ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ: ಐಎಸ್‌ ಉಗ್ರ ಭಟ್ಕಳದ ಶಫಿ ಅರ್ಮಾರ್‌ ಸಾವು

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸಿರಿಯಾದ ರಖ್ಖಾ ನಗರದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಭಟ್ಕಳ ಮೂಲದ ಮೊಹಮ್ಮದ್‌ ಶಫಿ ಅರ್ಮಾರ್‌ (30) ಸಾವನ್ನಪ್ಪಿದ್ದಾನೆ.

ಈ ಪೈಶಾಚಿಕ ದಾಳಿಯ ಹೊಣೆ ಹೊತ್ತಿರುವ ಐಎಸ್ ಭಯೋತ್ಪಾದಕ ಸಂಘಟನೆಯೇ ಖುದ್ದು ಶಫಿ ಅರ್ಮಾರ್‌ ಸುದ್ದಿಯನ್ನು ಪ್ರಕಟಿಸಿದೆ. ಆದರೆ,ಈ ಸುದ್ದಿಯನ್ನು ಭಾರತ ಇನ್ನೂ ದೃಢಪಡಿಸಿಲ್ಲ. ಈ ಹಿಂದೆ ಕೂಡ ಶಫಿ ಸಾವಿನ ಸುದ್ದಿ ಹರಡಿತ್ತು.

ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ಮಾನವ ಬಾಂಬ್‌ ಆಗಿದ್ದ ಶಫಿ ಅರ್ಮಾರ್‌ ತನ್ನನ್ನು ಸ್ಫೋಟಿಸಿಕೊಂಡು, ಅನೇಕರನ್ನು ಬಲಿ ಪಡೆದಿದ್ದಾನೆ ಎಂದು ಐಎಸ್ ಪ್ರಚಾರ ವಿಭಾಗವಾದ ’ಅಮಾಕ್‌’ ಸೋಮವಾರ ಅರೆಬಿಕ್‌ ಭಾಷೆಯಲ್ಲಿ ನೀಡಿರುವ ಪ್ರಕಟಣೆಯಲ್ಲಿ ದೃಢಪಡಿಸಿದೆ.

ಎರಡು ತಿಂಗಳ ಹಿಂದೆಯಷ್ಟೇ (ಜೂನ್‌ನಲ್ಲಿ) ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದ ಅಮೆರಿಕ, ಈಗ ಅರ್ಮಾರ್‌ ಸಾವಿನ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ. ಅದಕ್ಕಾಗಿ ಅಮೆರಿಕದ ಬೇಹುಗಾರಿಕಾ ಸಂಸ್ಥೆಯ ವಿಭಾಗವಾದ ‘ಎಸ್‌ಐಟಿಇ’ ಉಪಗ್ರಹ ಚಿತ್ರಗಳ ನೆರವು ಪಡೆದಿದೆ.

ಭಾರತ ಮೂಲದ ಅಬು ಯುಸೂಫ್‌ ಅಲ್‌ ಹಿಂದಿ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಕುರ್ದಿಸ್ತಾನ್‌ ವರ್ಕರ್ಸ್‍ ಪಾರ್ಟಿಯ (ಪಿಕೆಕೆ) ಹಲವು ಧರ್ಮಭ್ರಷ್ಟರು ಸಾವನ್ನಪ್ಪಿದ್ದಾರೆ. ಇನ್ನೂ ಅನೇಕರು ಗಾಯಗೊಂಡಿದ್ದಾರೆ ಎಂದು ಅಮಾಕ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಎಸ್‌ಐಟಿಇ ಖಚಿತಪಡಿಸಿದೆ.

ಯಾರು ಈ ಅಲ್‌ ಹಿಂದಿ?

ಐಎಸ್‌ ಪ್ರಕಟಣೆಯಲ್ಲಿ ಹೇಳಿದ ಹಾಗೆ ಭಾರತ ಮೂಲದ ಅಬು ಯುಸೂಫ್‌ ಅಲ್‌ ಹಿಂದಿ ಯಾರು ಎಂಬ ಪ್ರಶ್ನೆ ಎದುರಾಗಿದೆ. ಅಲ್‌ ಹಿಂದಿ ಶಪಿ ಅರ್ಮಾರ್‌ನ ಮತ್ತೊಂದು ಹೆಸರಾಗಿದೆ.

ಐಎಸ್‌ ಸಂಘಟನೆಗೆ ಸೇರುವ ಮೊದಲು ಶಫಿ ‘ಛೋಟೆ ಮೌಲಾ’, ‘ಅಂಜಾನ್‌ ಭಾಯಿ’, ‘ಯೂಸುಫ್ ಅಲ್ ಹಿಂದಿ’ ಹೀಗೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದ್ದ. ಸಿರಿಯಾದಲ್ಲಿ ಆತ ’ಅಲ್‌ ಹಿಂದಿ’ ಎಂದು ಚಿರಪರಿಚಿತನಾಗಿದ್ದ.

ಕಾರವಾರ ಜಿಲ್ಲೆಯ ಭಟ್ಕಳದವರಾದ ಶಫಿ ಅರ್ಮಾರ್‌ ಮತ್ತು ಆತನ ಹಿರಿಯ ಸಹೋದರ ಸುಲ್ತಾನ್‌ ಅಬ್ದುಲ್‌ ಖಾದಿರ್‌ ಅರ್ಮಾರ್‌ ಆರಂಭದಲ್ಲಿ ಇಂಡಿಯನ್‌ ಮುಜಾಹಿದೀನ್‌ (ಐಎಂ) ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.

ಹಿರಿಯ ಸಹೋದರ ಖಾದಿರ್‌ ಅರ್ಮಾರ್‌, ಇಂಡಿಯನ್‌ ಮುಜಾಹಿದೀನ್‌ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ. ಆದರೆ, ಇಕ್ಬಾಲ್‌ ಭಟ್ಕಳ ಜತೆ ಜಗಳವಾಡಿಕೊಂಡ ಅರ್ಮಾರ್ ಸಹೋದರರು ಪಾಕಿಸ್ತಾನಕ್ಕೆ ಪರಾರಿಯಾಗಿದ್ದರು. ಪಾಕಿಸ್ತಾನದಲ್ಲಿ ‘ಅನ್ಸುರ್‌ ಉಲ್‌ ತಾವಿದ್‌’ ಎಂಬ ತಮ್ಮದೇ ಉಗ್ರ ಸಂಘಟನೆಯನ್ನೂ ಹುಟ್ಟು ಹಾಕಿದ್ದರು.

ನಂತರ ಪಾಕಿಸ್ತಾನದಿಂದ ಕಾಲ್ಕಿತ್ತ ಸಹೋದರರು ಕೊಲ್ಲಿ ರಾಷ್ಟ್ರಗಳ ಮೂಲಕ ಸಿರಿಯಾ ತಲುಪಿದ್ದರು. ಅಲ್ಲಿ ತಮ್ಮ ‘ಅನ್ಸುರ್‌ ಉಲ್‌ ತಾವಿದ್‌’ ಸಂಘಟನೆಯನ್ನು ಐಎಸ್‌ ಜತೆ ವಿಲೀನಗೊಳಿಸಿದ್ದರು.

ಯಾರು ಈ ಅರ್ಮಾರ್?

1987ರಲ್ಲಿ ಭಟ್ಕಳದಲ್ಲಿ ಜನಿಸಿದ್ದ ಶಫಿಗೆ ಕನ್ನಡ, ಉರ್ದು, ಹಿಂದಿ, ಇಂಗ್ಲಿಷ್‌ ಭಾಷೆ ಚೆನ್ನಾಗಿ ಗೊತ್ತಿತ್ತು. ಭಾರತದ 36ಕ್ಕೂ ಹೆಚ್ಚು ಯುವಕರನ್ನು  ಐಎಸ್‌ ಉಗ್ರ ಸಂಘಟನೆಗೆ ನೇಮಕ ಮಾಡಿಕೊಂಡಿದ್ದ ಆತನ ವಿರುದ್ಧ ಇಂಟರ್‌ಪೋಲ್‌ ‘ರೆಡ್ ಕಾರ್ನರ್‌’ ನೋಟಿಸ್‌ ಜಾರಿ ಮಾಡಿತ್ತು.

2015ರಲ್ಲಿ ಹಿರಿಯ ಸಹೋದರ ಸುಲ್ತಾನ್‌ ಅಬ್ದುಲ್‌ ಹತ್ಯೆಯ ನಂತರ ಮುಂಚೂಣಿಗೆ ಬಂದಿದ್ದ ಶಫಿ, ಐಎಸ್‌ ಭಯೋತ್ಪಾದಕ ಸಂಘಟನೆಗೆ ಭಾರತ ಉಪ ಖಂಡದ ಯುವಕರನ್ನು ಸೆಳೆಯುವ ಹೊಣೆ ಹೊತ್ತಿದ್ದ. ಫೇಸ್‌ಬುಕ್‌ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದ ಯುವಕರನ್ನು ನೇಮಕ ಮಾಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT