ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಫಲ್ಯಗಳಿಂದ ಪಾಠ ಕಲಿತಿರುವೆ

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಮನದಾಳ
Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಂಬುಲಾ: ‘ಸತತ ವೈಫಲ್ಯಗಳಿಂದಾಗಿ ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಾಗ ತುಂಬಾ ಬೇಸರವಾಗಿತ್ತು. ಅಂತಹ ಕಠಿಣ ಸಂದರ್ಭದಲ್ಲಿ ಎದೆಗುಂದಲಿಲ್ಲ. ಬದಲಾಗಿ ಆಪಾರ ಪರಿಶ್ರಮಪಟ್ಟೆ. ತಪ್ಪುಗಳಿಂದ ಹೊಸ ಪಾಠಗಳನ್ನು ಕಲಿತೆ. ಹೀಗಾಗಿ ಮತ್ತೆ ಅಂಗಳದಲ್ಲಿ ಮಿಂಚಲು ಸಾಧ್ಯವಾಗುತ್ತಿದೆ’ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್‌ ಧವನ್‌  ಹೇಳಿದ್ದಾರೆ.

ಭಾನುವಾರ ನಡೆದಿದ್ದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಧವನ್‌ ಶತಕ ಗಳಿಸಿದ್ದರು.

‘ಮುಂಬರುವ ಏಕದಿನ ವಿಶ್ವಕಪ್‌ವರೆಗೂ ಆಟದಲ್ಲಿ ಸ್ಥಿರತೆ ಕಾಯ್ದುಕೊಂಡು ಸಾಗಬೇಕು. ಆ ಸವಾಲು ಈಗ ಎದುರಿಗಿದೆ. ಈಗ ಯುವಕರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಆದ್ದರಿಂದ ತಂಡದಲ್ಲಿ ಸ್ಥಾನ ಗಳಿಸಲು ಭಾರಿ ಪೈಪೋಟಿ ಏರ್ಪಟ್ಟಿದೆ. ಒಬ್ಬರು ವೈಫಲ್ಯ ಕಂಡರೆ, ಅವರ ಸ್ಥಾನವನ್ನು ಮತ್ತೊಬ್ಬರು ಆಕ್ರಮಿಸುತ್ತಿದ್ದಾರೆ. ಈ ಬಗೆಯ ಆರೋಗ್ಯಕರ ಪೈಪೋಟಿ ಒಂದು ರೀತಿಯಲ್ಲಿ ಒಳ್ಳೆಯದೆ’ ಎಂದಿದ್ದಾರೆ.

‘2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ನನ್ನಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬಂದಿತ್ತು. ಈ ವರ್ಷ ನಡೆದ ಟೂರ್ನಿಯಲ್ಲೂ ದಿಟ್ಟ ಆಟ ಆಡಿದ್ದೆ. ಪ್ರತಿ ಬಾರಿ ಕಣಕ್ಕಿಳಿದಾಗಲೂ ಚೊಚ್ಚಲ ಪಂದ್ಯದಲ್ಲಿ ಆಡುತ್ತಿದ್ದೇನೆ ಎಂಬ ಭಾವನೆ ನನ್ನಲ್ಲಿ ಮನೆಮಾಡಿರುತ್ತದೆ. ಹೀಗಾಗಿಯೇ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತದೆ. ಇದೇ ನನ್ನ ಯಶಸ್ಸಿನ ಮಂತ್ರ’ ಎಂದು ನುಡಿದಿದ್ದಾರೆ.

‘ಕ್ರೀಡಾಪಟುಗಳಿಗೆ ಫಿಟ್‌ನೆಸ್‌ ಬಹುಮುಖ್ಯ. ಹೀಗಾಗಿ ಹೊಸ ಕೌಶಲಗಳನ್ನು ಕಲಿಯುವ ಜೊತೆಗೆ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಒತ್ತು ನೀಡುತ್ತೇನೆ. ಈ ಪಂದ್ಯದಲ್ಲಿ ಇಂತಿಷ್ಟೇ ರನ್‌ ಗಳಿಸಬೇಕು ಎಂಬ ಗುರಿಯನ್ನೇನೂ ಇಟ್ಟುಕೊಂಡಿರುವುದಿಲ್ಲ. ಕೆಟ್ಟ ಹೊಡೆತಗಳಿಗೆ ಕೈಹಾಕದೆ, ಉತ್ತಮವಾಗಿ ಆಡುವತ್ತ ಮಾತ್ರ ಗಮನ ಹರಿಸುತ್ತೇನೆ’ ಎಂದು ಹೇಳಿದ್ದಾರೆ.

‘ಭಾನುವಾರದ ಪಂದ್ಯದಲ್ಲಿ ಶ್ರೀಲಂಕಾ ತಂಡದವರು ಉತ್ತಮ ಆರಂಭವನ್ನೇ ಪಡೆದಿದ್ದರು. ಹೀಗಾಗಿ ಅವರು 300ಕ್ಕಿಂತಲೂ ಅಧಿಕ ರನ್‌ ಪೇರಿಸಬಹುದು ಎಂದುಕೊಂಡಿದ್ದೆ. ನಂತರ ನಮ್ಮ ಬೌಲರ್‌ಗಳು ಸತತವಾಗಿ ವಿಕೆಟ್‌ ಉರುಳಿಸಿದರು. ಹೀಗಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ಲಸಿತ್‌ ಮಾಲಿಂಗ ಅವರು ಶ್ರೀಲಂಕಾದ ದಿಗ್ಗಜ ಆಟಗಾರ. ಅವರು ಕ್ರಿಕೆಟ್‌ನ ಮೂರೂ ಮಾದರಿಗಳಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಈಗ ಅವರು ಹಿಂದಿನಷ್ಟು ವೇಗವಾಗಿ ಬೌಲ್‌ ಮಾಡಲು ಆಗುತ್ತಿಲ್ಲ. ಆದ್ದರಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರ ಓವರ್‌ಗಳಲ್ಲಿ ಲೀಲಾಜಾಲವಾಗಿ ರನ್‌ ಗಳಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಶ್ರೀಲಂಕಾವನ್ನು ದುರ್ಬಲ ತಂಡ ಎಂದು ಹೇಳುವುದು ಸರಿಯಲ್ಲ. ಅವರಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಎಡಗೈ ವೇಗಿ ವಿಶ್ವ ಫರ್ನಾಂಡೊ ತುಂಬಾ ಚೆನ್ನಾಗಿ ಬೌಲ್‌ ಮಾಡುತ್ತಾರೆ. ಈ ವರ್ಷ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ನಾವು, ಲಂಕಾ ವಿರುದ್ಧ ಸೋತಿದ್ದೆವು. ಅದನ್ನು ಯಾರೂ ಮರೆಯುವಂತಿಲ್ಲ’ ಎಂದರು.

’ನಮ್ಮ ತಂಡದಲ್ಲಿರುವ ಎಲ್ಲರೂ ಪ್ರಬುದ್ಧರಾಗಿದ್ದಾರೆ. ಯಾವ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬುದು ಎಲ್ಲರಿಗೂ ತಿಳಿದಿದೆ. ಒತ್ತಡವನ್ನು ಮೀರಿ ನಿಲ್ಲುವ ಕಲೆಯನ್ನು ಎಲ್ಲರೂ ಕರಗತ ಮಾಡಿಕೊಂಡಿದ್ದಾರೆ. ತಂಡದಲ್ಲಿರುವ ಅನುಭವಿಗಳು ಕಿರಿಯರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ಹೀಗಾಗಿ ನಾವು ಯಶಸ್ಸಿನ ಪಥದಲ್ಲಿ ಸಾಗುತ್ತಿದ್ದೇವೆ’ ಎಂದೂ ಶಿಖರ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT