ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರೊಂದಿಗೆ ಬ್ರಿಟನ್‌ ಪ್ರಜೆಯ ಸಂವಾದ

Last Updated 20 ಆಗಸ್ಟ್ 2017, 9:46 IST
ಅಕ್ಷರ ಗಾತ್ರ

ರಾಮನಗರ: ನಗರಕ್ಕೆ ಶನಿವಾರ ಒಬ್ಬ ಅಪರೂಪದ ಅತಿಥಿ ಬಂದಿದ್ದರು. ಇಲ್ಲಿನ ಹೊಲ ಗದ್ದೆಗಳನ್ನು ಸುತ್ತಾಡಿ, ರೈತರೊಂದಿಗೆ ಸಂವಾದ ನಡೆಸಿದ ಅವರು ಕಾಲ್ನಡಿಗೆಯಲ್ಲಿಯೇ ರಾಜಧಾನಿಯತ್ತ ಪ್ರಯಾಣ ಬೆಳೆಸಿದರು. ಹೀಗೆ ಸ್ಥಳೀಯ ರೈತರೊಂದಿಗೆ ಬೆರೆತು ಅಭಿಪ್ರಾಯ ಹಂಚಿಕೊಂಡಿದ್ದು ಬ್ರಿಟನ್‌ ದೇಶದ ಡೇವಿಡ್‌ ಅತೊವ್‌.

ಸುಸ್ಥಿರ ಕೃಷಿ ಕುರಿತು ಜಾಗೃತಿ ಹಾಗೂ ರೈತರ ಸಂಪರ್ಕಕ್ಕಾಗಿ ‘ರೆಸ್ಕ್ಯೂ ಎ ಫ್ಯಾಮಿಲಿ’ ಅಭಿಯಾನಕ್ಕೆ ದೇಣಿಗೆ ಸಂಗ್ರಹಿಸುವ ಸಲುವಾಗಿ ದೇಶಾದಾದ್ಯಂತ ಪ್ರವಾಸ ಕೈಗೊಂಡಿರುವ ಇವರು ಸದ್ಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದಾರೆ. ಕಳೆದ ಜುಲೈ 15ರಂದು ಕನ್ಯಾಕುಮಾರಿಯಿಂದ ಹೊರಟಿರುವ ಡೇವಿಡ್‌ ಮುಂದಿನ ಮೇ ವೇಳೆಗೆ ಪಾದಯಾತ್ರೆ ಮೂಲಕವೇ ಪಂಜಾಬಿನ ಅಮೃತಸರ ತಲುಪುವ ಗುರಿ ಹೊಂದಿದ್ದಾರೆ. ಅವರ ಈ ಅಭಿಯಾನವು ಶನಿವಾರ ರಾಮನಗರದ ಮೂಲಕ ಸಾಗಿತು.

ಹೊಲಗಳಿಗೆ ಭೇಟಿ: ಡೇವಿಡ್‌ ಮತ್ತು ಅವರ ತಂಡದವರು ಬೆಳಿಗ್ಗೆ ತಾಲ್ಲೂಕಿನ ಕೂಟಗಲ್‌ ಹೋಬಳಿಯ ನಿಜಿಯಪ್ಪನದೊಡ್ಡಿಯ ಪ್ರಗತಿಪರ ರೈತ ಎನ್. ಆರ್‌. ಸುರೇಂದ್ರ ಹಾಗೂ ಮಾಗಡಿ ತಾಲ್ಲೂಕಿನ ಮಾಡಬಾಳ್‌ ಹೋಬಳಿಯ ಕೊಟ್ಟಗಾರಹಳ್ಳಿ ಪ್ರಗತಿಪರ ರೈತ ಸದಾಶಿವ ಅವರ ಮನೆ ಮತ್ತು ಹೊಲಕ್ಕೆ ಭೇಟಿ ನೀಡಿ ಕೃಷಿ ಮಾಹಿತಿ ಪಡೆದರು.
ರಾಗಿ, ನವಣೆ, ಸಜ್ಜೆ, ಸೇರಿದಂತೆ ಸಿರಿಧಾನ್ಯಗಳು, ತರಕಾರಿಗಳ ಬಗ್ಗೆ ಮಾಹಿತಿ ಪಡೆದ ಅವರು, ಬೆಳೆಗಳನ್ನು ವೀಕ್ಷಿಸಿದರು. ಹಲಸಿನ ಹಣ್ಣು, ಮಾವು, ಹೈನುಗಾರಿಕೆ, ಕುರಿ ಸಾಗಾಣಿಕೆ, ದೇಸಿ ಬೀಜಗಳ ಸಂರಕ್ಷಣೆ ಹಾಗೂ ಜೀವಾಮೃತದ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿದರು.

ಸುಸ್ಥಿರ ಕೃಷಿ ವಿಧಾನಗಳನ್ನು ಅನುಸರಿಸಿ ಯಶಸ್ವಿಯಾಗಿರುವುದರ ಬಗ್ಗೆ ಕೃಷಿಕರ ಜತೆ ಚರ್ಚಿಸಿದರು. ದೇಸಿ ಕೃಷಿ ಬೆಳೆಗಳ ಪರಿಚಯ ಮಾಡಿಕೊಂಡ ಅವರು, ಈ ಭಾಗದಲ್ಲಿ ಎಷ್ಟು ರೈತರು ದೇಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ವತಿಯಿಂದ ಕೃಷಿ ಕ್ಷೇತ್ರದಲ್ಲಿ ಜಾರಿಯಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಿಜಿಯಪ್ಪನದೊಡ್ಡಿಯಲ್ಲಿ ದೇಸಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದಿರುವ 25 ಬಗೆಯ ರಾಗಿ ತಳಿಗಳನ್ನು ಕಂಡು ಬೆರಗಾದರು. ತಾವೇ ಸಿದ್ದಪಡಿಸಿದ್ದ ಸಾವಯವ ಗೊಬ್ಬರದ ಮೂಲಕ ಕೃಷಿ ಮಾಡುತ್ತಿರುವ ಸುರೇಂದ್ರ ಅವರು ಮನೆಯಲ್ಲಿ ತೆರೆದಿರುವ ದೇಸಿ ಬೀಜ ಬ್ಯಾಂಕ್‌ ಅನ್ನು ಕುತೂಹಲದಿಂದ ವೀಕ್ಷಿಸಿ, ಟಿಪ್ಪಣಿ ಮಾಡಿಕೊಂಡರು.
ಆಸಕ್ತಿ ಇರುವ ರೈತರಿಗೆ ಸಾವಯವ ಕೃಷಿ ವಿಧಾನ ಕುರಿತು ತರಬೇತಿ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊಟ್ಟಗಾರಹಳ್ಳಿಯಲ್ಲಿ ಸಾವಯವ ಗೊಬ್ಬರದ ಮೂಲಕ ಬೆಳೆದ ತರಕಾರಿಗಳ ಬಗ್ಗೆ ಚಿತ್ರ ಸಮೇತ ಮಾಹಿತಿ ತೆಗೆದುಕೊಂಡರು.

ರೈತರ ಜೊತೆ ಸಂಪರ್ಕ: ‘ಪಾದಯಾತ್ರೆಯಲ್ಲಿ ಕಂಡುಬಂದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಸಾಂಪ್ರದಾಯಿಕ ಜಲಸಂರಕ್ಷಣಾ ವಿಧಾನಗಳ ಜತೆಗೆ ಅಗಾಧ ಪ್ರಮಾಣದ ಕೃಷಿ ಜೀವ ವೈವಿಧ್ಯದ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ನೋಡಿದ್ದನ್ನು ಬಹುತೇಕವಾಗಿ ನಿತ್ಯವೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಸುಸ್ಥಿರ ಕೃಷಿ ಕುರಿತು ಜಾಗೃತಿ, ಗ್ರಾಹಕರ ಜತೆ ರೈತರ ಸಂಪರ್ಕ ಮಾಡುತ್ತಿದ್ದೇನೆ’ ಎಂದು ಡೇವಿಡ್‌ ತಿಳಿಸಿದರು.

ಸಾವಯವ ಕೃಷಿಕ ಎನ್.ಆರ್. ಸುರೇಂದ್ರ ಮಾತನಾಡಿ ‘ಜೀವಾಮೃತವನ್ನು ಬಳಸಿಕೊಂಡು ಇಲ್ಲಿ ಬೆಳೆ ಬೆಳೆಯಲಾಗಿದೆ. ಬ್ರಿಟನ್‌ನಿಂದ ಬಂದಿರುವ ಡೇವಿಡ್‌ ಅವರು ರೈತರ ಆತ್ಮಹತ್ಯೆ, ಹೈನುಗಾರಿಕೆ, ಕುರಿ ಮತ್ತು ಕೋಳಿ ಸಾಕಣೆಯ ಬಗ್ಗೆ ಹಲವು ರೈತರನ್ನು ಸಂದರ್ಶಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಹೊರ ದೇಶದಿಂದ ಬಂದು ರೈತರ ಸಮಸ್ಯೆಗಳು ಮತ್ತು ಬೆಳೆಗಳನ್ನು ಅಧ್ಯಯನ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ’ ಎಂದು ತಿಳಿಸಿದರು. ಪಂಜಾಬಿನ ಜಫೀರ್‌ ಸಿಂಗ್, ಬಹದ್ದೂರ್ ಸಿಂಗ್, ಸಾವಯವ ಕೃಷಿಕರಾದ ಸದಾಶಿವು, ಬೊಮ್ಮನಹ ಳ್ಳಿಚಂದ್ರಶೇಖರ್, ಮುಖಂಡರಾದ ಕೆ. ಸುದೀಪ್‌, ಜಿ. ವೆಂಕಟೇಶ್, ಗಿರೀಶ್, ಹಿರಿಯ ರೈತ ಹೋರಾಟಗಾರ ಚಲುವಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT