ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ಅಳುಕೂ ಮಕ್ಕಳ ಅಳಲೂ

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಡಾ.ಎಚ್.ಬಿ. ಚಂದ್ರಶೇಖರ್ ಅವರ ‘ಪೂರ್ಣ ಸಾಕ್ಷರತೆಯ ಕ್ರೌರ್ಯ’ ಬರಹ (ಪ್ರ.ವಾ., ಸಂಗತ, ಆ. 16) ಸ್ವಾರಸ್ಯಕರವಾಗಿದೆ. ಕಲಿಕೆ, ವಿದ್ಯಾರ್ಜನೆಯನ್ನು ಅಂಕಪಟ್ಟಿಗೆ ಸೀಮಿತವಾಗಿಸುವುದರ ಫಲವಾಗಿ ಶಿಕ್ಷಣದ ಗುರಿಯೇ ಅಯೋಮಯ ಆಗಿದೆ ಎಂಬ ಅವರ ಗ್ರಹಿಕೆ ಸರಿಯಾಗಿದೆ.

ಮಕ್ಕಳು ಅಂಕ ಬಾಚುವ ಗೊಂಬೆಗಳೆಂದು ಪೋಷಕರು ಭಾವಿಸುತ್ತಾರೆ. ‘ಕೋಳಿ ಅಂಕ’ದ ಉಪಮೆ ನಿಷ್ಠುರವೆನಿಸಿದರೂ ವಾಸ್ತವ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದೆಂದರೆ ಅದಕ್ಕಿಂತಲೂ ಹೀನಾಯ ಅವಮಾನವಿಲ್ಲವೆಂಬ ಪರಿಗಣನೆ.

ಈ ನ್ಯೂನತೆಯ ಬೇರುಗಳನ್ನು ಹುಡುಕಿದರೆ ಭಾವಿ ಪ್ರಜೆಗಳು ಏಕೆ ಇಂಥ ಉಗ್ರರೂಪ ತಳೆಯುತ್ತಾರೆನ್ನುವುದು ವೇದ್ಯವಾಗುತ್ತದೆ. ಮಗನ ವ್ಯಾಸಂಗಕ್ಕೆ ಗಣಿತ ಬಿಟ್ಟರೆ ಆಸಕ್ತಿಯಿರುವ ಮತ್ತೊಂದು ವಿಷಯ ಇರಲಿಲ್ಲವೇ? ಪೋಷಕರಿಗೆ ಮಕ್ಕಳು ಒಲ್ಲದ್ದನ್ನು ಅವರ ಮೇಲೆ ಹೇರುವ ಪ್ರತಿಷ್ಠೆ, ಹಟವಿದ್ದರೆ ಅನಾಹುತಗಳಿಗೂ ಅವರು ಸಿದ್ಧರಾಗಿರಬೇಕಾಗುತ್ತದೆ!

ಮಕ್ಕಳಲ್ಲಿನ ಜನ್ಮದತ್ತ ಸಹಜ ಉತ್ಸಾಹ, ಕುತೂಹಲ, ಸೃಜನಶೀಲತೆ, ಕಲ್ಪನಾ ಶಕ್ತಿ, ಆಟೋಟದ ಪ್ರವೃತ್ತಿ, ಬುದ್ಧಿವಂತಿಕೆ ಹಾಗೂ ಕಲಿಯುವ ಹಂಬಲವನ್ನು ಕಸಿದುಕೊಳ್ಳಲಾಗುತ್ತಿದೆ. ಸಾಧಾರಣ ಗುಣಾಕಾರ, ಭಾಗಾಕಾರಗಳ ಹೊಣೆಯನ್ನೂ ಕ್ಯಾಲ್ಕುಲೇಟರ್‌ಗೆ ವಹಿಸಲಾಗುತ್ತದೆ. ತಮ್ಮ ಮಕ್ಕಳು ಕಂಪ್ಯೂಟರ್ ಬಳಸಬಲ್ಲರೆಂದು ಹೇಳಿಕೊಳ್ಳುವುದೇ ಹೆತ್ತವರಿಗೆ ಹೆಮ್ಮೆ ಅನ್ನಿಸುತ್ತದೆ. ಎಳೆಯರಿಗೆ ಸಾಮಾನ್ಯ ಪ್ರಜ್ಞೆಯನ್ನು ಬಳಸಲು ಹಿರಿಯರು ವ್ಯವಧಾನ ಕಲ್ಪಿಸಿದರಲ್ಲವೇ ಸೃಜನಶೀಲತೆ ಅರಳಲು ಆಸ್ಪದ? ಗಣಿತ, ವಿಜ್ಞಾನ, ಭೂಗೋಳ ಅಥವಾ ಬೇರೆ ಯಾವುದೇ ವಿಷಯವಾಗಲಿ ಆಸ್ಥೆ ತೋರದೆ ಅದರ ಮೂಲ ತತ್ವಗಳು ಮಕ್ಕಳಿಗೆ ಹೇಗೆ ತಾನೆ ಕರಗತವಾಗುವುದು ಸಾಧ್ಯ? ಹಾಗಾಗಿ ಆಗುವ ಅನರ್ಥಗಳಿಗೆ ಇಡಿಯಾಗಿ ಸಾಕ್ಷರತೆಯನ್ನೇ ದೂರುವಂತಿಲ್ಲ.

ನಮ್ಮ ಪೂರ್ವಜರು ಅವರ ಪೋಷಕರಿಂದ, ನಂಟರಿಷ್ಟರಿಂದ, ನೆರೆಹೊರೆಯವರಿಂದ ತಿಳಿದಿದ್ದು ಸ್ವಾಭಾವಿಕವಾಗಿಯೇ ವಿನಾ ಒತ್ತಾಯಪೂರ್ವಕವಾಗಿ ಅಲ್ಲ. ಕೈಲಾಸಂ ‘ಮಕ್ಕಳಿಸ್ಕೂಲ್ ಮನೇಲಲ್ವೆ?’ ಎಂದರು. ಅಮೆರಿಕದ ಖ್ಯಾತ ದೈಹಿಕ ಶಿಕ್ಷಣ ತಜ್ಞ ಗ್ಲೆನ್ ಡೋಮನ್ ‘ಮಗು ಹೊಟ್ಟೆಬಾಕತನಕ್ಕೂ ಹೆಚ್ಚಾಗಿ ಜ್ಞಾನಬಾಕತನದಿಂದ ಈ ಜಗತ್ತನ್ನು ಪ್ರವೇಶಿಸುತ್ತದೆ’ ಎಂದು ತಮ್ಮ ‘ಟೀಚ್ ಯುವರ್ ಬೇಬಿ’ ಪುಸ್ತಕದಲ್ಲಿ ಬರೆದಿದ್ದಾರೆ.

ಮಗುವಿನ ಸಹಜತೆಯನ್ನು ಎಷ್ಟರಮಟ್ಟಿಗೆ ಹತ್ತಿಕ್ಕಲಾಗುತ್ತದೆಯೆಂದರೆ ಅದರ ಪ್ರಸವಕ್ಕೂ ಅವಸರ! ಮುಂದೆ ಮೊಗಚಿಕೊಳ್ಳುವುದು, ಅಂಬೆಗಾಲಿಡುವುದು, ನಡೆಯುವುದು ನಿಧಾನ(?)ವಾಯಿತೆಂಬ ಕೊರಗು. ಹಸಿವಿಲ್ಲದ ಕಾರಣಕ್ಕೆ ಆಹಾರ ಸೇವಿಸದಿದ್ದರೂ ಬಲವಂತವಾಗಿ ತಿನ್ನಿಸುವುದು, ನಿದ್ರೆ ಹತ್ತದಿದ್ದರೂ ಮಲಗಿಸಲು ಮುಂದಾಗುವುದು. ಒಟ್ಟಾರೆ ಬೆಳೆಯುವ ಮಕ್ಕಳಿಗೆ ಬಿಡುಬೀಸಿಲ್ಲದ ಬಾಲ್ಯ. ಅವರಷ್ಟಕ್ಕೆ ಬಿಟ್ಟರೆ ಮಕ್ಕಳು ಕಲಿಯುವುದು ಬಹಳ. ಈ ತಥ್ಯವನ್ನು ‘ಬೀದಿ ಮಕ್ಕಳು ಬೆಳೆದ್ವು, ಕೋಣೆ ಮಕ್ಕಳು ಕೊಳೆತ್ವು’ ಎನ್ನುವ ಗಾದೆಯಲ್ಲಿ ಜನಪದರು ಮಾರ್ಮಿಕವಾಗಿ ಹಿಡಿದಿಟ್ಟಿದ್ದಾರೆ.

‘ಓದಿ ವಿದ್ಯಾವಂತನಾಗು, ಒಳ್ಳೆಯ ನೌಕರಿ ಹಿಡಿ’ ಎಂದು ತಂದೆ, ತಾಯಿ ಹಾರೈಸುವುದು ಸರಿಯೇ. ‘ನೀನು ಕಲಿತಿದ್ದು ನಿನಗಲ್ಲದೆ ಸಮಾಜಕ್ಕೂ ಉಪಯೋಗವಾಗಲಿ’ ಎಂದು ಹರಸುವುದು ಅತಿವಿರಳ. ಕಲಿಕೆಯೆಂದರೆ ಕೈತುಂಬ ಹಣ ಸಂಪಾದಿಸುವ ಮಾರ್ಗವೆಂದು ಮಕ್ಕಳಲ್ಲಿ ಬಿಂಬಿಸುವ ಇರಾದೆ ಕ್ಷೀಣವಾಗದ ಹೊರತು ಲೇಖಕರು ಉಲ್ಲೇಖಿಸಿದ ಸ್ಪರ್ಧೆ, ಪೈಪೋಟಿಗೆ ಮುಕ್ತಿಯಿಲ್ಲ.

ಜ್ಞಾನಕ್ಕಾಗಿ ಜ್ಞಾನವೆಂಬ ಪರಿಕಲ್ಪನೆಗೆ ತುಕ್ಕು ಹಿಡಿದಿದೆ. ‘ಬಾಯಿಪಾಠ ಮಾಡಿಯಾದರೂ ಸರಿ ಒಂದಷ್ಟು ಬರಿ, ಖಾಲಿ ಹಾಳೆ ಮಾತ್ರ ಬೇಡ’ ಅಂತ ಪರೀಕ್ಷೆಗೆ ಹೊರಟ ಮಕ್ಕಳಿಗೆ ಹಿತೋಕ್ತಿ! ‘ಜೋಕೆ, ಮರೆತು ಕಿಸೆಯಲ್ಲಿ ಚೀಟಿ ಗೀಟಿ ಇದ್ದೀತು’ ಎಂದು ಎಚ್ಚರಿಸುವರೆಷ್ಟು? ಈಚೆಗಷ್ಟೇ ಪ್ರಾರಂಭಗೊಂಡ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷರನ್ನು ಭೇಟಿಯಾಗಿದ್ದೆ. ‘ಹೇಗೆ ನಡೆಯುತ್ತಿವೆ ಸರ್, ಶೈಕ್ಷಣಿಕ ಚಟುವಟಿಕೆಗಳು’ ಎಂದಾಗ, ‘ಪರವಾಗಿಲ್ಲ, ಯಾವುದಾದ್ರೂ ಕರೆಯುವ ಹಸುವಿದ್ರೆ ಹೇಳಿ ಕಟ್ಟೋಣ’ ಎಂಬ ಅವರ ಪ್ರತಿಕ್ರಿಯೆ ನನ್ನನ್ನು ತಬ್ಬಿಬ್ಬಾಗಿಸಿತು. ಗಳಿಗೆ ನಂತರ ಅವರೇನೆ ‘ಅದೇ ರೀ, ಓದು ಮುಗಿಯುತ್ತಲೇ ಬೇಗ ನೌಕರಿ ಸಿಗೊ ಕೋರ್ಸು’ ಅಂತ ಒಗಟು ಬಿಡಿಸಿದರು. ಯಾವುದೇ ಒಂದು ಕೋರ್ಸಿಗೆ, ವಿಷಯಕ್ಕೆ ಸ್ಕೋಪ್ ತನಗೆ ತಾನೆ ಒದಗೀತೆ? ಅದು ಅಧ್ಯಯನ ಮಾಡುವವರನ್ನು ಅವಲಂಬಿಸಿದೆ. ಸ್ಕೋಪ್ ಇಲ್ಲದ ಕೋರ್ಸ್ ಯಾವುದೂ ಇಲ್ಲ. ಒಂದು ವಿಷಯದಲ್ಲಿ ಮೂಡುವ ಆಸಕ್ತಿಯೇ ಮಕ್ಕಳಿಗೆ ಕಲಿಯಲು ಸ್ಫೂರ್ತಿ. ಪ್ರಯೋಗಜನ್ಯ ತಿಳಿವಳಿಕೆ ಅಥವಾ ನೋಡಿ, ಮಾಡಿ ಕಲಿಯುವ ಸಂಗತಿಯೇ ಸಾವಯವ ಅರಿವು. ಪ್ರವಾಸದಲ್ಲಿ ಕಂಡ ಗಿಡ, ಮರ, ಬೆಟ್ಟ, ಗುಡ್ಡ, ನದಿ, ತೊರೆ, ಪ್ರಾಣಿ– ಪಕ್ಷಿಗಳು ಬದುಕಿನಪರ್ಯಂತವೂ ಮಕ್ಕಳ ನೆನಪಿನಲ್ಲಿರುತ್ತವೆ. ಸಲ್ಲದ ಒತ್ತಡ ಹೇರಿ ಮಕ್ಕಳ ಸಹಜ ಕಲಿಕೆಗೆ ಪೋಷಕರೇ ಅಡ್ಡಿಯಾಗುವುದು ದುರಂತ.
ಅಂದಹಾಗೆ ಪೋಷಕರು ತಮ್ಮ ಮಕ್ಕಳು ಆರೋಗ್ಯವಂತರಾಗಿರಲೆಂಬ ಉದ್ದೇಶದಿಂದ ಸಾವಯವ ಆಹಾರ ವಸ್ತುಗಳಿಗೆ ಹಂಬಲಿಸುತ್ತಾರೆ. ಸ್ವಯಂ ಕಲಿಕೆ ಬಗ್ಗೆಯೂ ಅಂಥ ಕಾಳಜಿ ಇರಬೇಕು. ಅರ್ಥಾತ್ ಅವರಾಗಿ ಅರಿತುಕೊಳ್ಳಲು ಬಿಡೋಣ ಎಂಬ ನಿಲುವು. ‘ಅನಭ್ಯಾಸೇ ವಿಷಮ್ ಶಾಸ್ತ್ರಮ್’- ಎನ್ನುವಂತೆ ಪುನರಾವಲೋಕಿಸದಿದ್ದರೆ ಎಲ್ಲ ವಿಷಯಗಳೂ ಕಠಿಣವೇ.

ತಮ್ಮ ಮಕ್ಕಳನ್ನು ಪ್ರತಿಷ್ಠಿತ ಎಂದುಕೊಳ್ಳುವ ಶಾಲೆಗೆ ಸೇರಿಸುವ ಮುನ್ನ ಪೋಷಕರು ಆ ಶಾಲೆಯ ವ್ಯವಸ್ಥಾಪಕರಿಗೆ, ಬೋಧಕರಿಗೆ ‘ನೀವು ನಮ್ಮ ಮಕ್ಕಳಿಗೆ ಏನನ್ನು, ಯಾವ ವಿಧಾನದಿಂದ, ಹೇಗೆ ಕಲಿಸುವಿರಿ?’ ಎಂದು ಪ್ರಶ್ನಿಸುವ ನಿದರ್ಶನಗಳಿವೆಯೇ? ಶಾಲೆಯಲ್ಲಿ ನೀಡುವ ಹೋಮ್‌ ವರ್ಕ್ ಚಿಂತನೆಗೆ ಪ್ರಚೋದಿಸುವಂತಿದ್ದರೆ ಮಕ್ಕಳ ಆತ್ಮವಿಶ್ವಾಸ ಕುದುರುತ್ತದೆ. ‘ಇಲ್ಲಿಂದ ಇಲ್ಲಿಯವರೆಗೆ ಲೆಕ್ಕಗಳನ್ನು ಬಿಡಿಸಿ ತನ್ನಿ’, ‘ಇಷ್ಟು ಸಾಲು ಬಾಯಿಪಾಠ ಮಾಡಿ ಬರಬೇಕು’, ‘ಹುಲಿ ಕುರಿತು ಪ್ರಬಂಧ ಬರೆಯಿರಿ’ ಎಂದರೆ ಮಕ್ಕಳ ಪಾಲಿಗೆ ಅದು ನೀರಸವಾಗುತ್ತದೆ. ಆಗ, ಕುರುಡು ಪಾಠವೊಂದೇ ಅವರಿಗಿರುವ ಹಾದಿ. ‘ನೀನು ಸರಿಯಾಗಿ ಹೋಮ್‌ ವರ್ಕ್ ಮಾಡದಿದ್ದರೆ ನಿನ್ನನ್ನು ಮಾತಾಡಿಸೊಲ್ಲ, ಶಾಲೆಯಿಂದ ಬಿಡಿಸುವೆ, ಒಳ್ಳೆಯ ಗ್ರೇಡ್ ಬಂದರೇನೆ ನಿನ್ನನ್ನು ಪ್ರವಾಸಕ್ಕೆ ಕಳಿಸೋದು’ ಮುಂತಾಗಿ ಮಕ್ಕಳಿಗೆ ಹೆತ್ತವರು ಷರತ್ತು ವಿಧಿಸಿದರೆ ಹೇಗೆ?
ಇದು ಸಾಲದೆಂದು ಅವರ ಸಹಪಾಠಿಗಳನ್ನು ಉದಾಹರಿಸಿ, ‘ನೋಡು ನಿನಗಿಂತ ಅವರೆಷ್ಟು ಮುಂದಿದ್ದಾರೆ’ ಎನ್ನುವ ಹೋಲಿಕೆ ಬೇರೆ. ಏತನ್ಮಧ್ಯೆ ತಾವು ತಮ್ಮ ಮಕ್ಕಳನ್ನು ಸಮರ್ಪಕವಾಗಿ ಓದಿಸುತ್ತಿದ್ದೇವೋ ಇಲ್ಲವೋ ಎಂಬ ಅಳುಕು, ಕೀಳರಿಮೆಯೂ ಪೋಷಕರನ್ನು ಕಾಡಿರುತ್ತದೆ! ಪಡೆಯುವ ಅಂಕಕ್ಕಿಂತ ಮನೆಯ ಸ್ವಾಸ್ಥ್ಯ, ನೆಮ್ಮದಿ ಮುಖ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT