ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯಲ್ಲಿದೆ... ಆಟೊದಲ್ಲಿಲ್ಲ ದರ ಮೀಟರ್‌

Last Updated 20 ಆಗಸ್ಟ್ 2017, 8:13 IST
ಅಕ್ಷರ ಗಾತ್ರ

ದಾವಣಗೆರೆ: ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡಬಾರದು ಎಂಬ ಕಾರಣಕ್ಕಾಗಿ ಆಟೊಗಳಿಗೆ ಮೀಟರ್‌ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ದಾವಣಗೆರೆಯಲ್ಲಿ ಅವು ದಾಖಲೆಗಳಲ್ಲಷ್ಟೆ ಇದೆ. ಆಟೊಗಳಲ್ಲಿ ಇಲ್ಲ. ಸಾರ್ವಜನಿಕರು ಅದನ್ನು ಪ್ರಶ್ನಿಸದೇ ಇರುವುದು ಆಟೊ ಓಡಿಸುವವರಿಗೆ ವರದಾನವಾಗಿದೆ.

ಆಟೊದಲ್ಲಿ ನಿತ್ಯ ಓಡಾಡುವವರಿಗೆ ಮೀಟರ್‌ ಇಲ್ಲದಿರುವುದು ಸಮಸ್ಯೆಯಾಗಿಲ್ಲ. ಅಪರೂಪಕ್ಕೆ ಓಡಾಡುವವರಿಗೆ, ಅದರಲ್ಲೂ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ಬಂದವರಿಗೆ ಸಮಸ್ಯೆಯಾಗುತ್ತಿದೆ. ನಗರಕ್ಕೆ ಹೊಸಬರು ಎಂದು ಗೊತ್ತಾದ ಕೂಡಲೇ ಹೆಚ್ಚಿನ  ಆಟೊ ಚಾಲಕರು ದುಪ್ಪಟ್ಟು, ಮೂರುಪಟ್ಟು ವಸೂಲಿ ಮಾಡುತ್ತಾರೆ.

‘ಎರಡು ವರ್ಷದ ಹಿಂದೆ ಮಂಗಳೂರಿನಿಂದ ದಾವಣಗೆರೆಗೆ ಬಂದಾಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ನಾವಿರುವ ಜಯನಗರಕ್ಕೆ ಆಟೊದಲ್ಲಿ ಹೋದಾಗ ₹ 100 ಕೇಳಿದ್ದ. ನಾವು ಚರ್ಚೆ ಮಾಡಿ ₹ 80 ಕೊಟ್ಟಿದ್ದೆವು. ಇನ್ನೊಮ್ಮೆ ಮತ್ತೊಂದು ಆಟೊದಲ್ಲಿ ಹೋಗಿದ್ದಾಗ ಅದರ ಚಾಲಕ ₹ 50 ತೆಗೆದುಕೊಂಡಿದ್ದ. ಕೆಲವರು ₹ 40 ಕ್ಕೂ ಕರೆದುಕೊಂಡು ಬರುತ್ತಾರೆ ಎಂಬುದು ಆಮೇಲೆ ಗೊತ್ತಾಯಿತು. ಈ ರೀತಿ ವಸೂಲಿಯನ್ನು ತಪ್ಪಿಸಲು ಮೀಟರ್‌ ಕಡ್ಡಾಯಗೊಳಿಸಬೇಕು’ ಎನ್ನುತ್ತಾರೆ ಕಳೆದ ಎರಡು ವರ್ಷದಿಂದ ಜಯನಗರದಲ್ಲಿ ವಾಸಿಯಾಗಿರುವ ವಿನಯಾ.

ಮೀಟರ್‌ ಎಲ್ಲಿದೆ?
ಆಟೊಗೆ ಪರವಾನಗಿ ನೀಡುವಾಗ ಮೀಟರ್‌ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಸಂದರ್ಭದಲ್ಲಿಯೂ ಆಟೋದಲ್ಲಿ ಮೀಟರ್‌ ಇರುತ್ತದೆ. ವಾಹನದ ಸ್ಥಿತಿ ಬಗ್ಗೆ ಪ್ರಮಾಣ ಪತ್ರವನ್ನು ಲೀಗಲ್‌ ಮೆಟ್ರೋಲಜಿ ವಿಭಾಗದವರು ನೀಡಬೇಕು. ಈ ಪ್ರಮಾಣ ಪತ್ರದಲ್ಲಿಯೂ ಮೀಟರ್‌ ಇರುವ ಬಗ್ಗೆ ಮಾಹಿತಿ ಇರುತ್ತದೆ. ಆದರೆ ರಸ್ತೆಯಲ್ಲಿ ಓಡಾಡುವ ವೇಳೆ ಮೀಟರ್‌ ಇರುವುದಿಲ್ಲ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಅನಧಿಕೃತ ಹೆಚ್ಚಳ
ಆಟೊ ದರವನ್ನು ಹೆಚ್ಚಿಸಬೇಕು ಎಂದು ಆಟೊ ಯೂನಿಯನ್‌ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ದರ ನಿಗದಿಪಡಿಸಬೇಕು. ಆದರೆ ಜಿಲ್ಲೆಯಲ್ಲಿ ಅಧಿಕೃತವಾಗಿ ದರ ಹೆಚ್ಚಳ ಮಾಡದೆ ಐದು ವರ್ಷ ದಾಟಿದೆ. ಮೊದಲ 2 ಕಿಲೋಮೀಟರ್‌ಗೆ ₹ 18. ಆನಂತರದ ಪ್ರತಿ ಕಿಲೋಮೀಟರ್‌ಗೆ ₹ 9. ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಶೇ 50ರಷ್ಟು (ಒಂದೂವರೆ ಪಟ್ಟು) ಹೆಚ್ಚು ಪಡೆಯಬಹುದು. 20 ಕೆ.ಜಿ.ವರೆಗೆ ಗೂಡ್ಸ್‌ಗೆ ಯಾವುದೇ ದರವಿಲ್ಲ. ಆನಂತರ ಪ್ರತಿ 20 ಕೆ.ಜಿ.ಗೆ ₹ 3. ಕಾಯುವಿಕೆಗೆ 15 ನಿಮಿಷಕ್ಕೆ ₹ 2 ಎಂದು 2012ರಲ್ಲಿ ನಿಗದಿ ಮಾಡಲಾಗಿತ್ತು.

ದಾಖಲೆಯಲ್ಲಿ ಈಗಲೂ ಇದೇ ಮುಂದುವರಿದಿದೆ. ಆದರೆ ಆಟೋ ಚಾಲಕರು ಅನಧಿಕೃತವಾಗಿ ದರ ಏರಿಸಿಕೊಂಡಿದ್ದಾರೆ. ಮೊದಲ 2 ಕಿಲೋಮೀಟರ್‌ವರೆಗೆ ₹ 30, ಆನಂತರದ ಪ್ರತಿ ಕಿಲೋಮೀಟರ್‌ಗೆ ₹ 15 ಮಾಡಿಕೊಂಡಿದ್ದಾರೆ.

‘ದರ ಹೆಚ್ಚಳಕ್ಕೆ ಬೇಡಿಕೆ ಬಾರದೆ ಇದ್ದರೆ ನಾವಾಗಿಯೇ ಸಭೆ ಕರೆದು ಹೆಚ್ಚಿಸಲು ಅವಕಾಶ ಇಲ್ಲ. ಕಡ್ಡಾಯವಾಗಿ ಮೀಟರ್‌ ಅಳವಡಿಸುವ ಬಗ್ಗೆ ಚರ್ಚೆ ನಡೆಸಲು ಆಟೊ ಯೂನಿಯನ್‌ ಮುಖಂಡರನ್ನು ಕರೆದಿದ್ದೇವೆ’ ಎಂದು ಆರ್‌ಟಿಒ ವಿ.ಜಿ.ಶ್ರೀನಿವಾಸಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 15,577 ಆಟೊಗಳು 2017ರ ಮಾರ್ಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ 11,062 ಆಟೊಗಳಿದ್ದವು. ಆನಂತರದ ನಾಲ್ಕು ತಿಂಗಳಲ್ಲಿ 4 ಸಾವಿರ ಆಟೊಗಳು ಜಾಸ್ತಿಯಾಗಿವೆ. ಜುಲೈ ಅಂತ್ಯಕ್ಕೆ 15,577 ಆಟೊಗಳು ಜಿಲ್ಲೆಯಲ್ಲಿ ಓಡಾಡುತ್ತಿವೆ ಎನ್ನುತ್ತವೆ ಪ್ರಾದೇಶಿಕ ಸಾರಿಗೆ ಕಚೇರಿ ಮಾಹಿತಿ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT