ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ನಲ್ಲಿ ‘ವಿಶಾಲ್‌’ ಬಿಕ್ಕಟ್ಟು

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಭಾರತದವನಾದ ನನಗೆ ಸಿಕ್ಕಾ ಎಂದರೆ ಏನು ಎನ್ನುವುದರ ನಿಜವಾದ ಅರ್ಥ ಏನೆಂಬುದು ತಿಳಿದಿರಲಿಲ್ಲ. ಈ ಬಗ್ಗೆ ನಾನು ಅವರನ್ನು ನೇರವಾಗಿ ಪ್ರಶ್ನಿಸಿದಾಗ, ಸಿಕ್ಕಾ ಎಂದರೆ ಹಿಂದಿ ಭಾಷೆಯಲ್ಲಿ ನಾಣ್ಯ ಎಂದರ್ಥ. ಹಣ ಎಂದೂ ಕರೆಯಬಹುದು ಎಂದು ಉತ್ತರಿಸಿದ್ದರು. ವಿಶಾಲ್‌ ಸಿಕ್ಕಾ ಎಂದರೆ ಸಾಕಷ್ಟು ಹಣ ಎಂದೂ ಅರ್ಥ. ಸಂಸ್ಥೆಗೆ ಸಾಕಷ್ಟು ಹಣ ಹರಿದು ಬರಲಿದೆ..’  ಇನ್ಸೊಸಿಸ್‌ ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಅವರು 2014ರಲ್ಲಿ ಸಿಕ್ಕಾ ಅವರನ್ನು ಹಾಡಿ ಹೊಗಳಿದ ಪರಿ ಇದು.

ಸಂಕಷ್ಟದಲ್ಲಿದ್ದ ಸಂಸ್ಥೆಯನ್ನು ಸಿಕ್ಕಾ ಸಮರ್ಥವಾಗಿ ಕಟ್ಟಿ ಬೆಳೆಸುತ್ತಾರೆ. ವಹಿವಾಟು, ವರಮಾನ, ನಿವ್ವಳ ಲಾಭ ಹೆಚ್ಚಿಸಿ ಸಂಪತ್ತು ಸೃಷ್ಟಿಸುತ್ತಾರೆ ಎಂದು ಸಹ ಸ್ಥಾಪಕರು ಸಿಕ್ಕಾ ಅವರ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಿಕ್ಕಾ ಅವರು ಕೂಡ ಆ ನಿರೀಕ್ಷೆಯನ್ನು ನಿಜ ಮಾಡುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕಿದ್ದರು. ಅದೇ ಕಾರಣಕ್ಕೆ ಅವರ ಸೇವಾವಧಿಯನ್ನೂ ವಿಸ್ತರಿಸಲಾಗಿತ್ತು.

ಆದರೆ, ಸಿಕ್ಕಾ ನೇತೃತ್ವದಲ್ಲಿನ ವೃತ್ತಿನಿರತ ನಿರ್ದೇಶಕ ಮಂಡಳಿಯು ನಂತರದ ದಿನಗಳಲ್ಲಿ ಕೈಗೊಂಡ ಹಲವಾರು ನಿರ್ಧಾರಗಳು ಪ್ರವರ್ತಕರಿಗೆ ಇಷ್ಟವಾಗಲಿಲ್ಲ. ಅದೇ ಕಾರಣಕ್ಕಾಗಿಯೇ ಅವರು ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಲು ಆರಂಭಿಸಿದರು. ಟೀಕಾಕಾರರ ಗುರಿ ಸಿಕ್ಕಾ ಅವರೇ ಆಗಿದ್ದರೆ ಎನ್ನುವುದು ಮಾತ್ರ ಆರಂಭದಲ್ಲಿ ಸ್ಪಷ್ಟವಾಗಿರಲಿಲ್ಲ. ಆದರೆ, ಮೊನ್ನೆ ಆಗಸ್ಟ್‌ 17ರಂದು  ಮೂರ್ತಿ ಅವರು ಸಿಕ್ಕಾ ಅವರು ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಹುದ್ದೆಗೆ ಲಾಯಕ್ಕಾಗಿದ್ದಾರೆಯೇ ಹೊರತು, ಸಿಇಒಗೆ ಅಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾರೆ. ಇದರ ಬೆನ್ನಲ್ಲೇ ಸಿಕ್ಕಾ ರಾಜೀನಾಮೆ ಪತ್ರ ಬೀಸಾಕುತ್ತಾರೆ. ಇದಕ್ಕೆಲ್ಲ ಮೂರ್ತಿ ಅವರೇ ಕಾರಣ ಎಂದು ನಿರ್ದೇಶಕ ಮಂಡಳಿ ವಾಗ್ದಾಳಿ ನಡೆಸುತ್ತಿದ್ದಂತೆ, ಅವುಗಳನ್ನೆಲ್ಲ ತಳ್ಳಿ ಹಾಕುವ ಮೂರ್ತಿ, ‘ಸಂಸ್ಥೆಯಿಂದ ನಾನು ಹಣ, ಅಧಿಕಾರ ಮತ್ತು ನನ್ನ ಮಕ್ಕಳಿಗಾಗಿ ಹುದ್ದೆ ಬಯಸಿಲ್ಲ’ ಎಂದೂ ತಿರುಗೇಟು ನೀಡುತ್ತಾರೆ.

ಸಿಕ್ಕಾ ಕುರಿತು ಆರಂಭದಲ್ಲಿನ ಶ್ಲಾಘನೆ, ಅಭಿಮಾನವು ಮೂರೇ ವರ್ಷಗಳಲ್ಲಿ  ಟೀಕೆಯಾಗಿ ಪರಿವರ್ತನೆಗೊಂಡಿದ್ದೇ ಇನ್ಫೊಸಿಸ್‌ನಲ್ಲಿ ಕಂಡು ಬಂದಿರುವ ಬಿಕ್ಕಟ್ಟಿನ ಮೂಲವಾಗಿದೆ. ಈ ಮೂರು ವರ್ಷಗಳಲ್ಲಿ ಸಂಸ್ಥೆ ಸಾಕಷ್ಟು ಬೆಳೆದಿದೆ. ಸಿಇಒ ವೇತನ, ಭತ್ಯೆ ಕೂಡ ವರ್ಷಕ್ಕೆ ₹ 72 ಕೋಟಿವರೆಗೆ ಏರಿಕೆಯಾಗಿತ್ತು. ಇದರಿಂದ ಷೇರುದಾರರ ಹಣದ ದುರ್ಬಳಕೆ ಆಗುತ್ತಿದೆ ಎನ್ನುವುದು ಸಂಸ್ಥಾಪಕರ ಆತಂಕವಾಗಿತ್ತು.

ಜರ್ಮನಿಯ ಸಾಫ್ಟ್‌ವೇರ್‌ ಸಂಸ್ಥೆ ಎಸ್ಎಪಿಯ (SAP)  ತಂತ್ರಜ್ಞಾನ ಮುಖ್ಯಸ್ಥರಾಗಿದ್ದ ಸಿಕ್ಕಾ ಅವರು, ಸಿಇಒ ಎಸ್‌. ಡಿ. ಶಿಬುಲಾಲ್‌ ಅವರಿಂದ 2014ರ ಜೂನ್‌ 12 ರಂದು ಹೊಸ ಸಿಇಒ ಆಗಿ ಅಧಿಕಾರ ಸ್ವೀಕರಿಸುತ್ತಾರೆ. ಇಲ್ಲಿಂದ ಸಂಸ್ಥೆಯು ಸಹ ಸ್ಥಾಪಕರ ನಿಯಂತ್ರಣ ಕಳಚಿಕೊಂಡು ವೃತ್ತಿನಿರತರ ವಶಕ್ಕೆ ಹೋಗುತ್ತದೆ. ಇದು ಸಂಸ್ಥೆಯ ಇತಿಹಾಸದಲ್ಲಿ ಹೊಸ ಅಧ್ಯಾಯದ ಮುನ್ನುಡಿಯಾಗಿರುತ್ತದೆ.

ಸಿಕ್ಕಾ ಅವರು ಹೊಸ ಹೊಣೆ ಹೊತ್ತುಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿಯೇ ನಿಭಾಯಿಸಲು ಆರಂಭಿಸುತ್ತಾರೆ. ಅದೇ ವರ್ಷದ ಅಕ್ಟೋಬರ್‌ನಲ್ಲಿ ಪ್ರಕಟವಾದ ದ್ವಿತೀಯ ತ್ರೈಮಾಸಿಕದಲ್ಲಿ ಸಂಸ್ಥೆಯ ಹಣಕಾಸು ಸಾಧನೆ (ನಿವ್ವಳ ಲಾಭ) ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ. ಇದರಿಂದ ಸಂಸ್ಥೆಯ ಷೇರು ಬೆಲೆ ಶೇ 6ರಷ್ಟು ಏರಿಕೆಯಾಗುತ್ತದೆ. ಸಂಸ್ಥೆಯ ನಾಲ್ವರು ಸ್ಥಾಪಕರು ₹ 6,484 ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಮಾರಾಟ ಮಾಡಿ ಲಾಭ ಬಾಚಿಕೊಳ್ಳುತ್ತಾರೆ.

ತಮ್ಮದೇ ಆದ ಮಾರ್ಗದಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಮುಂದಾದ ಸಿಕ್ಕಾ ಅವರು  ನಾರಾಯಣಮೂರ್ತಿ ಅವರಿಂದಲೇ ತೀವ್ರ ಟೀಕೆಗೆ ಗುರಿಯಾಗಿ ಸಂಸ್ಥೆಯಿಂದ ಹೊರ ನಡೆಯಬೇಕಾಯಿತು. 1981ರಲ್ಲಿ ಏಳು ಮಂದಿ ಸಹ ಸ್ಥಾಪಕರು ₹ 10 ಸಾವಿರ ಒಟ್ಟುಗೂಡಿಸಿ ಆರಂಭಿಸಿದ್ದ ಸಂಸ್ಥೆಯು ಈಗ ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿ ಬೆಳೆದಿದೆ. ಎರಡು ಲಕ್ಷಕ್ಕೂ ಹೆಚ್ಚು ತಂತ್ರಜ್ಞರಿಗೆ  ಆಶ್ರಯ ಕಲ್ಪಿಸಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಪ್ರವರ್ತಕರ ಅಪಾರ ಕೊಡುಗೆ ಇದೆ. ಬದಲಾದ ಕಾಲ ಘಟ್ಟಕ್ಕೆ ತಕ್ಕಂತೆ ಸಂಸ್ಥೆಯ ವಹಿವಾಟಿಗೆ ಹೊಸ ದಿಕ್ಕು ನೀಡಲು ಸಿಕ್ಕಾ ಅವರೂ ಶ್ರಮ ವಹಿಸಿದ್ದರು. ಈ ಉದ್ದೇಶಕ್ಕೆ ಅವರು ಕೈಗೊಂಡ ನಿರ್ಧಾರಗಳು ಪ್ರವರ್ತಕರಿಗೆ ಪಥ್ಯವಾಗಲಿಲ್ಲ. ಸಾಂಸ್ಕೃತಿಕ ಮೌಲ್ಯಗಳ ಸಂಘರ್ಷವೂ ಇದಕ್ಕೆ ಕಾರಣವಾಗಿದೆ.

36 ವರ್ಷಗಳ ಇತಿಹಾಸದಲ್ಲಿ ಸಂಸ್ಥೆ ಇದೇ ಮೊದಲ ಬಾರಿಗೆ ಅತಿದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. ಈ ಅಂತಃಸ್ಫೋಟವು ಏಳು ತಿಂಗಳಿನಿಂದಲೂ ಕುದಿಯುತ್ತಲೇ ಇತ್ತು. ಸಿಕ್ಕಾ ಅವರಿಗೆ ಭಾರಿ ಮೊತ್ತದ ವೇತನ ನಿಗದಿ ಮಾಡಿರುವುದು ಮತ್ತು ಸಂಸ್ಥೆ ತೊರೆದ ಇಬ್ಬರು ಉನ್ನತ ಅಧಿಕಾರಿಗಳಿಗೆ ಗುತ್ತಿಗೆ ರದ್ದು ಒಪ್ಪಂದದ ಅನ್ವಯ ಉದಾರವಾಗಿ ಪರಿಹಾರ ನೀಡಿರುವುದನ್ನು ಸಂಸ್ಥೆಯ ಸ್ಥಾಪಕರು ಪ್ರಶ್ನಿಸಲು ಆರಂಭಿಸಿದ್ದರು. ಸಂಸ್ಥೆಯು ಬೆಳೆಸಿಕೊಂಡು ಬಂದಿದ್ದ ಕಾರ್ಪೊರೇಟ್‌ ಸಂಸ್ಕೃತಿಯಿಂದ ವಿಮುಖವಾಗಿ ನಡೆಯುತ್ತಿದೆ ಎಂದೂ ಟೀಕಿಸಿದ್ದರು. ಇದರಿಂದ ಪ್ರವರ್ತಕರು ಮತ್ತು ನಿರ್ದೇಶಕ ಮಂಡಳಿ ನಡುವಣ ಸಂಬಂಧ ಬಿಗಡಾಯಿಸಲು ಆರಂಭಿಸಿತ್ತು.

ಹಿಂದೊಮ್ಮೆ ದೇಶದಲ್ಲಿನ ಮಾಹಿತಿ ತಂತ್ರಜ್ಞಾನ ರಂಗದ ಆದರ್ಶ ಸಂಸ್ಥೆಯಾಗಿದ್ದ ಇನ್ಫೊಸಿಸ್‌ನ ವರ್ಚಸ್ಸಿಗೆ ಈಗ ತೀವ್ರ ಧಕ್ಕೆ ಒದಗಿದೆ. ಸಂಸ್ಥೆಯಲ್ಲಿನ ಪರಸ್ಪರ ಅಪನಂಬಿಕೆಯ ವಾತಾವರಣದ ಕಾರಣಕ್ಕೆ ಹೊಸ ಸಮರ್ಥ ಉತ್ತರಾಧಿಕಾರಿಯ ನೇಮಕ ಅಷ್ಟೇನೂ ಸುಸೂತ್ರವಾಗಿ ಇರುವಂತೆಯೂ ಕಾಣುತ್ತಿಲ್ಲ.

ಸಂಸ್ಥೆಯ ಪ್ರವರ್ತಕರ ಕುಟುಂಬಕ್ಕೆ ಸೇರದ ಹೊರಗಿನವರಾದ ಸೈರಸ್‌ ಮಿಸ್ತ್ರಿ ಅವರನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಟಾಟಾ ಸನ್ಸ್‌ನಿಂದಲೂ ಹಠಾತ್ತಾಗಿ ಹೊರ ಹಾಕಲಾಗಿತ್ತು. ಹೊರಗಿನವರಾದ ವಿಶಾಲ್‌ ಸಿಕ್ಕಾ ಅವರೂ ಈಗ ಇನ್ಫೊಸಿಸ್‌ನಿಂದ ಹಠಾತ್ತಾಗಿ ತಾವಾಗಿಯೇ ಹೊರ ನಡೆದಿದ್ದಾರೆ. ಈ ಎರಡೂ ವಿದ್ಯಮಾನಗಳಿಗೆ ಸಂಸ್ಥೆಗಳ ಸಹ ಸ್ಥಾಪಕರು ಮತ್ತು ಹೊರಗಿನವರು ಮುಖ್ಯಸ್ಥರಾಗಿರುವ ನಿರ್ದೇಶಕ ಮಂಡಳಿ ಮಧ್ಯೆ ನಡೆದ ಬೋರ್ಡ್‌ರೂಂ ಕಲಹವೇ ಕಾರಣ ಎನ್ನುವುದು ಕುತೂಹಲಕಾರಿ ವಿದ್ಯಮಾನವಾಗಿದೆ.

ಪ್ರವರ್ತಕರಲ್ಲದವರನ್ನು ಸಂಸ್ಥೆಯ ಸಿಇಒ ಹುದ್ದೆಗೆ ನೇಮಕ ಮಾಡಿದಾಗ, ಕಾರ್ಯವೈಖರಿ, ತತ್ವಾದರ್ಶಕಗಳ ಪಾಲನೆ ವಿಷಯದಲ್ಲಿ ಪ್ರವರ್ತಕರ ಜತೆ ಸಂಘರ್ಷ ನಡೆದು ಅಂತಿಮವಾಗಿ ‘ಹೊರಗಿನವರು’ ಹೊರ ನಡೆಯುತ್ತಿರುವುದು ಈ ಎರಡೂ ಉದ್ದಿಮೆ ಸಂಸ್ಥೆಗಳಲ್ಲಿ ಕಂಡು ಬಂದಿದೆ.

ಸಂಸ್ಥೆಯನ್ನು ಮುನ್ನಡೆಸುವ ಉತ್ತರಾಧಿಕಾರಿಗಳ ನೇಮಕ ವಿಷಯದಲ್ಲಿ ಭಾರತದ ಕಾರ್ಪೊರೇಟ್‌ ಸಂಸ್ಥೆಗಳು ಜಾಗತಿಕ ಸಂಸ್ಥೆಗಳಂತೆ ತುಂಬ ಮುಂಚಿತವಾಗಿ ಕಾರ್ಯಪ್ರವೃತ್ತವಾಗುವುದಿಲ್ಲ. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಪ್ರವರ್ತಕರು ನಿರ್ವಹಿಸಬೇಕಾದ ಹೊಣೆಗಾರಿಕೆ, ನಿರ್ದೇಶಕ ಮಂಡಳಿ ಸದಸ್ಯರ ಜವಾಬ್ದಾರಿ ಮತ್ತು ಷೇರುದಾರರ ಪಾತ್ರವನ್ನು ನಿಖರವಾಗಿ ವ್ಯಾಖ್ಯಾನಿಸದಿರುವುದೂ ವಿವಾದಕ್ಕೆ ಎಡೆ ಮಾಡಿಕೊಡುತ್ತದೆ. ಎಲ್ಲ ಭಾಗಿದಾರರ ನಿರ್ದಿಷ್ಟ ಹೊಣೆಗಾರಿಕೆಗಳನ್ನು ನಿಗದಿ ಪಡಿಸಿದರೆ ಇಂತಹ ಬಿಕ್ಕಟ್ಟು ಸೃಷ್ಟಿಯಾಗುವುದಿಲ್ಲ ಎಂಬುದು ಪರಿಣತರು ಅಭಿಪ್ರಾಯವಾಗಿದೆ.

ಇನ್ಫೊಸಿಸ್‌ನಲ್ಲಿನ ಈ ಬೋರ್ಡ್‌ರೂಂ ಕಲಹ ಇನ್ನೂ ಮುಂದುವರೆಯುವುದೇ? ಅಥವಾ ಕದನ ವಿರಾಮ ಘೋಷಣೆ ಆಗುವುದೇ ಎನ್ನುವುದು ಇನ್ನಷ್ಟು ದಿನಗಳ ಕಾಲ ಕುತೂಹಲಕಾರಿ ವಿದ್ಯಮಾನವಂತೂ ಆಗಿರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT