ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸುನೀಗಿದ ಶಿಶುರಾಶಿ ನಡುವೆ...

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇಡೀ ದೇಶ ಶ್ರೀಕೃಷ್ಣನ ಬಾಲಲೀಲೆಗಳನ್ನು ಸಂಭ್ರಮಿಸುವಾಗ ಕೇವಲ ಅರವತ್ತು ಲಕ್ಷ ರೂಪಾಯಿಗಳನ್ನು, ಬಡವರು ಹೆಚ್ಚಾಗಿ ಬಳಸುವ ಸರ್ಕಾರಿ ಆಸ್ಪತ್ರೆಗೆ ಒದಗಿಸಲಾರದೆ ‘ಗೋರಕ್ಷಕಪುರ’ದಲ್ಲಿ (ಗೋರಖಪುರ) ಅರವತ್ತು ಮಕ್ಕಳು ಉಸಿರಾಡುವ ಗಾಳಿ ಇಲ್ಲದೆ ಪ್ರಾಣಬಿಟ್ಟವು. ‌

ದೇಶದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಅಂದು ಅಪಹಾಸ್ಯದ ದುರಂತವೊಂದರ ಪರಮಾವಧಿಯಾಗಿತ್ತು. 25 ವರ್ಷಗಳಿಂದಲೂ ಮಠದ ಸನ್ಯಾಸಿಯೊಬ್ಬರನ್ನು ಈ ಕ್ಷೇತ್ರ ನಾಯಕರನ್ನಾಗಿ ಆರಿಸಿ ಈಗಂತೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿರಿಸಿದೆ. ಈ ‘ರಾಷ್ಟ್ರೀಯ ದುರಂತ’
ವನ್ನು ಕುರಿತು ರಾಜ್ಯವಾಳುವ ಮುಖ್ಯಮಂತ್ರಿ ‘ಮಿದುಳು ಅಶಕ್ತತೆಯಿಂದ ಮಕ್ಕಳು ಸತ್ತಿವೆ. ಇದೆಲ್ಲವನ್ನೂ ಆಮ್ಲಜನಕ ಸಿಲಿಂಡರ್ ಇಲ್ಲದ ಕೊರತೆ ಎನ್ನಲಾಗದು’ ಎಂದು ತಿರುಚಿ ಹೇಳುತ್ತಿದ್ದಾರೆ. ಅಲ್ಲದೇ, ತನಿಖೆಗೆ ಸಮಿತಿ ಕೂಡ ರಚಿಸಿದ್ದಾರೆ.

ಪರದಾಡಿಕೊಂಡು ಆಮ್ಲಜನಕ ಸಿಲಿಂಡರ್ ತರಲು ಹೆಣಗಾಡುತ್ತಿದ್ದ ಮುಸ್ಲಿಂ ಡಾಕ್ಟರೊಬ್ಬರ ಮೇಲೆ ತಪ್ಪನ್ನಿರಿಸಿ ಅಮಾನತಿನಲ್ಲಿಯೂ ಇಟ್ಟಿದ್ದಾರೆ. ‘ನಮ್ಮ ತಾಕತ್ತು ಕಮ್ಮಿಯಲ್ಲ’ ಎಂದು ಸವಾಲಿನ ಭಾಷಣವನ್ನು ಮಾಡುತ್ತಿರುವ ದೇಶದ ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣವನ್ನು ಮೆಚ್ಚುವಾಗಲೇ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷ, ಕ್ವಿಟ್ ಇಂಡಿಯಾಗೆ 75 ವರ್ಷ, ಸಾರ್ವಜನಿಕ ಗಣೇಶೋತ್ಸವಕ್ಕೆ 125ನೇ ವರ್ಷ ಎಂದು ಹೇಳುವ ಸೂಕ್ಷ್ಮಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಎಲ್ಲಿಗೆಲ್ಲಿಯ ಸಂಬಂಧ!

ಶಿಶುಗಳ ಮರಣ ಸಂಖ್ಯೆ ಬೆಳೆಯುತ್ತಾ 70 ದಾಟಿದೆ. ಅವು, ಸರ್ಕಾರಿ ಆಸ್ಪತ್ರೆಗಳೆಂಬ ಕಸಾಯಿಖಾನೆಯೊಳಗೆ ಕರುಣೆಯಿಲ್ಲದ ಸಮಾಜದಲ್ಲಿ ಕಣ್ಣುಮುಚ್ಚುತ್ತಿವೆ.ಸರ್ಕಾರಿ ಆಸ್ಪತ್ರೆಗಳು ಸಮಾಜದ ಪ್ರತಿಕನ್ನಡಿ. ಇಡೀ ದೇಶವೇ ಖಾಸಗೀಕರಣದತ್ತ ಸಾಗುತ್ತಿರುವ ವ್ಯಾಪಾರಿ
ಲೋಕದ ಆರ್ಭಟದ ಆಸ್ಪತ್ರೆಗಳಿಗೆ ಪ್ರವೇಶ ಮಾಡಲಾಗದ ಬಡವರು ಅಲ್ಲಿರುತ್ತಾರೆ. ಗೋಪಾಲನ ಕೊಳಲಿನ ದನಿ ಹಿಡಿದು ಅಂಬಾ ಎನ್ನುವ ಗೋವುಗಳಿಗೆ ಬೆಳಗಾನೆ ಎದ್ದು ಕೈತಿಂಡಿ ಕೊಡುವ ಮುಖ್ಯಮಂತ್ರಿ, ಈ ಬಡ ಆಸ್ಪತ್ರೆಯ ಹಸುಳೆಗಳಿಗೆ ಕೈತಿಂಡಿ ಕೊಡುವುದಿರಲಿ ಉಸಿರಾಡಲು ಗಾಳಿ ನೀಡಿದ್ದರೆ ಅವರು ನಿಜ ಗೋಪಾಲಕರಾಗಿಬಿಡುತ್ತಿದ್ದುದು ಸತ್ಯ.

ಮಿದುಳು ಅಶಕ್ತವಾಗುವುದೇ ಆಮ್ಲಜನಕ ಕೊರತೆ ಯಿಂದ ಎಂಬುದು ಆರೋಗ್ಯ ನೀತಿ ಅರಿತ ಎಲ್ಲರಿಗೂ ಗೊತ್ತು. ಆಗಿಹೋದ ಪ್ರಮಾದಕ್ಕೆ ಸಾರ್ವಜನಿಕರಲ್ಲಿ ಕ್ಷಮೆ ಕೋರಬೇಕಾಗಿತ್ತು. ಶಿಶುಗಳ ಮಾರಣಹೋಮದ ನೋವನ್ನು ಸನ್ಯಾಸಿಯು ಸಂಸಾರಿಗಳಪರಕಾಯ ಪ್ರವೇಶ ಮಾಡಿ ಅನುಭವಿಸಬೇಕಾಗಿತ್ತು.ಅಶಕ್ತ ಆರೋಗ್ಯ ಮಂತ್ರಿಯ ರಾಜೀನಾಮೆ ಕೇಳಿ ಆಡಳಿತವನ್ನು ಭದ್ರಪಡಿಸಿಕೊಳ್ಳಬೇಕಾಗಿತ್ತು. ಇದು ಬಿಟ್ಟು ಮದ
ರಸಾಗಳಲ್ಲಿ ತ್ರಿವರ್ಣ ಧ್ವಜ ಹಾರಿಸದಿದ್ದರೆ ಆ ಮತದವರನ್ನು ತಪ್ಪಿತಸ್ಥರನ್ನಾಗಿಸಲು ಆದೇಶ ನೀಡುತ್ತಾರೆ.

ಬಡತನಕ್ಕೆ ಜಾತಿ ಮತವೆಂಬ ಭೇದವಿಲ್ಲ. ಯಾವುದೇ ವಿಪತ್ತನ್ನು, ಅಶಕ್ತ ಆಡಳಿತವನ್ನು ಮರೆಮಾಚಲು ಮತೀಯ ಆಸರೆಗೆ ಹೋಗುವುದು ರಾಜಕಾರಣದಲ್ಲಿ ಒಂದು ಕಾಯಿಲೆ. ಅದು ಸಮಾಜವನ್ನು ಅಂಟುಜಾಡ್ಯಕ್ಕೆ ತಿರುಗಿಸುವ ವ್ರಣ.

ವೃತ್ತಿನಿರತ ಮುಸ್ಲಿಂ ವೈದ್ಯನ ಅಮಾನತು ವಿಧಾನದಲ್ಲಿ ಆಡಳಿತ ವೈಫಲ್ಯವನ್ನು ಮುಚ್ಚಲಾಗುವುದಿಲ್ಲ. ಈ ಬಗ್ಗೆ ಮೌನವಾಗಿದ್ದು, ಸಾರ್ವಜನಿಕ ಗಣೇಶ ಉತ್ಸವದ 125ನೇ ವರ್ಷಾಚರಣೆ ಮುಂದಿಟ್ಟುಕೊಂಡು ಮಾಡುವ ರಾಷ್ಟ್ರೀಯ ಭಾಷಣವನ್ನು ಪ್ರಧಾನಿಯವರು ವರಕವಿ ಬೇಂದ್ರೆ ಹೇಳುವ ‘ಸ್ವೈರತೆಗೂ ಸ್ವಾತಂತ್ರ್ಯಕು ಇಹುದು ಅಜಗಜಾಂತರ– ಮತದ ಹೆಮ್ಮೆ ಬರಡು ಎಮ್ಮೆ’ ಎಂಬ ಸೂಕ್ಷ್ಮ ಮಾತಿನಲ್ಲಿ ಗಮನಿಸಬೇಕು. ಹಾಗಾಗಿ ಮೊನ್ನೆ ಉಪರಾಷ್ಟ್ರಪತಿಯವರು ಅಧಿಕಾರವನ್ನು ಹಸ್ತಾಂತರಿಸುವಾಗ ಹೇಳಿರುವ ‘ಮುಸ್ಲಿಮರು ಅಭದ್ರತೆಯ ಪರಿಸ್ಥಿತಿ ಎದುರಿಸುತ್ತಿದ್ದಾರೆ’ ಎಂಬ ಮಾತನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಾಗುವುದಿಲ್ಲ.

ಉತ್ತರ ಪ್ರದೇಶವು ಸರ್ವಜಾತಿ ಮತಗಳು ಕೂಡಿ ಬಾಳುವ ಭಾರತದ ಪ್ರತೀಕ. ಆ ನೆಲವು ಸಾವಿರಾರು ವರ್ಷ ಎಲ್ಲಾ ಮತದ ಆಡಳಿತವನ್ನು ಅರಗಿಸಿಕೊಂಡಿದೆ. ಅದನ್ನು ನೆಲದಾಳದಲ್ಲಿ ಭಾರತೀಯಗೊಳಿಸಿಕೊಂಡಿದೆ. ಯಮುನೆ, ಗಂಗೆಯರೆಲ್ಲರೂ ಸೇರಿ 25 ಕೋಟಿ ಜನಮಿಶ್ರಣವನ್ನು ಸಲಹುತ್ತಿದ್ದಾರೆ. ಶ್ರೀಕೃಷ್ಣನ ಕೊಳಲ ದನಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಮನೆಯ ಗೋವು ರಾಸುಗಳೆಲ್ಲವೂ ಕಿವಿ ನಿಮಿರಿಸುತ್ತವೆ. ಆಸ್ಪತ್ರೆಯಲ್ಲಿ ಅಸುನೀಗುತ್ತಿರುವ ಶಿಶುರಾಶಿಗಳಲ್ಲಿ ಹಿಂದೂ, ಮುಸ್ಲಿಂ, ದಲಿತ ಇತ್ಯಾದಿ ಸಮಾನ ಬಡತನದ ಸಂಕಟಗಳಿವೆ.

ಕವಿ ರವೀಂದ್ರರು ಗೆಳೆಯ ಎ.ಎಂ. ಬೋಸ್ ಅವರಿಗೆ ಕಾಗದ ಬರೆವಾಗ ‘I will never allow patriotism to triumph over humanity as long as I live’ ಎಂದು 1908ರಲ್ಲೇ ಹೇಳಿದ್ದರು. ಆಗ ವಂಗ ನೆಲವನ್ನು ಒಡೆದಾಳುವ ಪರಂಗಿಯವರ ಕಾಲ. ಈಗ ಇದು ಶೀತಲ ಸಮರದ ಪ್ರಜಾಭಾರತ. ಇಲ್ಲಿ ಬಡತನದ ಮೇಲೆ ಅಸ್ತ್ರ ಪ್ರಯೋಗಗಳಾಗಬೇಕೆ ಹೊರತು ಚರಿತ್ರೆಯನ್ನು ಕೆದಕುತ್ತಾ ಗುದ್ದು ಅಗೆಯುವ ಸದ್ದುಗಳಾಗಬಾರದು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಸ್ಥಿತಿಗತಿಯುನಿರಾಶಾದಾಯಕವಾಗಿದೆ ಎಂದು ಮೊನ್ನೆ ಲೋಕಸಭೆಯಲ್ಲಿ ಮಂಡಿಸಲಾದ ಎರಡನೇ ಕಂತಿನ ಆರ್ಥಿಕ ಸಮೀಕ್ಷೆ ಹೇಳುತ್ತಿದೆ. ಅಂದರೆ ನೋಟುಗಳ ಮರುವಿನ್ಯಾಸದಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ವಿಧಾನದಿಂದ ಬಡವರ ಬದುಕನ್ನು ಮೇಲೇರಿಸುತ್ತೇವೆಂಬ ಅಂದಿನ ಭಾಷಣಗಳೆಲ್ಲವೂ ಈಗ ಹುಸಿಯಾಗಿವೆ.

ರಾಜ್ಯದಲ್ಲಿ, ರಾಷ್ಟ್ರದಲ್ಲಿ ಮುಂದಿನ ಚುನಾವಣೆಮೇಲೆ ಕಣ್ಣಿಟ್ಟೇ ಎಲ್ಲಾ ಪಕ್ಷಗಳ ಭಾಷಣಗಳು ಪ್ರಾರಂಭವಾಗಿವೆ. ಇವುಗಳ ಆರ್ಭಟದಲ್ಲಿ ಆಸ್ಪತ್ರೆಗಳಲ್ಲಿ
ಶಿಶುಗಳು ಪ್ರಾಣ ಬಿಡುವುದಾಗಲೀ ಹೊಲಗದ್ದೆಗ ಳಲ್ಲಿ ರೈತರು ಆಕಾಶ ನೋಡುವುದಾಗಲೀ ಯಾವುದೂ ಕಾಣುತ್ತಿಲ್ಲ. ಗಾಂಧೀಜಿ ಹೇಳುವಂತೆ ‘ಅಹಿಂಸೆಯ
ವಿಜ್ಞಾನವೊಂದೇ ಶುದ್ಧ ಪ್ರಜಾಪ್ರಭುತ್ವಕ್ಕೆ ಒಯ್ಯಬಲ್ಲದು’ ಎಂಬ ಮಾತಿಗೆ ವಿಶಾಲ ಅರ್ಥಗಳಿವೆ. ಅಹಿಂಸೆ ಎಂಬ ತತ್ವ ನಾಗರಿಕತೆಯ ಆಸ್ಪತ್ರೆಗಳಲ್ಲಿ, ರೈತನ ಕೊಟ್ಟಿಗೆಯಲ್ಲಿ, ಮುಖ್ಯಮಂತ್ರಿ ಪ್ರಧಾನಮಂತ್ರಿ ಹಜಾರದಲ್ಲಿ ಒಂದು ತತ್ವ ವಾಗಿ ಸಾಗಿದರೆ ಮಾತ್ರ ಅದೊಂದು ರಾಷ್ಟ್ರಪ್ರೇಮ ಎಂಬ ಅಧ್ಯಾತ್ಮ ಮೌಲ್ಯ ಪ್ರತಿಪಾದಿಸಬಲ್ಲದು.

ಅಧ್ಯಾತ್ಮ ಎಂಬುದು ಸನ್ಯಾಸ ಪಂಥದ ಮಠದ ಸನ್ಯಾಸಿಗಳಲ್ಲಿ ಮಾತ್ರವಿರುವುದಿಲ್ಲ. ಅದು ಸಂಸಾರ ಪಂಥದ ಬಡವರಲ್ಲಿಯೂ ಅಂತರ್ಗತವಾಗಿರುತ್ತದೆ. ಇವೆರಡರ ತಾಳಮೇಳವೇ ಬದುಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT