ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಲಗಿ ಶಾಲೆಯಲ್ಲಿ ‘ಬ್ಯಾಗ್ ರಹಿತ ದಿನ’

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳ ಶಾಲಾ ಚೀಲದ ತೂಕ ಇಳಿಸುವ ಬಗ್ಗೆ ಆಗಾಗ ಚರ್ಚೆಗಳಾಗುತ್ತವೆ. ಶಾಲಾಚೀಲದ ತೂಕವು ಮಕ್ಕಳ ತೂಕದ ಶೇ.10ಕ್ಕಿಂತ ಹೆಚ್ಚು ಇರುವಂತಿಲ್ಲ ಎನ್ನುತ್ತದೆ ದಶಕದ ಹಿಂದೆ ಜಾರಿಗೆ ಬಂದಿರುವ ‘ಮಕ್ಕಳ ಶಾಲಾಚೀಲ ಕಾಯ್ದೆ’. ಆದರೆ, ಇಂದಿಗೂ ಮಕ್ಕಳು ಹೆಚ್ಚು ಭಾರದ ಚೀಲಗಳನ್ನು ಹೊರುತ್ತಿದ್ದಾರೆ. ಇದರಿಂದ ಬೆನ್ನು ನೋವು, ಸಣ್ಣ ವಯಸ್ಸಿನಲ್ಲಿ ಮೂಳೆಗಳ ಸವೆತ ಮುಂತಾದ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ.

ಗದಗ ತಾಲ್ಲೂಕಿನ ನೀರಲಗಿ ಸರ್ಕಾರಿ ಶಾಲೆಯಲ್ಲಿ ಇದಕ್ಕೊಂದು ಮಾದರಿ ಉಪಾಯ ಕಂಡುಕೊಳ್ಳಲಾಗಿದೆ. ಅದುವೇ ‘ಶಾಲಾಚೀಲ ರಹಿತ ದಿನ’.

ವಾರದಲ್ಲೊಮ್ಮೆ ಅಂದರೆ ಪ್ರತಿ ಶನಿವಾರ ಈ ಶಾಲೆಯ ಮಕ್ಕಳು ಶಾಲಾಚೀಲ ಇಲ್ಲದೆಯೇ ಶಾಲೆಗೆ ಬರುತ್ತಾರೆ. ಅಂದು ಮಕ್ಕಳಿಗೆ ಮಣಭಾರದ ಬ್ಯಾಗ್ ಹೊರುವ ಗೊಡವೆ ಇರುವುದಿಲ್ಲ. ಆ ದಿನವಿಡೀ ಪಠ್ಯೇತರ ಚಟುವಟಿಕೆಗಳಿಗೆ ಮೀಸಲು. ಹಾಡಿ, ಆಡಿ, ಕುಣಿದು, ನಲಿದು ಮಕ್ಕಳು ಮನೆಗೆ ಮರಳುತ್ತಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಂಕರ ಹೂಗಾರ ಹಾಗೂ ಸಮನ್ವಯ ಅಧಿಕಾರಿ ವಿವೇಕಾನಂದಗೌಡ ಪಾಟೀಲ ಅವರೇ ಈ ಶಾಲಾಚೀಲ ರಹಿತ ದಿನ (ನೋ ಬ್ಯಾಗ್‌ ಡೇ) ವಿಶೇಷ ಯೋಜನೆಯ ರೂವಾರಿಗಳು.

ಒಂದೂವರೆ ವರ್ಷದ ಹಿಂದೆ ಶಾಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಈ ಯೋಜನೆಯು ಈಗ ಭರಪೂರ ಫಲ ನೀಡಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿದೆ, ಕಲಿಕಾ ಗುಣಮಟ್ಟವೂ ಗಣನೀಯವಾಗಿ ವೃದ್ಧಿಸಿದೆ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 200 ಮಕ್ಕಳಿದ್ದಾರೆ. ಶಾಲಾಚೀಲ ರಹಿತ ದಿನವನ್ನು ‘ಸೃಜನಶೀಲ’ ದಿನವೆಂದು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳ 7 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿ ಶನಿವಾರ ಶಾಲೆಯಲ್ಲಿ ಏಕಕಾಲಕ್ಕೆ ಬೇರೆ ಬೇರೆ ಕೊಠಡಿಗಳಲ್ಲಿ ನಡೆಯುವ ವಿವಿಧ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತವೆ.

ಒಂದೊಂದು ತಂಡಕ್ಕೆ ಒಂದೊಂದು ಚಟುವಟಿಕೆ. ಚಿತ್ರಕಲೆ, ಅಭಿನಯ, ಗಾಯನ, ವಾದ್ಯ ಸಂಗೀತ, ರಸಪ್ರಶ್ನೆ, ವಿಜ್ಞಾನದ ಸರಳ ಪ್ರಯೋಗ, ಮೋಜಿನ ಗಣಿತ, ಗ್ರಾಮೀಣ ಆಟ ಸೇರಿದಂತೆ ಒಟ್ಟು 21 ಚಟುವಟಿಕೆಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ವಿದ್ಯಾರ್ಥಿಯೂ ಒಂದು ತಿಂಗಳ ಅವಧಿಯಲ್ಲಿ ಎಲ್ಲ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಇದನ್ನು ಸಿದ್ಧಪಡಿಸಲಾಗಿದೆ.

ಶಾಲೆಗೆ ಬನ್ನಿ ಶನಿವಾರ
ಮಕ್ಕಳಿಗೆ ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಲಭಿಸುವ ಉದ್ದೇಶದಿಂದ ‘ಶಾಲೆಗೆ ಬನ್ನಿ ಶನಿವಾರ, ಕಲಿಕೆಗೆ ನೀಡಿ ಸಹಕಾರ’ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ವಿವಿಧ ಕ್ಷೇತ್ರಗಳ ಸಾಧಕರು, ಸಾಹಿತಿಗಳು, ಖಾಸಗಿ ಕಂಪೆನಿಯ ಉದ್ಯೋಗಿಗಳು ಸ್ವಯಂ ಪ್ರೇರಣೆಯಿಂದ ಶನಿವಾರ ಶಾಲೆಗೆ ಬಂದು ಒಂದು ಗಂಟೆ ಪಾಠ ಮಾಡಿ ಹೋಗುತ್ತಾರೆ.

‘ನಮ್ಮಲ್ಲಿ ಜಾರಿಗೆ ತಂದಿರುವ ಈ ಯೋಜನೆ ಕುರಿತು ಬೇರೆ ಬೇರೆ ಜಿಲ್ಲೆಗಳಿಂದ ಅನೇಕ ಶಿಕ್ಷಕರು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ. ಇದನ್ನು ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರಾಮೀಣ ವಲಯದ ಸಮನ್ವಯ ಅಧಿಕಾರಿ ವಿವೇಕಾನಂದಗೌಡ ಪಾಟೀಲ.

ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಇಮ್ಮಡಿಗೊಂಡಿದೆ. ಅವರು ಶಿಕ್ಷಕರೊಂದಿಗೆ ಭರ್ಜರಿ ಚರ್ಚೆಗೆ ಇಳಿಯುತ್ತಾರೆ. ನಿಗದಿತ ಶಾಲಾ ಅವಧಿಗಿಂತ ಹೆಚ್ಚು ಸಮಯ ವಿದ್ಯಾರ್ಥಿಗಳ ಜೊತೆಗೆ ಕಳೆಯುತ್ತೇವೆ ಎನ್ನುತ್ತಾರೆ, ನೀರಲಗಿ ಶಾಲೆಯ ಮುಖ್ಯಶಿಕ್ಷಕ ವೈ. ಗೋರೆಬಾಳ, ಸಹ ಶಿಕ್ಷಕರಾದ ಪಿ.ವಿ. ಮುಧೋಳಮಠ, ಎ.ಎಂ. ಹಾದಿಮನಿ, ಎಲ್.ಡಿ. ಜಂತ್ಲಿ, ಎಸ್‌.ಎಚ್‌. ಬ್ಯಾಳಿ, ಪಿ.ಬಿ. ಕುದರಿ ಅವರು.

‘ಸಾಕಷ್ಟು ರೊಕ್ಕಾ ಖರ್ಚ ಮಾಡಿ, ನಮ್ಮ ಮೊಮ್ಮಕ್ಕಳನ್ನು ಗದುಗಿನಲ್ಲಿರುವ ಇಂಗ್ಲಿಷ್ ಶಾಲೆಗೆ ಹಚ್ಚಿದ್ವಿ. ಅವ್ರು ಶಾಣ್ಯಾ ಆಗ್ಲಿಲ್ರೀ. ವಾಪಸ್‌ ಕರೆದುಕೊಂಡು ಬಂದು ನೀರಲಗಿ ಸರ್ಕಾರಿ ಶಾಲೆಗೆ ಸೇರಿಸಿದೆ. ಮೂರು ತಿಂಗಳೊಳಗೆ ನಮ್ಮ ಮೊಮ್ಮಕ್ಕಳು ಭಾರೀ ಹುಷಾರ ಆದ್ರು. ಈ ಶಾಲೆಯ ಮಾಸ್ತರಗಳು ಮಕ್ಕಳಿಗೆ ಹೊಡ್ಯಾಂಗಿಲ್ಲ, ಬಡ್ಯಾಂಗಿಲ್ಲ. ಬರೇ ಬುದ್ಧಿಮಾತು ಹೇಳಿ ಸರಿ ದಾರಿಗೆ ತರ್ತಾರ್ರೀ’ ಎನ್ನುತ್ತಾರೆ, ಗ್ರಾಮಸ್ಥರಾದ ಯಲ್ಲಪ್ಪ ಗಾಣಿಗೇರ. 

*
ಮೊದಲಿಗೆ ವೇದಿಕೆ ಮೇಲೆ ನಿಲ್ಲುವಾಗ ಕೈಕಾಲು ನಡುಗುತ್ತಿದ್ದವು. ಈಗ ಪಠ್ಯೇತರ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತೇವೆ. ಶನಿವಾರ ಶಾಲೆಗೆ ಚೀಲ ಇಲ್ಲದೆ ಖುಷಿಯಿಂದ ಬರುತ್ತೇವೆ.
–ಮಧು ಉಮಚಗಿ, ರಮೇಶ ಭೀಮನಗೌಡರ, ನೀಲಗಿರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT