ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ ಅಧ್ಯಕ್ಷ ಪದತ್ಯಾಗ ಮಾಡಲಿ

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಇನ್ಫೊಸಿಸ್‌ ನಿರ್ದೇಶಕ ಮಂಡಳಿಯ ಪುನರ್‌ರಚನೆಯ ಹಾದಿ ಸುಗಮಗೊಳಿಸಲು ಅಧ್ಯಕ್ಷ ಆರ್‌. ಶೇಷಸಾಯಿ ಮತ್ತು ಸಹ ಅಧ್ಯಕ್ಷ ರವಿ ವೆಂಕಟೇಷನ್‌ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಅವರು ಒತ್ತಾಯಿಸಿದ್ದಾರೆ.

‘ಹೊಸ ಸಿಇಒ ಶೋಧ ಕಾರ್ಯ ಆರಂಭಿಸುವ ಮೊದಲೇ ನಿರ್ದೇಶಕ ಮಂಡಳಿಯನ್ನು ಪುನರ್‌ರಚಿಸುವುದು ಮಹತ್ವದ ಸಂಗತಿಯಾಗಿದೆ. ಸಂಸ್ಥೆಯ ಸ್ಥಾಪಕರು ಮತ್ತು ದೊಡ್ಡ ಹೂಡಿಕೆದಾರರ ಜತೆ ಸಮಾಲೋಚನೆ ನಡೆಸಿ ನಿರ್ದೇಶಕ ಮಂಡಳಿಗೆ ಅರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬೇಕು. ಆನಂತರವೇ ಸಿಇಒ ಹುಡುಕಾಟಕ್ಕೆ ಚಾಲನೆ ನೀಡಬೇಕು. ಮಂಡಳಿಯ ಪುನರ್‌ರಚನೆ ಮಾಡದೆ ಹೊಸ ಸಿಇಒ ನೇಮಕ ಮಾಡಿಕೊಳ್ಳಲು ಮುಂದಾಗುವುದು ಆತ್ಯಹತ್ಯಾ ಕ್ರಮವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ನಿರ್ದೇಶಕ ಮಂಡಳಿಯ ಸಂಘಟಿತ ಹೊಣೆಗಾರಿಕೆಯ ವೈಫಲ್ಯವನ್ನು ಅಧ್ಯಕ್ಷ ಮತ್ತು ಸಹ ಅಧ್ಯಕ್ಷರು ಹೊತ್ತುಕೊಳ್ಳಬೇಕು. ಕಾರ್ಪೊರೇಟ್‌ ಆಡಳಿತ ನಿಯಮಗಳನ್ನು ಸಮರ್ಪಕವಾಗಿ ಜಾರಿಗೆ ತರದ ಹೊಣೆ ಹೊತ್ತುಕೊಂಡು ಅಧಿಕಾರದಿಂದ ನಿರ್ಗಮಿಸಬೇಕು.

‘ಕಾರ್ಪೊರೇಟ್‌ ಆಡಳಿತ ಪಾಲನೆಯ ವೈಫಲ್ಯ ಹೊತ್ತು ಲೆಕ್ಕಪತ್ರ ವಿಭಾಗದ ಮುಖ್ಯಸ್ಥೆ ರೂಪಾ ಕುಡ್ವ ಮತ್ತು ಸಂಭಾವನೆ ಸಮಿತಿಯ ಜೆಫ್ರಿ ಎಸ್‌. ಲೆಹ್ಮನ್‌ ಅವರು ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು.

‘ಲೆಕ್ಕಪತ್ರ ಸಮಿತಿಯ ಅಧ್ಯಕ್ಷೆಯು ಮಾಜಿ ಮುಖ್ಯ ಹಣಕಾಸು ಅಧಿಕಾರಿಗಳ ಗುತ್ತಿಗೆ ಒಪ್ಪಂದ ರದ್ದತಿಯ ಪರಿಹಾರ ನೀಡುವ ವಿಷಯವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಪರಿಹಾರ ನೀಡುವ ವಿಷಯ ಚರ್ಚೆಗೆ ಬಂದಾಗ ಸಂಭಾವನೆ ಸಮಿತಿ ಅಧ್ಯಕ್ಷರು ಸಹ ಇಂತಹ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಗಮನ ಹರಿಸಬೇಕಾಗಿತ್ತು. ಹಾಗೆ ಮಾಡದೆ ಕರ್ತವ್ಯಲೋಪ ಎಸಗಿದ್ದಾರೆ’ ಎಂದು ಬಾಲಕೃಷ್ಣನ್‌ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಪನಯಾ ಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ₹ 10 ಕೋಟಿ ವೆಚ್ಚ ಮಾಡಲಾಗಿದೆ. ಈ ಹಣ ಷೇರುದಾರರಿಗೆ ಸೇರಿದೆ. ಹೀಗಾಗಿ ತನಿಖೆಯ ಪ್ರತಿಯೊಂದು ವಿವರ ತಿಳಿದುಕೊಳ್ಳುವ ಹಕ್ಕು ಷೇರುದಾರರಿಗೆ ಇದೆ. ಹೀಗಾಗಿ ತನಿಖೆಯ ಸಂಪೂರ್ಣ ವರದಿಯನ್ನು ಬಹಿರಂಗಪಡಿಸಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ಷೇರುದಾರರು ನಾರಾಯಣಮೂರ್ತಿ ಅವರಂತೆ ಬಹಿರಂಗವಾಗಿ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ   ಎನ್ನುವ ಪ್ರಶ್ನೆಗೆ, ‘ಇಂತಹ ಸಂಗತಿಗಳನ್ನು ಬಹಿರಂಗವಾಗಿ ಚರ್ಚಿಸಲು ಭಾರತದ ಷೇರುದಾರರು  ಹಿಂದೇಟು ಹಾಕುತ್ತಾರೆ. ಬಹಿರಂಗವಾಗಿ ಖಾಸಗಿಯಾಗಿ ತಮ್ಮ ಅನಿಸಿಕೆ ಮತ್ತು ಕಳವಳಗಳನ್ನು ಸರಿಯಾದ ವ್ಯಕ್ತಿಗಳ ಬಳಿ ಖಾಸಗಿಯಾಗಿ ವ್ಯಕ್ತಪಡಿಸುತ್ತಾರೆ. ನನ್ನ ಜತೆ ಅನೇಕರು ಇಂತಹ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ಬಾಲಕೃಷ್ಣನ್‌ ಅಭಿಪ್ರಾಯ
ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT