ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ಕ್ಕೆ ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ

Last Updated 20 ಆಗಸ್ಟ್ 2017, 9:08 IST
ಅಕ್ಷರ ಗಾತ್ರ

ಕೋಲಾರ: ‘ತಮಿಳುನಾಡಿನ ಎ.ಜಿ.ಅಶೋಕ್ ಮತ್ತು ಸಂಗಡಿಗರು ಕ್ರೈಸ್ತ ಸಮುದಾಯದ ಶಿಕ್ಷಣ ಸಂಸ್ಥೆಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆ.21ರಂದು ಬೆಳಿಗ್ಗೆ 11ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಮೆಥೋಡಿಸ್ಟ್ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ಕೆ.ವಿ.ಡೇವಿಡ್ ಕ್ರಿಸ್ಟೋಫರ್ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ ಮತ್ತು ಬೆಂಗಳೂರು ರಿಜಿನಲ್‌ ಕಾನ್ಫರೆನ್ಸ್ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಮೆಥೋಡಿಸ್ಟ್ ಸಂಸ್ಥೆಯು ಸುಮಾರು 150 ವರ್ಷಗಳ ಇತಿಹಾಸ ಹೊಂದಿದೆ. ರಾಜ್ಯದೆಲ್ಲೆಡೆ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ ಬಡವರು, ದೀನ ದಲಿತರು ಹಾಗೂ ಅನಾಥರ ಸೇವೆ ಮಾಡುತ್ತಿದೆ. ಶಾಂತಿ, ಸೌಹಾರ್ದತೆಗೆ ಹೆಸರಾಗಿರುವ ಕ್ರೈಸ್ತ ಸಂಸ್ಥೆಗಳು ಹಾಗೂ ಧರ್ಮ ಗುರುಗಳ ಮೇಲೆ ಅಶೋಕ್‌ ಮತ್ತು ಬೆಂಬಲಿಗರು ದೌರ್ಜನ್ಯ ಎಸಗುತ್ತಿದ್ದಾರೆ. ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿರುವ ಅವರು ಈ ಹಿಂದೆಯೂ ಶಾಂತಿ ಭಂಗ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸಮುದಾಯದ ಚುನಾವಣೆ ನಡೆದಾಗ ಅಶೋಕ್ ಬೆಂಬಲಿತ ಬಿಷಪ್ ಪರಾಭಾವಗೊಂಡರು. ಇದನ್ನು ಸಹಿಸಲಾಗದೆ ಅಶೋಕ್ ತನ್ನ ಸಹಚರರಿಗೆ ಹಣದ ಆಮಿಷವೊಡ್ಡಿ ಸಂಸ್ಥೆಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದು, ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಹಾಲಿಸ್ಟರ್ ಸಮುದಾಯ ಭವನದ ವ್ಯವಸ್ಥಾಪಕ ಅಮರ್‌ಕುಮಾರ್, ಬಾಲ್ಡ್ವಿನ್‌ ಶಾಲೆ ವ್ಯವಸ್ಥಾಪಕ ಜಾನ್ಸನ್‌ಕುಮಾರ್, ಮೆಥೋಡಿಸ್ಟ್ ಚರ್ಚ್ ಇನ್ ಇಂಡಿಯಾ ಜಿಲ್ಲಾ ಮಟ್ಟದ ಪದಾಧಿಕಾರಿಗಳಾದ ಜಯದೇವ ಪ್ರಸನ್ನ, ಚಂದ್ರಶೇಖರ್, ಸ್ಯಾಂಡ್ಲಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT