ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ: ಕಾಮಗಾರಿಗೆ ಶಂಕುಸ್ಥಾಪನೆ

Last Updated 22 ಆಗಸ್ಟ್ 2017, 9:19 IST
ಅಕ್ಷರ ಗಾತ್ರ

ಕೋಲಾರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.27ರಂದು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ತಿಳಿಸಿದರು. ಮುಖ್ಯಮಂತ್ರಿಯು ಜಿಲ್ಲೆಗೆ ಭೇಟಿ ನೀಡಲಿರುವ ಕಾರಣ ನಗರದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳು ತಮ್ಮ ಇಲಾಖೆ ಆಗುಹೋಗುಗಳ ಮಾಹಿತಿಯನ್ನು ಮುಖ್ಯಮಂತ್ರಿಗೆ ಸ್ಪಷ್ಟವಾಗಿ ನೀಡಬೇಕು ಎಂದು ಸೂಚಿಸಿದರು.

ಮುಖ್ಯಮಂತ್ರಿ ಅವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಜಿಲ್ಲಾಡಳಿತ ಭವನ, ಅರಸು ಭವನ, ಕನ್ನಡ ಭವನ ಹಾಗೂ ಸ್ಕಾಟ್ಸ್ ಗಾರ್ಮೆಂಟ್ಸ್‌ ಕಟ್ಟಡ ಲೋಕಾರ್ಪಣೆ ಮಾಡುತ್ತಾರೆ. ಜತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಚಿಕಿತ್ಸಾ ಕೇಂದ್ರ, ಡಿಜಿಟಲ್ ನರ ಕೇಂದ್ರಕ್ಕೆ (ಡಿಜಿಟಲ್ ನರ್ವ್ ಸೆಂಟರ್) ಶಂಕುಸ್ಥಾಪನೆ ನೆರವೇರಿಸುತ್ತಾರೆ ಎಂದು ವಿವರಿಸಿದರು.

‘4 ವರ್ಷ ಉತ್ತಮ ಆಡಳಿತ ನೀಡಿರುವ ಮುಖ್ಯಮಂತ್ರಿಯವರು ದೂರದೃಷ್ಟಿಯಿಂದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಟಾಟಾ ಸಂಸ್ಥೆಯವರು 3 ತಿಂಗಳಲ್ಲಿ ಸುಮಾರು ₹ 10 ಕೋಟಿ ವೆಚ್ಚದಲ್ಲಿ ಡಿಜಿಟಲ್ ನರ ಕೇಂದ್ರ ಆರಂಭಿಸಲಿದ್ದು, ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ವೇಗವಾಗಿ ವೈದ್ಯಕೀಯ ಸೇವೆ ಸಿಗುತ್ತದೆ. ಸ್ಕಾಟ್ಸ್ ಗಾರ್ಮೆಂಟ್ಸ್ ಕಾರ್ಯಾರಂಭದಿಂದ 2,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರೈಲ್ವೆ ಕೋಚ್ ಕಾರ್ಖಾನೆ, ಮೆಗಾ ಡೇರಿ, ಮಾವು ಸಂರಕ್ಷಣೆ ಘಟಕ ಸ್ಥಾಪನೆಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಬಹುದು. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪೋಡಿಮುಕ್ತ ಜಿಲ್ಲೆ: ಪೋಡಿ ವಿಚಾರದಲ್ಲಿ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರಿ ಕಚೇರಿಗೆ ಅಲೆದಾಡುವುದರ ಜತೆಗೆ ಲಂಚದ ಹಾವಳಿಗೆ ಬಲಿಯಾಗುತ್ತಿದ್ದಾರೆ. ಕನ್ನಡ ರಾಜ್ಯೋತ್ಸವದೊಳಗೆ ಜಿಲ್ಲೆಯನ್ನು ಪೋಡಿಮುಕ್ತ ಜಿಲ್ಲೆಯಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಭೆಗೆ ಸರಿಯಾದ ಮಾಹಿತಿ ನೀಡದ ಬೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಚೌಡಪ್ಪ ವಿರುದ್ಧ ಅಸಮಾಧಾನಗೊಂಡ ಸಚಿವರು, ‘ಬೆಸ್ಕಾಂನವರು ಬಹಳ ಸೋಮಾರಿಗಳಾಗಿದ್ದೀರಿ. ಜಿಲ್ಲೆಯಲ್ಲಿ ವಿದ್ಯುತ್‌ ಸಮಸ್ಯೆ ಗಂಭೀರವಾಗಿದ್ದರೂ ಬೇಜವಾಬ್ದಾರಿಯುತವಾಗಿ ನಡೆದು ಕೊಳ್ಳುತ್ತಿದ್ದೀರಿ. ಹೊಸ ಸಬ್ ಸ್ಟೇಷನ್‌ಗೆ ಎಲ್ಲಿ ಜಾಗ ಬೇಕೆಂದು ಕೇಳಿದರೆ ಜಾಗದ ವ್ಯವಸ್ಥೆ ಮಾಡಲಾಗುವುದು. ಶೀಘ್ರವೇ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳು ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿ’ ಎಂದು ತಾಕೀತು ಮಾಡಿದರು.

ಅರಸು ಭವನ: ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಎ.ಗೌಂಡಿ ಮಾತನಾಡಿ, ‘₹ 1.25 ಕೋಟಿ ಅಂದಾಜು ವೆಚ್ಚದಲ್ಲಿ ಅರಸು ಭವನ ನಿರ್ಮಿಸಲಾಗಿದೆ. ಕಾಂಪೌಂಡ್ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳುಬಾಕಿ ಇದ್ದು, ಉಳಿಕೆ ಕಾಮಗಾರಿಗೆ ₹ 37 ಲಕ್ಷ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಭವನಗಳು ಸಭೆ ಸಮಾರಂಭ ಅಥವಾ ಕಚೇರಿ ಉದ್ದೇಶಕ್ಕೆ ಸೀಮಿತವಾಗುವುದಕ್ಕಿಂತ ಅಧ್ಯಯನ ಕೇಂದ್ರಗಳಾಗಿ ಬಳಕೆಯಾಗಬೇಕು. ಆಗ ಸಾಕಷ್ಟು ಮಂದಿಗೆ ಅನುಕೂಲವಾಗುತ್ತದೆ’ ಎಂದು ಸಚಿವರು ಸಲಹೆ ನೀಡಿದರು.

ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT