ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪನ ಹೊಟ್ಟೆಯಲ್ಲಿ ಬೆಳ್ಳಿ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗಡಿಯೊಳಗೆ ಕಾಲಿಟ್ಟ ಕೂಡಲೇ ಸಾಲುಸಾಲು ಗಣಪನ ಮೂರ್ತಿ. ಗಣಪನ ಪಕ್ಕದಲ್ಲೇ ಗೌರಿ. ಕೆಂಪು, ಹಳದಿ, ಚಿನ್ನದ ಬಣ್ಣದಿಂದ ಅಲಂಕಾರ ಮಾಡಿಕೊಂಡ ಗಣಪನ ಯಾವ ಮೂರ್ತಿಯೊಳಗೆ ಬೆಳ್ಳಿ ನಾಣ್ಯ ಇರಬಹುದು ಎಂಬ ಕುತೂಹಲ ಅಲ್ಲಿಗೆ ಬಂದಿದ್ದ ಗ್ರಾಹಕರಲ್ಲಿತ್ತು. ಮತ್ತೆ ಕೆಲವರು ‘ಎಲ್ಲಾ ಮೂರ್ತಿಗಳಲ್ಲಿ ಬೆಳ್ಳಿ ನಾಣ್ಯ ಇದೆಯೇ?’, ‘ಎಷ್ಟು ಗ್ರಾಂನ ಬೆಳ್ಳಿ ನಾಣ್ಯ ಇಟ್ಟಿದ್ದಾರೆ’ ಎಂದು ಮಾತುಕತೆಯಲ್ಲಿ ತೊಡಗಿದ್ದರು.

ನಗರದಲ್ಲಿ ಪರಿಸರ ಸ್ನೇಹಿ ಗಣಪನನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ‘ಸಮರ್ಪಣ ಸಮಾಜ ಸ್ಪಂದನ ಸಂಘ’ ಗಣೇಶನ ಮೂರ್ತಿಯೊಳಗೆ ಬೆಳ್ಳಿ ನಾಣ್ಯಗಳನ್ನು ಇಟ್ಟು ಮಾರುತ್ತಿದೆ. ಚೌತಿ ಹಬ್ಬದ ದಿನ ಪರಿಸರ ಸ್ನೇಹಿ ಗಣಪನನ್ನು ತಂದು ಪೂಜಿಸಿದರೆ ಬೆಳ್ಳಿ ನಾಣ್ಯಗಳನ್ನು ತಮ್ಮದಾಗಿಸಿಕೊಳ್ಳುವ ಅವಕಾಶ ಗ್ರಾಹಕರದ್ದು.

ಮೂರ್ತಿಯೊಳಗೆ 3ಗ್ರಾಂ ತೂಕದ ಬೆಳ್ಳಿ ನಾಣ್ಯಗಳನ್ನು ಇರಿಸಲಾಗಿದೆ. ‘ಇಲ್ಲಿಯ ತಲಾ 100 ಮೂರ್ತಿಗಳಲ್ಲಿ 90 ಮೂರ್ತಿಗಳಲ್ಲಿ ಬೆಳ್ಳಿ ನಾಣ್ಯಗಳನ್ನು ಹಾಕಿದ್ದೇವೆ. ಪರಿಸರ ಸ್ನೇಹಿ ಗಣಪನನ್ನು ಪ್ರೋತ್ಸಾಹಿಸಬೇಕು ಎಂಬ ನಮ್ಮ ಕಾಳಜಿಗೆ ನಗರದ ಕೆಲವು ಆಭರಣದ ಮಳಿಗೆಗಳೂ ಕೈ ಜೋಡಿಸಿದ್ದಾರೆ. ರಾಜಾಜಿನಗರದ ಗಣೇಶ ಜ್ಯುವೆಲ್ಲರಿ, ಅಂಬಿಕಾ ಜ್ಯುವೆಲ್ಲರಿ, ಭೀಮಾ ಜ್ಯುವೆಲ್ಲರ್ಸ್ ಬೆಳ್ಳಿ ನಾಣ್ಯಗಳನ್ನು ಒದಗಿಸಿದ್ದಾರೆ’ ಎನ್ನುತ್ತಾರೆ ಸಮರ್ಪಣ ಸಮಾಜ ಸ್ಪಂದನ ಸಂಘದ ಸ್ಥಾಪಕರಾದ ಶಿವಕುಮಾರ ಹೊಸಮನಿ ಅವರು.

ಐದು ವರ್ಷಗಳಿಂದ ಸಮರ್ಪಣ ಸಮಾಜ ಸ್ಪಂದನ ಸಂಘ ಪರಿಸರಸ್ನೇಹಿ ಗಣಪನನ್ನು ಮಾರಾಟ ಮಾಡುತ್ತಾ ಬರುತ್ತಿದೆ. ಈ ಗಣಪ ಪರಿಸರ ಸ್ನೇಹಿಯೊಂದಿಗೆ ಜನಸ್ನೇಹಿಯೂ ಹೌದು. ಇಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲ ಮೂರ್ತಿಗಳನ್ನು ನಾಟಿ ಹಸುವಿನ ಸೆಗಣಿ ಹಾಗೂ ಕೆರೆಯ ಅಂಚಿನ ಫಲವತ್ತತೆಯ ಮಣ್ಣಿನಿಂದ ತಯಾರಿಸಲಾಗಿದೆ. ಈ ಮೂರ್ತಿಯನ್ನು ನೀರಿಗೆ ಹಾಕಿದ 31 ನಿಮಿಷದೊಳಗೆ ಸಂಪೂರ್ಣ ಕರಗಿ ಹೋಗುತ್ತದೆ.

ಇಲ್ಲಿ ಬೆಳ್ಳಿ ನಾಣ್ಯದ ಜೊತೆಗೆ ಎಲ್ಲಾ ಮೂರ್ತಿಗಳಲ್ಲಿ ವಿವಿಧ ಬಗೆಯ ಧಾನ್ಯಗಳನ್ನು ಹಾಕಿರುತ್ತಾರೆ. ಸಮರ್ಪಣ ಸಂಸ್ಥೆ ಗ್ರಾಹಕರು ಮನೆಯಲ್ಲಿಯೇ ಗಣಪನ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂಬ ಉದ್ದೇಶದಿಂದ ಗ್ರೋ ವಿಂಗ್‌ ಬ್ಯಾಗ್‌ (ಬೆಳೆ ಬೆಳೆಯುವ ಬ್ಯಾಗ್‌) ಸಹ ಗ್ರಾಹಕರಿಗೆ ನೀಡುತ್ತಾರೆ. 16 ಇಂಚು ಮೂರ್ತಿಗೆ 20 ಇಂಚಿನ ಬ್ಯಾಗ್‌ ನೀಡುತ್ತಾರೆ. ಗ್ರಾಹಕರು ಮೂರ್ತಿಯನ್ನು ವಿಸರ್ಜಿಸಿದ ಬಳಿಕ ಮಣ್ಣು ಕೆಳಗಡೆ ಉಳಿಯುತ್ತದೆ. ‘ಕೆರೆ ಅಂಚಿನ ಫಲವತ್ತತೆಯ ಮಣ್ಣು ಆಗಿರುವುದರಿಂದ ಇದರಲ್ಲಿ ಧಾನ್ಯ ಬೇಗ ಮೊಳಕೆಯೊಡೆದು ಸಸಿ ಹೊರಬರುತ್ತದೆ’ ಎನ್ನುತ್ತಾರೆ ಶಿವಕುಮಾರ ಹೊಸಮನಿ.

ಕರ್ಣಕುಂಡಲ, ತುಂಬೆ, ಸೌತೆ, ಕುಂಬಳಕಾಯಿ, ತರಕಾರಿ ಬೀಜಗಳು, ತುಳಸಿ, ಒಂದೆಲಗ, ಹೀಗೆ ತಿಂಗಳೊಳಗೆ ಬೆಳೆ ಬೆಳೆಯುವಂತಹ ಧಾನ್ಯಗಳನ್ನೇ ಮೂರ್ತಿಯೊಳಗೆ ಹಾಕಿದ್ದಾರೆ. ಈ ರೀತಿಯ ಪ್ರಯೋಗದಿಂದ ಜನರು ಹೆಚ್ಚು ಮೂರ್ತಿಗಳನ್ನು ಕೊಳ್ಳುತ್ತಾರೆ ಎಂಬುದು ಅವರ ವಿವರಣೆ. 

‘ಇಲ್ಲಿ ಸಿದ್ಧಿ, ಬುದ್ಧಿ ಹೆಬ್ಬೆರಳು ಗಾತ್ರದ ಗಣಪನಿಂದ 7 ಇಂಚು, 9 ಇಂಚು, 11, 15, 17, 19 ಇಂಚು ತನಕದ ಗಣಪನನ್ನು ಮಾರುತ್ತಾರೆ. ಗರಿಷ್ಠ ಅಂದರೆ 19 ಇಂಚು ಗಣಪನನ್ನು ಮಾತ್ರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ದೊಡ್ಡ ಗಾತ್ರದ ಗಣಪನನ್ನು ರಸ್ತೆ, ಸಾರ್ವಜನಿಕ ಪೂಜೆಗಳಲ್ಲಿ ಮಾತ್ರ ಇಡುತ್ತಾರೆ. ಇದು ಕಳೆದ 5 ವರ್ಷಗಳ ಮಾರಾಟದ ಅನುಭವಗಳಿಂದ ನಮಗೆ ತಿಳಿಯಿತು. ಹೀಗಾಗಿ 19 ಇಂಚು ತನಕದ ಗಣಪನನ್ನು ಮಾತ್ರ ಇಲ್ಲಿ ಮಾರುತ್ತೇವೆ’ ಎನ್ನುತ್ತಾರೆ ಶಿವಕುಮಾರ ಹೊಸಮನಿ.

ಇಲ್ಲಿಯ ಗಣಪನಿಗೆ ಹಣೆ ಭಾಗದಲ್ಲಿ ಜಾಗ ಖಾಲಿ ಬಿಡಲಾಗಿರುತ್ತದೆ. ಗ್ರಾಹಕರು ಅವರ ಮನೆ ಸಂಪ್ರದಾಯದಂತೆ ಅಡ್ಡನಾಮ, ಉದ್ದನಾಮ, ತ್ರಿಶೂಲ ನಾಮ, ವಿಭೂತಿ ಹಾಕಿಕೊಳ್ಳಬಹುದು. ಇದು ಇಲ್ಲಿಯ ಗಣಪನ ವಿಶೇಷತೆ.

ಬಣ್ಣರಹಿತ ಗಣಪನನ್ನು ಕೊಳ್ಳಲು ಜನರು ಹಿಂದೇಟು ಹಾಕುತ್ತಾರೆ. ಹೀಗಾಗಿ ಮೂರ್ತಿಗಳಿಗೆ ನೈಸರ್ಗಿಕ ಬಣ್ಣಗಳನ್ನೇ ಬಳಿಯಲಾಗುತ್ತದೆ. ಈ ಬಣ್ಣಗಳು ಸಹ ಪರಿಸರ ಸ್ನೇಹಿ. ಮರದ ಗೋಂದಿನಿಂದ ಈ ಬಣ್ಣಗಳನ್ನು ತಯಾರಿಸಲಾಗುತ್ತದೆ. ‘ಇದರಲ್ಲಿ  ಸೀಸ ಅಥವಾ ಯಾವುದೇ ರಾಸಾಯನಿಕ ಬಣ್ಣಗಳನ್ನು ಮಿಶ್ರಣ ಮಾಡಿಲ್ಲ’ ಎಂದು ಸ್ಪಷ್ಟನೆ ನಿಡುತ್ತಾರೆ ಶಿವಕುಮಾರ ಹೊಸಮನಿ.

ಮೂರ್ತಿ ವಿಸರ್ಜಿಸಿದ ಬಳಿಕ ಗಿಡ ಬೆಳೆಯಲು ಮನೆಯಲ್ಲಿ ಜಾಗವಿಲ್ಲ, ಅಪಾರ್ಟ್‌ಮೆಂಟ್‌ನಲ್ಲಿ ಮಾಲೀಕರ ಅನುಮತಿ ಇಲ್ಲ, ಗಿಡವನ್ನು ನೋಡಿಕೊಳ್ಳಲು ಸಮಯವಿಲ್ಲ ಎಂಬಂತಹವರು ಮೂರ್ತಿ ವಿಸರ್ಜಿಸಿದ ಬಳಿಕ ಆ ಮಣ್ಣನ್ನು ಸಮರ್ಪಣ ಸಂಸ್ಥೆಗೆ ಹಿಂತಿರುಗಿಸಬಹುದು. ಅವರು ಅರಣ್ಯ ಇಲಾಖೆಯಿಂದ ಪಡೆದ ಬೀಜಗಳನ್ನು ಮಣ್ಣಿನ ಉಂಡೆಯೊಳಗೆ ಇರಿಸಿ ಉತ್ತರ ಕನ್ನಡ, ಮಂಗಳೂರು ಅಥವಾ ಬೇರೆ ಕಡೆಗೆ ಹೋಗುವ ಬಸ್‌ನ ಪ್ರಯಾಣಿಕರಿಗೆ ನೀಡಿ ಕಾಡು ಪ್ರದೇಶಗಳಿಗೆ ಬಿಸಾಕುವಂತೆ ಹೇಳುತ್ತಾರೆ. ಇದರಿಂದ ಆ ಮಣ್ಣು ವಾಪಸ್‌ ಭೂಮಿಗೆ ಸೇರುತ್ತದೆ’ ಎಂದು ಕಾಳಜಿ ವ್ಯಕ್ತಪಡಿಸುತ್ತಾರೆ.

ಇಲ್ಲಿ ಗಣಪನಿಗೆ ₹180ರಿಂದ ₹550 ತನಕ ಬೆಲೆ ಇವೆ.

ಸಾರ್ವಜನಿಕ ಉತ್ಸವಗಳಲ್ಲಿ ಇಡುವ ನಾಲ್ಕರಿಂದ 5 ಅಡಿ ಎತ್ತರದ ಪರಿಸರ ಸ್ನೇಹಿ ಗಣಪನನ್ನು ಮಾರುಕಟ್ಟೆಗೆ ತರಲು ಸಮರ್ಪಣ ಸಂಸ್ಥೆ ಆಲೋಚಿಸುತ್ತಿದೆ. ‘ಆದರೆ ಮಣ್ಣಿನಿಂದ ರಚಿಸುವ ಗಣಪಗಳನ್ನು ಗರಿಷ್ಠ ನಾಲ್ಕು ಅಡಿ ತನಕ ಮಾತ್ರ ರಚಿಸಬಹುದು. ಸಂಪೂರ್ಣವಾಗಿ ಮಣ್ಣಿನಿಂದಲೇ ಈ ಮೂರ್ತಿಗಳನ್ನು ಮಾಡುವುದರಿಂದ ತುಂಬ ಭಾರ ತಡೆದುಕೊಳ್ಳಲ್ಲ. ಅಲ್ಲಲ್ಲಿ ಬಿರುಕು ಬಿಡುವ ಸಾಧ್ಯತೆಗಳು ಅಧಿಕ. ಈಗ ನಾಲ್ಕು ಅಡಿ ತನಕದ ಕೆಲ ಮೂರ್ತಿಗಳನ್ನು ತರಿಸಿಕೊಂಡಿದ್ದೇವೆ’ ಎಂದು ಹೇಳುತ್ತಾರೆ ಶಿವಕುಮಾರ.

ಸಂಪೂರ್ಣ ಪರಿಸರ ಸ್ನೇಹಿ ಗಣಪನನ್ನೇ ಮಾರಬೇಕು ಎಂಬ ಉದ್ದೇಶ ಹೊಂದಿರುವ ಸಮರ್ಪಣ ಸಂಸ್ಥೆ ಮುಂದಿನ ವರ್ಷದಿಂದ ಗಣಪನಿಗೆ ಭಿನ್ನ ಭಿನ್ನ ಬಟ್ಟೆಯನ್ನು ತೊಡಿಸುವ ಆಲೋಚನೆ ಮಾಡುತ್ತಿದೆ. ಇದರಿಂದ ಗಣೇಶನಿಗೆ ಹೊಸ ಕಳೆಯೂ ಬರುತ್ತದೆ ಎನ್ನುತ್ತಾರೆ ಇವರು.

ಸಂಪರ್ಕಕ್ಕೆ: 99800 08074

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT