ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಅಂಗಳದಲ್ಲಿ ಕನ್ನಡದ ಕಂಪು

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬದಲಾಗುತ್ತಿದೆ... ಬದಲಾಯಿಸುತ್ತಿದೆ...
ಹೌದು, ಪ್ರೊ ಕಬಡ್ಡಿ ಲೀಗ್‌ ದೇಶದ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ನಿರ್ಮಿಸಿದೆ. ಆಟದ ವೈಖರಿಯನ್ನು ಬದಲಾಯಿಸಿದ್ದು ಮಾತ್ರವಲ್ಲದೆ ಅದೆಷ್ಟೊ ಬಡ ಆಟಗಾರರ ಜೀವನಕ್ಕೆ ಆಧಾರಸ್ತಂಭವಾಗಿದೆ. ಅದೆಷ್ಟೊ ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಐಪಿಎಲ್‌ ಕ್ರಿಕೆಟ್‌ ಟೂರ್ನಿಗಿಂತ ಹೆಚ್ಚಿನ ಪ್ರೇಕ್ಷಕರು ಕಬಡ್ಡಿ ಲೀಗ್‌ಗೆ ಇದ್ದಾರೆ. ಇದೊಂದು ಅಚ್ಚರಿಯ ಬೆಳವಣಿಗೆ. ನೇರಪ್ರಸಾರ ಮಾಡುತ್ತಿರುವ ಸ್ಟಾರ್‌ ಸ್ಪೋರ್ಟ್ಸ್‌ನ ಟಿಆರ್‌ಪಿ ಕೂಡ ದಿನೇದಿನೇ ಶರವೇಗದಲ್ಲಿ ಮೇಲೇರುತ್ತಿದೆ. ಇದೊಂದು ದೊಡ್ಡ ಉದ್ಯಮವಾಗಿ ಬೆಳೆದು ಬಿಟ್ಟಿದೆ. ಇದಕ್ಕೆ ಕಾರಣ ಕ್ರೀಡಾಭಿಮಾನಿಗಳು ಕಬಡ್ಡಿ ಕ್ರೀಡೆಗೆ ತಮ್ಮೆದೆ ಗೂಡಲ್ಲಿ ವಿಶೇಷ ಜಾಗ ಕಲ್ಪಿಸಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಬೆಂಬಲ ಲಭಿಸುತ್ತಿದೆ.

ಕರ್ನಾಟಕದ ಹತ್ತಕ್ಕೂ ಅಧಿಕ ಆಟಗಾರರು ಪ್ರೊ ಕಬಡ್ಡಿ ಲೀಗ್‌ನ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಕೆಲವರು ಮೊದಲ ಬಾರಿ ಕಣಕ್ಕಿಳಿದಿದ್ದರೆ, ಇನ್ನು ಕೆಲವರು ಕಳೆದ ನಾಲ್ಕು ಅವೃತ್ತಿಗಳಿಂದ ಆಡುತ್ತಿದ್ದಾರೆ. ಈ ಕ್ರೀಡೆಯಿಂದ ಅವರ ಜೀವನಮಟ್ಟ ಬದಲಾಗಿದೆ.

ನೂತನ ತಂಡ ತಮಿಳು ತಲೈವಾಸ್‌ನಲ್ಲಿ ಆಡುತ್ತಿರುವ ನಾಗಮಂಗಲದ ಜೆ.ದರ್ಶನ್‌ ಅತ್ಯುತ್ತಮ ಕ್ಯಾಚಿಂಗ್‌ ಮೂಲಕ ಎದುರಾಳಿ ಆಟಗಾರರಲ್ಲಿ ಭಯ ಮೂಡಿಸಿದ್ದಾರೆ. ಈ ಯುವ ಆಟಗಾರ ಹರಾಜಿನಲ್ಲಿ ₹ 7 ಲಕ್ಷಕ್ಕೆ ತಲೈವಾಸ್‌ಗೆ ಸೇರ್ಪಡೆಯಾಗಿದ್ದಾರೆ.

‘ನಮ್ಮದು ಬಡಕುಟುಂಬ. ಸಹೋದರನೊಂದಿಗೆ ಈರುಳ್ಳಿ ವ್ಯಾಪಾರ ಮಾರುತ್ತಿದ್ದೆ. ಅದಕ್ಕಾಗಿ ಶಿಕ್ಷಣವನ್ನೇ ತೊರೆದೆ. ಜೀವನ ಸಾಗಿಸಲು ಕಷ್ಟವಾಗಿದ್ದ ಸಮಯದಲ್ಲಿ ಪ್ರೊ ಕಬಡ್ಡಿ ನನ್ನ ಕೈ ಹಿಡಿದಿದೆ. ನನಗೆ ಯಾವತ್ತೂ ಇಷ್ಟೊಂದು ದುಡ್ಡು ಲಭಿಸಿರಲಿಲ್ಲ’ ಎಂದು ಅವರು ಖುಷಿ ವ್ಯಕ್ತಪಡಿಸುತ್ತಾರೆ.

‘ಸ್ಥಳೀಯ ಟೂರ್ನಿಗಳಲ್ಲಿ ಆಡಿ ಬೆಳೆದವ. ಟಿ.ವಿಯಲ್ಲಿ ಪ್ರೊ ಕಬಡ್ಡಿ ವೀಕ್ಷಿಸುತ್ತಿದ್ದೆ. ಈಗ ಅಂಥ ಟೂರ್ನಿಯಲ್ಲಿ ಆಡುತ್ತಿದ್ದೇನೆ ಎಂಬ ಖುಷಿ ಇದೆ. ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರೊಂದಿಗೆ ಬೆರೆಯಲು ಅವಕಾಶ ಲಭಿಸಿದೆ. ಅವರ ಅನುಭವವನ್ನು ಹಂಚಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆ’ ಎನ್ನುತ್ತಾರೆ.

‘ತಂಡದ ಮಾಲೀಕ ಸಚಿನ್‌ ತೆಂಡೂಲ್ಕರ್‌ ಕೂಡ ಹೋಟೆಲ್‌ಗೆ ಬಂದು ಹುರಿದುಂಬಿಸಿದ್ದಾರೆ. ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಆಡುವಂತೆ ಕಿವಿಮಾತು ಹೇಳಿದ್ದಾರೆ. ದೇಶದ ತಂಡವನ್ನು ಪ್ರತಿನಿಧಿಸಬೇಕೆಂಬುದು ನನ್ನ ಕನಸು’ ಎಂದು ದರ್ಶನ್‌ ಹೇಳುತ್ತಾರೆ.

ಕನ್ಯಾಕುಮಾರಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಜೀವಾ ಕುಮಾರ್‌ ಅವರ ಬದುಕು ಬದಲಾಯಿಸಿದ್ದು ಪ್ರೊ ಕಬಡ್ಡಿ. ಈ ಕ್ರೀಡೆಯಿಂದ ಬಂದ ಹಣದಲ್ಲಿ ಅವರು ಮನೆ ಕಟ್ಟಿಸುತ್ತಿದ್ದಾರೆ. ಅವರು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಉದ್ಯೋಗಿ ಕೂಡ.

‘ಪ್ರೊ ಕಬಡ್ಡಿ ಆಡುತ್ತಿರುವ ಕಾರಣಕ್ಕೆ ನನಗೆ ಎಲ್ಲೆಡೆ ಗೌರವ ಸಿಗುತ್ತಿದೆ. ಸ್ನೇಹಿತರು ನನ್ನನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದಾಗಲೂ ಇಷ್ಟೊಂದು ಖ್ಯಾತಿ ಬಂದಿರಲಿಲ್ಲ. ಆಸೆಗೆ ಅಂತ್ಯ ಎಂಬುದಿಲ್ಲ. ಇನ್ನೂ ಎತ್ತರಕ್ಕೆ ಏರುವ ಗುರಿ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಜೀವಾ.

ಕನ್ನಡಿಗ ಸುಖೇಶ್‌ ಹೆಗ್ಡೆ ಅವರಿಗೆ ಈ ಬಾರಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡ ಮುನ್ನಡೆಸುವ ಅವಕಾಶ ಲಭಿಸಿದೆ. ಆ ಅವಕಾಶವನ್ನು ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವುದೇ ಅದಕ್ಕೆ ಸಾಕ್ಷಿ. ಅಲ್ಲದೆ, ಗುಜರಾತ್‌ನಲ್ಲಿ ಅಪಾರ ಅಭಿಮಾನಿಗಳ ಬಳಗವನ್ನೇ ಅವರು ಹೊಂದಿದ್ದಾರೆ.

‘ಕಾರ್ಕಳ ಬಳಿಯ ಹಳ್ಳಿಯಲ್ಲಿ ಬಡಕುಟುಂಬದಲ್ಲಿ ಹುಟ್ಟಿದ ನಾನು ಕಷ್ಟದ ಹಾದಿಯಲ್ಲಿ ಬೆಳೆದು ಬಂದು ಈ ಮಟ್ಟಕ್ಕೇರಿದ್ದೇನೆ. ಪ್ರೊ ಕಬಡ್ಡಿ ಲೀಗ್‌ ನನ್ನ ಬದುಕು ಬದಲಾಯಿಸಿದೆ. ವಿಜಯ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಬಡ್ತಿ ಕೂಡ ಲಭಿಸಿದೆ’ ಎಂದು ಸುಕೇಶ್‌ ಹೇಳುತ್ತಾರೆ.

*

ಯುವಕರತ್ತ ಚಿತ್ತ ಹರಿಸಲು ಸಕಾಲ–ರಮೇಶ್‌
‘ಆಟಗಾರರ ಕಬಡ್ಡಿ ವ್ಯಾಮೋಹ ಕೇವಲ ಪ್ರೊ ಕಬಡ್ಡಿ ಲೀಗ್‌ಗೆ ಸೀಮಿತವಾಗಬಾರದು. ರಾಜ್ಯ ಹಾಗೂ ದೇಶದ ತಂಡ ಪ್ರತಿನಿಧಿಸುವ ಉದ್ದೇಶ ಇಟ್ಟುಕೊಂಡು ಆಡಬೇಕು. ಅದರಲ್ಲೂ ಕರ್ನಾಟಕದಲ್ಲಿ ಯುವ ಆಟಗಾರರತ್ತ ಚಿತ್ತ ಹರಿಸುವುದು ಅಗತ್ಯವಾಗಿದೆ’ ಎಂದು ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ ಬಿ.ಸಿ.ರಮೇಶ್‌ ನುಡಿದಿದ್ದಾರೆ.

ಪುಣೇರಿ ಪಲ್ಟನ್‌ ತಂಡದ ಮುಖ್ಯ ಕೋಚ್‌ ಆಗಿರುವ ಕನ್ನಡಿಗ ರಮೇಶ್‌ ಅವರೊಂದಿಗಿನ ಸಂದರ್ಶನದ ಸಾರಾಂಶಇಲ್ಲಿದೆ. ಪ್ರೊ ಕಬಡ್ಡಿಯಲ್ಲಿ ಕರ್ನಾಟಕದ ಪ್ರಾತಿನಿಧ್ಯ, ಆಟಗಾರರ ಪ್ರದರ್ಶನ, ಸಿಗುತ್ತಿರುವ ಅವಕಾಶಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

*ಲೀಗ್‌ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿರುವ ಕರ್ನಾಟಕದ ಆಟಗಾರರ ಪ್ರದರ್ಶನ ಹೇಗಿದೆ?
ಯುವ ಆಟಗಾರರಲ್ಲಿ ದರ್ಶನ್‌ ಪ್ರದರ್ಶನ ಚೆನ್ನಾಗಿದೆ. ತಮಿಳು ತಲೈವಾಸ್‌ ತಂಡದ ಪ್ರಮುಖ ಆಟಗಾರರಾಗಿ ಅವರುಹೊರಹೊಮ್ಮಿದ್ದಾರೆ. ಕಳೆದ ನಾಲ್ಕು ಆವೃತ್ತಿಗಳಿಗೆ ಹೋಲಿಸಿದರೆ ರಾಜ್ಯದ ಸೀನಿಯರ್‌ ಆಟಗಾರರಿಂದ ಈ ಬಾರಿ ಹೇಳಿಕೊಳ್ಳುವಂಥ ಪ್ರದರ್ಶನ ಮೂಡಿಬರುತ್ತಿಲ್ಲ. ಹಿಂದಿನ ಆವೃತ್ತಿಗಳಲ್ಲಿ ಶಬೀರ್‌, ಸುಖೇಶ್‌ ಹೆಗ್ಡೆ ಮಿಂಚಿದ್ದರು. ಈ ಬಾರಿಜೀವಾ, ಪ್ರಶಾಂತ್‌ ಹಾಗೂ ಸುಕೇಶ್‌ ಪರವಾಗಿಲ್ಲ.

*ಉತ್ತರ ಭಾರತದ ಆಟಗಾರರ ಪಾರಮ್ಯಕ್ಕೆ ಕಾರಣವೇನು?
ದಕ್ಷಿಣ ಭಾರತದಿಂದ ಉತ್ತಮ ಆಟಗಾರರೇ ಇಲ್ಲ. ಹೀಗಾಗಿ, ಉತ್ತರ ಭಾರತದ ಪ್ರಾತಿನಿಧ್ಯ ಹೆಚ್ಚಾಗುತ್ತಿದೆ. ಅವರಿಗೆಹೋಲಿಕೆ ಮಾಡಲು ಸಾಧ್ಯವಿಲ್ಲದಂತಾಗಿದೆ. ಹರಾಜಿನಲ್ಲಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದೂ ಉತ್ತರ ಭಾರತದ ಆಟಗಾರರು. ಪ್ರೊ ಕಬಡ್ಡಿಯಲ್ಲಿ ಆಡಿದರೆ ಸಾಕು ಎಂಬಂಥ ಮನೋಭಾವ ನಮ್ಮ ರಾಜ್ಯದ ಆಟಗಾರರಲ್ಲಿ ಮೂಡಿದೆ.ರಾಜ್ಯ, ದೇಶ ಪ್ರತಿನಿಧಿಸಬೇಕೆಂಬ ತುಡಿತ ಇಲ್ಲದಂತಾಗಿದೆ.

*ರಾಜ್ಯದಲ್ಲಿ ಕಬಡ್ಡಿ ಸುಧಾರಣೆಗೆ ಏನು ಮಾಡಬಹುದು?
ಹಳಬರನ್ನು ನಂಬದೆ ಯುವ ಆಟಗಾರರತ್ತ ಹೆಚ್ಚು ಗಮನ ಹರಿಸಬೇಕು. 18–22 ವರ್ಷದ ಯುವಕರನ್ನು ಗುರುತಿಸಿಅವರಿಗೆ ಉತ್ತಮ ತರಬೇತಿ ನೀಡಬೇಕು. ಫಿಟ್‌ನೆಸ್‌ಗೆ ಆದ್ಯತೆ ಕೊಡಬೇಕು. ಉದಾಹರಣೆಗೆ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ನಲ್ಲಿ ಆಡುತ್ತಿರುವ ಸಚಿನ್‌, ರೋಹಿತ್‌ ಗೂಲಿಯಾ, ದರ್ಶನ್‌ ಅವರಂಥ ಆಟಗಾರರನ್ನೇ ಗಮನಿಸಿ. ಅವರೆಲ್ಲಾ ಯುವ ಆಟಗಾರರು. ಫಾರ್ಚೂನ್‌ ತಂಡದವರು ಪಾರಮ್ಯ ಮೆರೆಯಲು ಈ ಆಟಗಾರರು ಪ್ರಮುಖ ಕಾರಣರಾಗುತ್ತಿದ್ದಾರೆ.

*ಕೋಚ್ ಆಗಿ ಕಾರ್ಯನಿರ್ವಹಿಸಲು ನಿಮಗೆ ಲಭಿಸಿರುವ ಅವಕಾಶದ ಬಗ್ಗೆ ಹೇಳಿ?
ಹಿಂದಿನ ಆವೃತ್ತಿಗಳಲ್ಲಿ ನನಗೆ ಕೋಚ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ಲಭಿಸಿದ್ದರೂ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯ ಕೋಚ್‌ ಕೆಳಗೆ ಕೆಲಸ ಮಾಡುತ್ತಿದ್ದೆ. ಈ ಬಾರಿ ಪುಣೇರಿ ಪಲ್ಟನ್‌ ತಂಡದ ಮುಖ್ಯ ಕೋಚ್‌ ಆಗಿದ್ದೇನೆ. 2–3 ತಿಂಗಳಿನಿಂದ ಬಹಳಷ್ಟು ಶ್ರಮ ಹಾಕಿ ತರಬೇತಿ ನೀಡುತ್ತಿದ್ದೇನೆ. ಜೊತೆಗೆ ಹಲವು ಏಳುಬೀಳು ಕಂಡಿದ್ದೇನೆ. ಕೆಲ ಆಟಗಾರರು ನನ್ನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೇಳಿದ್ದನ್ನು ಕೇಳುವುದಿಲ್ಲ. ಹೀಗಾಗಿ, ಈ ಜವಾಬ್ದಾರಿ ಸವಾಲಿನದ್ದು. ಮಾತು ಕೇಳಿದರೆ ಉತ್ತಮ ಆಟವಾಡಬಹುದು. ಅದಕ್ಕೆ ಬೆಂಗಾಲ್ ವಾರಿಯರ್ಸ್‌ ಎದುರಿನ ಪಂದ್ಯವೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT