ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಸ್ವಾತಂತ್ರ್ಯದ ಚಿಂತನೆ ನಡೆಸಿಲ್ಲವೇ?

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯೋತ್ಸವದ ನೆನಪಿನಲ್ಲಿ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಶೆಟ್ಟಿಯವರು ‘ಸ್ವಾತಂತ್ರ್ಯವೆಂಬ ಪರಿಕಲ್ಪನೆಯ ಸುತ್ತ’ ಆಳವಾದ ಮತ್ತು ವಿದ್ವತ್ಪೂರ್ಣವಾದ ಚಿಂತನೆ ನಡೆಸಿದ್ದಾರೆ (ಪ್ರ.ವಾ., ಆಗಸ್ಟ್ 17). ಆದರೆ ‘ಸ್ವಾತಂತ್ರ್ಯವೆಂಬ ಪರಿಕಲ್ಪನೆಯ ಕುರಿತು ಭಾರತೀಯರಾದ ನಾವು ಆಲೋಚಿಸಿದ್ದು ಕಡಿಮೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಸ್ವಾತಂತ್ರ್ಯ ಎಂಬ ಯೋಚನೆಯ ಬಗ್ಗೆ ನಡೆದಷ್ಟು ಬೌದ್ಧಿಕ ಚಿಂತನೆ ನಮ್ಮಲ್ಲಿ ನಡೆದಿಲ್ಲ’ ಎಂಬ ತೀರ್ಮಾನದೊಂದಿಗೆ ಅವರು, ನಮಗೆ ಆಸಕ್ತಿದಾಯಕ ಎನಿಸಬಹುದಾದ, ಪಶ್ಚಿಮ ದೇಶಗಳಲ್ಲಿ ನಡೆದಿರುವ ಸ್ವಾತಂತ್ರ್ಯದ ಕುರಿತ ಹಲವು ಬಗೆಯ ಚಿಂತನೆಗಳ ಭಿನ್ನ ಆಯಾಮಗಳನ್ನು ಪರಿಚಯಿಸಿದ್ದಾರೆ.

ನಿಜ, ಪಶ್ಚಿಮದಲ್ಲಿ ಜನಿಸಿದ ಅದೆಷ್ಟೋ ಚಿಂತನೆಗಳು ನಮಗೆ ಅಪರಿಚಿತವಾಗಿವೆ. ಈಗಲೂ ಪಾಲಿಟಿಕ್ಸ್, ಡೆಮಾಕ್ರಸಿ, ಸೆಕ್ಯುಲರಿಸಂ ಮುಂತಾದ ರಾಜಕೀಯ ಪರಿಭಾಷೆಗಳನ್ನು ನಮ್ಮ ಹಿನ್ನೆಲೆಗೆ ಹೊಂದುವಂತೆ ವ್ಯಾಖ್ಯಾನಿಸಿಕೊಳ್ಳುವ ಮತ್ತು ಅನುವಾದಿಸಿಕೊಳ್ಳುವ ಪ್ರಯತ್ನ ಇನ್ನೂ ಯಶಸ್ವಿಯಾಗಿ ನೆರವೇರಿಲ್ಲ. ಯಾವುದೇ ಸಂಸ್ಕೃತಿಯ ಒಡಲಿನಿಂದ ಮೂಡಿದ ಸಿದ್ಧಾಂತಳನ್ನು ಅನ್ಯ ಸಂಸ್ಕೃತಿಗೆ (ಅದು ಭಾರತೀಯವಿರಲೀ ಅಥವಾ ಪಾಶ್ಚಿಮಾತ್ಯವಿರಲೀ) ಯಥಾರೂಪವಾಗಿ ಮನಗಾಣಿಸುವುದು ಸವಾಲಿನ ಕೆಲಸವೇ ಸರಿ.

ಆದರೆ ರಾಜಾರಾಮ ಮತ್ತು ನಿತ್ಯಾನಂದ ಅವರು ತಮ್ಮ ‘ಸ್ವಾತಂತ್ರ್ಯವೆಂಬ ಪರಿಕಲ್ಪನೆಯ ಸುತ್ತ’ಲಿನ ಚರ್ಚೆಯನ್ನು ಬರೀ ರಾಜಕೀಯ ಸ್ವಾತಂತ್ರ್ಯಕ್ಕೆ ಸೀಮಿತಗೊಳಿಸದೆ ಸ್ವಾತಂತ್ರ್ಯವೆಂಬ ಪರಿಕಲ್ಪನೆಯನ್ನು ಒಂದು ಮಾನವೀಯ ಮೌಲ್ಯದಂತೆ, ಮಾನವ ವಿಕಾಸದ ಅಗತ್ಯ ಅಂಶವೆಂಬಂತೆ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಕುರಿತು ಭಾರತೀಯರು ಪಾಶ್ಚಾತ್ಯರಿಗಿಂತಲೂ ಗಹನವಾಗಿ ಆಲೋಚನೆ ನಡೆಸಿದ್ದಾರೆ.

ಆ ಆಲೋಚನೆಯ ಕೆಲವು ಮುಖಗಳನ್ನಾದರೂ ಪರಿಶೀಲಿಸದೆ ಹೋದಲ್ಲಿ ಅವರ ಲೇಖನ ಅಪೂರ್ಣವಾಗಿ ಉಳಿದುಬಿಡುತ್ತದೆ. ಏಕೆಂದರೆ ಎಂದೂ ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳದ ಜನಾಂಗಗಳ ಸ್ವಾತಂತ್ರ್ಯ ಕುರಿತ ಸಿದ್ಧಾಂತಗಳಿಗೂ ಶತಶತಮಾನಗಳಿಂದಲೂ ದಾಸ್ಯದಲ್ಲೇ ನವೆಯುತ್ತಿರುವವರ ಸ್ವಾತಂತ್ರ್ಯದ ಕುರಿತ ನಿರ್ವಚನಗಳಿಗೂ ನಡುವೆ ಅಗಾಧವಾದ ವ್ಯತ್ಯಾಸವಿರುತ್ತದೆ. ‘ಹಸಿದವ ಬಲ್ಲ ಹಸಿವಿನ ಶೂಲೆ’ ಎಂದು ಬೇಂದ್ರೆ ಹೇಳುವಂತೆ ಸ್ವಾತಂತ್ರ್ಯ ಕಳೆದುಕೊಂಡು ದಾಸ್ಯ, ಗುಲಾಮತನಗಳಲ್ಲಿ ಮುಳುಗಿದ ಜನಾಂಗಗಳು ತೀವ್ರವಾದ ಸ್ವಾತಂತ್ರ್ಯ ದಾಹ ಹೊಂದಿರುತ್ತವೆ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ‘ಸ್ವತಂತ್ರ’ರೆನಿಸಿಕೊಂಡವರಿಗಿಂತಲೂ ಸ್ಪಷ್ಟವಾಗಿ ಮನಗಂಡಿರುತ್ತವೆ.

ಆದ್ದರಿಂದಲೇ ನಮ್ಮ ಋಷಿಮುನಿಗಳು ಮತ್ತು ಅನುಭಾವಿಗಳು ಸ್ವಾತಂತ್ರ್ಯವೆಂಬ ಪದವನ್ನು ನೇರವಾಗಿ ಬಳಸದೆ ಬಂಧನದ ಪರಿಕಲ್ಪನೆಯ ಮೂಲಕ ಸ್ವಾತಂತ್ರ್ಯವನ್ನು ನಿರ್ವಚಿಸುತ್ತಾರೆ. ಬುದ್ಧ ಉಪದೇಶಿಸುವ ದುಃಖಸಮುದಯ, ದುಃಖ ನಿರೋಧ ಇವೇ ಮುಂತಾದ ಆರ್ಯಸತ್ಯಗಳು ಪರೋಕ್ಷ ಮಾರ್ಗದಲ್ಲಿ ಸ್ವಾತಂತ್ರ್ಯದ ನಿರ್ವಚನವೇ ಆಗಿದೆ. ‘ಯದಾ ಚರ್ಮವದಾಕಾಶಂ ವೇಷ್ಟಯಿಷ್ಯಂತಿ ಮಾನವಾಃ | ತದಾ ದೇವಮವಿಜ್ಞಾಯ ದುಃಖಸ್ಯಾಂತೋ ಭವಿಷ್ಯತಿ’ || (ಶ್ವೇತಾಶ್ವತರ ಉಪನಿಷತ್ 6.20) (ಆಕಾಶವನ್ನೇ ಚರ್ಮದಂತೆ ಹೊದೆದುಕೊಳ್ಳುವ ಮನುಷ್ಯನಿಗೆ ದೇವರನ್ನು ಅರಿಯದಿದ್ದಾಗಲೂ ದುಃಖದ ಅಂತ್ಯವಾಗಿಬಿಡುತ್ತದೆ) ಎಂಬ ಉಪನಿಷತ್ ಮಂತ್ರವು ಸ್ವಾತಂತ್ರ್ಯದ ಕುರಿತಾದ ಭಾರತೀಯರ ನಿಲುವನ್ನು ಸಮಗ್ರವಾಗಿ ಹಿಡಿದಿಟ್ಟುಕೊಂಡಿದೆ.

ವ್ಯಕ್ತಿ ತನ್ನಲ್ಲಿ ತಾನು ಶೂನ್ಯನಾಗದೆ ಬಹಿರಂಗದ ರಾಜಕೀಯ ಸ್ವಾತಂತ್ರ್ಯದ ಕುರಿತು ಮಾತನಾಡಿದರೆ ಅದು ವ್ಯರ್ಥವಾಗುತ್ತದೆ. ಹಾಗಲ್ಲದೆ ಅಂತರಂಗದಲ್ಲಿ ಸ್ವತಂತ್ರನಾದವನಿಗೆ ಬಹಿರಂಗದ ರಾಜಕೀಯ ವಿಷಯಗಳು ಅಪ್ರಸ್ತುತವಾಗಿಬಿಡುತ್ತವೆ ಎಂಬುದು ಭಾರತೀಯ ಋಷಿಮುನಿಗಳ ವಿವೇಕವಾಗಿದೆ. ‘ಗಿರಣಿ ವಿಸ್ತಾರ ನೋಡಮ್ಮಾ, ಇದಕೆ ಪರಾಕು ಮಾಡಮ್ಮ’ ಎಂದು ಹಾಡಿದ ಶಿಶುನಾಳ ಷರೀಫರು ಗಿರಣಿಯಲ್ಲಿ ಅನ್ಯ ಸಂಸ್ಕೃತಿಯ ಹೇರಿಕೆ, ವಸಾಹತುಶಾಹಿಯ ಪ್ರಭಾವ (ರಾಣಿಯ ಕರುಣ) ಇತ್ಯಾದಿಗಳನ್ನು ಕಾಣುವ ಬದಲಾಗಿ ತನ್ನ ಯೋಗಮಾರ್ಗದ ಬೋಧನೆಗೆ ಅದನ್ನೊಂದು ರೂಪಕವನ್ನಾಗಿ ಬಳಸಿಕೊಳ್ಳುವುದನ್ನು ಈ ಹಿನ್ನೆಲೆಯಲ್ಲಿ ಪರಿಭಾವಿಸಬೇಕಾಗುತ್ತದೆ. ಬೇಂದ್ರೆ ಸಹ ತಮ್ಮ ಜೋಗಿ ಪದ್ಯದಲ್ಲಿ ಆಧುನಿಕತೆಯ ಪ್ರತಿಮೆಯಾದ ಗಿರಣಿಯನ್ನು ತನ್ನ ಅಂತರಂಗದ ವೈರುಧ್ಯಕರ ಧ್ವನಿಗಳನ್ನು ನಿವೇದಿಸಲು ಬಳಸುವುದನ್ನು ಗಮನಿಸಬಹುದು (ಕೂಗೇ ಕೂಗತದ ಕೂಗೇ ಕೂಗತದ ಗಿರಣಿ ಕರೆಯೊ ಹಾಂಗ- ಗಂಗಾವತರಣ).

ಇನ್ನು ಸ್ವಾತಂತ್ರ್ಯ ತಂದೊಡ್ಡುವ ಅಪಾಯಗಳನ್ನು ಕುರಿತು ಎಚ್ಚರಿಸುವ ಜೆ.ಎಸ್. ಮಿಲ್, ಬರ್ಲಿನ್ ಮುಂತಾದವರ ವಿಚಾರಗಳನ್ನು ಭಾರತೀಯ ಚಿಂತನೆ ಅನುಮೋದಿಸುತ್ತದೆ (ಸ್ವಾಮಿ ವಿವೇಕಾನಂದರು ಜೆ.ಎಸ್. ಮಿಲ್‌ರ ಕೃತಿಗಳನ್ನು ಓದಿದ ಮೇಲೆ ಬ್ರಹ್ಮಸಮಾಜದ ಪ್ರಭಾವದಿಂದ ಹೊರಬಂದರು ಎಂದು ಅವರ ಜೀವನ ಚರಿತ್ರಕಾರರು ಹೇಳುತ್ತಾರೆ). ಅಷ್ಟಕ್ಕೂ ಮನುಷ್ಯ ಅದೇಕೆ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಾನೆ? ಅವನಿಗೆ ಯಾರಿಂದ ಸ್ವಾತಂತ್ರ್ಯ ಬೇಕಾಗಿದೆ? ಸ್ವಾತಂತ್ರ್ಯ ಪ್ರಾಪ್ತಿಯಾದ ಮೇಲೆ ಮುಂದೇನು?

ಸ್ವಾತಂತ್ರ್ಯ ಪ್ರಾಪ್ತಿಯಾದ ಮೇಲೆ ಮನುಷ್ಯನೊಳಗಿನ ವಿಕಾರಗಳಿಗೂ ಸ್ವಾತಂತ್ರ್ಯ ಸಿಕ್ಕಿಬಿಡುವ ಅಪಾಯವಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಭಾರತೀಯರ ವಿಕಾರಗಳೆಲ್ಲವೂ ಪೂರ್ತಿಯಾಗಿ ಅನಾವರಣವಾದವು. ಸ್ವಾತಂತ್ರ್ಯ ಸಿಕ್ಕ ಮರುಗಳಿಗೆಯೇ ನಮ್ಮ ಭ್ರಷ್ಟಾಚಾರ, ಕೋಮುಹಿಂಸೆ, ಸೋಗಲಾಡಿತನಗಳು ಪರಾಕಾಷ್ಠೆ ತಲುಪಿದ್ದನ್ನು ಇತಿಹಾಸದಲ್ಲಿ ನಾವು ಕಾಣಬಹುದು.

ಆದ್ದರಿಂದಲೇ ಭಾರತೀಯ ಚಿಂತನೆ ಸ್ವಾತಂತ್ರ್ಯಪ್ರಾಪ್ತಿಯನ್ನು ಮನುಷ್ಯನ ಕಟ್ಟ ಕಡೆಯ ಆಯ್ಕೆ ಆಗಿರಬೇಕೆಂದು ಸೂಚಿಸುವುದು. ಧರ್ಮ, ಅರ್ಥ ಕಾಮ ಮುಂತಾದ ಬಂಧನಗಳ ಮೂಲಕ ಹಾದುಹೋಗಿ ತರುವಾಯ ಪರಮ ಪುರುಷಾರ್ಥವಾದ ಮೋಕ್ಷದತ್ತ ಅಂದರೆ ಸ್ವಾತಂತ್ರ್ಯದತ್ತ ಮುಖ ಮಾಡಬೇಕೆಂದು ನಮ್ಮ ಸ್ಮೃತಿಗಳು ನಿಗದಿಪಡಿಸುವುದು. ಈ ಹಂತದಲ್ಲಿ ಭಾರತೀಯರ ಸ್ವಾತಂತ್ರ್ಯ ಮೀಮಾಂಸೆ ಪಶ್ಚಿಮದ ಎಲ್ಲ ಸಿದ್ಧಾಂತಗಳಿಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತದೆ.

ಎಷ್ಟೇ ಆದರೂ ಸ್ವಾತಂತ್ರ್ಯವೆಂಬುದು ಒಂದು ಸಾಪೇಕ್ಷ ಪರಿಕಲ್ಪನೆಯಾಗಿದೆ. ಅವಳಿ ಕಲ್ಪನೆಗಳಾದ ಬಂಧನ ಮತ್ತು ಸ್ವಾತಂತ್ರ್ಯಗಳನ್ನು ಒಂದರಿಂದ ಒಂದನ್ನು ಬೇರ್ಪಡಿಸಿ ವಿವೇಚಿಸಲು ಬರುವುದಿಲ್ಲ. ನಾವು ಬಂಧನದ ಸಂಕೋಲೆಗಳಲ್ಲಿ ಯಾತನೆ ಪಡತ್ತಿರುವವರೆಗೂ ಗುಲಾಮರಂತೆ ಸ್ವಾತಂತ್ರ್ಯ ದೇವಿಯ ಪೂಜೆ, ಸ್ತುತಿ, ಆರಾಧನೆಗಳನ್ನು ನಡೆಸುತ್ತಲೇ ಇರುತ್ತೇವೆ. ಬಂಧನವೆಂಬುದೇ ಇಲ್ಲದ ಮೇಲೆ ‘ಸ್ವಾತಂತ್ರ್ಯ’ವೂ ತನ್ನ ಅಸ್ತಿತ್ವ ಕಳೆದುಕೊಂಡು ಬಿಡುತ್ತದೆ. ಅಂತಿಮವಾಗಿ ಸ್ವಾತಂತ್ರ್ಯ ನಮ್ಮ ನಿಜ ಸ್ವಭಾವವೇ ಆಗಿರುವ ಕಾರಣ ಅದನ್ನು ಸಂಪಾದಿಸಿಕೊಳ್ಳುವ ಪ್ರಯತ್ನ ವ್ಯರ್ಥ ಪ್ರಯತ್ನವಾಗಿದೆ ಎಂಬುದು ಭಾರತೀಯ ನಂಬಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT