ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಮಳೆಕೊಳಗಳ ಹರಿಕಾರ ತಂಬಿ

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಕೊಳವೆಬಾವಿಯೂ ಬೇಡ, ಟ್ಯಾಂಕರ್ ನೀರೂ ಬೇಡ. ಆಕಾಶದಿಂದ ಇಳಿಯುವ ಮಳೆಯನ್ನೇ ಕೂಡಿಟ್ಟುಕೊಳ್ಳಿ, ಬೇಸಿಗೆಯಲ್ಲಿ ಹಾಯಾಗಿ ಬಳಸಿ’ ಇದು ತಿರುವನಂತಪುರದ ಜಲತಜ್ಞ, ಭೂಗರ್ಭಶಾಸ್ತ್ರಜ್ಞ ಪಿ.ಕೆ. ತಂಬಿ ಅವರ ಸಲಹೆ.

ಲಕ್ಷಲಕ್ಷ ಲೀಟರ್ ನೀರು ಬೇಕಾಗುವ ದೊಡ್ಡ ಸಂಸ್ಥೆಗಳಿಗಷ್ಟೇ ತಂಬಿ ಮಾರ್ಗದರ್ಶನ ಕೊಡುತ್ತಾರೆ. ಸಂಸ್ಥೆಯಲ್ಲಿ ಧಾರಾಳ ಜಾಗ ಇರಬೇಕು, ಸುರಿದ ಮಳೆಯನ್ನು ಒಗ್ಗೂಡಿಸಿ ಸಾಗಿಸಿ ತುಂಬಿಡಲು ಸೂಕ್ತ ತಗ್ಗುಪ್ರದೇಶ ತೆರೆದು ಇರಬೇಕು. ಹೀಗಿದ್ದಲ್ಲಿ ಅವರು ಬೃಹತ್ ‘ಮಳೆಕೊಳ’ ತೋಡಲು ತಿಳಿಸಿಕೊಡುತ್ತಾರೆ.

ತುಂಬಿದ ಮಳೆನೀರು ಇಂಗದಂತೆ ಪ್ಲಾಸ್ಟಿಕ್ ಹಾಳೆ ಹೊದೆಸಲು ಹೇಳುವುದಿಲ್ಲ. ಇಳಿಜಾರಿನತ್ತ ನೀರು ಊಜದಂತೆ ಪಕ್ಕದಲ್ಲೇ ಆಳ ಕಣಿ ತೋಡಿ ಪ್ಲಾಸ್ಟಿಕ್ ಹಾಳೆ ಇಳಿಸುತ್ತಾರೆ, ಅಷ್ಟೆ. ಬೇಸಿಗೆಯಲ್ಲಿ ಕೊಳದ ಪಕ್ಕದಲ್ಲಿ ತೋಡುವ ಬಾವಿಯಿಂದ ತಿಳಿನೀರನ್ನು ಪಂಪ್ ಮಾಡುತ್ತಾರೆ. ರಾಸಾಯನಿಕ ಸೇರಿಸುವ ಅಗತ್ಯ, ಹೆಚ್ಚು ಶ್ರಮ – ವೆಚ್ಚದ ಶೋಧನೆ (ಫಿಲ್ಟ್ರೇಶನ್) ಕೂಡಾ ಇಲ್ಲ.

ತಂಬಿ ಅವರು ಈ ಥರದ ಮಳೆಕೊಳ ನಿರ್ಮಾಣಕ್ಕೆ ಸಲಹೆ  ಮಾಡತೊಡಗಿದ್ದು 2002ರಲ್ಲಿ. ಪಾಲಕ್ಕಾಡಿನ ಅಹಲಿಯಾ ಆಸ್ಪತ್ರೆ ಮತ್ತು ತಿರುವನಂತಪುರದ ಕಿನ್ಫ್ರಾ ಪಾರ್ಕಿನಲ್ಲಿ ಆರಂಭ. ಇವುಗಳ ಯಶಸ್ಸಿನ ನಂತರ ಸಾಲುಸಾಲಾಗಿ ಬೇರೆ ಪ್ರಾಜೆಕ್ಟುಗಳು ಬಂದವು. ಅಡೂರಿನ ಫುಡ್ ಪಾರ್ಕು, ಕುನ್ನಂತಾನಂ ಇಂಡಸ್ಟ್ರಿಯಲ್ ಪಾರ್ಕು, ಪಾಲಕ್ಕಾಡ್ ಮಿಲ್ಮಾ, ಕುಂಬನಾಡ್ ಬೈಬಲ್ ಕಾಲೇಜು – ಹೀಗೆ ಈ ವರೆಗೆ ಇವರು 35 ಎಡೆಗಳಲ್ಲಿ ಮಳೆಕೊಳ ರಚನೆಗೆ ಕಾರಣರಾಗಿದ್ದಾರೆ.

ಈ ಮಳೆಕೊಳಗಳು ಎರಡು ಮಳೆಗಾಲಾನಂತರ ನಮ್ಮ ಕಣ್ಣಿಗೆ ಕಾಣುವುದರ ಎರಡರಿಂದ ಮೂರು ಪಟ್ಟು ನೀರು ಮೇಲೆತ್ತಲು ಕೊಡುತ್ತವೆ ಎನ್ನುತ್ತಾರೆ ತಂಬಿ. ಇದು ಹೇಗೆ ? ‘ಒಂದು ಘನ ಮೀಟರ್ ಮಣ್ಣಿನಲ್ಲಿ ಮೂವತ್ತರಿಂದ ನಲುವತ್ತು ಶೇಕಡಾ ರಂಧ್ರಗಳಿರುತ್ತವೆ. ಅಂದರೆ, ಮುನ್ನೂರರಿಂದ ನಾನೂರು ಲೀಟರ್ ನೀರು ಹಿಡಿಸುತ್ತದೆ. ಕೊಳದಿಂದ ನೀರೆತ್ತಿದಂತೆಲ್ಲಾ ಸುತ್ತಲಿನ ಮಣ್ಣುಪದರದಲ್ಲಿರುವ ನೀರು ಕೊಳಕ್ಕೆ ಇಳಿಯುತ್ತದೆ. ಪ್ಲಾಸ್ಟಿಕ್ ಹಾಸುವ ಕೊಳದಲ್ಲಿ ಈ ಥರದ ಮರುಪೂರಣ ಕ್ರಿಯೆ ನಡೆಯುವುದಿಲ್ಲ. ಹಾಗಾಗಿ ಅವು ಕಾಂಕ್ರೀಟ್ ಟಾಂಕಿಯಂತೆ ಕಣ್ಣೆದುರು ತುಂಬಿ ಕಾಣುವಷ್ಟು ನೀರನ್ನು ಮಾತ್ರ ಹಿಂದೆ ಕೊಡುತ್ತವೆ”.

ದಶಕಕ್ಕೂ ಹಿಂದೆ ಕೇರಳದಲ್ಲಿ ‘ಮಲೆಯಾಳ ಮನೋರಮಾ’ ದೈನಿಕ ‘ಪಲತುಳ್ಳಿ’ ಎಂಬ ಮಳೆಕೊಯ್ಲಿನ ಪ್ರಚಾರಾಭಿಯಾನ ಕೈಗೆತ್ತಿಕೊಂಡಿತ್ತು. ಆ ಕಾಲದಲ್ಲಿ ತಂಬಿ ಉದ್ಗರಿಸಿದ್ದು ಹೀಗೆ: ‘ಕೇರಳದ ಯಾವುದೇ ಮೂಲೆಯಲ್ಲಾದರೂ ಕುಡಿನೀರಿನ ಸಮಸ್ಯೆ ಇದ್ದರೆ ನನ್ನನ್ನು ಎತ್ತಿ ಒಯ್ದು ಪ್ಯಾರಾಚೂಟಿನಲ್ಲಿ ಅಲ್ಲಿ ಇಳಿಸಿಬಿಡಿ. ಒಂದೇ ದಿನದಲ್ಲಿ ಅವರ ಕುಡಿನೀರು ಸಮಸ್ಯೆಗೆ ಪರಿಹಾರ ಮಾರ್ಗ ತೋರಿಸಿ ಬಂದು ಬಿಡುತ್ತೇನೆ.”

ಕಾರ್ತಿಕೇಯನ್ ತಂಬಿ ಅವರ ಯೋಜನೆಗಳು ಕೇರಳದಲ್ಲೇ ಹೆಚ್ಚು. ಮಂಗಳೂರಿನ ದಕ್ಷಿಣ ಕನ್ನಡದ ಯೇನೆಪೊಯ ಮೇಡಿಕಲ್ ಕಾಲೇಜಿನ ಮೂರೆಕ್ರೆಯ ಮಳೆಕೊಳ ಇವರದೇ ಐಡಿಯಾ. ಕರಾವಳಿ ಕರ್ನಾಟಕದಲ್ಲಿ ಇವರು ಇನ್ನೂ ಕೆಲವೆಡೆ ಈ ಪರಿಹಾರ ಸಲಹೆ ಮಾಡಿದ್ದರೂ ಅವು ಅನುಷ್ಠಾನಕ್ಕೆ ಬಂದಿಲ್ಲ. ಕೆಲವು ಸಂಸ್ಥೆಗಳಲ್ಲಿ ನೀರು ತುಂಬಿಡುವ ಕೊಳ ತೋಡಬಹುದಾದಲ್ಲಿ ಅಷ್ಟರಲ್ಲೇ ಬೇರೆ ಕಟ್ಟಡ ಕಟ್ಟಿದ್ದರೆ ಇವರ ಉಪಾಯ ಅನುಸರಿಸುವಂತಿಲ್ಲ.

ತಂಬಿ ಅವರ ಪ್ರಕಾರ ಆಯಾ ಪ್ರದೇಶದ ಮೂವತ್ತು ಶೇಕಡಾ ಮಳೆಯನ್ನು ಐದು ಒಣ ತಿಂಗಳುಗಳಿಗಾಗಿ ಸಂರಕ್ಷಿಸಿಡಬಹುದು ಎನ್ನುವುದು ಸ್ಥೂಲ ನಿಯಮ. ಎರಡು ಸಾವಿರ ಮಿಲಿಮೀಟರ್ ಮಳೆ ಬೀಳುವಲ್ಲಿ ಒಂದು ಹೆಕ್ಟೇರ್ ಜಮೀನಿನಿಂದ 60 ಲಕ್ಷ ಲೀಟರ್ ಕಾಪಿಡಬಹುದು. ಐದು ತಿಂಗಳ ಕಾಲ ದಿನಕ್ಕೆ 40,000 ಲೀಟರ್ ಪೂರೈಕೆಗೆ ಇದು ಸಾಕು. ಹೆಚ್ಚು ಮಳೆಯ ಮಲೆನಾಡು ಮಾತ್ರವಲ್ಲ ಕಮ್ಮಿ ಮಳೆ ಬೀಳುವಲ್ಲೂ ಮಳೆಕೊಳ ಸಾಧ್ಯ. ಆದರೆ ನೀರಿನ ಲಭ್ಯತೆ ಕಡಿಮೆ ಇದ್ದೀತು.

‘ಸಾಮಾನ್ಯವಾಗಿ ಯಾವುದೇ ಕಟ್ಟಡ ನಿರ್ಮಾಣದ ಕಾಲದಲ್ಲಿ ಎಂಜಿನಿಯರುಗಳು ಅಥವಾ ವಾಸ್ತುಶಿಲ್ಪಿಗಳು ಜಲತಜ್ಞರ ಸಲಹೆ ಪಡೆಯುವುದಿಲ್ಲ. ನೀರಿಗೆ
ತೀರಾ ಸಮಸ್ಯೆ ಆದಾಗಲಷ್ಟೇ ಸಂಪರ್ಕಿಸುತ್ತಾರೆ. ಅಭಿವೃದ್ಧಿಗಾಗಿ ವಿಶಾಲ ಜಾಗ ಖರೀದಿಸುವವರು ಎತ್ತರದ, ಅಂದದ ದೃಶ್ಯ ಕಾಣವ ಪ್ರದೇಶ ಮಾತ್ರ
ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಬದಲಿಗೆ ಸ್ವಲ್ಪ ತಗ್ಗಿನ ಕೊಳ್ಳ ಅಥವಾ ತೇವಭರಿತ ಪ್ರದೇಶವನ್ನೂ ಕೊಳ್ಳುವುದು ಉತ್ತಮ. ಆ ಜಮೀನಿನಲ್ಲಿ ನೀರಿನ ಸ್ರೋತಸ್ಸು ಮತ್ತು ಅವುಗಳ ಅಭಿವೃದ್ಧಿಯ ಬಗ್ಗೆಯೂ ಮುಂದಾಲೋಚನೆ ಮಾಡಿಕೊಳ್ಳುವ ಅಭ್ಯಾಸ ಒಳ್ಳೆಯದು” ಎನ್ನುತ್ತಾರೆ ಇವರು.  

ಬಹುತೇಕ ಆವರಣಗಳಲ್ಲಿ ಎಂಜಿನಿಯರುಗಳು ಸಿಮೆಂಟಿನ ಮಳೆಕಾಲುವೆ ನಿರ್ಮಿಸಿ ಇಡೀ ಪ್ರದೇಶ ಮಳೆಯಿಲ್ಲದಾಗ ಒಣಗುವಂತೆ ಮಾಡಿಡುತ್ತಾರೆ. ಕಾಡು
ಗಿಡ ಬೆಳೆಸಲೂ ಹೊರಗಿನಿಂದ ತಂದ ನೀರುಣಿಸಬೇಕಾಗುತ್ತದೆ. ಕಟ್ಟಡ ಅಂದವಾಗಿಸಲು ಕೋಟಿಗಟ್ಟಲೆ ದುಂದು ವೆಚ್ಚ ಮಾಡುವವರು ನೀರಿನ ಮೂಲದ ಅಭಿವೃದ್ಧಿಗೆ ಅದರ ಒಂದು ಶೇಕಡಾ ವಿನಿಯೋಗಿಸಲು ಹಿಂದೆಮುಂದೆ ನೋಡುತ್ತಾರೆ – ತಂಬಿ ಬೊಟ್ಟು ಮಾಡುತ್ತಾರೆ.

ಈ ನಿವೃತ್ತ ಭೂಗರ್ಭಶಾಸ್ತ್ರಜ್ಞರ ಇನ್ನೊಂದು ಮಾತು ಆಳ ಚಿಂತನೆ ಮಾಡಬೇಕಾದದ್ದು. “ಇಂದಲ್ಲ ನಾಳೆ ಜನ ಹೀಗೆ ಮರಳಿ ತುಂಬಬಹುದಾದ ಅಂತರ್ಜಲ ಮೂಲ ಅಭಿವೃದ್ಧಿ ಮಾಡಲೇಬೇಕಾಗುತ್ತದೆ. ಏಕೆಂದರೆ ನೀರಿನ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿದೆ; ಕೊಳವೆಬಾವಿಗಳು ಸುಸ್ಥಿರವಲ್ಲ ಎಂಬ ಜ್ಞಾನೋದಯ ಆಗುತ್ತಲಿದೆ.”

ಪಿ.ಕೆ. ತಂಬಿ – 98460 02827

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT