ಷಕ್ಕೂ ಹಳೆಯ ರಾಜಕಾಲುವೆಯಿದೆ. ಈ ಕಾಲುವೆಯು ಈಗ ಬಹುತೇಕ ಒತ್ತುವರಿಯಾಗಿದ್ದು, ಕೊಳಚೆಪ್ರದೇಶಗಳು ಮೇಲೆದ್ದಿವೆ.

ಅಂದಿನ ಕಾಲದಲ್ಲಿ ಸುಮಾರು 9 ಮೀಟರ್‌ ಅಗಲದಲ್ಲಿ ನಿರ್ಮಾಣವಾಗಿದ್ದ ಈ ಕಾಲುವೆಯು ಈಗ ಕೇವಲ 3 ಮೀಟರ್‌ಗೆ ಇಳಿದಿದೆ. ಅಂದರೆ, ಕಾಲುವೆಯ ಎರಡೂ ಬದಿಗಳನ್ನು ಒತ್ತರಿಸಿಕೊಳ್ಳಲಾಗಿದೆ. ಮಳೆನೀರು ಹರಿಯಲು ಸಹಕಾರಿಯಾಗಬೇಕಿದ್ದ ಕಾಲುವೆಯು ಕಿರಿದಾಗಿ ಮುಚ್ಚಿಹೋಗಿದೆ. ಅಕ್ಕಪಕ್ಕದ ಬಡಾವಣೆಗಳ ಗಲೀಜುನೀರು ಈಗ ಇಲ್ಲಿ ತುಂಬಿಕೊಳ್ಳುತ್ತಿದೆ.

ಕಾಲುವೆ ಎಲ್ಲಿದೆ?:
ಮೈಸೂರಿನಲ್ಲಿ ಅತಿ ಉದ್ದನೆ ಹರಿಯುವ ರಾಜಕಾಲುವೆಗಳಲ್ಲಿ ಇದೂ ಒಂದು. ಜ್ಯೋತಿನಗರದಲ್ಲಿ ಆರಂಭವಾಗುವ ಕಾಲುವೆಯು ಮಳೆನೀರನ್ನು ಕೊಂಡೊಯ್ದು ನಗುವನಹಳ್ಳಿವರೆಗೂ ಸಾಗಿ ಕಾವೇರಿ ನದಿಯನ್ನು ಸೇರುತ್ತದೆ. ಈ ಕಾಲುವೆ ಇರುವ ಜಾಗವೂ ಜನನಿಬಿಡ ಸ್ಥಳವೇ. ಜ್ಯೋತಿನಗರ, ಮೈಮುಲ್‌ ಹಾಲಿನ ಡೈರಿ, ಕ್ಯಾತಮಾರನಹಳ್ಳಿ, ಕ್ಯಾತಮಾರನಹಳ್ಳಿ ಚರ್ಚ್‌, ಮಾನಸ ಶಾಲೆ, ವಾಯುಪಡೆ ತರಬೇತಿ ಕೇಂದ್ರ, ಗೌಸಿಯಾ ನಗರ, ಗಾಂಧಿನಗರ, ಸತ್ಯನಗರದ ಮೂಲಕ ಹರಿದು ಕೆಸರೆಗೆ ಸೇರುತ್ತದೆ.

ಅಲ್ಲಿಂದ ನಗುವನಹಳ್ಳಿ ಬಳಿಯ ಸಂಸ್ಕರಣಾ ಘಟಕಕ್ಕೆ ಈ ನಾಲೆ ಸಾಗುತ್ತದೆ. ಸ್ವಚ್ಛಗೊಳ್ಳುವ ನೀರು ಕಾವೇರಿ ನದಿ ಸೇರಬೇಕು ಎನ್ನುವುದು ಮೂಲ ಉದ್ದೇಶ. ಆದರೆ, ಇಲ್ಲಿ ಮಳೆ ನೀರು ಮಾತ್ರ ಹರಿಯದೇ ಒಳಚರಂಡಿ ನೀರು ಸಹ ಸೇರುತ್ತಿರುವುದರಿಂದ ನದಿಗೆ ಗಲೀಜು ನೀರು ಸೇರುತ್ತಿದೆ ಎಂದು ಸ್ಥಳೀಯರು ‍ಆರೋಪಿಸಿದರು.

ಒತ್ತುವರಿಯ ನೆರಳು:
ಇಷ್ಟುದೊಡ್ಡ ವ್ಯಾಪ್ತಿಯ ನಾಲೆಯು ಬಹುತೇಕ ಒತ್ತುವರಿಗೆ ಒಳಗಾಗಿದೆ ಎನ್ನುವುದು ನಾಗರಿಕರ ಆರೋಪ. ಈ ನಾಲೆಯು ಸಮೀಪದ ಕಾರಂಜಿ ಕೆರೆ ಹಾಗೂ ಕೆಸೆರೆಯ ಕೆರೆಗೆ ಮಳೆ ನೀರನ್ನು ಹರಿಸುತ್ತಿತ್ತು. ಆದರೆ, ಈಗ ನಾಲೆಗೆ ಪರಿಪೂರ್ಣತೆಯೇ ಇಲ್ಲದ ಕಾರಣ, ನೀರು ಹರಿಯುವುದೇ ಇಲ್ಲ. ಗಾಯತ್ರಿಪುರಂನ ಕಾರ್ಮಿಕರ ಭವಿಷ್ಯನಿಧಿ ಕಟ್ಟಟದ ಹಿಂಭಾಗದಲ್ಲಿ ಹರಿಯುವ ರಾಜಕಾಲುವೆಯ ಪಕ್ಕದ ಏರಿಯನ್ನು ಬಹುತೇಕ ಒತ್ತುವರಿ ಮಾಡಿಕೊಳ್ಳಲಾಗಿದೆ. ಇಲ್ಲಿ ಕಬ್ಬಿಣದ ತಗಡುಗಳನ್ನು ಬಳಸಿಕೊಂಡು ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಇಲ್ಲಿ ಕೊಳಚೆಪ್ರದೇಶಗಳು ನಿರ್ಮಾಣವಾಗಿದ್ದು, ಸ್ವಚ್ಛತೆಯ ಕೊರತೆ ಎದ್ದು ಕಾಣುವಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT