ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಸ್ತುವಾರಿ’ ನೇತೃತ್ವದಲ್ಲಿ 30ರಂದು ಸಭೆ

20 ಜಿಲ್ಲಾ ಅಧ್ಯಕ್ಷರ ಬದಲಾವಣೆಗೆ ಕೆಪಿಸಿಸಿ ಚಿಂತನೆ
Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಪಕ್ಷ ಸಂಘಟನೆಯನ್ನು ಇನ್ನಷ್ಟು ಚುರುಕುಗೊಳಿಸಲು ಮುಂದಾಗಿರುವ ಪ್ರದೇಶ ಕಾಂಗ್ರೆಸ್‌ ಸಮಿತಿ 20 ಜಿಲ್ಲೆಗಳ ಅಧ್ಯಕ್ಷರನ್ನು ಬದಲಿಸುವ ಸಾಧ್ಯತೆ ಇದೆ.

ಇದೇ 30ರಂದು ನಗರಕ್ಕೆ ಬರಲಿರುವ ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಕೆಪಿಸಿಸಿ ಅಧ್ಯಕ್ಷ‌ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷರು ಸೇರಿದಂತೆ ಪ್ರಮುಖರ ಜೊತೆ ಈ ಬಗ್ಗೆ ಚರ್ಚಿಸಲಿದ್ದಾರೆ.

ಅನೇಕ ಜಿಲ್ಲೆಗಳ ಅಧ್ಯಕ್ಷರ ಅವಧಿ ಮುಗಿದಿದೆ. ಕೆಲವರ ವಿರುದ್ಧ ದೂರುಗಳಿವೆ. ಈ ಕಾರಣಕ್ಕೆ ಬದಲಾವಣೆ ನಡೆಯಲಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಮಧ್ಯೆ, ಪಕ್ಷದ ಸದಸ್ಯತ್ವ ನೋಂದಣಿಗೆ ಸಚಿವರು ಸಹಕಾರ ನೀಡುತ್ತಿಲ್ಲ ಎಂದು ಕೆಲವು ಜಿಲ್ಲೆಗಳ ಅಧ್ಯಕ್ಷರು ಕೆಪಿಸಿಸಿ ಅಧ್ಯಕ್ಷರಿಗೆ ಅಹವಾಲು ಸಲ್ಲಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ವೇಣುಗೋಪಾಲ್‌, ಸಂಘಟನಾತ್ಮಕ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಸಲಹೆಗಳನ್ನು ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಹುತೇಕ ಕಡೆಗಳಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಮಧ್ಯೆ ಭಿನ್ನಾಭಿಪ್ರಾಯ, ಗೊಂದಲಗಳು ತಲೆದೋರಿವೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮುಂದಿನ ತಿಂಗಳು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಆ ನಿಟ್ಟಿನಲ್ಲಿ ನಡೆಸಬೇಕಾದ ಪೂರ್ವಭಾವಿ ಸಿದ್ಧತೆಗಳ ಬಗ್ಗೆಯೂ ವೇಣುಗೋಪಾಲ್‌ ಸೂಚನೆಗಳನ್ನು ನೀಡಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ಇಬ್ರಾಹಿಂ ಅವಿರೋಧ ಆಯ್ಕೆ ಖಚಿತ

ಬೆಂಗಳೂರು: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಂ.ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.

ಸಿ.ಎಂ.ಇಬ್ರಾಹಿಂ ನಾಮಪತ್ರ ಸ್ವೀಕೃತವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಇದರಿಂದ ಇಬ್ರಾಹಿಂ ಹಾದಿ ಸುಗಮವಾಗಿದೆ.

‘ಮಂಗಳವಾರ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಇಬ್ರಾಹಿಂ ನಾಮಪತ್ರ ಕ್ರಮ ಬದ್ಧವಾಗಿದೆ. ಇದೇ 24 ರಂದು ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌.ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT