ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪೆಗಳ ಸ್ವರ್ಗದಲ್ಲಿ...

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಡಾ.ಕೃತಿ ಕಾರಂತ/ ನರಸಿಂಹ ಮೂರ್ತಿ

ನಮ್ಮ ಪಶ್ಚಿಮ ಘಟ್ಟ ಜಗತ್ತಿನಲ್ಲಿಯೇ ಬಲು ವಿಶಿಷ್ಟವಾದ ಜೀವವೈವಿಧ್ಯದ ಭಂಡಾರ. ಇಲ್ಲಿರುವ ಜೀವವೈವಿಧ್ಯದ ಕುರಿತು ನಮಗಿರುವ ಜ್ಞಾನ ತೀರಾ ಗೌಣ. ಅದರಲ್ಲೂ ಸೂಕ್ಷ್ಮ ಹಾಗೂ ಬಲು ಸೊಗಸಾದ ಕಪ್ಪೆಗಳ ಕುರಿತು ನಾವು ತಿಳಿದಿರುವುದು ಏನೂ ಅಲ್ಲ. ಬೆರಗುಗೊಳಿಸುವ ವಿಷಯವೆಂದರೆ, ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಶೇ 87ರಷ್ಟು ಕಪ್ಪೆಗಳು ಈ ಪ್ರದೇಶಕ್ಕೆ ಸೀಮಿತವಾಗಿದ್ದು, ಪ್ರಪಂಚದ ಇತರ ಯಾವುದೇ ಭಾಗದಲ್ಲೂ ಕಂಡುಬರುವುದಿಲ್ಲ.

ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿಯ ಉತ್ಸಾಹಿ ವನ್ಯಜೀವಿ ತಜ್ಞ ಶಶಾಂಕ್ ದಳವಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನಮ್ಮ ಸಂಶೋಧನಾ ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ಭೂಭಾಗಗಳನ್ನು ಶೋಧಿಸುತ್ತಿದ್ದಾಗ ಹಲವು ನಯನಮನೋಹರ ಕಪ್ಪೆಗಳನ್ನು ಕಂಡಿದ್ದೇವೆ.

ವಿಜ್ಞಾನ ಜಗತ್ತಿನ ಪಾಲಿಗೆ 75 ವರ್ಷಗಳ ಹಿಂದೆ ನಶಿಸಿಹೋಗಿದ್ದ ಹಾಗೂ ಈಚೆಗೆ ಮರು ಅನ್ವೇಷಿಸಿದ ಕೆಂಪು ಹೊಳೆಯ ಇರುಳು ಕಪ್ಪೆಯ (ನಿಕ್ಟಿಬಾಟ್ರಕಸ್ ಕೆಂಪ್ ಹೊಳೆಯೆನ್ಸಿಸ್) ಸೊಬಗನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

ಶೂನ್ಯನೋಟ ಬೀರುತ್ತಾ ವಿದ್ವಾಂಸರಂತೆ ಪೋಸು ಕೊಡುವ ಈ ಪುಟ್ಟ ಜೀವಿಯ ಕುರಿತು ಮೊದಲ ಬಾರಿಗೆ (1937ರಲ್ಲಿ) ವರ್ಣಿಸಿದ್ದು ಉರಗಲೋಕದ ದಂತಕಥೆಯಾಗಿದ್ದ ಸಿ.ಆರ್. ನಾರಾಯಣರಾವ್. ಆ ಕಪ್ಪೆಯನ್ನು ನಾವು ಕಂಡಾಗ ಮಿಡತೆಯಂತೆ ಅದು ವಿಶಿಷ್ಟ ಸದ್ದು ಮಾಡುತ್ತಿತ್ತು. 2000ರಲ್ಲಿ ಕಿರು ಮರ ಕಪ್ಪೆಯನ್ನು (ರಾಕೊಫೋರಸ್ ಲಾಟೆರಾಲಿಸ್) ಮರು ಪತ್ತೆ ಮಾಡಲಾಯಿತು.

ಈ ಪ್ರಭೇದ ಸ್ಥಳೀಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಂಬಲಾಗಿದೆ. ಒಂದೇ ಹೊಂಡದಲ್ಲಿ ಈ ಪ್ರಭೇದದ ಸುಮಾರು 200 ಕಪ್ಪೆಗಳನ್ನು ನಾವು ಕಂಡಿದ್ದೇವೆ.

ಪುಟ್ಟದಾದ ಇರುಳು ಕಪ್ಪೆಯು (ನಿಕ್ಟಿಬಾಟ್ರಕಸ್ ಮಿನಿಮಸ್) ಭಾರತದ ಅತ್ಯಂತ ಸಣ್ಣಗಾತ್ರದ ಕಪ್ಪೆಯಾಗಿದೆ. ಕಾಲನ್ನು ಜಾಡಿಸುವುದು ಹಾಗೂ ಇದ್ದಕ್ಕಿದ್ದಂತೆ ಜಾರುವುದು –ಇಂತಹ ವಿಚಿತ್ರ ನಡವಳಿಕೆಗಳಿಂದ ಅವುಗಳು ಕಚಗುಳಿ ಇಡುತ್ತವೆ.

ಕಾಲನ್ನು ಜಾಡಿಸುವ ಮೂಲಕ ಸಂವಹಿಸುವ ಹೊಳೆ ಕಪ್ಪೆಗಳು (ಮೈಕ್ರಿಕ್ಸಾಲಸ್) ಆಳವಿಲ್ಲದ ವೇಗವಾಗಿ ಹರಿಯುವ ನೀರಿನ ತೊರೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಹರಿಯುವ ತೊರೆಯ ಸದ್ದಿನಿಂದ ತಮ್ಮ ದನಿ ಅಡಗುವ ಸಂದರ್ಭದಲ್ಲಿ ಕಾಲನ್ನು ಜಾಡಿಸುವ ಮೂಲಕ ಇತರ ಕಪ್ಪೆಗಳನ್ನು ಸಂಪರ್ಕಿಸುತ್ತವೆ.

ಕಾಲು ಬೆರಳುಗಳ ನಡುವಿನ ಉದ್ದಚರ್ಮದ ಸಹಾಯದಿಂದ ಒಂದು ಜಿಗಿತದಲ್ಲಿ 10 ಅಡಿಕ್ಕೂ ಉದ್ದಕ್ಕೆ ಜಾರಿ ಸರಿದು ಹೋಗಬಲ್ಲ ಸಾಮರ್ಥ್ಯ ಹಾರುವ ಕಪ್ಪೆಗಿದೆ (ರಾಕೊಫೋರಸ್ ಮಲಬಾರಿಕಸ್). ನೊರೆಯಿಂದ ಗೂಡು ಮಾಡುವ ಈ ಕಪ್ಪೆಯ ಮರಿಗಳು ಸ್ವಜಾತಿ ಭಕ್ಷಕಗಳೆಂಬುದನ್ನು ನಾವು ಗಮನಿಸಿದ್ದೇವೆ.

ಪಶ್ಚಿಮ ಘಟ್ಟದ ಬಹುತೇಕ ಉಭಯಚರಿಗಳು ಕಣ್ಣು ಕೋರೈಸುವಷ್ಟು ಸುಂದರವಾಗಿದ್ದು, ತಾವಿರುವ ಪರಿಸರಕ್ಕೆ ಅನುಕೂಲವಾಗಿ ಹೊಂದಿಕೊಳ್ಳುವ ಗುಣವನ್ನು ಹೊಂದಿವೆ.

ವಿನಾಶದಂಚಿನಲ್ಲಿರುವ ಪ್ರಕಾಶಮಾನ ಬಣ್ಣದ ಚೂಪು-ಮೂತಿಯ ಮಲಬಾರ್ ಕಪ್ಪೆ (ರಮನೆಲ್ಲಾ ಟ್ರಯೆಂಗುಲಾರಿಸ್) ತನ್ನ ಧ್ವನಿಯನ್ನು ವರ್ಧಿಸಲು ಮರದ ಬಿರುಕು/ರಂಧ್ರಗಳೊಳಗೆ ಕುಳಿತು ತನ್ನ ಕೂಗನ್ನು ಬಹುದೂರದವರೆಗೆ ತಲುಪಿಸುವ ತಂತ್ರವನ್ನು ರೂಪಿಸಿಕೊಂಡಿದೆ. ಹಳದಿ ಬಣ್ಣದ ಪೊದೆ ಕಪ್ಪೆ (ರಾವೊರ್ಚೆಸ್ಟ್ಸ್‌ ಲುಟಿಯೋಲಸ್) ನೀಲಿಗಣ್ಣಿನ ಕಪ್ಪೆಯೆಂದು ಗುರುತಿಸಲ್ಪಟ್ಟಿದ್ದು, ಪಶ್ಚಿಮ ಘಟ್ಟಗಳಲ್ಲಿ ಎಲ್ಲೆಡೆ ಕಾಣಸಿಗುತ್ತದೆ. ಅದು ಒದರುವಾಗ ಅದರ ಗಂಟಲು ಬಲೂನಿನಂತೆ ಉಬ್ಬುತ್ತದೆ.

ವಿಭಿನ್ನ ಬಣ್ಣಗಳಲ್ಲಿ ಕಾಣಬರುವ ಒರಟು ಚರ್ಮದ ಪೊದೆ ಕಪ್ಪೆ (ರಾವೊರ್ಚೆಸ್ಟ್ಸ್‌ ಗ್ಲಾಂಡ್ಯುಲೋಸಸ್) ಜಾತಿಯ ಕಪ್ಪೆಗಳು ಕೆಲವೊಮ್ಮೆ ಒಂದೇ ಸ್ಥಳದಲ್ಲಿ ವಿವಿಧ ಬಣ್ಣಗಳಲ್ಲಿ ಕಾಣಸಿಗುತ್ತವೆ. ಉಷ್ಣಾಂಶ ನಿಯಂತ್ರಣಕ್ಕೆ ಮರ ಕಪ್ಪೆಗಳು (ಪಾಲಿಪಿಡೇಟಸ್ ಮಾಕ್ಯುಲೇಟಸ್) ತೆಳುವರ್ಣದ ಚರ್ಮವನ್ನು ಹೊಂದಿದ್ದು, ಚರ್ಮವನ್ನು ತೇವವಾಗಿಸಲು ಒಂದು ಬಗೆಯ ಲೋಳೆದ್ರವವನ್ನು ಸ್ರವಿಸುತ್ತವೆ.

ಗೂಡುಕಟ್ಟಿ ಮೊಟ್ಟೆಯ ಚೆಂಡುಗಳನ್ನು ಕಾಯುವ ವಿಶೇಷ ಸಾಮರ್ಥ್ಯವು ಚಿಮ್ಮುವ ಕಪ್ಪೆಗಳಿಗಿದೆ.ವಯನಾಡಿನ ಇರುಳು ಕಪ್ಪೆಗಳು (ನಿಕ್ಟಿಬಾಟ್ರಕಸ್ ಗ್ರಾಂಡಿಸ್) ಮೊಟ್ಟೆಯ ಚೆಂಡುಗಳನ್ನು ಕಾಯುತ್ತವೆ. ಈ ಜಾತಿಯ ಕಪ್ಪೆಗಳು ಗೂಬೆಗಳಂತೆ ಕೂಗುತ್ತವೆ ಕೂಡ. ಇಡೀ 1.60 ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟದಲ್ಲಿ ದತ್ತಾತ್ರೇಯ ಪೀಠದ ಇರುಳು ಕಪ್ಪೆ (ನಿಕ್ಟಿಬಾಟ್ರಕಸ್ ದತ್ತಾತ್ರೇಯೆಂಸಿಸ್) ಜಾತಿಯ ಕಪ್ಪೆಗಳು ಕೇವಲ 30 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಕಂಡುಬರುತ್ತವೆ!

ಹಲವಾರು ಹೊಸ ಪ್ರಭೇದದ ಕಪ್ಪೆಗಳ ಅನ್ವೇಷಣೆ ಇಂದಿಗೂ ಮುಂದುವರೆಯುತ್ತಲೇ ಇದೆ. ಮಾನವನ ಹಲವು ಚಟುವಟಿಕೆಗಳಿಂದ ಬಹಳಷ್ಟು ಸ್ಥಳೀಯ ಕಪ್ಪೆಗಳು ವಿನಾಶದ ಅಂಚಿಗೆ ತಲುಪಿವೆ. ಕಪ್ಪೆಗಳು ಸೂಕ್ಷ್ಮವಾಗಿ ಅವಲಂಬಿತವಾಗಿರುವ ವಾಸಸ್ಥಳದ ವಿಭಜನೆಯಿಂದ ಕೆಲವು ಪ್ರಭೇದಗಳು ವಿರೂಪಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT