ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಗಣಪನಿಗೆ ‘ಉಚಿತ ಆಟೊ ಸೇವೆ’

Last Updated 22 ಆಗಸ್ಟ್ 2017, 8:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿಯವರೆಗೂ ಪರಿಸರ ಕಾರ್ಯಕರ್ತರು, ಶಾಲಾ ಮಕ್ಕಳು ‘ಬಣ್ಣ ರಹಿತ ಗಣಪನನ್ನೇ ಕೂರಿಸಿ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ, ಜಲಮೂಲಗಳನ್ನು ರಕ್ಷಿಸಿ’ ಎಂದು ಜಾಗೃತಿ ಮೂಡಿಸುತ್ತಿದ್ದರು. ಈಗ ಅವರ ಜತೆ ನಗರದ ಭಾರತೀಯ ಮಜ್ದೂರ್ ಆಟೊ ಚಾಲಕರ ಸಂಘದವರು ದನಿಗೂಡಿಸಿದ್ದಾರೆ.

ತಮ್ಮ ಆಟೊಗಳ ಮೇಲೆ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ಕುರಿತ ಭಿತ್ತಿ ಪತ್ರಗಳನ್ನು ಅಂಟಿಸಿಕೊಂಡು ಪ್ರಚಾರ ಮಾಡಲು ಮುಂದಾಗಿದ್ದಾರೆ. ಜತೆಗೆ, ಹಬ್ಬದಂದು ಪರಿಸರ ಸ್ನೇಹಿ ಗಣೇಶ ವಿಗ್ರಹವನ್ನು ಮನೆಗೆ ಕೊಂಡೊಯ್ಯುವ ನಗರ ವಾಸಿಗಳಿಗೆ ಉಚಿತ ಆಟೊ ಸೇವೆ ಒದಗಿಸಲು ನಿರ್ಧರಿಸಿದ್ದಾರೆ.

ವಿವಿಧ ಶಾಲೆಯ ಮಕ್ಕಳು ಭಾನುವಾರ ಕಲಾ ಚೈತನ್ಯ ಸೇವಾ ಸಂಸ್ಥೆ, ಗುಬ್ಬಚ್ಚಿ ಟ್ರಸ್ಟ್, ಪರಿಸರ ತಂಡದೊಂದಿಗೆ ನಗರದ ತ್ಯಾಗರಾಜ ಮಾರುಕಟ್ಟೆ ಬಳಿ ‘ಪರಿಸರ ಸ್ನೇಹಿ ಗಣೇಶ’ ಕುರಿತು ಪ್ರಚಾರ ಮಾಡುತ್ತಿದ್ದ ವೇಳೆ, ಆಟೊ ಸಂಘದವರು ಎದುರಾಗಿದ್ದಾರೆ. ಪ್ರಚಾರ ಉದ್ದೇಶ ತಿಳಿಸಿದ ಮಕ್ಕಳು ಆಟೊ ಹಿಂಬದಿಗೆ ಭಿತ್ತಿ ಪತ್ರ ಅಂಟಿಸಿದ್ದಾರೆ.
ಈ ವೇಳೆ ಪರಿಸರ ಕಾರ್ಯಕರ್ತ ಡಾ.ಎಚ್.ಕೆ.ಸ್ವಾಮಿ, ‘ನೀವು ನಗರದಾದ್ಯಂತ ಓಡಾಡುತ್ತೀರಿ. ನಿತ್ಯ ನೂರಾರು ಮಂದಿಯ ಸಂಪರ್ಕದಲ್ಲಿರುತ್ತೀರಿ. ಈ ಪ್ರಚಾರದ ಉದ್ದೇಶವನ್ನು ಜನರಿಗೆ ತಲುಪಿಸಿ. ಪರಿಸರ ರಕ್ಷಣೆಗೆ ಕೈ ಜೋಡಿಸಿ’ ಎಂದು ಮನವಿ ಮಾಡಿದರು.

ಮಕ್ಕಳ ಪರಿಸರ ಕಾಳಜಿ ಹಾಗೂ ಸ್ವಾಮಿ ಅವರ ಸಲಹೆ ಒಪ್ಪಿದ ಭಾರತೀಯ ಮಜ್ದೂರ್ ಆಟೊ ಚಾಲಕರ ಸಂಘದ ಅಧ್ಯಕ್ಷ ಕೆ.ಕರಿಬಸವನಗೌಡರ್, ‘ಈ ಜಾಗೃತಿಗೆ ಕೈ ಜೋಡಿಸುತ್ತೇವೆ. ಗಣಪತಿ ಹಬ್ಬದಂದು ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಕೊಂಡೊಯ್ಯುವವರಿಗೆ ಉಚಿತ ಆಟೊ ಸೇವೆ ಒದಗಿಸುತ್ತೇವೆ’ ಎಂದು ಘೋಷಿಸಿದ್ದಾರೆ.

‘ಆಟೊ ಚಲಾಯಿಸುವ ನಮಗೂ ಪರಿಸರದ ಕಾಳಜಿ ಇದೆ. ನಗರ ವ್ಯಾಪ್ತಿಯಲ್ಲಿ ಯಾರೇ ಬಣ್ಣ ರಹಿತ ಅಥವಾ ಸಸ್ಯ ಬಣ್ಣಗಳಿಂದ ತಯಾರಿಸಿದ ಗಣಪತಿಗಳನ್ನ ಖರೀದಿಸಿದರೆ, ಆ ಸ್ಥಳದಿಂದ ಅವರ ಮನೆವರೆಗೆ ಅಥವಾ ಪೂಜಾ ಸಭಾಂಗಣದವರೆಗೆ ಉಚಿತವಾಗಿ ಆಟೊದಲ್ಲಿ ತಲುಪಿಸುತ್ತೇವೆ’ ಎಂದು ಹೇಳಿರು. ಅಲ್ಲದೇ, ತಮ್ಮ ಮೊಬೈಲ್‌ ಸಂಖ್ಯೆ (88926 71554) ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್ ಸಂಖ್ಯೆಯನ್ನೂ (99723 28399) ನೀಡಿದರು. ಕಲಾ ಚೈತನ್ಯ ಸೇವಾ ಸಂಸ್ಥೆಯ ಬೇದ್ರೆ ನಾಗರಾಜ, ಕೆ.ಕೆ.ಶಂಭು, ವಿಕ್ಕಿ, ಕಾರ್ತಿಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT