ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ರಾಸಿಗೆ ದಿನಕ್ಕೆ 10 ಕೆ.ಜಿ ಮೇವು!

Last Updated 21 ಆಗಸ್ಟ್ 2017, 7:24 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಕಡವಗೆರೆ ಹಾಗೂ ಮಾಡದಕೆರೆ ಹೋಬಳಿ ಹಾರನಕಣಿವೆಯಲ್ಲಿ ಗೋಶಾಲೆ ಆರಂಭಿಸಲಾಗಿದೆ. ‘ಕಳೆದ ವರ್ಷ ಹಾಗೂ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಜಾನುವಾರು ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಉಲ್ಬಣವಾಗಿದೆ.

ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರು ಹಾಗೂ ರೈತರ ಹಿತ ಕಾಪಾಡಬೇಕಾದರೆ ಹೋಬಳಿಗೊಂದು ಗೋಶಾಲೆ ಸ್ಥಾಪಿಸಬೇಕೆಂದು ಒತ್ತಾಯಿಸಿ, ರೈತಪರ ಸಂಘಟನೆಗಳು ಸುಮಾರು ಆರು ತಿಂಗಳಿನಿಂದ ನಡೆಸಿದ ಪ್ರತಿಭಟನೆಗೆ ಸ್ಪಂದಿಸಿರುವ ತಾಲ್ಲೂಕು ಆಡಳಿತ ಕೊನೆ ಕ್ಷಣದಲ್ಲಿ ಗೋಶಾಲೆ ಆರಂಭಿಸಿರುವುದು ಶ್ಲಾಘನೀಯ. ಸಮೃದ್ಧವಾಗಿ ಮಳೆ ಬರುವ ವರೆಗೂ ಗೋಶಾಲೆಗೆ ಬೇಕಾದ ಮೂಲಸೌಕರ್ಯವನ್ನು ಸಮರ್ಪಕವಾಗಿ ಒದಗಿಸಬೇಕು’ ಎನ್ನುತ್ತಾರೆ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಲಿಂಗರಾಜು.

ಜಾನುವಾರಿಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗುವಂತಹ ಕಡವಗೆರೆ ವಜ್ರ ಹಾಗೂ ಹಾರನಕಣಿವೆ ರಂಗನಾಥಸ್ವಾಮಿ ದೇಗುಲದ ಸಮೀಪ ಕಳೆದ ಭಾನುವಾರ ಗೋಶಾಲೆ ಸ್ಥಾಪಿಸಲಾಗಿದೆ. ಅಂದೇ ಒಟ್ಟು 120 ಟನ್‌ ಹಸಿಸೆಪ್ಪೆಯನ್ನು ದಾಸ್ತಾನು ಮಾಡಲಾಗಿದೆ. ಈಗಾಗಲೇ ಕಡವಗೆರೆ ಗೋಶಾಲೆಯಲ್ಲಿ ಮತ್ತೋಡು ಹಾಗೂ ಶ್ರೀರಾಂಪುರ ಹೋಬಳಿ ವ್ಯಾಪ್ತಿಯ 1,200 ಜಾನುವಾರು ಹಾಗೂ ಹಾರನಕಣಿವೆ ಗೋಶಾಲೆಯಲ್ಲಿ 1,600 ಜಾನುವಾರು ದಾಖಲಾಗಿವೆ. ಒಂದು ಜಾನುವಾರಿಗೆ ದಿನಕ್ಕೆ 10 ಕೆ.ಜಿ. ಹಸಿಸೆಪ್ಪೆ ವಿತರಿಸಲಾಗುತ್ತಿದೆ. ಸಮರ್ಪಕವಾದ ವಿದ್ಯುತ್‌ ಹಾಗೂ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಗೋಶಾಲೆ ಶುಚಿತ್ವ ಕಾಪಾಡಲು 100 ಜಾನುವಾರು ಶೆಡ್‌ಗೆ ತಲಾ ಒಬ್ಬ ಸಿಬ್ಬಂದಿ ನೇಮಿಸಲಾಗಿದೆ. ಸಗಣಿ ಹಾಗೂ ಗಂಜಲವನ್ನು ಪ್ರತಿದಿನ ತೆಗೆಯಲಾಗುತ್ತದೆ. ಜಾನುವಾರು ಆರೋಗ್ಯ ರಕ್ಷಣೆಗೆ ಪ್ರತಿ ದಿನ ಸಮೀಪದ ಪ್ರಾಥಮಿಕ ಪಶು ಚಿಕಿತ್ಸಾಲಯದ ಸಿಬ್ಬಂದಿ ಇರುತ್ತಾರೆ.

ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಿಗರು, ಸೇವಕರು ಗೋಶಾಲೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಲಭ್ಯ ಇರುವ ಸ್ಥಳ ನಿಗದಿಯಾದ ತಕ್ಷಣ ಆ ಹೋಬಳಿ ವ್ಯಾಪ್ತಿಯಲ್ಲೊಂದು ಗೋಶಾಲೆ ತೆರೆಯಲಾಗುವುದು ಎಂದು ತಹಶೀಲ್ದಾರ್‌ ಮಲ್ಲಿಕಾರ್ಜುನ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ಗೋಶಾಲೆಯಲ್ಲಿ ಎಮ್ಮೆ ಮತ್ತು ದನಗಳಿಗೆ ಆಶ್ರಯ ನೀಡಲಾಗಿದೆ. ಪ್ರತಿ ದಿನ ತಾಲ್ಲೂಕಿನ ಒಂದೊಂದು ಪಶು ಚಿಕಿತ್ಸಾಲಯದ ಸಿಬ್ಬಂದಿ ಗೋಶಾಲೆಯಲ್ಲಿ ಇರುವ ಜಾನುವಾರು ಆರೋಗ್ಯ ತಪಾಸಣೆ ಮಾಡುತ್ತಾರೆ ಎಂದು ತಾಲ್ಲೂಕು ಪಶು ಇಲಾಖೆ ಪ್ರಭಾರ ಅಧಿಕಾರಿ ಸದಾಶಿವಯ್ಯ ಹೇಳಿದರು.


ತಾಲ್ಲೂಕಿನಲ್ಲಿರುವ ಜಾನುವಾರು
4,815 ಮಿಶ್ರತಳಿ ದನ
54,380 ನಾಟಿ ತಳಿ
31,842 ಎಮ್ಮೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT