ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಸಮತೋಲನದ ಸರ್ಕಸ್‌

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲಿಗೆ ಹೋದಾಗ ಒ.ಪನ್ನೀರ್‌ಸೆಲ್ವಂ (ಒಪಿಎಸ್‌) ಅವರನ್ನೇ ಮುಖ್ಯಮಂತ್ರಿಯಾಗಿ ನೇಮಿಸಿದ್ದರು. ಜಯಲಲಿತಾ ನಿಧನದ ಬಳಿಕವೂ ಒಪಿಎಸ್‌ ಮುಖ್ಯಮಂತ್ರಿಯಾಗಿದ್ದರು. ಆದರೆ ವಿಲೀನದ ಬಳಿಕ ಅವರು ಉಪ ಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ವಿಲೀನಗೊಂಡ ಬಳಿಕ ಎರಡೂ ಬಣಗಳ ನಡುವೆ ಅಧಿಕಾರದ ಸಮತೋಲನಕ್ಕಾಗಿ ಈ ವ್ಯವಸ್ಥೆಗೆ ಒಪಿಎಸ್‌ ಒಪ್ಪಿಕೊಂಡಿದ್ದಾರೆ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.

ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿದ್ದರೂ ಪಕ್ಷದಲ್ಲಿ ಅವರಿಗೆ ಸಂಯೋಜಕ ಸ್ಥಾನ ದೊರೆಯಲಿದೆ. ಸರ್ಕಾರದ ಮುಖ್ಯಸ್ಥರಾಗಿರುವ ಪಳನಿಸ್ವಾಮಿ ಅವರು ಪಕ್ಷದ ಸಹ ಸಂಯೋಜಕ ಆಗಲಿದ್ದಾರೆ. ಈ ಮೂಲಕ ಅಧಿಕಾರದ ಸಮತೋಲನಕ್ಕೆ ಪ್ರಯತ್ನಿಸಲಾಗಿದೆ.

ಎಐಎಡಿಎಂಕೆ ಎರಡು ಬಣಗಳಾಗಿ ವಿಭಜನೆಯಾದ ಬಳಿಕ ಪಕ್ಷದ ಎರಡೆಲೆ ಚಿಹ್ನೆಯನ್ನು ಚುನಾವಣಾ ಆಯೋಗ ಸ್ಥಗಿತಗೊಳಿಸಿತ್ತು. ಈಗ ಪಕ್ಷ ವಿಲೀನಗೊಂಡಿದೆ. ಹಾಗಾಗಿ ಎರಡೆಲೆ ಚಿಹ್ನೆ ಮರಳಿ ದೊರೆಯಬಹುದು ಎಂದು ಪಳನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಲೀನವನ್ನು ಚಾರಿತ್ರಿಕ ಎಂದು ಪನ್ನೀರ್‌ಸೆಲ್ವಂ ಬಣ್ಣಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ಈ ವಿಲೀನ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಅಣ್ಣಾ ಅಂದ ಒಪಿಎಸ್‌, ಇಪಿಎಸ್‌: ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ಪರಸ್ಪರರನ್ನು ಅಣ್ಣಾ ಎಂದು ಕರೆದರು. ವಿಲೀನಕ್ಕಾಗಿ ಅಣ್ಣ ಪನ್ನೀರ್‌ಸೆಲ್ವಂ ಅವರು ಬಹಳ ಶ್ರಮಿಸಿದ್ದಾರೆ ಎಂದು ಪಳನಿಸ್ವಾಮಿ ಹೇಳಿದರು. ಪನ್ನೀರ್‌ಸೆಲ್ವಂ ಮಾತನಾಡುವಾಗಲೂ ಪಳನಿಸ್ವಾಮಿ ಅವರನ್ನು ‘ಪ್ರೀತಿಯ ದೊಡ್ಡಣ್ಣ’ ಎಂದೇ ಕರೆದರು.

ಉಳಿವಿನ ಲೆಕ್ಕಾಚಾರ: ತಮಿಳುನಾಡು ವಿಧಾನಸಭೆಯ ಸದಸ್ಯ ಬಲ 234. ಇದರಲ್ಲಿ ಪಳನಿಸ್ವಾಮಿ ಬಣದಲ್ಲಿ ಗುರುತಿಸಿಕೊಂಡ ಶಾಸಕರ ಸಂಖ್ಯೆ 122. ಪನ್ನೀರ್‌ಸೆಲ್ವಂ ಅವರ ಜತೆಗೆ ಇರುವವರು ಒಂಬತ್ತು ಸದಸ್ಯರು ಮಾತ್ರ. ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಸೋದರಳಿಯ, ಪಕ್ಷದ ಉಪಪ್ರಧಾನ ಕಾರ್ಯದರ್ಶಿ ದಿನಕರನ್‌ ಅವರು ಇತ್ತೀಚೆಗೆ ಮದುರೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಎಐಎಡಿಎಂಕೆಯ 20 ಶಾಸಕರು ಮತ್ತು ಆರು ಸಂಸದರು ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ದಿನಕರನ್‌ ಹೇಳಿಕೊಂಡಿದ್ದರು.

ದಿನಕರನ್‌ ಪ್ರಬಲರಾಗುತ್ತಿದ್ದಾರೆ. ಅದನ್ನು ತಡೆಯುವುದಕ್ಕೆ ವಿಲೀನವಾಗದೆ ಬೇರೆ ದಾರಿಯೇ ಇಲ್ಲ ಎಂಬ ಕಾರಣಕ್ಕೆ ಎರಡೂ ಬಣಗಳು ವಿಲೀನ ಆಗಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಬೆಳಗ್ಗೆಯೂ ದಿನಕರನ್‌ ಅವರ ಮನೆಯಲ್ಲಿ 17 ಶಾಸಕರು ಸೇರಿದ್ದರು ಎಂದು ವರದಿಯಾಗಿದೆ. ಹಾಗಾಗಿ ಎಐಎ
ಡಿಎಂಕೆ ಸರ್ಕಾರದ ಸ್ಥಿರತೆಯ ಬಗ್ಗೆ ಪ್ರಶ್ನೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT