ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್ ಅಂಗಳದಲ್ಲಿ ‘ಖುಷಿ’

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆರನೇ ವಯಸ್ಸಿನಲ್ಲಿಯೇ ಟೇಬಲ್‌ ಟೆನಿಸ್‌ ಆಟಕ್ಕೆ ಪದಾರ್ಪಣೆ ಮಾಡಿದವರು ಬೆಂಗಳೂರಿನ ವಿ. ಖುಷಿ. ಈಗ ಅವರಿಗೆ 17 ವರ್ಷ. ಅತಿ ಕಡಿಮೆ ಅವಧಿಯಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಟ್ಯುನಿಶಿಯಾ, ಜೋರ್ಡಾನ್‌ನಲ್ಲಿ ನಡೆದಿರುವ 18 ವರ್ಷದೊಳಗಿನವರ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪದಕ ಗಳಿಸಿ ಭರವಸೆಯ ಆಟಗಾರ್ತಿಯಾಗಿ ಬೆಳೆಯುತ್ತಿದ್ದಾರೆ.

ಹೊಸಪೇಟೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ರ್ಯಾಕಿಂಗ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿಯ ಸಬ್ ಜೂನಿಯರ್‌ ಮತ್ತು 21 ವರ್ಷದೊಳಗಿನವರ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಈ ಸಂದರ್ಭದಲ್ಲಿ ಖುಷಿ ‘ಪ್ರಜಾವಾಣಿ’ಯೊಂದಿಗೆ  ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.

*ಟೇಬಲ್‌ ಟೆನಿಸ್‌ ಆಯ್ಕೆ ಮಾಡಿಕೊಳ್ಳಲು ಏನಾದರೂ ನಿರ್ದಿಷ್ಟ ಕಾರಣವಿದೆಯೇ?
ಯಾವುದೇ ನಿರ್ದಿಷ್ಟ ಕಾರಣಗಳು ಇರಲಿಲ್ಲ. ನನ್ನ ಅಪ್ಪ ವಿಶ್ವನಾಥ್‌ ಅಥ್ಲೆಟಿಕ್ಸ್‌ ತರಬೇತುದಾರರು. ತಾಯಿ ಪುಷ್ಪಾ ಹ್ಯಾಂಡ್‌ಬಾಲ್‌ ಆಟಗಾರ್ತಿ. ಇಬ್ಬರಿಗೂ ಕ್ರೀಡೆ ಬಗ್ಗೆ ವಿಶೇಷ ಒಲವು. ನಾನು ಆರು ವರ್ಷದವಳಿದ್ದಾಗ ನನ್ನನ್ನು ಟೇಬಲ್‌ ಟೆನಿಸ್‌ಗೆ ಸೇರಿಸಿದರು. ನಾನು ಶ್ರದ್ಧೆಯಿಂದ ಆಡಿದೆ. ಅದು ಈಗಲೂ ಹಾಗೆಯೇ ಮುಂದುವರೆಯುತ್ತಿದೆ.

*ನಮ್ಮ ಹಾಗೂ ಬೇರೆ ದೇಶಗಳಲ್ಲಿ ಟೇಬಲ್‌ ಟೆನಿಸ್‌ ತರಬೇತಿ, ತರಬೇತುದಾರರ ಬಗ್ಗೆ ಏನು ಹೇಳಲು ಬಯಸುವಿರಿ?
ಒಂದೊಂದು ದೇಶದಲ್ಲಿ ಒಂದೊಂದು ರೀತಿಯಿಂದ ತರಬೇತಿ ನೀಡಲಾಗುತ್ತದೆ. ನಮ್ಮಲ್ಲೂ ಅಂತರರಾಷ್ಟ್ರೀಯ ಮಟ್ಟದ ತರಬೇತುದಾರರಿದ್ದಾರೆ. ಅದಕ್ಕೆ ತಕ್ಕಂತಹ ಕ್ರೀಡಾಂಗಣಗಳು ಇವೆ. ಒಳ್ಳೆಯ ತರಬೇತಿ ಸಿಗುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಅಂತಹ ವ್ಯತ್ಯಾಸವೇನೂ ಕಾಣಿಸದು. ಆದರೆ, ಅಂತಿಮವಾಗಿ ಆಟಗಾರನ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ನಾವು ಎಷ್ಟು ಶ್ರಮಪಟ್ಟು ಆಟದಲ್ಲಿ ತೊಡಗಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

*ಹೊಸಪೇಟೆಯಂತಹ ಸಣ್ಣ ಊರಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಪಂದ್ಯಾವಳಿ, ಸೌಕರ್ಯಗಳ ಬಗ್ಗೆ ಏನು ಅನಿಸುತ್ತದೆ?
ಸಣ್ಣ ಊರಾದರೂ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ರಾಷ್ಟ್ರೀಯ ಮಟ್ಟದ ಟೂರ್ನಿಗಳ ಮಾದರಿಯಲ್ಲಿಯೇ ಸಮಯಕ್ಕೆ ಸರಿಯಾಗಿ ಪಂದ್ಯಗಳು ಆರಂಭವಾಗುತ್ತಿದ್ದವು. ಎಲ್ಲವೂ ಚೆನ್ನಾಗಿತ್ತು.

*ಟೇಬಲ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾಗವಹಿಸುವುದರಿಂದ ನಿಮ್ಮ ಓದಿಗೆ ಅಡ್ಡಿಯಾಗುವುದಿಲ್ಲವೇ?
ಟೆನಿಸ್‌ ಆಟದಿಂದ ಎಂದೂ ನನ್ನ ಓದಿಗೆ ತೊಂದರೆ ಆಗಿಲ್ಲ. ಎಲ್ಲ ಟೂರ್ನಿಗಳು ಜನವರಿಯಲ್ಲಿ ಮುಗಿಯುತ್ತವೆ. ಪರೀಕ್ಷೆಗೆ ಎರಡ್ಮೂರು ತಿಂಗಳು ಉಳಿದಿರುತ್ತವೆ. ಅಷ್ಟರೊಳಗೆ ಸಾಕಷ್ಟು ತಯಾರಿ ಮಾಡಿಕೊಳ್ಳಬಹುದು. ಆಟದ ಅಭ್ಯಾಸದ ಜತೆಗೇ ನಿತ್ಯ ಎರಡ್ಮೂರು ಗಂಟೆ ಓದುತ್ತೇನೆ. ಎಸ್ಸೆಸ್ಸೆಲ್ಸಿಯಲ್ಲಿ ಐ.ಸಿ.ಎಸ್‌.ಇ. ಪಠ್ಯದಲ್ಲಿ ಶೇ. 81ರಷ್ಟು ಅಂಕ ಗಳಿಸಿದ್ದೇನೆ. ಸದ್ಯ ಪಿಯು ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದೇನೆ. ಇದರಲ್ಲೂ ಉತ್ತಮ ಫಲಿತಾಂಶ ತೆಗೆಯುವ ಭರವಸೆ ಹೊಂದಿದ್ದೇನೆ. ಟೆನಿಸ್‌ನಿಂದ ನನಗೆ ಓದಿನಲ್ಲಿ ಹೆಚ್ಚಿನ ಏಕಾಗ್ರತೆ ಬಂದಿದೆ. ಒಟ್ಟಿನಲ್ಲಿ ಹೇಳುವುದಾದರೆ ಸರಿಯಾದ ಯೋಜನೆ ರೂಪಿಸಿಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ.

*ಟೇಬಲ್‌ ಟೆನಿಸ್‌ನಲ್ಲಿ ನಿಮಗೆ ಯಾರು ಮಾದರಿ?
ಜಗತ್ತಿನ ನಂಬರ್‌ ಒನ್‌ ಆಟಗಾರ ಚೀನಾದ ಡಿಂಗ್‌ ನಿಂಗ್‌. ಅವರಂತೆ ಆಟವಾಡಿ ಹೆಸರು ಮಾಡಬೇಕು ಎನ್ನುವ ಆಸೆ ಇದೆ.

*ಈಗಾಗಲೇ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಿ ಪದಕ ಗೆದ್ದಿರುವ ನಿಮಗೆ ನಿಮ್ಮ ಮುಂದಿರುವ ದೊಡ್ಡ ಗುರಿ ಯಾವುದು?
ಸದ್ಯ ದೇಶದ ಏಳನೇ ಶ್ರೇಯಾಂಕದ ಆಟಗಾರ್ತಿಯಾಗಿದ್ದೇನೆ. ಏಳರಿಂದ ಒಂದನೇ ಸ್ಥಾನಕ್ಕೆ ಏರುವುದು ಮೊದಲ ಗುರಿ. 2024ರಲ್ಲಿ ಫ್ರಾನ್ಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ಅದಕ್ಕೆ ಅರ್ಹತೆ ಪಡೆದು, ಅಲ್ಲಿ ಪದಕ ಗಳಿಸಬೇಕೆಂಬ ಮಹದಾಸೆ ಹೊಂದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT