ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗಳ ಕನಸಿಗೆ ಜೊತೆಯಾದವನು

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗೆಳೆಯ ಐ20ಗೆ,
ಹತ್ತು ವರ್ಷದ ಹಿಂದೆ ನಾನು, ಪ್ರದಿ, ಸಾಗರ್, ರಕ್ಷಿ ನಾಲ್ಕು ಜನ ಸೇರಿ ಹಣ ಹೊಂದಿಸಿ ನಿನ್ನ ಖರೀದಿಸಿದೆವು. ನಾಯಿಮರಿಯಂತೆ ನಮ್ಮೊಂದಿಗೆ ಬಂದುಬಿಟ್ಟೆ. ನಾಲ್ಕು ಜನ ಬಿಟ್ಟರೆ ಮತ್ತೆ ಯಾರೂ ನಿನ್ನ ಓಡಿಸಬಾರದು ಎಂದು ಶರತ್ತು ಮಾಡಿಕೊಂಡೆವು. ಸರಿಯಾಗಿ ನಿನ್ನ ಓಡಿಸಲು ನಮಗೆ ಆಗ ಬರುತ್ತಿರಲಿಲ್ಲ. ಗೇರ್‌ ಎಳೆದು, ಮುಗ್ಗರಿಸಿ, ಜಗ್ಗಾಡಿ, ಹಳ್ಳ–ಗುಂಡಿ ಮೇಲೆ ಓಡಿಸಿ ಮಣ್ಣು ಕೆಸರಲ್ಲಿ ನಿನ್ನ ಹೊರಳಾಡಿಸುತ್ತಿದ್ದೆವು.

ಹಾಸ್ಟೆಲ್‌ನಲ್ಲಿ ಸಿಕ್ಕ ಎರಡು ಬಕೆಟ್‌ನಲ್ಲೇ ನಿನ್ನ ಮತ್ತು ನನ್ನ ಸ್ನಾನ. ಒಂದು ದಿನವೂ ನೀನು ಬೇಸರಿಸಿಕೊಂಡಿಲ್ಲ. ಮೈ ಹುಷಾರಿಲ್ಲ ಎಂದು ಮಲಗಿಲ್ಲ. ನಾವು ಹೋಗುವ ದಾರಿಗೆಲ್ಲಾ ಜೊತೆಯಾದೆ. ಓದು ಮುಗಿಯಿತು. ಗೆಳೆಯರೆಲ್ಲಾ ಬೇರೆಬೇರೆ ಊರುಗಳಲ್ಲಿ ಬದುಕು ಕಂಡುಕೊಂಡೆವು. ನೀನು ನಮ್ಮ ತೋಟದ ಮನೆಯಲ್ಲಿ ಒಂಟಿಯಾದೆ.

ನಾಲ್ಕು ವರ್ಷದಿಂದ ‘ಹೇಗಿದ್ದೀ’ ಎಂದು ನಾವ್ಯಾರೂ ಕೇಳಲಿಲ್ಲ. ಕಳೆದ ತಿಂಗಳು ಊರಿಗೆ ಹೋದಾಗ ನಮ್ಮ ತೋಟದ ಮನೆಯಲ್ಲಿ ನಿನ್ನನ್ನು ಒಂಟಿಯಾಗಿ ನೋಡಿ ಬೇಜಾರಾಯ್ತು. ನಿನ್ನ ಫೋಟೊ ಹಾಕಿ ‘ಮಿಸ್‌ ಯೂ’ ಎಂದು ಗೆಳೆಯರಿಗೆ ಸಂದೇಶ ಕಳುಹಿಸಿದೆ. ತಕ್ಷಣ ರಕ್ಷಿ ರೋಡ್‌ ಟ್ರಿಪ್‌ ಹೋಗೋಣ ‘ಪ್ರವಾಸ ಎಂದರೆ ಅಧ್ಯಾತ್ಮ’ ಎಂದು ಮೆಸೇಜ್‌ ಮಾಡಿದ. ನಾವೆಲ್ಲಿಗೆ ಹೊರಟಿದ್ದೀವಿ ನಮಗೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲಿಗೆ ಅಂತ ಕೇಳಲೂ ಇಲ್ಲ.

ಹೊರಟೆವು, ಎರಡು ದಿನ ನಿನ್ನೊಂದಿಗೆ. ನೀನು ಸಂಭ್ರಮದಿಂದ ಸ್ನಾನ ಮಾಡಿ ಮಿಂಚುತ್ತಾ ಈ ರೋಡ್‌ ಟ್ರಿಪ್‌ ತಯಾರಾಗಿದ್ದು ನೋಡಿ ಖುಷಿ ಆಯ್ತು. ಬೆಂಗಳೂರಿನ ರಿಂಗ್‌ ರೋಡ್‌ ಬಿಟ್ಟು ರಾಷ್ಟ್ರೀಯ ಹೆದ್ದಾರಿ ತಲುಪಿದಂತೆ ಒಂದೇ ಹದದಿಂದ ಓಡಲು ಶುರು ಮಾಡಿದೆ, ಹಿನ್ನೆಲೆಯಲ್ಲಿ ಮೆಲುದನಿಯಲ್ಲಿ ಮಹಮದ್‌ ರಫಿ ಹಾಡು. ಮುಗಿಲು ಮುಟ್ಟುವಂತೆ ನಗುತ್ತಾ, ಕಥೆಗಳನ್ನು ಓದುತ್ತಾ ಇದ್ದ ಗೆಳೆಯರು, ಇದಕ್ಕಿದ್ದಂತೆ ನರಸಿಂಹ ಸ್ವಾಮಿಯವರ ಪದ್ಯ ಓದಲು ಶುರು ಮಾಡಿದರು.

ಐದಾರು ಪದ್ಯಗಳನ್ನು ಮೆಲುದನಿಯಲ್ಲಿ ಓದಿ ಮುಗಿಸಿದ ಮೇಲೆ ಮಳೆ ಹೊಯ್ದು ಭೂಮಿ ತಂಪಾದಂತೆ ನಮ್ಮೆಲ್ಲರ ಮನಸು ಹಾಯ್ ಎನಿಸಿತು. ಒಬ್ಬೊಬ್ಬರೇ ತೂಕಡಿಸಲು ಶುರುಮಾಡಿದೆವು. ಗೆಳೆಯನೊಬ್ಬ ಗಂಭೀರನಾಗಿ ರಷ್ಯನ್ ನಾಟಕ ಓದಲು ಶುರು ಮಾಡಿದ. ನಾನು ಕಣ್ಮುಚ್ಚಿ ಗುಲ್ಜರ್ ಪದ್ಯಗಳನ್ನು ಕೇಳಲು ಶುರು ಮಾಡಿದೆ. ಹೆದ್ದಾರಿ ಬಗೆದು ನಮ್ಮ ಪಯಣ ಸಾಗಿತು.

ಸಾವಿರಾರು ಕಿಲೋಮೀಟರ್‌ ದೂರ ನಿನ್ನೊಡಳೊಳಗೆ ಕೂರಿಸಿಕೊಂಡು ಊರು ತೋರಿದೆ. ಟ್ರಿಪ್‌ನಲ್ಲಿ ನಿದ್ದೆ ಮಾಡುವವರು ಮುಂದಿನ ಸೀಟಿನಲ್ಲಿ ಕೂರಬಾರದು ಎಂಬ ನಿಯಮವಿದ್ದರೂ, ಗೆಳೆಯರೊಂದಿಗೆ ಹಠ ಮಾಡಿ ಮುಂದಿನ ಸೀಟಿನಲ್ಲೇ ನಾನು ಕುಳಿತಿದ್ದೆ. ಕಿಟಕಿ ಗಾಜು ತೆರೆದು ನಿನಗೆ ಆತುಕೊಂಡು ಇಡೀ ರಾತ್ರಿ ಮಲಗಿದ್ದೆ. ಈ ಕಂಗಳ ಕನಸಿಗೆ ಜೋಡಿಯಾದವನು ನೀನು.

ದಾರಿಯುದಕ್ಕೂ ಎಷ್ಟೋ ದೃಶ್ಯರೂಪಕಗಳನ್ನು ಕಣ್ಣಿಗೆ ಕಟ್ಟಿಕೊಟ್ಟೆ. ಯಾಕೊ ಒಂದೊಂದೇ ಕಣ್ಣ ಹನಿ ಕಿಟಕಿ ಮೇಲೆ ಬಿದ್ದಂತೆ, ತಕ್ಷಣ ವೈಪರ್‌ ಆನ್‌ ಆಯ್ತು. ನಿನ್ನ ಓಡಿಸುತ್ತಿದ್ದ ರಕ್ಷಿ ‘ಏನ್ ಗಾಡಿನೋ ಅದರಷ್ಟಕ್ಕೇ ಏನೋ ಮಾಡುತ್ತದೆ’ ಎಂದು ಬೈದು ವೈಪರ್‌ ನಿಲ್ಲಿಸಿದ. ನನಗೆ ಆಶ್ಚರ್ಯ... ಹೇಗೆ ಸಾಧ್ಯ? ನಿದ್ದೆ ಕಣ್ಣಿನಲ್ಲಿ ಏನೂ ಅರ್ಥವಾಗಲಿಲ್ಲ.

ಹಾಲು ಚೆಲ್ಲಿದಂತೆ ಮಂಜು ಮುಸುಕಿದ ಬೆಳಕು ಸುರಿಯುತ್ತಿತ್ತು. ಕಿಟಕಿ ಮುಚ್ಚಿದೆ. ರಾತ್ರಿ ನಾನು ಕಿಟಕಿ ತೆರೆದು ಮಲಗಿದ್ದೆ. ಅತ್ತರೆ ವೈಪರ್ ಆನ್‌ ಆಗುತ್ತದೆ. ನಿದ್ದೆ ಮಾಡಿದರೆ ಕಿಟಕಿ ಗಾಜು ಮುಚ್ಚಿಕೊಂಡಿರುತ್ತವೆ. ನನ್ನ ಎಷ್ಟು ಕಾಳಜಿ ಮಾಡುತ್ತೀಯಾ ಗೆಳೆಯ ನೀನು. ಮನಸ್ಸು ತುಂಬಿ ಬಂತು. ಹಿಂದೆ ತಿರುಗಿ ಸೀಟನ್ನು ತಬ್ಬಿಕೊಂಡು ಮುದ್ದಿಸಿದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಗೆಳೆಯರು ನಗಲು ಶುರು ಮಾಡಿದರು. ವೈಪರ್ ಹಾಕಿದ್ದು, ರಾತ್ರಿ ತುಂಬಾ ಗಾಳಿ ಬರುತ್ತಿದೆ ಎಂದು ಕಿಟಕಿ ಹಾಕಿದ್ದು ಗೆಳೆಯರೇ. ಆದರೂ ನೀನೇ ನನ್ನ ಕಾಳಜಿ ಮಾಡುವವನು ಎಂದು ನನಗೆ ಗೊತ್ತು. ಅವರು ತರಲೆಗಳು...

ತೋಟದ ಮನೆಯಲ್ಲಿ ಒಬ್ಬನೆ ಎಂದು ಬೇಸರಿಸಿಕೊಳ್ಳಬೇಡ. ಪ್ರತಿ ತಿಂಗಳು ರೋಡ್‌ ಟ್ರಿಪ್ ಮಾಡುವ ಷರಾ ಮಾಡಿಕೊಂಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT