ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪತ್ರಿಕೆ ಪ್ರತಿ ಪಡೆಯುವುದು ಅಭ್ಯರ್ಥಿಯ ಹಕ್ಕು

ಕೆ.ಪಿ.ಎಸ್‌.ಸಿಗೆ ಮಾಹಿತಿ ಆಯೋಗ ನಿರ್ದೇಶನ
Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗ(ಕೆ.ಪಿ.ಎಸ್‌.ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆ ಪ್ರತಿ ಪಡೆದುಕೊಳ್ಳುವುದು ಅಭ್ಯರ್ಥಿಗಳ ಹಕ್ಕು’ ಎಂದು ಮಾಹಿತಿ ಆಯೋಗ ಹೇಳಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ಕೇಳಿದರೆ ಉತ್ತರ ಪತ್ರಿಕೆಗಳ ಪ್ರತಿ ನೀಡಬೇಕು ಎಂದು ಕೆ.ಪಿ.ಎಸ್.ಸಿಗೆ ನಿರ್ದೇಶನ ನೀಡಿದೆ.

2014ರ ಗೆಜೆಟೆಡ್‌ ಪ್ರೊಬೇಷನರಿ (ಗ್ರೂಪ್‌ ಎ ಮತ್ತು ಬಿ) ಹುದ್ದೆಗಳಿಗೆ ನಡೆದ ಮುಖ್ಯ ಪರೀಕ್ಷೆ ಬರೆದಿದ್ದ ಎಸ್‌. ಪವನಕುಮಾರ್ ಎಂಬುವರು ಉತ್ತರ ಪತ್ರಿಕೆಗಳ ಪ್ರತಿಗಳನ್ನು ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಮೇ 5ರಂದು ಕೆ.ಪಿ.ಎಸ್‌.ಸಿಗೆ ಅರ್ಜಿ ಸಲ್ಲಿಸಿದ್ದರು.

‘ಕೇಂದ್ರ ಲೋಕಸೇವಾ ಆಯೋಗವು(ಯು.ಪಿ.ಎಸ್.ಸಿ) ಅಭ್ಯರ್ಥಿಗಳಿಗೆ ಉತ್ತರ ಪತ್ರಿಕೆಗಳ ಪ್ರತಿಗಳನ್ನು ನೀಡುವುದಿಲ್ಲ.  ಕೆ.ಪಿ.ಎಸ್‌.ಸಿ ಕೂಡ ಅದೇ ಪದ್ಧತಿ ಅನುಸರಿಸಲು ಮೇ 9ರಂದು ನಡೆಸಿದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಹೀಗಾಗಿ ಮಾಹಿತಿ ನೀಡುವುದಿಲ್ಲ’ ಎಂದು ಜೂನ್ 17ರಂದು ಕೆ.ಪಿ.ಎಸ್‌.ಸಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಿಂಬರಹ ನೀಡಿದ್ದರು.

ಬಳಿಕ ಪವನ ಕುಮಾರ್ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ಆಯೋಗದ ಆಯುಕ್ತ ಎನ್.ಪಿ. ರಮೇಶ್ ಅವರು, ‘ಪರೀಕ್ಷೆ ಬರೆದ ಅಭ್ಯರ್ಥಿ ಉತ್ತರ ಪತ್ರಿಕೆ ಬೇಕೆಂದು ಕೇಳಿದಾಗ ಒದಗಿಸದಿದ್ದರೆ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಮಾಹಿತಿ ನೀಡಬೇಕು’ ಎಂದು ಆದೇಶಿಸಿದ್ದಾರೆ.

‘‌ಉತ್ತರ ಪತ್ರಿಕೆಗಳಲ್ಲಿ ಮೌಲ್ಯಮಾಪಕರು ದಾಖಲಿಸಿದ ಅಂಕಗಳು ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ದಾಖಲಾತಿಯಾಗುತ್ತದೆ. ಹೀಗಾಗಿ ಅದು ಕೂಡ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಅಭಿಪ್ರಾಯಪಟ್ಟಿದೆ’ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪವನಕುಮಾರ್ ಅವರು ಕೇಳಿರುವ ಉತ್ತರ ಪತ್ರಿಕೆಗಳ ಪ್ರತಿಗಳನ್ನು ಉಚಿತವಾಗಿ ನೀಡಬೇಕು.  ವಿಳಂಬ ಆಗದಂತೆ ಕೆ.ಪಿ.ಎಸ್‌.ಸಿ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕು ಮತ್ತು ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.

ಆಯೋಗದಿಂದ ತಪ್ಪು ಉತ್ತರ: ಆರೋಪ

ಬಳ್ಳಾರಿ: ‘ಆಗಸ್ಟ್‌ 20ರಂದು ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ ನಡೆಸಿದ ಬಳಿಕ ಕರ್ನಾಟಕ ಲೋಕಸೇವಾ ಆಯೋಗವು ಸರಿಯಾದ ಉತ್ತರಗಳನ್ನು ಪ್ರಕಟಿಸಿದೆ. ಆದರೆ ಅವುಗಳಲ್ಲಿ ನಾಲ್ಕು ಉತ್ತರಗಳು ತಪ್ಪಾಗಿವೆ’ ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಈ ಸಂಬಂಧ ಆಯೋಗಕ್ಕೆ ಸರಿಯಾದ ಉತ್ತರಗಳು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

‘ಸಾಮಾನ್ಯ ಜ್ಞಾನ ‘ಎ’ ಸರಣಿಯ ಪ್ರಶ್ನೆ ಪತ್ರಿಕೆ 1ರ 19ನೇ ಪ್ರಶ್ನೆ: ಸಂವಿಧಾನದ ಅನುಚ್ಛೇದಗಳ ಪಟ್ಟಿ 1 ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಪಟ್ಟಿ 2 ಅನ್ನು ಹೊಂದಿಸಿ ಬರೆಯುವುದು. ಈ ಪ್ರಶ್ನೆಯಲ್ಲಿರುವ ನಾಲ್ಕು ಆಯ್ಕೆಗಳಿಗೆ ಆಯೋಗವು ನಾಲ್ಕನೆಯದು ಸರಿಯಾದ ಉತ್ತರ ಎಂದು ಹೇಳಿದೆ. ಆದರೆ ಅದಕ್ಕೆ ಮೂರನೇ ಆಯ್ಕೆಯೇ ಸರಿಯಾದ ಉತ್ತರ’ ಎಂಬುದು ಪರೀಕ್ಷೆ ಎದುರಿಸಿದವರ ಪ್ರತಿಪಾದನೆ.

‘ಅನುಚ್ಛೇದಗಳು ಹೊಂದಿರುವ ವಿಷಯಗಳಿಗೂ, ಆಯೋಗವು ನೀಡಿರುವ ಉತ್ತರಗಳಿಗೂ ಹೊಂದಿಕೆಯಾಗುವುದಿಲ್ಲ’ ಎನ್ನುತ್ತಾರೆ ಅಭ್ಯರ್ಥಿ ಮನೋಹರ್.

ಇದೇ ಸರಣಿಯ 32ನೇ ಪ್ರಶ್ನೆ: ‘ಕಾಲಾನುಕ್ರಮವಾಗಿ ಏರಿಕೆ ಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ಸರಿಯಾದ ಜೋಡಣೆ ಮಾಡುವುದು. ಆಯ್ಕೆಗಳು: ವೀರೇಂದ್ರ ಪಾಟೀಲ್‌, ಕಡಿದಾಳ್‌ ಮಂಜಪ್ಪ, ಗುಂಡೂರಾವ್‌. ಇವರಲ್ಲಿ ಮೊದಲು ಮುಖ್ಯಮಂತ್ರಿಯಾದವರು ಕಡಿದಾಳ್‌ ಮಂಜಪ್ಪ, ನಂತರ ವೀರೇಂದ್ರಪಾಟೀಲ್‌ ಮುಖ್ಯಮಂತ್ರಿಯಾದರು. ಆದರೆ ಆಯೋಗ ನೀಡಿದ ಉತ್ತರ 1ರಲ್ಲಿ ಎರಡನೇ ಆಯ್ಕೆ ಗುಂಡೂರಾವ್‌ ಎಂದಿದೆ. ಸರಿಯಾದ ಉತ್ತರ ಸಂಖ್ಯೆ 2’ ಎಂದು ಹೇಳಿದ್ದಾರೆ.

33ನೇ ಪ್ರಶ್ನೆ: ‘ರಾಜ್ಯ ಮತ್ತು ಅದು ಸೃಷ್ಟಿಯಾದ ವರ್ಷಗಳಿಗೆ ಸಂಬಂಧಿಸಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತಿಲ್ಲ? ಇಲ್ಲಿ ಮೂರು ಆಯ್ಕೆ ಹಾಗೂ ಮೇಲಿನ ಯಾವುದೂ ಅಲ್ಲ ಎಂಬ ಆಯ್ಕೆ ನೀಡಲಾಗಿದೆ. ಮೊದಲನೆಯದಾಗಿ ಆಂಧ್ರಪ್ರದೇಶ –1956 ಎಂದಿದೆ. ಆದರೆ ಅದು ರಚನೆಯಾಗಿದ್ದು 1953ರಲ್ಲಿ. ಹೀಗಾಗಿ ಅದು ಹೊಂದಿಕೆಯಾಗುವುದಿಲ್ಲ. ಆದರೆ 1ನೇ ಉತ್ತರದ ಆಯ್ಕೆಯನ್ನೇ ಆಯೋಗವು ನೀಡಿಲ್ಲ’ ಎಂಬುದು ಅವರ ಆರೋಪ.

‘ಸಾಮಾನ್ಯ ಜ್ಞಾನ ಎ ಸರಣಿಯ ಪ್ರಶ್ನೆಪತ್ರಿಕೆ 2ರ 82ನೇ ಪ್ರಶ್ನೆಯಲ್ಲಿ ಗ್ರಾಫ್‌ ನೀಡಲಾಗಿದ್ದು, ಎ ಮತ್ತು ಬಿ ಪ್ರದೇಶದ ನಡುವಿನ ವ್ಯತ್ಯಾಸದ ಆಯ್ಕೆಯನ್ನು ಮಾಡಬೇಕು.

2011ಕ್ಕಿಂತ ಮೊದಲು ಬಿ ಪ್ರದೇಶದ ಬೆಳವಣಿಗೆಯ ದರವು ಎ ಪ್ರದೇಶಕ್ಕೆ ಹೋಲಿಸಿದಲ್ಲಿ ಕಡಿಮೆ ಮತ್ತು ನಂತರ ಅಧಿಕವಾಗಿದೆ ಎಂಬುದು ಸರಿಯಾದ ಉತ್ತರ. ಆದರೆ ಆಯೋಗವು ಬಿ ಪ್ರದೇಶದ ಜಿಡಿಪಿ ಬೆಳವಣಿಗೆ ದರವು ಸದಾ ಎ ಪ್ರದೇಶಕ್ಕಿಂತ ಅಧಿಕವಾಗಿದೆ ಎಂಬ ಉತ್ತರ ನೀಡಿದೆ’ ಎಂದಿದ್ದಾರೆ.

‘ಆಯೋಗವು ತಪ್ಪು ಉತ್ತರಗಳನ್ನು ನೀಡಿದೆ. ಹೀಗಾಗಿ ನಾಲ್ಕೂ ಪ್ರಶ್ನೆಗಳಿಗೆ ಪೂರ್ಣ ಅಂಕಗಳನ್ನು ನೀಡಬೇಕು’ ಎಂಬುದು ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT