ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಚುವಲ್‌ ಸೇವೆಯ ಸ್ಮಾರ್ಟ್ ಮನೆ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನ ಮುಂದುವರಿದಂತೆ ಶ್ರಮದಾಯಕ ಕೆಲಸಗಳೆಲ್ಲವೂ ಸುಲಭವಾಗುತ್ತಿವೆ. ಆದರೆ, ತಂತ್ರಜ್ಞಾನದ ಹಸಿವು, ಕೆಲಸಗಳನ್ನು ಸುಲಭವಾಗಿಸುವಲ್ಲಿಗೆ ಮಾತ್ರ ನಿಂತಿಲ್ಲ. ಆವಿಷ್ಕಾರಗಳ ಫಲವಾಗಿ ಈಗ ಜಗತ್ತು ತುಂಬ ಸ್ಮಾರ್ಟ್‌ ಆಗುತ್ತಿದೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ವಾಚ್‌, ಸ್ಮಾರ್ಟ್‌ ಟಿವಿ –ಹೀಗೆ ಸ್ಮಾರ್ಟ್‌ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಈ ಸ್ಮಾರ್ಟ್‌ ಪಟ್ಟಿಗೆ ಮತ್ತೊಂದು ಸೇರ್ಪಡೆ ಸ್ಮಾರ್ಟ್ ಮನೆ (Smart Home).

ತಂತ್ರಜ್ಞಾನ ಈಗ ಸುಲಭವಾಗಿರುವುದು ಮಾತ್ರವಲ್ಲ ಅಗ್ಗವೂ ಆಗುತ್ತಿರುವುದರಿಂದ ಜನಸಾಮಾನ್ಯರಿಗೆ ತಂತ್ರಜ್ಞಾನದ ಸೌಲಭ್ಯಗಳು ಕೈಗೆಟುಕುವಂತಾಗಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ ಸರಕುಗಳೂ ಈಗ ತುಂಬಾ ದುಬಾರಿಯೇನಲ್ಲ. ಹೊಸದಾಗಿ ಯೋಚಿಸುವವರಿಗೆ, ಹೊಸತನ್ನು ಬಯಸುವವರಿಗೆ ಸ್ಮಾರ್ಟ್‌ ಸರಕುಗಳು ಹೆಚ್ಚು ಖುಷಿ ಕೊಡುತ್ತವೆ. ಹೇಳಿದಂತೆ ಕೇಳುವ ಸ್ಮಾರ್ಟ್‌ ವಸ್ತುಗಳಿರುವ ಸ್ಮಾರ್ಟ್‌ ಮನೆಗಳು ಈಗ ನಮ್ಮಲ್ಲೂ ಹೆಚ್ಚಾಗುತ್ತಿವೆ.

ಸ್ಮಾರ್ಟ್‌ ಮನೆ ನಿರ್ವಹಣೆ ಹೇಗೆ?
ಸ್ಮಾರ್ಟ್‌ ಮನೆಯ ನಿರ್ವಹಣೆಗೆ ಹಲವು ಪೂರಕ ಪರಿಕರಗಳಿವೆ. ಸ್ಮಾರ್ಟ್‌ ಆ್ಯಪ್‌ಗಳು, ಸ್ಮಾರ್ಟ್‌ ಉಪಕರಣಗಳು ಹಾಗೂ ಸ್ಮಾರ್ಟ್‌ ಸೇವೆಗಳು ಸ್ಮಾರ್ಟ್‌ ಮನೆಗೆ ಬೇಕಾಗುತ್ತವೆ. ಮನೆಯಲ್ಲಿ ಸ್ಮಾರ್ಟ್‌ ಉಪಕರಣಗಳನ್ನು ಆ್ಯಪ್‌ಗಳ ಮೂಲಕ ನಿಯಂತ್ರಿಸಬಹುದು. ಈ ಆ್ಯಪ್‌ ಗಳಿಗೆ ಪೂರಕವಾಗಿ ಸೇವಾ ಸಂಸ್ಥೆಗಳೂ ಅಗತ್ಯವಾದ ಸ್ಮಾರ್ಟ್‌ ಸೇವೆ ಒದಗಿಸುತ್ತವೆ.

ನೀವು ಕಚೇರಿಗೆ ಹೋಗುವ ರಸ್ತೆಯ ಸಂಚಾರ ದಟ್ಟಣೆಯ ಮಾಹಿತಿಯನ್ನು ನಿಮ್ಮ ಸ್ಮಾರ್ಟ್‌ಫೋನ್‌ ಗಂಟೆಗೂ ಮೊದಲೇ ನಿಮಗೆ ತಿಳಿಸುವುದನ್ನು ನೀವು ಗಮನಿಸಿರಬಹುದು. ಇದು ಸ್ಮಾರ್ಟ್ ಸೇವೆಯ ಪ್ರಾಥಮಿಕ ಹಂತ. ಈ ರೀತಿಯ ಸೇವೆಯ ಮುಂದುವರಿಕೆಯು ಸ್ಮಾರ್ಟ್‌ ಮನೆಗಳಲ್ಲಿ ಕೆಲಸ ಮಾಡುತ್ತದೆ. ನಿಮಗೆ ಯಾವಾಗ ಬಿಸಿ ನೀರು ಬೇಕು, ನೀವು ಯಾವಾಗ ಕಾಫಿ ಕುಡಿಯಬೇಕು, ನೀವು ಎಷ್ಟು ಹೊತ್ತಿಗೆ ಕಚೇರಿಗೆ ಹೊರಡಬೇಕು ಎಂಬುದರಿಂದ ಹಿಡಿದು ನೀವು ಹೇಳಿದಂತೆ ನಿಮ್ಮ ಮನೆಯ ವ್ಯವಸ್ಥೆ ವರ್ತಿಸುವವರೆಗೆ ಸ್ಮಾರ್ಟ್‌ ಸೇವೆಗಳು ಈಗ ಮುಂದುವರಿದಿವೆ.

ಅಮೆಜಾನ್‌, ಗೂಗಲ್‌, ಆ್ಯಪಲ್‌ ಸೇರಿದಂತೆ ಹಲವು ಕಂಪೆನಿಗಳು ಈಗ ಇಂತಹ ಸ್ಮಾರ್ಟ್‌ ಸೇವೆ ನೀಡುತ್ತಿವೆ. ಈ ಸ್ಮಾರ್ಟ್‌ ಸೇವೆ ಉಪಕರಣಗಳು ನೀವು ಹೇಳಿದಂತೆ ಕೇಳಲು ನೆರವಾಗುತ್ತವೆ. ನಿಮ್ಮ ಮಾತಿಗೂ ಉಪಕರಣಗಳಿಗೂ ಮಧ್ಯವರ್ತಿಯಂತೆ ಈ ಸ್ಮಾರ್ಟ್‌ ಸೇವೆ ಕೆಲಸ ಮಾಡುತ್ತದೆ.

ಅಮೆಜಾನ್‌ ನ ‘ಅಲೆಕ್ಸಾ’, ಗೂಗಲ್‌ ನ ‘ಅಸಿಸ್ಟಂಟ್‌’ ಹಾಗೂ ಆ್ಯಪಲ್‌ ನ ‘ಸಿರಿ’ ಸದ್ಯ ಇಂಥ ಸ್ಮಾರ್ಟ್‌ ಸೇವೆ ಒದಗಿಸುತ್ತಿವೆ. ಅಮೆಜಾನ್‌ ಮತ್ತು ಗೂಗಲ್‌ ಸೇವೆಯ ಆ್ಯಪ್‌ಗಳ ಜತೆಗೆ ನೀವು ಹೇಳಿದಂತೆ ಕೇಳಿ ಅದಕ್ಕೆ ತಕ್ಕಂತೆ ಇತರೆ ಉಪಕರಣಗಳಿಗೆ ಆಜ್ಞೆ (ಕಮಾಂಡ್‌) ಮಾಡುವ ಸಾಧನಗಳನ್ನೂ (ಡಿವೈಸ್‌) ಒದಗಿಸುತ್ತಿವೆ. ಅಮೆಜಾನ್‌ ನ ‘ಎಕೊ’ (Echo), ‘ಎಕೊ ಡಾಟ್‌’ (Echo Dot) ಮತ್ತು ಗೂಗಲ್‌ನ ‘ಗೂಗಲ್‌ ಹೋಮ್’ (Google Home) ಸ್ಪೀಕರ್‌ಗಳು ಮನೆಯನ್ನು ಸ್ಮಾರ್ಟ್ ಆಗಿಸುತ್ತವೆ.

ವೈಫೈ ಮೂಲಕ ಸಂಪರ್ಕ ಸಾಧಿಸಿ ಹೇಳಿದಂತೆ ಕೇಳುವ ಲೈಫೆಕ್ಸ್‌ (Lifx bulb) ನಂತಹ ಸ್ಮಾರ್ಟ್ ಲೈಟ್‌ಗಳು ತುಸು ದುಬಾರಿಯೇ. ಆದರೆ, ಸ್ಮಾರ್ಟ್‌ ಮನೆಗೆ ಇಂತಹ ದುಬಾರಿ ಉಪಕರಣಗಳು ಅಗತ್ಯ. ಸ್ಮಾರ್ಟ್‌ ಸೇವೆಯ ಮೂಲಕ ನೀವು ಇಂತಹ ಸ್ಮಾರ್ಟ್‌ ಲೈಟ್‌ ಗಳನ್ನು ಆರಿಸಬಹುದು, ಆನ್‌ ಮಾಡಬಹುದು. ಲೈಟ್‌ ಅನ್ನು ಹೆಚ್ಚು ಪ್ರಕಾಶಿಸುವಂತೆ ಮಾಡಬಹುದು. ಇಲ್ಲವೇ ಡಿಮ್‌ ಮಾಡಬಹುದು. ನೀವು ಹೇಳಿದಂತೆ ಈ ಲೈಟ್‌ ಕೇಳುತ್ತದೆ. ಆ್ಯಪ್‌ ಮೂಲಕ ಈ ಲೈಟ್‌ ನ ಬಣ್ಣ, ಬೆಳಕನ್ನೂ ನಿಯಂತ್ರಿಸಬಹುದು.

ಮನೆಯನ್ನು ಸ್ಮಾರ್ಟ್‌ ಆಗಿಸುವ ಮತ್ತೊಂದು ಮುಖ್ಯ ಸಾಧನ ಸ್ಮಾರ್ಟ್‌ ಪ್ಲಗ್‌. ಸ್ಮಾರ್ಟ್‌ ಪ್ಲಗ್‌ಗೆ ಸಂಪರ್ಕಿಸುವ ಉಪಕರಣಗಳು ನೀವು ಹೇಳಿದಂತೆ ಕೇಳುತ್ತವೆ. ಸ್ಮಾರ್ಟ್‌ ಪ್ಲಗ್‌ಗೆ ಸಂಪರ್ಕಿಸಿದ ಉಪಕರಣಗಳನ್ನು ಆನ್‌ ಮಾಡುವುದು ಹಾಗೂ ಆಫ್‌ ಮಾಡುವುದು ಸುಲಭ. ನೀವು ಕಮಾಂಡ್‌ ಮಾಡಿದಂತೆ ಈ ಸಾಧನ ಕೆಲಸ ಮಾಡುತ್ತದೆ.

ನಿಮ್ಮ ಮಾತನ್ನು ಕೇಳಿಸಿಕೊಳ್ಳುವ ಜಾಣ ಸ್ಮಾರ್ಟ್ ಸ್ಪೀಕರ್‌ ಗಳು ನಿಮ್ಮ ಕಮಾಂಡ್‌ ಅನ್ನು ಉಪಕರಣಗಳಿಗೆ ಕಳಿಸಿ ಅವನ್ನು ನಿಯಂತ್ರಿಸುತ್ತವೆ. ಉದಾಹರಣೆಗೆ ನೀವು ಗೂಗಲ್‌ ಹೋಮ್‌ ಸ್ಪೀಕರ್‌ ಬಳಿ, ‘ಓಕೆ ಗೂಗಲ್‌, ಟರ್ನ್‌ ಆನ್‌ ದ ಲೈಟ್‌ ಇನ್‌ ದ ಲಿವಿಂಗ್‌ ರೂಮ್‌’ ಎಂದು ಹೇಳಿದರೆ ಲಿವಿಂಗ್‌ ರೂಮ್‌ನ ಲೈಟ್‌ ಆನ್‌ ಆಗುತ್ತದೆ. ಹೀಗೆ ನೀವು ಯಾವುದೇ ಸ್ಮಾರ್ಟ್‌ ಕೆಲಸವನ್ನು ಹೇಳಿ ಮಾಡಿಸಬಹುದು.

ಈ ಎಲ್ಲಾ ಉಪಕರಣಗಳು ಹಾಗೂ ಅವುಗಳ ಆ್ಯಪ್‌ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಈ ಸ್ಮಾರ್ಟ್‌ ಸೇವೆಯ ವರ್ತುಲಕ್ಕೆ ಇನ್ನೂ ಹೆಚ್ಚು ಉಪಕರಣಗಳನ್ನು ಸೇರಿಸಬಹುದು. ನೀವು ಮನೆಯ ಹೊರಗಿದ್ದರೂ ಮನೆಯನ್ನು ತಕ್ಕಮಟ್ಟಿಗೆ ನಿಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಸ್ಮಾರ್ಟ್‌ ವ್ಯವಸ್ಥೆಯೂ ಇದಾಗಿದೆ.

ಸ್ಮಾರ್ಟ್‌ ಮನೆ ಪರಿಸರ ಸ್ನೇಹಿಯಾಗುವುದರ ಜತೆಗೆ ಮನೆಯಲ್ಲಿ ಹೊಸ ಅನುಭವ ನೀಡುತ್ತದೆ. ಅಂಗವಿಕಲರು ಹಾಗೂ ವಯಸ್ಸಾದವರಿಗೆ ಈ ಸ್ಮಾರ್ಟ್ ಸೇವೆಗಳು ಹೆಚ್ಚು ಅನುಕೂಲವಾಗಬಲ್ಲವು. ಪ್ರತಿಯೊಂದಕ್ಕೂ ಎದ್ದು ಕುಳಿತು ಮಾಡಲು ಕಷ್ಟವಾಗುವಂಥವರು ಮನೆಗೆ ಸ್ಮಾರ್ಟ್‌ ಉಪಕರಣಗಳನ್ನು ಅಳವಡಿಸಿಕೊಳ್ಳಬಹುದು.

ಏನಿದು ಸ್ಮಾರ್ಟ್‌ ಮನೆ?
ಸ್ಮಾರ್ಟ್‌ ಮನೆಯ ಪರಿಕಲ್ಪನೆ ಭಾರತದ ಮಟ್ಟಿಗೆ ಹೊಸತು. ಮುಂದುವರಿದ ದೇಶಗಳಲ್ಲಿ ಈಗಾಗಲೇ ಸ್ಮಾರ್ಟ್‌ ಮನೆಯ ಪರಿಕಲ್ಪನೆ ಹಳೆಯದಾಗಿದೆ. ಸ್ಮಾರ್ಟ್ ಮನೆಯ ಸೇವೆಗಳ ಮೇಲೆ ಸಾಕಷ್ಟು ಹೊಸ ಹೊಸ ಪ್ರಯೋಗಗಳೂ ನಡೆಯುತ್ತಿವೆ. ಮಾತಿಗೆ ಸ್ಪಂದಿಸುವ ಮನೆ ಬಾಗಿಲು, ಹೇಳಿದಂತೆ ಕೇಳುವ ಟಿವಿ, ಚಿಟಿಕೆ ಹೊಡೆದರೆ ಆಫ್‌ ಆಗುವ ಲೈಟ್‌ – ಇವೆಲ್ಲಾ ಹಾಲಿವುಡ್‌ ಚಿತ್ರಗಳಲ್ಲಿ ಬಹಳ ಹಿಂದೆಯೇ ಬಂದು ಹೋಗಿವೆ. ಆದರೆ, ಈ ಕಾಲ್ಪನಿಕವಾದ ವರ್ಚುವಲ್‌ ಜಗತ್ತು ಈಗ ನಿಜವಾಗಿದೆ.

ಅನಗತ್ಯವಾಗಿ ಉರಿಯುತ್ತಿರುವ ಲೈಟ್, ಕೋಣೆಯಲ್ಲಿ ಯಾರೂ ಇಲ್ಲದಿದ್ದರೂ ತಿರುಗುತ್ತಿರುವ ಫ್ಯಾನ್‌, ಯಾರೂ ನೋಡದಿದ್ದರೂ ಆನ್‌ ಆಗಿರುವ ಟಿವಿ, ಚಳಿ ಇದ್ದರೂ ಥಂಡಿ ಸೂಸುತ್ತಿರುವ ಏರ್‌ ಕಂಡೀಷನರ್‌ – ಇವುಗಳಿಂದ ವಿದ್ಯುತ್‌ ವ್ಯರ್ಥವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದನ್ನು ತಪ್ಪಿಸಲು ಇಕೊ (ಪರಿಸರ ಸ್ನೇಹಿ) ಉಪಕರಣಗಳು ಮಾರುಕಟ್ಟೆಗೆ ಬಂದಿವೆ. ಈ ಇಕೊ ಉಪಕರಣಗಳನ್ನು ಸ್ಮಾರ್ಟ್‌ ಆಗಿ ಬಳಸುವ ಮನೆಯೇ ಸ್ಮಾರ್ಟ್‌ ಮನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT