ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಿಂದ ಕಾಡಿನ ಕತೆ

ನಗರದ ಅತಿಥಿ
Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇಥಿಯೋಫಿಯಾದ ಜಿಲಾಡಾ ಕೋತಿಗಳ ಬಗ್ಗೆ ಇವರು ನಡೆಸಿದ ವಿಸ್ತೃತ ಅಧ್ಯಯನ ಇದೇ ವರ್ಷ ಪ್ರಕಟವಾಗಿದೆ. ಇತ್ತೀಚೆಗೆ ನಗರದಲ್ಲಿ ನಡೆದ ‘ನೇಚರ್ ಇನ್ ಫೋಕಸ್’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಇದೇ ವೇಳೆ ಅವರು ‘ಮೆಟ್ರೊ’ಗೆ ಅತಿಥಿಯಾದರು.

*ಭಾರತಕ್ಕೆ ಈ ಹಿಂದೆ ಬಂದಿದ್ದಿರಾ?
ಹೌದು. ಇದು ನನ್ನ ಎರಡನೇ ಭೇಟಿ. ನನ್ನ ಪ್ರೇಯಸಿಯ ಹುಟ್ಟೂರು ಮುಂಬೈ. ಆಕೆಯ ತಾಯಿ ಇರುವುದೂ ಅಲ್ಲಿಯೇ. ಆಕೆಯನ್ನು ನೋಡಲು ಮೊದಲ ಬಾರಿ ಬಂದಿದ್ದೆ. ಆಗ ದೆಹಲಿ, ಮುಂಬೈ, ಗೋವಾಗಳಿಗೆ ಭೇಟಿ ನೀಡಿದ್ದೆ.

*ನೀವು ನ್ಯಾಷನಲ್ ಜಿಯೋಗ್ರಫಿಯ ಯುವ ಅನ್ವೇಷಕ ಹೇಗಾದಿರಿ?
2008ರಲ್ಲಿ ನ್ಯಾಷನಲ್ ಜಿಯೋಗ್ರಫಿ 18ರಿಂದ25 ವರ್ಷದೊಳಗಿನವರಿಗಾಗಿ ಸ್ಕಾಲರ್‌ಶಿಪ್‌ ಆಧಾರಿತ ಸ್ಪರ್ಧೆಯನ್ನು ನಡೆಸಿತ್ತು. ಪ್ರಪಂಚದಾದ್ಯಂತ ಹಲವು ದೇಶಗಳ ಸಂಶೋಧಕರು, ಛಾಯಾಚಿತ್ರಗ್ರಾಹಕರು, ಸಾಹಸಿಗಳು ಅದಕ್ಕೆ ಅರ್ಜಿ ಸಲ್ಲಿಸಿದ್ದರು. ಸಿಹಿನೀರಿನ ಮೊಸಳೆಗಳ ಜೀವನದ ಬಗ್ಗೆ ತಯಾರಿಸಿದ ನನ್ನ ಸಂಶೋಧನಾ ವರದಿಯನ್ನು ಸ್ಪರ್ಧೆಗೆ ಸಲ್ಲಿಸಿದ್ದೆ. ಅದು ತೀರ್ಪುಗಾರರ ತಂಡಕ್ಕೆ ಇಷ್ಟವಾಗಿ ನಾನು ನ್ಯಾಷನಲ್ ಜಿಯೋಗ್ರಫಿಯ ಭಾಗವಾಗುವ ಅವಕಾಶ ದೊರಕಿತು. ಈ ವರೆಗೆ ಪ್ರಪಂಚದ ನಾನಾ ಕಡೆ 12 ವಿವಿಧ ಪ್ರಾಜೆಕ್ಟ್‌ಗಳಲ್ಲಿ ಅವರಿಗಾಗಿ ಕೆಲಸ ಮಾಡಿದ್ದೇನೆ.

*ವನ್ಯಜೀವಿ ಸಂರಕ್ಷಣೆಯತ್ತ ಒಲವು ಮೂಡಿದ್ದು ಹೇಗೆ?
ಕೆಲವರಿಗೆ ದೊಡ್ಡ ಕಾರು, ದೊಡ್ಡ ಉದ್ಯೋಗ, ಮನೆ, ಚಿನ್ನಾಭರಣಗಳಿಂದ ಸಂತೋಷ ಸಿಗುತ್ತದೆ. ಕೆಲವರಿಗೆ ತಂತ್ರಜ್ಞಾನ, ಕಂಪ್ಯೂಟರ್, ಗೇಮ್‌ಗಳಿಂದ ಸಂತೋಷ ಸಿಗುತ್ತದೆ. ನನಗೆ ಕಾಡಿನಲ್ಲಿ ಖುಷಿ ಸಿಗುತ್ತದೆ. ವನ್ಯಜೀವಿಗಳ ಸಂಗ ನನಗೆ ಆನಂದ ಉಂಟುಮಾಡುತ್ತದೆ. ನಾನು ಕಾಡಿಗೆ ಹತ್ತಿರವಾದಷ್ಟೂ ಮಾನವನಿಂದ ಕಾಡಿಗೆ ಆಗುತ್ತಿರುವ ತೊಂದರೆಗಳು ಮನದಟ್ಟಾಗುತ್ತಾ ಬಂತು. ಹೀಗಾಗಿ ನಾನು ಕಾಡು ಮತ್ತು ವನ್ಯ ಜೀವಿಗಳ ಸಂರಕ್ಷಣೆ ಕಡೆ ವಾಲಿದೆ. ಜೀವನದ ಪರಮೋಚ್ಚ ಸಂತೋಷ ನೀಡುವ ಕಾಡು ಮತ್ತು ಕಾಡು ಪ್ರಾಣಿಗಳನ್ನು ಕಳೆದುಕೊಳ್ಳುವುದು ನನಗೆ ಇಷ್ಟವಿಲ್ಲ. ಈ ಹೋರಾಟದಲ್ಲಿ ನಾನು ಸೋತರೂ ಪರವಾಗಿಲ್ಲ ಆದರೆ ಪ್ರಯತ್ನ ನಿಲ್ಲಿಸುವುದಿಲ್ಲ.

* ನಿಮ್ಮ ಈವರೆಗಿನ ವೃತ್ತಿ ಬದುಕಿನಲ್ಲಿ ಎದುರಿಸಿದ ರೋಚಕ ಕ್ಷಣಗಳು? 
ಕಾಡಿನ ಅತಿ ದುರ್ಗಮ ದಾರಿಯಲ್ಲಿ ಕಾರು ಚಲಾಯಿಸಬೇಕಾದರೆ ಒಮ್ಮೆ ಪ್ರಪಾತಕ್ಕೆ ಬಿದ್ದಿದ್ದೆ, ನಾನು ಮತ್ತು ನನ್ನ ಗರ್ಲ್‌ಫ್ರೆಂಡ್ ಸಾವಿನ ದವಡೆಗೆ ಹೋಗಿ ಬದುಕಿ ಬಂದೆವು. ಅದು ಭಯಾನಕ ಅನುಭವ. ಒಮ್ಮೆ ಆಫ್ರಿಕಾದಲ್ಲಿ ಅತ್ಯಂತ ವಿಷಕಾರಿ ಇರುವೆಗಳು ಕಚ್ಚಿ ಕಾಲು ನೀಲಿ ಗಟ್ಟಿ ದೇಹವೆಲ್ಲಾ ಊದಿಕೊಂಡು, ತೀವ್ರ ಆಘಾತಕ್ಕೊಳಗಾಗಿದ್ದೆ. ಸಮಯೋಚಿತ ಚಿಕಿತ್ಸೆಯಿಂದ ಬದುಕಿ ಬಂದೆ. ಮತ್ತೊಮ್ಮೆ ಕೀನ್ಯಾದಲ್ಲಿ ಭಾರಿ ಘೇಂಡಾಮೃಗವೊಂದು ಅಟ್ಟಿಸಿಕೊಂಡು ಬಂದುಬಿಟ್ಟಿತ್ತು, ಅವತ್ತು ಜೀವ ಬಾಯಿಗೆ ಬಂದಿತ್ತು. ಮೂರು ಬಾರಿ ಮಲೇರಿಯಾಗೆ ತುತ್ತಾದೆ. ಸಾಕಷ್ಟು ಬಾರಿ ಬೆಲೆಬಾಳುವ ಕ್ಯಾಮೆರಾ ಮುರಿದುಕೊಂಡಿದ್ದಿದೆ. ಆಹಾರವಿಲ್ಲದೆ ಕಾಡಿನಲ್ಲಿ ತಿರುಗಿದ್ದಿದೆ. ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಆದರೆ ಇವ್ಯಾವುವೂ ನನ್ನ ಕಾಡಿನಿಂದ ವನ್ಯ ಜೀವಿಗಳಿಂದ ದೂರ ಇಡಲು ಸಾಧ್ಯವಾಗಿಲ್ಲ.

*ಛಾಯಾಗ್ರಹಣ ಯಾಕೆ ನಿಮಗೆ ಇಷ್ಟೊಂದು ಮುಖ್ಯ?
ನಾನು ಜಗತ್ತನ್ನು ಫೋಟೊಗ್ರಫಿ ಮೂಲಕ ನೋಡುತ್ತೇನೆ. ನಾನು ಜಗತ್ತಿಗೆ ಫೋಟೊಗಳ ಮೂಲಕವೇ ನನ್ನ ಅನುಭವಗಳನ್ನು, ಕಾಡಿನ ಕತೆಗಳನ್ನು, ಜೀವ ವೈವಿಧ್ಯವನ್ನು ಹೇಳುತ್ತೇನೆ. ಛಾಯಾಗ್ರಹಣ ನನ್ನ ಪಾಲಿಗೆ ಸಂವಹನ ಮಾಧ್ಯಮ. ಕ್ಯಾಮೆರಾ ಮೂಲಕ ಜಗತ್ತು ಬದಲಿಸುವ ಸಣ್ಣ ಪ್ರಯತ್ನ ನನ್ನದು. ಛಾಯಾಗ್ರಹಣ ಇಲ್ಲದೆ ಇದ್ದರೆ ನಾನು ನಾನಾಗಿರಲು ಸಾಧ್ಯವಿಲ್ಲ. ಅದು ನನ್ನ ಜೀವನದ ಭಾಗ.

*ಈ ಸಾಹಸಿ ವೃತ್ತಿಯಿಂದ ಆದ ಒಳಿತು ಮತ್ತು ಕೆಡುಕೇನು?
ಒಳ್ಳೆಯ ಅನುಭವ ಎಂದರೆ ದಟ್ಟ ಅರಣ್ಯದಲ್ಲಿ ಏಕಾಂತವಾಗಿ ನಡೆದಿದ್ದು, ವನ್ಯ ಜೀವಿಗಳ ಬದುಕನ್ನು ಹತ್ತಿರದಿಂದ ನೋಡಿದ್ದು, ಅವುಗಳ ಬದುಕನ್ನು ಆಸಕ್ತರಿಗೆ ತಲುಪಿಸಿದ್ದು.  ನ್ಯೂಜಿಲೆಂಡ್‌ನ ಟಾಂಗಾ ದ್ವೀಪದ ಹಾಂಪ್ಯಾಕ್‌ ವೇಲ್‌ಗಳೊಂದಿಗೆ ಈಜಿದ್ದು, ಅಮೆಜಾನ್ ಕಾಡುಗಳಲ್ಲಿ ಅಲೆದದ್ದು. ಪ್ರಕೃತಿಯ ಅಗಾಧತೆಯನ್ನು ಅನುಭವಿಸಿದ್ದು. ನಷ್ಟವೆಂದರೆ ಸ್ನೇಹಿತರು ಕುಟುಂಬದಿಂದ ದೂರವಿರುವುದು. ಕುಟುಂಬಕ್ಕೆ ನನ್ನ ಅವಶ್ಯಕತೆ ಇದ್ದ ಸಮಯದಲ್ಲಿ ನಾನು ಅವರೊಂದಿಗೆ ಇರದೇ ಹೋದುದು. ತಿಂಗಳುಗಟ್ಟಲೆ ದೂರವಿದ್ದು ನಂತರ ಮನೆಗೆ ಹೋದಾಗ ನನ್ನ ತಂದೆ–ತಾಯಿಗೆ ಇನ್ನಷ್ಟು ವಯಸ್ಸಾಗಿರುತಿತ್ತು. ಪ್ರೀತಿಯ ನಾಯಿ ಸತ್ತೇ ಹೋಗಿತ್ತು. ಗೆಳೆಯರು ಕೆಲವರು ಊರು ಬಿಟ್ಟು ಹೋಗಿದ್ದರು. ಕೆಲವರು ತೀರಿಕೊಂಡಿದ್ದರು. ಇವೆಲ್ಲಾ ಮನಸ್ಸಿಗೆ ನೋವುಂಟು ಮಾಡುವ ಸಂಗತಿಗಳು. ಆದರೆ ಕೆಲವನ್ನು ಪಡೆಯಲು ಕೆಲವನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ. ವಿಶಿಷ್ಟವಾದುದನ್ನು ಸಾಧಿಸಲು ಹೊರಟಾಗ ಈ ರೀತಿಯ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ.

*ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಘರ್ಷಣೆ ಹೆಚ್ಚಾಗುತ್ತಲೇ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದರ ಉತ್ತರ ಬಹಳ ಸಂಕೀರ್ಣವಾದುದು. ನಮ್ಮ ಅನುಕೂಲಕ್ಕೆ ನಾವು ಮಾಡಿಕೊಂಡಿರುವ ಗಡಿಗಳು ಪ್ರಾಣಿಗಳಿಗಿಲ್ಲ. ಅವುಗಳೊಂದಿಗೆ ನಾವು ಸಂಘರ್ಷಕ್ಕೆ ಇಳಿಯದೇ ಬೇರೆ ದಾರಿಯ ಮೂಲಕ ವನ್ಯಜೀವಿಗಳಿಂದ ಮಾನವನಿಗೆ ಆಗುತ್ತಿರುವ ಹಾನಿ ತಪ್ಪಿಸಬಹುದು. ಆಫ್ರಿಕಾದಲ್ಲಿ ಆನೆಗಳ ಹಾವಳಿ ಹೆಚ್ಚು. ಹಾಗೆಂದು ಅವರು ಭೇಟೆ ಆಡುವುದಿಲ್ಲ. ಅದರ ಬದಲಿಗೆ ಮೆಣಸಿನ ಘಾಟು ಅಥವಾ ಇನ್ನಾವುದೊ ವಿಧಾನಗಳನ್ನು ಬಳಸಿ ಅವುಗಳು ಮಾನವ ವಸತಿ ಪ್ರದೇಶಗಳಿಂದ ದೂರ ಉಳಿಯುವಂತೆ ಮಾಡುತ್ತಾರೆ. ಈ ರೀತಿಯ ಪ್ರಯತ್ನಗಳು ಭಾರತದಲ್ಲಿಯೂ ಆಗಿರುವುದಾಗಿ ನಾನು ಕೇಳಿದ್ದೇನೆ. ಅದು ಒಳ್ಳೆಯದು. ಭೂಮಿಯ ಮೇಲೆ ಮಾನವ ಉಗಮ ಆಗುವುದಕ್ಕಿಂತಲೂ ಮುಂಚೆ ಪ್ರಾಣಿಗಳಿದ್ದವು ನಾವು ಅವರ ಜಾಗ ಆಕ್ರಮಿಸಿಕೊಂಡಿದ್ದೇವೆ.

* ವನ್ಯ ಜೀವಿಗಳ ಸಂರಕ್ಷಣೆಗೆ ಸರ್ಕಾರಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯ?
ನಮ್ಮ ಸರ್ಕಾರಗಳು ಪ್ರಾಣಿಗಳನ್ನು ಉಳಿಸಲು ಯಾವುದೊ ನಕ್ಷೆಯ ಮೇಲೆ ಗೆರೆಗಳನ್ನು ಎಳೆದು ‘ಇದು ನಿಷೇಧಿತ ಪ್ರದೇಶ’ ಅಥವಾ ‘ಕಾಡು ಪ್ರಾಣಿಗಳ ಪ್ರದೇಶ’ ಎಂಬ ಫಲಕಗಳನ್ನು ಹಾಕಿಬಿಡುತ್ತವೆ. ಆದರೆ ಕಾವಲು ಮಾಡುವುದನ್ನು ಮರೆತುಬಿಡುತ್ತದೆ, ಕಾಡುಗಳು ತೆರೆದ ತಿಜೋರಿಗಳು, ಲಾಭಿಕೋರ ಮನುಷ್ಯರು ಅದರ ಮೇಲೆ ದಾಳಿ ಮಾಡುತ್ತಲೇ ಇರುತ್ತಾರೆ. ಇದನ್ನು ಶಕ್ತವಾಗಿ ತಡೆಯುವಲ್ಲಿ ಬಹುತೇಕ ದೇಶದ ಸರ್ಕಾರಗಳು ವಿಫಲವಾಗಿವೆ. ಇಷ್ಟು ಮಾತ್ರವಲ್ಲ ಸರ್ಕಾರಗಳು ಹಾಗೆ ಫಲಕಗಳನ್ನು ಹಾಕುವಾಗ ಅಲ್ಲಿನ ಮೂಲ ನಿವಾಸಿಗಳನ್ನು ಮರೆಯುತ್ತದೆ.

ಆ ಜನರು ಕಾಡನ್ನು ಕಾಡಾಗಿಯೇ ಉಳಿಸಲು ನೂರಾರು ವರ್ಷದಿಂದ ಕಷ್ಟಪಟ್ಟಿರುತ್ತಾರೆ ಮತ್ತು ಕಾಡಿನಿಂದ ತಮ್ಮ ಜೀವನ ಕಟ್ಟಿಕೊಂಡಿರುತ್ತಾರೆ ಎಂಬುದನ್ನು ಮರೆಯುತ್ತಾರೆ. ಕಾಡಿನ ಪರಿಚಯ ಇರುವ ಅದರ ರಕ್ಷಕರನ್ನೇ ಹೊರಹಾಕುವ ಕಾರ್ಯವನ್ನೂ ಸರ್ಕಾರಗಳು ಮಾಡುತ್ತಿವೆ. ಇದು ಕೂಡ ಸರ್ಕಾರದ ಸಂರಕ್ಷಣಾ ಯೋಜನೆಗಳು ನಪಾಸಾಗಲು ಕಾರಣ.

ಇಷ್ಟೆ ಅಲ್ಲದೆ ಸರ್ಕಾರಗಳು ಹೆಕ್ಟೇರುಗಳನ್ನು ಲೆಕ್ಕ ಹಾಕಿ ಸಂರಕ್ಷಿತಧಾಮಗಳನ್ನು ಮಾಡುತ್ತಿವೆ. ಆದರೆ ಅಲ್ಲಿನ ಜೀವ ವೈವಿಧ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಇದು ಸಂರಕ್ಷಿತ ಪ್ರದೇಶದಲ್ಲಿನ ವನ್ಯಜೀವಿಗಳ ಆಹಾರ ಕ್ರಮದ ಮೇಲೆ ಭಾರಿ ಪರಿಣಾಮ ಬೀರುತ್ತದೆ.

*ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆಗೆ ಸಾಮಾನ್ಯ ವ್ಯಕ್ತಿ ಮಾಡಬಹುದಾದ ಕಾರ್ಯವೇನು?
ಜನಸಂಖ್ಯೆ ಏರಿಕೆ ನಿಲ್ಲಬೇಕು. ಪ್ರಾಣಿಗಳು ಕಡಿಮೆ ಆಗುತ್ತಿವೆ, ಜನ ಹೆಚ್ಚಾಗುತ್ತಿದ್ದಾರೆ ಇದು ಸಮತೋಲಿತ ಸ್ಥಿತಿಗೆ ಬರಬೇಕು. ಜನಸಂಖ್ಯೆ ಕಡಿಮೆ ಆಗದ ಹೊರತು ಇರುವ ಕಾಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರಗಳು, ಪೋಷಕರು ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ತಿಳಿಹೇಳಬೇಕು.

*ನೀವು ನದಿ ಉಳಿಸುವ ಆಂದೋಲನ ಮಾಡಿದ್ದಿರಲ್ವಾ?
ಹೌದು, ನಾನು ಬ್ರಿಟಿಷ್ ಕೊಲಂಬಿಯಾದಲ್ಲಿ ಈ ಕುರಿತು ಕೆಲಸ ಮಾಡಿದ್ದೇನೆ. ಅಲ್ಲಿ ರಾಯಲ್ ಡಚ್ ಶೆಲ್ ಗ್ಯಾಸ್ ಎಂಬ ಇಂಧನ ಸಂಸ್ಥೆಯೊಂದು ತನ್ನ ಬೃಹತ್ ಘಟಕ ಸ್ಥಾಪಿಸಹೊರಟಿತ್ತು. ವಿಷಕಾರಿ ಅನಿಲವನ್ನು ನದಿಗೆ ಬಿಡಲು ಯೋಜನೆ ತಯಾರಿಸಿತ್ತು. ಆ ನದಿಯು ಹಲವಾರು ವಿಶಿಷ್ಟ ಪ್ರಭೇದದ ಜಲಚರಗಳ ವಾಸಸ್ಥಾನವಾಗಿತ್ತು. ವಿಷಾನಿಲದಿಂದ ಅವುಗಳ ಸಂತತಿ ಅಪಾಯದಲ್ಲಿತ್ತು. ಹಾಗಾಗಿ ನಾನು ಮತ್ತು ನನ್ನ ತಂಡ ಅಲ್ಲಿಗೆ ತೆರಳಿ ಸುದೀರ್ಘ ತನಿಖಾ ವರದಿಯನ್ನು ತಯಾರು ಮಾಡಿ ಜನರ ಮತ್ತು ಪರಿಸರ ಪ್ರೇಮಿಗಳ ಗಮನ ಸೆಳೆದು ಶೆಲ್‌ನ ಘಟಕ ತೆರೆಯದಂತೆ ಮಾಡಿದೆವು.

*ಭಾರತದ ವನ್ಯಜೀವಿಗಳ ಬಗ್ಗೆ ನಿಮ್ಮ ಅಭಿಪ್ರಾಯ?
ನನಗೆ ಇಲ್ಲಿವರೆಗೆ ಭಾರತದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ ಆದರೆ ಇಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತಲೇ ಇರುತ್ತೇನೆ. ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚಾಗುತ್ತಿರುವುದು ಒಳ್ಳೆಯ ವಿಷಯ. ತಮಿಳುನಾಡು ಮತ್ತು ಕರ್ನಾಟಕದ ನೀರಿನ ಸಮಸ್ಯೆ ತಿಳಿದುಕೊಂಡಿದ್ದೇನೆ. ಜಾಗತಿಕ ತಾಪಮಾನದಿಂದ ಹಿಮಾಲಯ ಕರಗುತ್ತಿರುವುದು ಭಾರತದ ಮುಂದಿರುವ ಬಹು ದೊಡ್ಡ ಸಮಸ್ಯೆ. ಈಗಲೇ ಭಾರತೀಯರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬಹುದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ.

*


ಟ್ರೆವೊರ್‌ ಫ್ರೋಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT