ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕ ಕ್ರಮ

Last Updated 22 ಆಗಸ್ಟ್ 2017, 9:15 IST
ಅಕ್ಷರ ಗಾತ್ರ

ಕೋಲಾರ: ‘ಗೌರಿ ಗಣೇಶ ಮತ್ತು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ತಾತ್ಕಾಲಿಕ ಕ್ರಮ ತೆಗೆದುಕೊಂಡು ನಂತರ ಇ–ಟೆಂಡರ್ ಮೂಲಕ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು’ ಎಂದು ನಗರಸಭೆ ಸದಸ್ಯರು ಸರ್ವಾನುಮತದ ನಿರ್ಣಯ ಕೈಗೊಂಡರು.

ನೀರಿನ ಸಮಸ್ಯೆ ಸಂಬಂಧ ಇಲ್ಲಿನ ನಗರಸಭೆಯಲ್ಲಿ ಸೋಮವಾರ ನಡೆದ ತುರ್ತು ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಪಕ್ಷಬೇಧ ಮರೆತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಲು ಜಿಲ್ಲಾಡಳಿತವೇ ಕಾರಣ ಎಂದು ಸದಸ್ಯರು ಆರೋಪಿಸಿದರು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಮಹಾಲಕ್ಷ್ಮಿ, ‘ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್ ಮಾಲೀಕರ ವಿರುದ್ಧ ಎಸ್ಮಾ ಅಡಿ ಪ್ರಕರಣ ದಾಖಲಿಸಿರುವ ಸಂಗತಿಯನ್ನು ನನ್ನ ಗಮನಕ್ಕೆ ಯಾಕೆ ತರಲಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಟ್ಯಾಂಕರ್ ಮಾಲೀಕರಿಗೆ ಬಿಲ್ ಪಾವತಿಸದ ಕಾರಣ ಅವರು ನೀರು ಪೂರೈಕೆ ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿದ್ದರು. ಬಿಲ್‌ ಕೊಡದಿದ್ದರೆ ಅವರು ಹೇಗೆ ಟ್ರ್ಯಾಕ್ಟರ್‌ ನಿರ್ವಹಣೆ ಮಾಡಬೇಕು, ಚಾಲಕರು ಮತ್ತು ಕೆಲಸಗಾರರಿಗೆ ಹೇಗೆ ಸಂಬಳ ಕೊಡಬೇಕು, ಡೀಸೆಲ್‌ ಹೇಗೆ ಖರೀದಿಸಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ನೀರಿನ ಮೂಲಗಳಿಲ್ಲ: ಸದಸ್ಯರಾದ ಎಸ್.ಆರ್.ಮುರಳೀಗೌಡ ಮತ್ತು ನಾರಾಯಣಸ್ವಾಮಿ ಮಾತನಾಡಿ, ‘ನಗರದಲ್ಲಿ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಪ್ರತಿಯೊಬ್ಬರು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಟ್ಯಾಂಕರ್‌ ಮಾಲೀಕರ ವಿರುದ್ಧ ಏಕಾಏಕಿ ಎಸ್ಮಾ ಜಾರಿ ಮಾಡಿರುವುದು ಎಷ್ಟು ಸರಿ’ ಎಂದು ಕಿಡಿಕಾರಿದರು.

ಎಸ್ಮಾ ಜಾರಿ ಮಾಡಿದ ಜಿಲ್ಲಾಧಿಕಾರಿಯು ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಟ್ಯಾಂಕರ್‌ಗಳನ್ನು ಜಪ್ತಿ ಮಾಡಿ ಬೇರೆ ಚಾಲಕರಿಂದ ನೀರು ಸರಬರಾಜು ಮಾಡಿಸಬೇಕಿತ್ತು. ಆದರೆ, ಇದ್ಯಾವುದನ್ನು ಮಾಡದೆ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಮೊದಲು ನೀರು ಕೊಡಿ: ‘ನನ್ನ ವಾರ್ಡ್‌ನಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಮೇಲ್ವರ್ಗದ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಜನರಿಗೆ ಉತ್ತರ ಕೊಡಲು ಅಗುತ್ತಿಲ್ಲ. ನಮಗೆ ಮೊದಲು ನೀರು ಕೊಡಿ’ ಎಂದು 13ನೇ ವಾರ್ಡ್‌ ಸದಸ್ಯ ರವೀಂದ್ರ ಒತ್ತಾಯಿಸಿದರು.

ಸದಸ್ಯ ಅಫ್ರೋಜ್‌ ಪಾಷಾ ಮಾತನಾಡಿ, ‘ಜಿಲ್ಲಾಡಳಿತವು ನಗರಸಭಾ ಸದಸ್ಯರನ್ನು ಕಳ್ಳರಂತೆ ನೋಡುತ್ತಿದೆ. ಇದ ಸರಿಯಲ್ಲ. ನೀರಿನ ಸಮಸ್ಯೆಗೆ ಅಧಿಕಾರಿಗಳ ವೈಫಲ್ಯವೇ ಕಾರಣ. 16 ಮತ್ತು 17ನೇ ವಾರ್ಡ್‌ಗಳಲ್ಲಿ ವಾರಕ್ಕೆ ನಾಲ್ಕೈದು ದಿನ ಟ್ಯಾಂಕರ್‌ ನೀರು ಬರುತ್ತದೆ. ಆದರೆ, ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಇಷ್ಟ ಬಂದಂತೆ ವರದಿ ಬರೆದುಕೊಂಡು ಹೋಗಿದ್ದಾರೆ’ ಎಂದರು.

ನಗರಸಭಾ ಸದಸ್ಯರ ಗಮನಕ್ಕೆ ತರದೆ ಟ್ಯಾಂಕರ್ ಮಾಲೀಕರ ವಿರುದ್ಧ ಎಸ್ಮಾ ಜಾರಿಗೊಳಿಸಿರುವ ಆಯುಕ್ತ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಕಳುಹಿಸಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಪಟ್ಟು ಹಿಡಿದರು.

ಅಧಿಕಾರ ಇಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾಧಿಕಾರಿ ಹಾಗೂ ನಗರಸಭೆ (ಪ್ರಭಾರ) ಆಯುಕ್ತರಾದ ರೇಣುಕಾ, ‘ಪೌರಾಡಳಿತ ಕಾಯ್ದೆ ಪ್ರಕಾರ ಆಯುಕ್ತರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬಹುದು. ಆದರೆ, ಜಿಲ್ಲಾಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡುವ ಅಧಿಕಾರ ನಗರಸಭೆಗೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ನಗರದ ಸುತ್ತಮುತ್ತಲಿನ ರೈತರು ತಮ್ಮ ಕೊಳವೆ ಬಾವಿಗಳಿಗೆ ಬಾಡಿಗೆ ಆಧಾರದಲ್ಲಿ ನೀರು ಕೊಟ್ಟರೆ ಹಣ ಪಾವತಿಸಲಾಗುತ್ತದೆ.  ಟ್ಯಾಂಕರ್‌ ಮಾಲೀಕರು ಟೆಂಡರ್‌ನಲ್ಲಿ ಪಾಲ್ಗೊಂಡರೆ ಶೀಘ್ರವೇ ಕಾರ್ಯಾದೇಶ ನೀಡುವುದರ ಜತೆಗೆ ಸಕಾಲಕ್ಕೆ ಬಿಲ್‌ ಪಾವತಿಸಲಾಗುತ್ತದೆ ಎಂದು ಭರವಸೆ ನೀಡಿದರು.

‘ಎಲ್ಲಾ ವಾರ್ಡ್‌ಗಳಲ್ಲೂ ನೀರಿನದೆ ದೊಡ್ಡ ಸಮಸ್ಯೆ. ಸುಮ್ಮನೆ ಗಂಟೆಗಟ್ಟಲೆ ಚರ್ಚೆ ಮಾಡಿ ಪ್ರಯೋಜನವಿಲ್ಲ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಗೌರಿ ಗಣೇಶ ಹಬ್ಬ ಹಾಗೂ ಬಕ್ರೀದ್‌ ಹಬ್ಬಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು’ ಎಂದು ಮಹಾಲಕ್ಷ್ಮಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT