ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಾಗಪ್ಪ ಸಂಗ, ವಿಜಯಪುರ
2010ರಲ್ಲಿ ₹ 7.5 ಲಕ್ಷ ಕೊಟ್ಟು ಮನೆ ಖರೀದಿಸಿದ್ದೆ. 2016ರಲ್ಲಿ ಅದೇ ಮನೆಯನ್ನು ₹ 15.5 ಲಕ್ಷಕ್ಕೆ ಮಾರಾಟ ಮಾಡಿದೆ. ಇದರಿಂದಾಗಿ ನಾನು ಎಷ್ಟು ಕ್ಯಾಪಿಟಲ್‌ ಗೇನ್ ಟ್ಯಾಕ್ಸ್ ತುಂಬಬೇಕು. ಹೆಚ್ಚುವರಿಯಾದ ₹ 8 ಲಕ್ಷಕ್ಕೆ ತೆರಿಗೆ ಕಟ್ಟಬೇಕೇ ಅಥವಾ ಪೂರ್ತಿ ₹ 15.5 ಲಕ್ಷಕ್ಕೆ ಕಟ್ಟಬೇಕೇ. ಆಸ್ತಿ ಮಾರಿದ ದಿನಾಂಕದಿಂದ ಎಷ್ಟು ದಿವಸದೊಳಗೆ ತೆರಿಗೆ ಕಟ್ಟಬೇಕು. ತೆರಿಗೆ ಉಳಿಸುವ ಉಪಾಯಗಳು ಯಾವುವು, ಆಸ್ತಿ ಮಾರಿದ ನಂತರ ಬಂದ ಹಣ ಹೆಂಡತಿ, ತಂದೆ, ತಾಯಿ, ಮಕ್ಕಳಿಗೆ ಸರಿಯಾಗಿ ಹಂಚಬಹುದೇ, ಬಂದ ಲಾಭ ಸ್ವಯಂ ಉದ್ಯೋಗಕ್ಕೆ ಬಳಸಬಹುದೇ, ದಿನ ನಿತ್ಯದ ಜೀವನೋಪಾಯಕ್ಕೆ ಬಳಸಬಹುದೇ?

ಉತ್ತರ: ಬಂಡವಾಳ ವೃದ್ಧಿ ತೆರಿಗೆ (Capital Gain Tax) ಸೆಕ್ಷನ್ 54EC ಆಧಾರದ ಮೇಲೆ, ಬಂದಿರುವ ಲಾಭದಲ್ಲಿ Cost Of Inflation Index  ಲೆಕ್ಕ ಹಾಕಿ ಕಳೆದು, ಉಳಿದ ಹಣಕ್ಕೆ ಮಾತ್ರ ಶೇ 20 ತೆರಿಗೆ ಸಲ್ಲಿಸಬೇಕು. ಇದೇ ವೇಳೆ NHRI-REC ಬಾಂಡುಗಳಲ್ಲಿ ಬಂದಿರುವ ಲಾಭವನ್ನು, ಗರಿಷ್ಠ ₹ 50 ಲಕ್ಷಗಳ ಮಿತಿಯಲ್ಲಿ, 3 ವರ್ಷಗಳ ಅವಧಿಗೆ (Lock In Period) ಇರಿಸಿ ವಿನಾಯ್ತಿ ಪಡೆಯಬಹುದು.

ಒಟ್ಟಿನಲ್ಲಿ ನಿಮ್ಮ ಪ್ರಶ್ನೆಯಲ್ಲಿ ಕೇಳಿದಂತೆ ಮಾರಾಟ ಮಾಡಿ ಬಂದ ಹಣಕ್ಕೆ ತೆರಿಗೆ ತುಂಬುವ ಅವಶ್ಯವಿಲ್ಲ. ಲಾಭಕ್ಕೆ ಮಾತ್ರ ತೆರಿಗೆ ಬರುತ್ತದೆ. ಇಲ್ಲಿ ತಿಳಿಸಿದಂತೆ NHRI-REC ಬಾಂಡುಗಳಲ್ಲಿ ತೊಡಗಿಸಿದರೆ ಸಂಪೂರ್ಣ ತೆರಿಗೆ ವಿನಾಯ್ತಿ ಕೂಡಾ ಪಡೆಯಬಹುದು. ಆಸ್ತಿ ಮಾರಾಟ ಮಾಡಿ ಆರು ತಿಂಗಳಲ್ಲಿ ತೆರಿಗೆ ಸಲ್ಲಿಸಬೇಕು ಅಥವಾ ಇಲ್ಲಿ ತಿಳಿಸಿದಂತೆ ಬಾಂಡುಗಳಲ್ಲಿ ಹಣ ತೊಡಗಿಸಬೇಕು.

ನೀವು ಮಾರಾಟ ಮಾಡಿದ ಆಸ್ತಿ ಸ್ವಯಾರ್ಜಿತವಾದಲ್ಲಿ ಬಂದ ಹಣ ನಿಮ್ಮ ಹೆಸರಿನಲ್ಲಿ ಇರಿಸಬೇಕು. ಪಿತ್ರಾರ್ಜಿತವಾದಲ್ಲಿ ಮಾತ್ರ ಕುಟುಂಬದ ಎಲ್ಲರ ಹೆಸರಿಗೂ ಇರಿಸಬಹುದು. ಸ್ವಯಂ ಉದ್ಯೋಗ, ದಿನ ನಿತ್ಯದ ಜೀವನೋಪಾಯಕ್ಕೆ ಕೂಡಾ ಬಳಸಬಹುದು.

ನೀವು 2010ರಲ್ಲಿ ₹ 7.5 ಲಕ್ಷಕ್ಕೆ ಮನೆ ಖರೀದಿಸುವಾಗ ಹಾಗೂ 2016ರಲ್ಲಿ ಅದೇ ಮನೆ ₹ 15.5 ಲಕ್ಷಕ್ಕೆ ಮಾರಾಟ ಮಾಡಿದಾಗ ಕ್ರಮವಾಗಿ ಇದ್ದಿರುವ Cost Of Inflation Indix, 632 ಹಾಗೂ 1081. ಈ ವಿಚಾರ ಲೆಕ್ಕಕ್ಕೆ ತೆಗೆದುಕೊಂಡಾಗ, ನೀವು 2010ರಲ್ಲಿ ಕೊಂಡ ಆಸ್ತಿ, ಹಣದುಬ್ಬರದಿಂದಾಗಿ ಅದರ 2016ರ ಬೆಲೆ ₹ 12.82 ಲಕ್ಷ. ನೀವು ₹ 15.50 ಲಕ್ಷಕ್ಕೆ ಮಾರಾಟ ಮಾಡಿರುವುದರಿಂದ ಹಣ ದುಬ್ಬರದಿಂದ ಲೆಕ್ಕ ಹಾಕಿ ಬಂದ ಮೊತ್ತ ₹ 12.82 ಕಳೆದು ₹ 2.68 ಲಕ್ಷಗಳಿಗೆ ಮಾತ್ರ, ಮಾರಾಟ ಮಾಡಿದ 6 ತಿಂಗಳ ಒಳಗಾಗಿ ಶೇ 20 ರಷ್ಟು ಬಂಡವಾಳ ವೃದ್ಧಿ ತೆರಿಗೆ ಸಲ್ಲಿಸಬೇಕು. ತೆರಿಗೆ ಉಳಿಸಲು ಈ ಮೊತ್ತವನ್ನು NHIA-REC ಮೇಲೆ ವಿವರಿಸಿದಂತೆ ತೊಡಗಿಸಬಹುದು.

ಸಂಗಮೇಶ ಗೌಡ, ಪುಣೆ
ನನ್ನ ವಯಸ್ಸು 42. ಪುಣೆಯಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಪತ್ನಿ ಗೃಹಿಣಿ. ಮಗ 8 ವರ್ಷ, ಮಗಳು 2 ವರ್ಷ. ಎಲ್ಲ ಕಡಿತದ ನಂತರ ₹ 38,000 ಬರುತ್ತದೆ. ಎಲ್ಲಾ ಉಳಿತಾಯ ಮಾಡಿ ವರ್ಷದ ಕೊನೆಗೆ ₹ 7 ರಿಂದ 9 ಸಾವಿರ ಟಿಡಿಎಸ್ ಕಡಿತವಾಗಿ ಬಂದ 15 ವರ್ಷ ದುಡಿದ ಹಣದಲ್ಲಿ ಪಿ.ಪಿ.ಎಫ್.ನಲ್ಲಿ ₹ 4 ಲಕ್ಷ, ಬ್ಯಾಂಕ್ ಠೇವಣಿ ₹ 4 ಲಕ್ಷ ಮಾಡಿದ್ದೇನೆ. ಮಗಳ ಹೆಸರಿನಲ್ಲಿ ಸುಕನ್ಯಾ ಯೋಜನೆ ತೆರೆದಿದ್ದೇನೆ. ಎಲ್.ಐ.ಸಿ.ಯಲ್ಲಿ ಮನಿ ಬ್ಯಾಕ್ ಹಾಗೂ ಜೀವನ ಆನಂದ ಪಾಲಿಸಿ ಮಾಡಿದ್ದೇನೆ. ತಿಂಗಳಿಗೆ ₹ 3000 ದಂತೆ 10 ವರ್ಷಗಳ ಆರ್.ಡಿ. ಮಾಡಿದ್ದೇನೆ. ಆರ್.ಡಿ.ಗೆ ತೆರಿಗೆ ಇದೆಯೇ, ಸ್ವಂತ ಮನೆ ಇಲ್ಲ, ಬ್ಯಾಂಕ್ ಠೇವಣಿಯ ಬಡ್ಡಿಗೆ ಟಿ.ಡಿ.ಎಸ್. ತಪ್ಪಿಸಲು ಸಾಧ್ಯವೇ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಬಹುದೇ. ನನ್ನ ಮಡದಿಯ ಹೆಸರಿನಲ್ಲಿ ಪಿ.ಪಿ.ಎಫ್. ಖಾತೆ ತೆರೆಯಬಹುದೇ?

ಉತ್ತರ: ನೀವು ಎಲ್ಲಾ ಕಡಿತ ಹಾಗೂ ಖರ್ಚಿನ ನಂತರ ನಿವ್ವಳ ಎಷ್ಟು ಉಳಿಸಬಹುದು ಎನ್ನುವುದರ ಆಧಾರದ ಮೇಲೆ, ಮುಂದಿನ ಪ್ಲ್ಯಾನ್ ಹಾಕಬಹುದು. ಪ್ರಾಯಶ, ತೆರಿಗೆ ಉಳಿಸಲು ವಾರ್ಷಿಕ ಗರಿಷ್ಠ ₹ 1.50 ಲಕ್ಷ ಸೆಕ್ಷನ್ 80C ಆಧಾರದ ಮೇಲೆ ಹಣ ಹೂಡುತ್ತೀರಿ ಎಂದು ಭಾವಿಸುತ್ತೇನೆ. ಆರ್.ಡಿ. ಠೇವಣಿಯಲ್ಲಿ ಬರುವ ಬಡ್ಡಿಗೆ ಸೆಕ್ಷನ್ 194–ಎ ಆಧಾರದ ಮೇಲೆ ಆದಾಯ ತೆರಿಗೆ ಇದೆ. ಈ ಠೇವಣಿಯಲ್ಲಿ ಒಮ್ಮೆಲೇ ಬಡ್ಡಿ ಬರುವುದರಿಂದ ಅವಧಿ ಮುಗಿಯುವಾಗ ಬರುವ ದೊಡ್ಡ ಬಡ್ಡಿ ಮೊತ್ತಕ್ಕೆ ಒಮ್ಮೆಲೇ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ.

ಪ್ರತೀ ವರ್ಷ ಬ್ಯಾಂಕಿನಲ್ಲಿ ಜಮಾ ಆದ ಬಡ್ಡಿಗೆ (Accrued Interest) ಫಾರಂ ನಂ. 16–ಎ ಪಡೆದು ಆಯಾ  ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಲು ಅವಕಾಶವಿದೆ. ಬ್ಯಾಂಕ್‌ ಠೇವಣಿಗೆ ಬರುವ ಬಡ್ಡಿಗೆ ವಿಧಿಸುವ ಆದಾಯ ತೆರಿಗೆ ವಿನಾಯತಿ ಪಡೆಯಲು ಕಾನೂನಿನಲ್ಲಿ ಬೇರೆ ದಾರಿ ಅಥವಾ ಉಪಾಯವಿಲ್ಲ.

ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ 31,000ರ ಗಡಿ ದಾಟಿದ್ದು, ಷೇರು ಕೊಂಡುಕೊಳ್ಳಲು ಇದು ಸೂಕ್ತ ಸಮಯವಲ್ಲ. ಬಹಳ ಕೆಳಗೆ ಬಂದಾಗ (Major Correction) A Group Shares ನಲ್ಲಿ ಸ್ವಲ್ಪ ಹಣ ತೊಡಗಿಸಿರಿ. ನಿಮ್ಮ ಮಡದಿ ಹೆಸರಿನಲ್ಲಿ ಪಿ.ಪಿ.ಎಫ್‌. ಖಾತೆ ತೆರೆಯಬಹುದು. ನಿಮಗೆ ನಿವೇಶನ ಕೊಂಡು ಮನೆ ಕಟ್ಟಲು ಕನಿಷ್ಠ ₹ 60–75 ಲಕ್ಷ ಬೇಕಾಗಬಹುದು. ಇಷ್ಟು ದೊಡ್ಡ ಮೊತ್ತದ ಸಾಲ ನಿಮಗೆ ದೊರೆಯುವುದಿಲ್ಲ. ಎಷ್ಟಾದರಷ್ಟು ಉಳಿಸುತ್ತಾ ಒಂದು ಕನಿಷ್ಠ 30’ X 40’ ನಿವೇಶನ ಕೊಳ್ಳಲು ಪ್ರಯತ್ನಿಸಿರಿ. ನಿವೃತ್ತಿ ನಂತರ ಮನೆ ಕಟ್ಟಿಸಿಕೊಳ್ಳಿ.

ಮುತ್ತು ಕಾಂಬ್ಲೆ, ಕಲಬುರ್ಗಿ
ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕ. ನಾನು ಎನ್‌ಪಿಎಸ್‌ಗೆ ಒಳಗಾಗಿದ್ದು, ಅಟಲ್‌ ಪಿಂಚಣಿ ಯೋಜನೆಗೂ ಸೇರಿಕೊಂಡಿದ್ದೇನೆ. ಎರಡೂ ಖಾತೆಗೆ ಪ್ಯಾನ್‌ ಸಂಖ್ಯೆ ಕೊಟ್ಟಿದ್ದೇನೆ. ಅಟಲ್‌ ಪಿಂಚಣಿ ಯೋಜನೆ ಮುಂದುವರಿಸಬೇಕೇ?

ಉತ್ತರ: ನೀವು ಸಂಬಳ, ಕಡಿತ, ಉಳಿತಾಯ ಹಾಗೂ ಕುಟುಂಬದ ವಿವರ ಕೊಟ್ಟಿಲ್ಲ. ಪ್ರೌಢ ಶಾಲಾ ಶಿಕ್ಷಕರಾಗಿರುವುದರಿಂದ, ನೀವು ತೆರಿಗೆಗೆ ಒಳಗಾಗುತ್ತೀರಿ. ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಿ, ಸಂಪೂರ್ಣ ತೆರಿಗೆ ವಿನಾಯತಿ ಪಡೆಯಲು ಮರೆಯದಿರಿ. ಇದರಿಂದ ಕಡ್ಡಾಯವಾಗಿ ಉಳಿತಾಯವಾಗುತ್ತದೆ. ಜೊತೆಗೆ ಉಳಿಸಿದ ತೆರಿಗೆಯಲ್ಲಿಯೇ ಸಿಂಹಪಾಲು ಉಳಿತಾಯಕ್ಕೆ ಮುಡುಪಾಗಿಡಬಹುದು.

ಹಣದುಬ್ಬರದಿಂದಾಗಿ ನೀವು ನಿವೃತ್ತಿಯಾಗುವಾಗ, ಎನ್‌ಪಿಎಸ್‌ನಿಂದ ಬರುವ ಪಿಂಚಣಿ ಮುಂದೆ ಖರ್ಚಿಗೆ ಸಾಕಾಗಲಾರದು ಹಾಗೂ ಅಟಲ್‌ ಪಿಂಚಣಿ ಯೋಜನೆ ತುಂಬಾ ಚೆನ್ನಾಗಿದೆ ಮತ್ತು ತೆರಿಗೆ ಉಳಿಸಲು ಕೂಡಾ ಅನುಕೂಲವಾಗಿದೆ. ಈ ಯೋಜನೆ ಮಧ್ಯದಲ್ಲಿ ನಿಲ್ಲಿಸುವುದು ಸರಿಯಲ್ಲ. ಇದರಿಂದ ಕಟ್ಟಿದ ಹಣ ವಾಪಸು ಪಡೆಯಲು ಅವಧಿ ತನಕ ಕಾಯಬೇಕಾಗುತ್ತದೆ. ಈ ಯೋಜನೆ ಮಧ್ಯದಲ್ಲಿ ನಿಲ್ಲಿಸಬೇಡಿ ಹಾಗೂ ಮುಂದುವರಿಸಿರಿ.

ಬಸವರಾಜ್‌. ಪಿ. ಕಾರ್ಕಳ
ನಾನು MESCOMನ JLM ಸರ್ಕಾರಿ ನೌಕರ. ವಯಸ್ಸು 25. ತರಬೇತಿ ಅವಧಿಯಲ್ಲಿದ್ದು ₹ 11,000 ಸಂಬಳ ಬರುತ್ತದೆ. ₹ 1000 ಆರ್‌.ಡಿ. ಮಾಡಿದ್ದೇನೆ. ಕೈಗೆ ₹ 10,000 ಸಿಗುತ್ತದೆ. ನನಗೆ ತುರ್ತಾಗಿ ₹ 1 ಲಕ್ಷ ಸಾಲ ಬೇಕಾಗಿದೆ. ಸಿಂಡಿಕೇಟ್‌ ಬ್ಯಾಂಕಿನಲ್ಲಿ ಶೇ 14.2 ಬಡ್ಡಿ ದರದಲ್ಲಿ ಸಾಲ ಕೊಡಲು ಒಪ್ಪಿದ್ದಾರೆ. ಅದಕ್ಕೂ ಕಡಿದು ಬಡ್ಡಿ ದರ ಅಥವಾ ಬಡ್ಡಿ ರಹಿತ ಸಾಲದಲ್ಲಿ ಎಲ್ಲಿ ಸಾಲ ಸಿಗಬಹುದು?

ಉತ್ತರ: ಸಾಲದ ಉದ್ದೇಶ ತಿಳಿಯಲಿಲ್ಲ. ಜೀವನಕ್ಕೆ ಕಾಲಿಡುವಾಗಲೇ ಸಾಲ ಮಾಡಿದರೆ, ನಿಮ್ಮ ದುಡಿಮೆಯಲ್ಲಿ ಸಾಲದ ಕಂತು ಕಳೆದು ಕೈಗೆ ಬಹಳ ಕಡಿಮೆ ಮೊತ್ತ ಬರುತ್ತದೆ. ಇದರಿಂದ ಜೀವನದಲ್ಲಿ ಜುಗುಪ್ಸೆ ಉಂಟಾಗುತ್ತದೆ. ಸಾಧ್ಯವಾದರೆ ಸಾಲ ರಹಿತ ಜೀವನ ಅಳವಡಿಸಿಕೊಳ್ಳಿ. ಇದೊಂದು ಸಲಹೆ ಎಂದು ಮಾತ್ರ ಪರಿಗಣಿಸಿರಿ. ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಹೊಸಬರಿಗೆ ಸಾಲ ಸಿಗುವುದಿಲ್ಲ. ಕಡಿಮೆ ಬಡ್ಡಿ ದರದಲ್ಲಿ ಬೇರೆ ಕಡೆ ಸಾಲ ದೊರೆಯುವ ಸಾಧ್ಯತೆ ಇಲ್ಲ. ಬಡ್ಡಿ ರಹಿತ ಸಾಲದ ಯೋಜನೆ ಯಾವ ಆರ್ಥಿಕ ವ್ಯವಸ್ಥೆಯಲ್ಲಿಯೂ ದೊರೆಯುವುದಿಲ್ಲ. ನಿಮ್ಮ ಸಂಸ್ಥೆಯ ಸೊಸೈಟಿಯಲ್ಲಿ ಕಡಿಮೆ ಬಡ್ಡಿ ದರದ ಸಾಲ ಸಿಗುವುದಾದರೆ ಪಡೆಯಿರಿ.

ಆರ್‌. ಗುಣಶ್ರೀ, ಬೆಂಗಳೂರು
ನಾನು ಅಟಲ್‌ ಪೆನ್ಶನ್‌ ಯೋಜನೆಯಲ್ಲಿ ಪ್ರತೀ ತಿಂಗಳು ₹ 318 ರಂತೆ 1–1/2 ವರ್ಷ ವಿನಿಯೋಗಿಸಿದ್ದೇನೆ. ಆದರೆ I.T. Holders ಈ ಸ್ಕೀಮಿನಿಂದ ಸರ್ಕಾರದಿಂದ ಬರುವ ಕಾಂಟ್ರಿಬುಷನ್‌ ಬರುವುದಿಲ್ಲ ಎಂಬ ಮಾಹಿತಿಯ ಮೇರೆಗೆ ಈ ಯೋಜನೆ ಬ್ಯಾಂಕ್‌ ಮುಖಾಂತರ ರದ್ದು ಮಾಡಲು ಬ್ಯಾಂಕಿಗೆ ತಿಳಿಸಲಾಗಿದೆ ಹಾಗೂ ಬ್ಯಾಂಕ್ ಖಾತೆ ಕೂಡಾ ಮುಚ್ಚಿರುತ್ತೇನೆ. ಈ ಯೋಜನೆಯಲ್ಲಿ ಹಣ ವಿನಿಯೋಗಿಸುವುದು ಸರಿಯೇ, ಇದುವರೆಗೆ ಕಟ್ಟಿದ ಹಣ ವಾಪಸು ಪಡೆಯಲು ಮಾರ್ಗ ಯಾವುದು?

ಉತ್ತರ: ಅಟಲ್‌ ಪಿಂಚಣಿ ಯೋಜನೆಯಲ್ಲಿ I.T. Holders ಅಥವಾ ಇತರ ಗ್ರಾಹಕರಿಗೆ ಪ್ರತ್ಯೇಕವಾಗಿ ಸರ್ಕಾರದಿಂದ ಏನಾದರೂ ಕೊಡುಗೆ (Contribution) ಬರುವ ವಿಚಾರ, ಈ ಯೋಜನೆಯಲ್ಲಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಈ ತಪ್ಪು ಮಾಹಿತಿಯಿಂದ ನೀವು ಈ ಯೋಜನೆ ಮಧ್ಯದಲ್ಲಿ ನಿಲ್ಲಿಸುವ ಅವಶ್ಯವಿರಲಿಲ್ಲ. ನೀವು ಕಟ್ಟಿದ ಹಣ ಯೋಜನೆ ಅಂತ್ಯಕ್ಕೆ ಸಿಗುತ್ತದೆ ಹಾಗೂ ಈಗಲೇ ಪಡೆಯುವಂತಿಲ್ಲ. ನಿಜವಾಗಿ ಪಿಂಚಣಿ ಬಾರದ ಹಾಗೂ ಬರುವವರಿಗೂ ಇದೊಂದು ಉತ್ತಮ ಯೋಜನೆ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ. ಬ್ಯಾಂಕಿನಲ್ಲಿ ಸರಿಯಾದ ಮಾಹಿತಿ ನಿಮಗೆ ಸಿಗದಿದ್ದರೂ, ಪರಿಣತರಿಂದ ಖಾತೆ ಮುಚ್ಚುವ ಮೊದಲು ವಿಮರ್ಶಿಸಬೇಕಿತ್ತು.

ಬಾಬಾ ಸಾಹೇಬ ನದಾಫ, ಗದಗ
ನಾನು ಪ್ರಾಥಮಿಕ ಶಾಲಾ ಶಿಕ್ಷಕ. ನಿಮ್ಮ ಅಂಕಣದಿಂದ ಪ್ರೇರಿತನಾಗಿ ₹ 5,000 ಆರ್‌.ಡಿ. ಮಾಡಿದ್ದೇನೆ. ನಿಮಗೆ ಅನಂತ ವಂದನೆಗಳು. ನನ್ನ ಸ್ನೇಹಿತನಿಗೆ ಒಂದು ವರ್ಷದ ಹಿಂದೆ ಅವನ ಕಷ್ಟ ಕಾಲದಲ್ಲಿ ₹ 1.50 ಲಕ್ಷ ಕೊಟ್ಟಿದ್ದೆ. ಈಗ ಆತ ಆ ಹಣ ಹಿಂತಿರುಗಿಸುತ್ತಾನೆ. ನನ್ನ ಉಳಿತಾಯ ಖಾತೆಯಲ್ಲಿ ₹ 50,000 ಇದೆ. ಈ ಹಣ ಹೇಗೆ ವಿನಿಯೋಗಿಸಲಿ. ನಾನು ತೆರಿಗೆ ಪಾವತಿದಾರನಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿರಿ?

ಉತ್ತರ: ನಿಮ್ಮ ವಾರ್ಷಿಕ ಆದಾಯ, ಸಂಬಳ–ಬ್ಯಾಂಕ್‌ ಠೇವಣಿ ಬಡ್ಡಿ ₹ 2.50 ಲಕ್ಷದ ಒಳಗೆ ಇರುವಲ್ಲಿ ನೀವು ತೆರಿಗೆಗೆ ಒಳಗಾಗುವುದಿಲ್ಲ. ಉಳಿತಾಯ ಖಾತೆಯಲ್ಲಿ ಗರಿಷ್ಠ ₹ 10,000 ಬಡ್ಡಿ ಬಂದರೂ ಈ ಬಡ್ಡಿ ಹಣಕ್ಕೆ ಸೆಕ್ಷನ್‌ 80ಟಿಟಿಎ ಆಧಾರದ ಮೇಲೆ ತೆರಿಗೆ ವಿನಾಯ್ತಿ ಇದೆ.

ನೀವು ನಿಮ್ಮ ಗೆಳೆಯರಿಂದ ಬರುವ ₹ 1.50 ಲಕ್ಷ ಹಾಗೂ ಉಳಿತಾಯ ಖಾತೆಯಲ್ಲಿ ಇರುವ ₹ 50,000ದಲ್ಲಿ ₹ 30,000 ತೆಗೆದು, ಒಟ್ಟಿನಲ್ಲಿ ₹ 1.80 ಲಕ್ಷ, ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. ಹೀಗೆ ಮಾಡುವುದರಿಂದ ನಿಮಗೆ ಹೆಚ್ಚಿನ ಭದ್ರತೆ ಹಾಗೂ ವರಮಾನ ಬಂದಂತಾಗುತ್ತದೆ. ಉಳಿತಾಯ ಖಾತೆಯಲ್ಲಿ ದೊಡ್ಡ ಮೊತ್ತ ಇರಿಸುವುದು ಜಾಣತನವಲ್ಲ. ₹ 1.80 ಲಕ್ಷ ಠೇವಣಿ ಮಾಡುವಾಗ ₹ 60,000ದ ಮೂರು ಬಾಂಡು ಪಡೆಯಿರಿ. ತುರ್ತುಪರಿಸ್ಥಿತಿಯಲ್ಲಿ ಒಂದು ಬಾಂಡು ಅವಧಿಗೆ ಮುನ್ನ ಮುರಿದು ಉಪಯೋಗಿಸಬಹುದು.

ಅಶೋಕ, ಚನ್ನಳ್ಳಿ
ನಾನು ಬ್ಯಾಂಕಿನಿಂದ ಸಾಲ ಪಡೆದಿದ್ದು, ನಾನು ಈ ಸಾಲಿನಲ್ಲಿ ತೆರಿಗೆ ರಿಟರ್ನ್‌ನಲ್ಲಿ ತೆರಿಗೆ ವಿನಾಯ್ತಿಗೆ, ಗೃಹ ಸಾಲದ ಬಡ್ಡಿ ಹಾಗೂ ಅಸಲು ಸಾಲದ ಕಂತನ್ನು ತೋರಿಸಿ, ನನ್ನ ಒಟ್ಟು ವಾರ್ಷಿಕ ಆದಾಯದಲ್ಲಿ ನಾನು ವಾರ್ಷಿಕವಾಗಿ ಒಟ್ಟು ಪಡೆದಿರುವ ಮನೆ ಬಾಡಿಗೆ ಭತ್ಯೆಯನ್ನು ಕಳೆಯಲು ಅವಕಾಶವಿದೆಯೇ, ದಯವಿಟ್ಟು ತಿಳಿಸಿರಿ.

ಉತ್ತರ: ನೀವು ಗೃಹಸಾಲದಿಂದ ಕಟ್ಟಿರುವ ಮನೆಯಲ್ಲಿ ವಾಸವಾಗಿದ್ದರೆ, ಸಂಬಳದ ಒಂದು ಅಂಶವಾದ ಮನೆ ಬಾಡಿಗೆ ನಿಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ಕೊಡಲು ಬರುವುದಿಲ್ಲ. ಇದೇ ವೇಳೆ, ಸಾಲದ ಕಂತು, ಬಡ್ಡಿ (ಕ್ರಮವಾಗಿ ಸೆಕ್ಷನ್‌ 80ಸಿ ಹಾಗೂ 24ಬಿ) ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001. ಇ–ಮೇಲ್‌: businessdesk@prajavani.co.in

ಏನಿದು ಸ್ಮಾರ್ಟ್‌ ಮನೆ?\
ಸ್ಮಾರ್ಟ್‌ ಮನೆಯ ಪರಿಕಲ್ಪನೆ ಭಾರತದ ಮಟ್ಟಿಗೆ ಹೊಸತು. ಮುಂದುವರಿದ ದೇಶಗಳಲ್ಲಿ ಈಗಾಗಲೇ ಸ್ಮಾರ್ಟ್‌ ಮನೆಯ ಪರಿಕಲ್ಪನೆ ಹಳೆಯದಾಗಿದೆ. ಸ್ಮಾರ್ಟ್ ಮನೆಯ ಸೇವೆಗಳ ಮೇಲೆ ಸಾಕಷ್ಟು ಹೊಸ ಹೊಸ ಪ್ರಯೋಗಗಳೂ ನಡೆಯುತ್ತಿವೆ. ಮಾತಿಗೆ ಸ್ಪಂದಿಸುವ ಮನೆ ಬಾಗಿಲು, ಹೇಳಿದಂತೆ ಕೇಳುವ ಟಿವಿ, ಚಿಟಿಕೆ ಹೊಡೆದರೆ ಆಫ್‌ ಆಗುವ ಲೈಟ್‌ – ಇವೆಲ್ಲಾ ಹಾಲಿವುಡ್‌ ಚಿತ್ರಗಳಲ್ಲಿ ಬಹಳ ಹಿಂದೆಯೇ ಬಂದು ಹೋಗಿವೆ. ಆದರೆ, ಈ ಕಾಲ್ಪನಿಕವಾದ ವರ್ಚುವಲ್‌ ಜಗತ್ತು ಈಗ ನಿಜವಾಗಿದೆ.

ಅನಗತ್ಯವಾಗಿ ಉರಿಯುತ್ತಿರುವ ಲೈಟ್, ಕೋಣೆಯಲ್ಲಿ ಯಾರೂ ಇಲ್ಲದಿದ್ದರೂ ತಿರುಗುತ್ತಿರುವ ಫ್ಯಾನ್‌, ಯಾರೂ ನೋಡದಿದ್ದರೂ ಆನ್‌ ಆಗಿರುವ ಟಿವಿ, ಚಳಿ ಇದ್ದರೂ ಥಂಡಿ ಸೂಸುತ್ತಿರುವ ಏರ್‌ ಕಂಡೀಷನರ್‌ – ಇವುಗಳಿಂದ ವಿದ್ಯುತ್‌ ವ್ಯರ್ಥವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದನ್ನು ತಪ್ಪಿಸಲು ಇಕೊ (ಪರಿಸರ ಸ್ನೇಹಿ) ಉಪಕರಣಗಳು ಮಾರುಕಟ್ಟೆಗೆ ಬಂದಿವೆ. ಈ ಇಕೊ ಉಪಕರಣಗಳನ್ನು ಸ್ಮಾರ್ಟ್‌ ಆಗಿ ಬಳಸುವ ಮನೆಯೇ ಸ್ಮಾರ್ಟ್‌ ಮನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT