ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ತಪ್ಪದ ಪರದಾಟ

Last Updated 22 ಆಗಸ್ಟ್ 2017, 8:38 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಮೀಪದ ಕಾಶಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೂಲಸೌಕರ್ಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.
ಕಾಲೇಜಿನಲ್ಲಿ 2017–18ನೇ ಸಾಲಿನಲ್ಲಿ ಒಟ್ಟು 37 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದರಲ್ಲಿ 19 ವಿದ್ಯಾರ್ಥಿನಿಯರಿದ್ದಾರೆ. ಕಾಲೇಜು ಗ್ರಾಮೀಣ ಪ್ರದೇಶದಲ್ಲಿದ್ದರೂ ಗುಣಮಟ್ಟದ ಶಿಕ್ಷಣವನ್ನು ಅಧ್ಯಾಪಕರು ನೀಡುತ್ತಿದ್ದಾರೆ.

ಶೌಚಾಲಯದ ಕೊರತೆ: ಕಾಲೇಜು ಆರಂಭವಾಗಿ ಕೆಲ ವರ್ಷಗಳಾದರೂ ಶೌಚಾಲಯವೇ ಇರಲಿಲ್ಲ. ಈ ಬಾರಿ ಗ್ರಾಮ ಪಂಚಾಯ್ತಿಯಿಂದ ಎರಡು ಸಣ್ಣ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಇವನ್ನು ಬಾಲಕಿಯರು ಮತ್ತು ಉಪನ್ಯಾಸಕಿಯರು ಮಾತ್ರ ಬಳಸುತ್ತಿದ್ದಾರೆ. ಆದರೆ, ಒಬ್ಬರು ಹೋಗಿ ಬರುವವರೆಗೆ ಉಳಿದವರು ಸಾಲುಗಟ್ಟಿ ನಿಲ್ಲುವ ಸ್ಥಿತಿ ಇದೆ ಎಂದು ವಿದ್ಯಾರ್ಥಿನಿ ಪ್ರತಿನಿಧಿಗಳಾದ ಚೇತನಾ, ನೇತ್ರಾವತಿ ಹಾಗೂ ರೇಖಾ ಅವಲತ್ತುಕೊಳ್ಳುತ್ತಾರೆ.

ಪುರುಷರಿಗಿಲ್ಲ ಶೌಚಾಲಯದ ಭಾಗ್ಯ: ‘ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಪ್ರತ್ಯೇಕವಾದ ಶೌಚಾಲಯವೇ ಇಲ್ಲ. ಇದರಿಂದಾಗಿ ನಾವು ಸಮೀಪದ ಗಿಡಗಂಟಿಗಳ ಮರೆಯನ್ನೇ ಆಶ್ರಯಿಸುವಂತಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿ ಪ್ರತಿನಿಧಿಗಳಾದ ನವೀನ್‌, ನಿಂಗರಾಜ, ದೇವರಾಜ.

ಕುಡಿಯುವ ನೀರಿನ ಸಮಸ್ಯೆ: ಅಧ್ಯಾಪಕರು, ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಸಮಯದಲ್ಲಿ ಸಮೀಪದ ಮನೆಗಳಿಂದ ಅಥವಾ ಹಾಸ್ಟೆಲ್‌ನಿಂದ ನೀರನ್ನು ತಂದು ಊಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಾಂಪೌಂಡ್‌ ಇಲ್ಲ: ಕಾಲೇಜಿನ ಆವರಣದ ಸುತ್ತ ಇದುವರೆಗೂ ಸರ್ಕಾರ ಕಾಂಪೌಂಡ್‌ ನಿರ್ಮಿಸಿಲ್ಲ. ಇದರಿಂದಾಗಿ ಬೀಸುವ ಗಾಳಿಗೆ ಕಿಟಕಿಯ ಗಾಜುಗಳು ಒಡೆದುಹೋಗಿವೆ. ಮಳೆಯ ನೀರು ಮತ್ತು ಶೀತದ ಗಾಳಿ ಕೊಠಡಿಯೊಳಗೆ ಬರುವುದರಿಂದ ಅಧ್ಯಾಪಕರು ಪಾಠ ಮಾಡುವುದು ಕಷ್ಟವಾಗುತ್ತಿದೆ. ಅಲ್ಲದೆ, ನಾವು ಸರಿಯಾಗಿ ಪಾಠ ಕೇಳಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಅಧ್ಯಾಪಕರು ಪಾಠವನ್ನು ಚೆನ್ನಾಗಿ ಹೇಳಿಕೊಡುತ್ತಾರೆ. ಆದರೆ, ಇಲ್ಲಿನ ಸಮಸ್ಯೆಗಳಿಂದಾಗಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ದೂರದ ಚಿಕ್ಕಜಾಜೂರು ಅಥವಾ ಚಿತ್ರದುರ್ಗ ಮತ್ತಿತರ ಸ್ಥಳಗಳಿಗೆ ಕಳುಹಿಸುತ್ತಿದ್ದಾರೆ ಎನ್ನುತ್ತಾರೆ ದ್ವಿತೀಯ ಪಿಯು ವಿದ್ಯಾರ್ಥಿನಿಯರು.

ವಿದ್ಯುತ್ ಬಿಲ್ಲು ₹ 14,352: ಕಾಲೇಜಿನಲ್ಲಿ ಹಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲು, ಎಚ್‌ಸಿಎಲ್‌ ಕಂಪೆನಿಗೆ ಇಲಾಖೆ ಗುತ್ತಿಗೆ ನೀಡಿ ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅವಧಿ ಮುಗಿದ ನಂತರ, ಕಂಪ್ಯೂಟರ್‌ ಹೇಳಿಕೊಡುವ ಶಿಕ್ಷಕರನ್ನು ಕಂಪೆನಿಯಾಗಲಿ, ಪದವಿ ಪೂರ್ವ ಶಿಕ್ಷಣ ಇಲಾಖೆಯಾಗಲೀ ನೇಮಿಸಿಲ್ಲ. ಹೀಗಾಗಿ ಕಂಪ್ಯೂಟರ್‌ ಹಾಗೂ ಯುಪಿಎಸ್‌ ಮೂಲೆ ಗುಂಪಾಗಿವೆ. ವಿದ್ಯುತ್‌ ಬಳಕೆ ಇಲ್ಲದಿದ್ದರೂ, ಬೆಸ್ಕಾಂ ಪ್ರತಿ ತಿಂಗಳು ಬಿಲ್ಲನ್ನು ನೀಡುತ್ತಿದೆ.

2017ರ ಆಗಸ್ಟ್‌ 17ರಂದು ವಿತರಣೆ ಮಾಡಿರುವ ಬಿಲ್‌ ಪ್ರಕಾರ ಬೆಸ್ಕಾಂಗೆ ₹ 14,352 ಬಾಕಿ ಪಾವತಿಸಬೇಕಾಗಿದೆ. ಸ್ಥಳೀಯರ ಹಾಗೂ ಜನ ಪ್ರತಿನಿಧಿಗಳ ನೆರವಿನಿಂದ ಕಾಲೇಜಿನ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎನ್ನುತ್ತಾರೆ ಪ್ರಭಾರ ಪ್ರಾಚಾರ್ಯ ಬಿ. ಮಂಜುನಾಥ.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಅವರ ಸ್ವಕ್ಷೇತ್ರದಲ್ಲೇ ಶಿಕ್ಷಣಕ್ಕೆ ಇಂತಹ ದುಃಸ್ಥಿತಿ ಒದಗಿದರೆ ಹೇಗೆ? ಸಚಿವರು ಹಾಗೂ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ ಕಾಲೇಜಿನ ಅಭಿವೃದ್ಧಿಗೆ ಗಮನಹರಿಸಬೇಕು ಎಂದು ಗ್ರಾಮಸ್ಥರಾದ ಆಂಜಿನಪ್ಪ, ಕಾಂತರಾಜ್‌, ದೇವರಾಜ್‌, ಬಸವರಾಜ್‌ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT