ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಬಳಿಕ ನಿರ್ಲಕ್ಷ್ಯದತ್ತ ಸೌರ ಬೀದಿದೀಪಗಳು

Last Updated 20 ಆಗಸ್ಟ್ 2017, 8:37 IST
ಅಕ್ಷರ ಗಾತ್ರ

ಬೈಂದೂರು : ‘ಪರ್ಯಾಯ ಶಕ್ತಿ ಮೂಲಕ್ಕೆ ಒತ್ತು ನೀಡುವ ಮತ್ತು ವಿದ್ಯುತ್ ಸೌಲಭ್ಯ ವಂಚಿತ ಪ್ರದೇಶಕ್ಕೆ ಬೆಳಕು ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳು ತಮ್ಮ ಪ್ರದೇಶದಲ್ಲಿ ಈಗ ವ್ಯಾಪಕವಾಗಿ ಅಳವಡಿಸುತ್ತಿರುವ ಸೌರ ವಿದ್ಯುತ್‌ ಬೀದಿದೀಪಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

‘ಪೂರೈಕೆದಾರರು ವ್ಯಾಪಾರ ವೃದ್ಧಿಯತ್ತ ಮಾತ್ರ ಆಸಕ್ತಿ ಹರಿಸಿ, ಮಾರಾಟ ಬಳಿಕದ ಸೇವೆಯತ್ತ ನಿರಾಸಕ್ತರಾದುದೂ ಕಾರಣ. ಈ ಅಂಶಗಳು ಗ್ರಾಮಗಳ ಸುತ್ತು ಬಂದಾಗ ಗೋಚರವಾಗುವ ಸತ್ಯ’ ಎಂಬುದು ಗ್ರಾಮಸ್ಥರ ಅಳಲು.

‘ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ನೀಡುವ ವಾರ್ಷಿಕ ಅನುದಾನದ ಸುಮಾರು ಎರಡು ಪಟ್ಟು ಹಣ ಕೇಂದ್ರ ಹಣಕಾಸು ಆಯೋಗದ ಶಿಫಾರಸಿನ ಅನುದಾನದಿಂದ ಬರುತ್ತಿದೆ. ಇದರಲ್ಲಿ ಶೇಕಡ 10ರಷ್ಟನ್ನು ಸೋಲಾರ್ ದೀಪಗಳಿಗೆ ವ್ಯಯಿಸಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ಹೊಸದಾಗಿ ಸೃಷ್ಟಿಯಾದ ಈ ಅವಕಾಶವನ್ನು ಗ್ರಾಮ ಪಂಚಾಯಿತಿಗಳು ಹಿತಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ’ ಎಂದು ದೂರಲಾಗಿದೆ.

‘ಸೌರದೀಪ ವ್ಯವಸ್ಥೆಯ ಫಲಕಗಳ ಮೇಲೆ ಬಿಸಿಲು ಬೀಳದಿರುವ, ಮರದ ನೆರಳಿನಲ್ಲಿ  ಸ್ಥಾಪಿಸಿರುವುದು, ಆರು ತಿಂಗಳಿಗೊಮ್ಮೆ  ನಿರ್ವಹಣೆ ಮಾಡದಿರುವುದರಿಂದ ದೀಪಗಳು ಬೆಳಗುವುದನ್ನು ನಿಲ್ಲಿಸಿವೆ ಅಥವಾ ನಡುರಾತ್ರಿಗೆ ಮುನ್ನವೇ ಕಣ್ಮುಚ್ಚುತ್ತಿವೆ’ ಎಂದು ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಉಪ್ಪುಂದದ ಜೈರಾಜ್ ಹೇಳುತ್ತಾರೆ.

ಕೆಲವೆಡೆ  ಫಲಕ, ದೀಪ ಮತ್ತು ಬ್ಯಾಟರಿ ಕಳವಾಗಿ ಕಂಬ ಮಾತ್ರ ಉಳಿದುಕೊಂಡಿವೆ. ಕೆಲವು ಕಡೆ ಸದಸ್ಯರಿಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ವಿದ್ಯುತ್ ಬೀದಿದೀಪ ಇರುವ ಸ್ಥಳದಲ್ಲೂ ಸೌರ ದೀಪ ಅಳವಡಿಸಲಾಗಿದೆ’ ಎನ್ನುವುದು ಬೀದಿದೀಪ ವಂಚಿತ ಗೋಪಾಲಕೃಷ್ಣ ಎಂಬವರ ಆರೋಪ.

‘ಕಿರಿಮಂಜೇಶ್ವರ ಮತ್ತು ಇತರ ಕೆಲವು ಗ್ರಾಮಗಳಿಗೆ ವ್ಯವಸ್ಥೆ ಪೂರೈಸಿದ ಸಂಸ್ಥೆ ಸೇವಾ ನ್ಯೂನತೆಯ ಕಾರಣದಿಂದ ಒಂದೇ ವರ್ಷದಲ್ಲಿ ಕಪ್ಪುಪಟ್ಟಿಗೆ ಸೇರಿಸಿರುವುದರಿಂದ ಅಲ್ಲಿ ನಿರ್ವಹಣೆ ನಡೆಸಲಾಗುತ್ತಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT