ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿಗೆ ಹಾಡಲು ಕಲಿಸಿ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಒತ್ತಡ ಎನ್ನುವುದು ಮನಸ್ಸಿನ ದಣಿವು. ಯಾವಾಗ ನಮ್ಮ ಮನಸ್ಸು ದಣಿಯುತ್ತದೆಯೋ, ಆಗ ನಮ್ಮ ಚೈತನ್ಯ ಕುಸಿಯುತ್ತದೆ. ತಿಂದ ತಿನಿಸಿನ ರುಚಿ ಗ್ರಹಿಸಲು ಸಾಧ್ಯವಾಗುವುದಿಲ್ಲ; ಕಣ್ಣೆದುರಿಗೆ ಕಾಣಿಸುವುದೆಲ್ಲವೂ ನೀಚ ಎನಿಸತೊಡಗುತ್ತದೆ. ಜನರನ್ನು ಕಂಡರೆ ಕಿರಿಕಿರಿಯಾಗುತ್ತದೆ, ಅವರು ನಮ್ಮಲ್ಲಿ ಭಯ ಹುಟ್ಟಿಸುತ್ತಾರೆ. ಏನೇ ಮಾಡಹೊರಟರೂ ಅಸ್ವಸ್ಥತೆಯ ಭಾವ ಕಾಡಗೊಡಗುತ್ತದೆ.

ಹಾಗಾದರೆ ಮನಸ್ಸಿನ ಈ ದಣಿವಿಗೆ ಕಾರಣವೇನು?
ಮನಸ್ಸು ನಿರಂತರವಾಗಿ ತನ್ನ ಬಗ್ಗೆ, ಸುತ್ತಲಿನ ಸನ್ನಿವೇಶಗಳ ಬಗ್ಗೆ, ಜನರ ಬಗ್ಗೆ ನಿರ್ಣಯಗಳನ್ನು ನೀಡಲು ಶುರುಮಾಡಿದಾಗ ಒತ್ತಡಕ್ಕೆ ಒಳಗಾಗುತ್ತದೆ. ದಣಿಯುತ್ತದೆ.ಕೊಂಬೆಯ ಮೇಲೆ ಸ್ವಚ್ಛಂದವಾಗಿ ಕೂತಿರುವ ಹಕ್ಕಿಯನ್ನು ನೋಡಿ. ಅದಕ್ಕೆ ಯಾವ ಹೇಳಿಕೆಗಳ ಹಂಗೂ ಇಲ್ಲ! ಯಾವ ವ್ಯಾಖ್ಯಾನಗಳ ಚೌಕಟ್ಟಿಗೂ ಒಳಪಡದ ಮನಸ್ಸಿನಲ್ಲಿ ಹಾಡು ಹುಟ್ಟಿಕೊಳ್ಳುತ್ತದೆ!

ನಿಮ್ಮ ಮನಸ್ಸಿಗೂ ಹಾಡಲು ಕಲಿಸಿ!
ನೀವು ಕೇಳಬಹುದು. ‘ನಾನೂ ಹೇಳಿಕೆಗಳನ್ನು ನೀಡಬೇಕು. ನನ್ನ ಅಭಿಪ್ರಾಯಗಳು ಹಂಚಿಕೊಳ್ಳಲು ಯೋಗ್ಯವಲ್ಲವೇ?’.ಕಾಗೆ ಮತ್ತು ಗಿಣಿಯ ಕಥೆಯನ್ನು ನೀವು ಕೇಳಿರಬೇಕಲ್ಲ. ಜಗತ್ತಿನ ಸೃಷ್ಟಿಕಾರ್ಯ ನಡೆಯುತ್ತಿದ್ದಾಗ ಕಾಗೆ ಮತ್ತು ಗಿಣಿ ಒಂದೇ ಸಲ ಸೃಷ್ಟಿಯಾದವಂತೆ. ಎರಡೂ ನೋಡಲು ಹೆಚ್ಚು ಕಡಿಮೆ ಒಂದೇ ರೀತಿ ಇದ್ದವು. ಕಾಗೆ ಕಪ್ಪು ಬಣ್ಣದ್ದಾಗಿದ್ದರೆ ಗಿಣಿ ತಿಳಿಬೂದು ಬಣ್ಣದ ಮೈಬಣ್ಣ ಹೊಂದಿತ್ತು. ಕಾಗೆ ಸುಮ್ಮನೇ ಕೂತಿತ್ತು. ಆದರೆ ಗಿಣಿ ಹಾಗಲ್ಲ, ಕಿರುಚಾಡಿತು. ಪ್ರತಿಭಟಿಸಿತು. ದೂರಿತು, ಬೇಡಿಕೊಂಡಿತು...

ನನ್ನ ಮೈಬಣ್ಣ ಎಲೆಯಷ್ಟೇ ಹಸಿರಾಗಿರಬೇಕು. ನನ್ನ ಕೊಕ್ಕು ಕಡುಕೆಂಪಾಗಿರಬೇಕು, ನನಗೆ ಮಾತನಾಡಲು ಬರಬೇಕು... ಹೀಗೆ ಒಂದರ ಹಿಂದೊಂದು ಹೇಳಿಕೆಗಳನ್ನು ನೀಡುತ್ತಲೇ ಹೋಯಿತು. ಅದರ ಹೇಳಿಕೆ ಸೃಷ್ಟಿಕರ್ತನ ಕಿವಿಗೆ ತಲುಪಿ ಸಿದ್ಧಿಯೂ ಆಯಿತು. ಇಂದು  ಆ ಮಾತನಾಡುವ ಚಂದದ ಗಿಣಿ ಪಂಜರದಲ್ಲಿದೆ. ಕಾಗೆ ಆರಾಮವಾಗಿ ಆಕಾಶದಲ್ಲಿ ಹಾರಾಡಿಕೊಂಡಿದೆ!

ಹೇಳಿಕೆಗಳ ಭಾರದಿಂದ ತಪ್ಪಿಸಿಕೊಳ್ಳಿ: ನಿಮ್ಮ ಹಲವು ಅಭಿಪ್ರಾಯಗಳು ನಿಮ್ಮ ಮನಸ್ಸಿಗೆ ಪಂಜರವಾಗಿ ಪರಿಣಮಿಸಬಹುದು. ತುಂಬ ಜನರಿಗೆ ಈ ಸಂಗತಿ ಅರ್ಥವೇ ಆಗುವುದಿಲ್ಲ. ಅನಗತ್ಯ ಹೇಳಿಕೆಗಳ ಭಾರದಿಂದ ಅವರ ಉಸಿರಾಟ ಅಸಹಜವಾಗುತ್ತದೆ. ಒಂದು ಕಡೆಯಲ್ಲಿ ನೆಮ್ಮದಿಯಿಂದ ಕೂಡಲಾಗದೆ ಚಡಪಡಿಸುತ್ತಾರೆ.

ನಮಗೆ ನಾವೇ ನೀಡಿಕೊಳ್ಳಬಹುದಾದ ಶ್ರೇಷ್ಠ ಉಡುಗೊರೆ ಎಂದರೆ, ಒಂದು ಕಡೆಯಲ್ಲಿ ಪ್ರಶಾಂತವಾಗಿ ಕುಳಿತುಕೊಂಡು, ನಮ್ಮೊಳಗಿನ ಮೌನದಲ್ಲಿ ಮಗ್ನರಾಗಿ, ಆಳವಾಗಿ ಉಸಿರಾಡುತ್ತ ಹಗುರಗೊಳ್ಳುವುದು. ಹೀಗೆ ತಮ್ಮೊಳಗಿನ ಜಗತ್ತಿನೊಂದಿಗೆ ಸಂವಾದಿಸುವ ಸಾಧ್ಯತೆಯನ್ನು ಸಾಧ್ಯವಾದಷ್ಟೂ ಹೆಚ್ಚು ಜನರು ಕಂಡುಕೊಳ್ಳಬೇಕು. ಯಾಕೆಂದರೆ ಇದು ಪ್ರತಿಯೊಬ್ಬ ಮನುಷ್ಯನೂ ಅನುಭವಿಸಬಹುದಾದ ಆನಂದ.

ಪ್ರಶಾಂತತೆ ಮನಸ್ಸಿನ ಆರೋಗ್ಯದ ಲಕ್ಷಣ. ಶಾಂತಿ, ಸಂತೋಷವನ್ನು ನೀಡುತ್ತದೆ. ಸ್ವಾತಂತ್ರ್ಯವನ್ನು ಕೊಡುತ್ತದೆ. ಆ ಸ್ವಾತಂತ್ರ್ಯ ನನ್ನ ಅಭಿಪ್ರಾಯಗಳಿಂದ ಸಿಗುವುದು ತೀರಾ ವಿರಳ! ಅಭಿಪ್ರಾಯಗಳು ಸಾಮಾನ್ಯವಾಗಿ ಮಾಧುರ್ಯ ಹುಟ್ಟಿಸುವುದಿಲ್ಲ. ಅವು ಬಿರುಸಾಗಿರುವುದೇ ಹೆಚ್ಚು, ಟೀಕೆ, ದೂರು, ದೂಷಣೆಗಳಿಂದ ಕೂಡಿರುವುದೇ ಹೆಚ್ಚು. ಅದರಿಂದ ನಮ್ಮ ಮನಸ್ಸು ಕದಡುತ್ತದೆ. ಆದ್ದರಿಂದ ನಾವು ನಮ್ಮ ಅಭಿಪ್ರಾಯಗಳನ್ನು ಸರಿಯಾದ ದಿಕ್ಕಿನಲ್ಲಿ ರೂಪಿಸುವುದು ತುಂಬ ಮಹತ್ವದ್ದು. ನನ್ನ ಅಭಿಪ್ರಾಯಗಳು ನನ್ನನ್ನು ಸೌಹಾರ್ಯತೆ, ಶಾಂತಿ, ಸಂತೋಷ, ಸ್ವಾತಂತ್ರ್ಯ ಮತ್ತು ಸ್ವಸ್ಥತೆಯ ಕಡೆಗೆ ಒಯ್ಯುತ್ತದೆ ಎಂದಾದರೆ ಖಂಡಿತವಾಗಿಯೂ ಅಂಥ ಅಭಿಪ್ರಾಯಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಆಂತರಿಕವಾಗಿ ನಾವು ಸ್ವತಂತ್ರರಾಗುತ್ತೇವೆ.

ಆದರೆ ನಮ್ಮ ಅಭಿಪ್ರಾಯಗಳು ಬಹಳ ಸಂದರ್ಭಗಳಲ್ಲಿ ಸಮಾಜವನ್ನು ತಿದ್ದುವುದಕ್ಕಾಗಿಯೇ ರೂಪುಗೊಂಡಿರುತ್ತದೆ. ನಿರಂತರವಾಗಿ ಆ ಬಗ್ಗೆಯೇ ಯೋಚಿಸುವುದು, ಯೋಜಿಸುವುದು, ನಿಯುಂತ್ರಿಸುವುದು, ಇತರರನ್ನು ತಿದ್ದುವುದು, ದೂರುವುದು ಇವೇ ಮುಖ್ಯವಾದಾಗ ಅದು ಮನಸ್ಸಿಗೆ ದಣಿವನ್ನು ತರುತ್ತದೆ. ನಮ್ಮ ನಿದ್ದೆಯನ್ನು ಕದಿಯುತ್ತದೆ. ನಿದ್ರೆಮಾತ್ರೆಗಳು, ನೋವು ನಿವಾರಕ ಔಷಧಗಳ ಅವಶ್ಯಕತೆ ಬರುತ್ತದೆ. ಖಿನ್ನತೆ ಆವರಿಸುತ್ತದೆ. ಇದರಿಂದ ನಮ್ಮ ದೇಹವೂ ಜರ್ಜರಿತವಾಗುತ್ತದೆ. ನಮ್ಮದೇ ಅಭಿಪ್ರಾಯಗಳ ಭಾರದಿಂದ ನಾವು ಛಿದ್ರವಾಗುತ್ತೇವೆ.

ಬದುಕಿನ ಹಾಡು ಹಾಡೋಣ: ಬದುಕಿನ ಹಾಡು ಇರುವುದು ನಾವೆಲ್ಲರೂ ಹಾಡಲಿಕ್ಕಾಗಿ. ಕ್ಷುಲ್ಲಕ ಕೆಲಸಗಳಲ್ಲಿ ಮುಳುಗಿಹೋಗಲಿಕ್ಕಾಗಿಯಲ್ಲ. ಯಾರ ಬದುಕೂ ಪರಿಪೂರ್ಣವಲ್ಲ. ಬಚ್ಚಲಲ್ಲಿನ ಎಲ್ಲ ಪಾತ್ರೆಗಳನ್ನೂ ಒಂದೇ ಸಲಕ್ಕೆ ತೊಳೆಯಬೇಕಿಲ್ಲ. ಆಡಬೇಕಿರುವ ಮಾತುಗಳನ್ನೆಲ್ಲ ಒಂದೇ ಫೋನ್‌ ಕರೆಯಲ್ಲಿ ಮುಗಿಸಬೇಕಿಲ್ಲ. ಓದಲು ಶುರುಮಾಡಿದ ಪುಸ್ತಕವನ್ನು ಒಂದೇ ಸಲ ಮುಗಿಸಬೇಕಿಲ್ಲ. ಬದುಕಿನ್ನೂ ಉಳಿದಿರುತ್ತದೆ. ಸಾವಧಾನವಾಗಿರಿ.

ಆರೋಗ್ಯಕರ ಮನಸ್ಸು ನಿಜವಾದ ಆಸ್ತಿ. ಅದು ಚುರುಕಾಗಿರುತ್ತದೆ. ಪ್ರತಿಭಾಶಾಲಿಯಾಗಿರುತ್ತದೆ. ಖುಷಿಯಿಂದ ಕೂಡಿರುತ್ತದೆ. ಅಂಥ ಮನಃಸ್ಥಿತಿಯನ್ನು ಸಂಪಾದಿಸಿದ ನಂತರ ನೀವು ಗುಡಿಸಲಿನಲ್ಲಿದ್ದರೂ ಅರಮನೆಯಲ್ಲಿದ್ದ ಭಾವವನ್ನು ಅನುಭವಿಸುತ್ತಿರುತ್ತೀರಿ. ಜನರಲ್ಲಿಯೇ ದಿವ್ಯತೆಯನ್ನು ದೈವಿಕತೆಯನ್ನು ಕಾಣಲು ಸಾಧ್ಯವಾಗುತ್ತದೆ.

ಸರಳವಾದ ಆಹಾರವೇ ಅದ್ಭುತವಾದ ರುಚಿ ಕೊಡುತ್ತದೆ. ಯಾರಾದರೂ ನಿಮ್ಮನ್ನು, ನಿಮ್ಮ ಬದುಕಿನ ಶೈಲಿಯನ್ನು ಟೀಕಿಸಿದರೆ ತುಂಬ ಪ್ರಾಮಾಣಿಕವಾಗಿ, ಸಹಜವಾಗಿ ‘ಓ ಹೌದೇ?’ ಎಂದು ಕೇಳಲು ಸಾಧ್ಯವಾಗುತ್ತದೆ. ಟೀಕೆಗಳಿಂದ ನಿಮ್ಮ ಮನಸ್ಸು ಕದಡುವುದಿಲ್ಲ. ತಾಜಾ ತಾಜಾ ಮಂದಹಾಸವೊಂದು ನಿಮ್ಮ ಮುಖದಲ್ಲಿ ನೆಲೆಸುತ್ತದೆ. ಹೃದಯ ಶಾಂತಿಯಲ್ಲಿದ್ದರೆ ಎಷ್ಟೋ ರೋಗಗಳು ಹತ್ತಿರ ಸುಳಿಯುವುದಿಲ್ಲ. ಏನೋ ಒಂದು ಖಾಲಿಯಾಗಿ ಇನ್ನೇನೋ ಜೀವತಳೆಯುತ್ತದೆ. ಇದೊಂದು ಬಗೆಯ ಶಮನಪ್ರಕ್ರಿಯೆ. ತುಂಬ ಸುಂದರವಾದ ಪ್ರಕ್ರಿಯೆ. ನಮ್ಮನ್ನು ಹಾಡುವಂತೆ ಮಾಡುವ ಪ್ರಕ್ರಿಯೆ!

ಚೈತನ್ಯದ ಝರಿ ನಮ್ಮೊಳಗೆ ಹರಿಯಲಿ

ಇಚ್ಛಾಪೂರ್ವಕವಾಗಿ ಅಭಿಪ್ರಾಯಗಳ ಭಾರದಿಂದ ಮುಕ್ತರಾಗಿ. ಪುಸ್ತಕದ ಮೇಲಿನ ದೂಳನ್ನು ಕೊಡವುತ್ತೇವಲ್ಲ, ಹಾಗೆ ನಿಮ್ಮ ಮನಸ್ಸಿನಿಂದಲೂ ನಕಾರಾತ್ಮಕ ಪರಿಣಾಮ ಬೀರುವ ಹೇಳಿಕೆಗಳನ್ನು ಕೊಡವಿಹಾಕಿ. ಅಪೇಕ್ಷೆಗಳಿಂದ ಮುಕ್ತರಾಗಿ. ನಿಮ್ಮ ಆಲೋಚನೆಗಳನ್ನೂ ಅದರಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಿ. ಜನರು ಹೇಗಿದ್ದಾರೋ ಹಾಗೆಯೇ ಇರಲಿ. ನಾವು ಯಾರ ವಿರುದ್ಧವೂ ಇರಬೇಕಿಲ್ಲ.

ಬದಲಿಗೆ ಸಾಧ್ಯವಾದಷ್ಟೂ ಸಹಜವಾಗಿರಿ. ನಿಧಾನವಾಗಿ ಆ ಸಹಜ ಭಾವನೆಗಳೇ ಸಂತೋಷಕರವಾಗಲು ಶುರುವಾಗುತ್ತವೆ. ಹಿತವೆನಿಸಲು ಶುರುವಾಗುತ್ತವೆ. ನಿಮ್ಮ ಉಸಿರಾಟನ್ನು ನೀವೇ ಗಮನಿಸಿ – ಅದಕ್ಕೊಂದು ಲಯವಿದೆ. ಸಹಜತೆಯಿದೆ... ನಿಮ್ಮ ಮನಸ್ಸಿಗೆ, ನಿಮ್ಮತನಕ್ಕೆ ವಿಧೇಯರಾಗಿರಿ. ಚೈತನ್ಯದ ಝರಿಯೊಂದು ನಮ್ಮೊಳಗೆ ಹರಿಯಲು ಅನುವು ಮಾಡಿಕೊಡಿ. ನಿಮ್ಮ ಉಸಿರಿನ ಲಯದಲ್ಲಿಯೇ ಮಗ್ನರಾಗಿ. ನಿಮ್ಮೊಳಗೆ ತುಂಬಿರುವ ದಣಿವೆಲ್ಲವೂ ಹರಿದುಹೋಗಲಿ...

ಆಹ್‌! ಒತ್ತಡವೆಲ್ಲ ಖಾಲಿ ಖಾಲಿ... ಒತ್ತಡರಹಿತ ಮನಸ್ಸು ಎಂಥ ಚೈತನ್ಯದಿಂದ ತುಂಬಿಕೊಳ್ಳುತ್ತದೆ ನೋಡಿ... ಎಷ್ಟು ಸಾಧ್ಯವೋ ಅಷ್ಟು ಹೊತ್ತು ಈ ಸ್ಥಿತಿಯಲ್ಲಿಯೇ ಇರಿ...ಅದು ಕ್ಷುಲ್ಲಕತನದಿಂದ ನಿಮ್ಮನ್ನು ಮೇಲೆತ್ತುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT