ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌ ರದ್ದತಿಗೆ ಗಣ್ಯರ ಪ್ರತಿಕ್ರಿಯೆ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವ ರದ್ದುಗೊಳಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಮುಸ್ಲಿಂ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಪು ಜಾರಿಗೆ ತರಬೇಕು.

–ಸಿದ್ದರಾಮಯ್ಯ, ಮುಖ್ಯಮಂತ್ರಿ

*

ತೀರ್ಪು ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕು, ಸ್ವಾಭಿಮಾನ ಮತ್ತು ಸಮಾನತೆ ಎತ್ತಿ ಹಿಡಿದಿದೆ. ಶೋಷಣೆ ವಿರುದ್ಧ ಮಹಿಳಾ ಸಬಲೀಕರಣದ ವಾದಕ್ಕೆ ಜಯ ದೊರಕಿದೆ.

–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ, ರಾಜ್ಯ ಘಟಕದ ಅಧ್ಯಕ್ಷ

*

ಸುಪ್ರೀಂಕೋರ್ಟ್ ತೀರ್ಪು ಮುಸ್ಲಿಂ ಸಮುದಾಯದ ಬಡ ಮತ್ತು ಅಮಾಯಕ ಮಹಿಳೆಯರ ಪಾಲಿಗೆ ಭರವಸೆಯ ಹೊಂಗಿರಣ.

–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌, ರಾಜ್ಯ ಘಟಕದ ಅಧ್ಯಕ್ಷ

*

ಐತಿಹಾಸಿಕ ತೀರ್ಪು. ಇದು ಮುಸ್ಲಿಂ ಮಹಿಳೆಯರಿಗೆ ಸಮಾನತೆಯನ್ನು ನೀಡಲಿದೆ. ಮಹಿಳಾ ‌ಸಬಲೀಕರಣದ ನಿಟ್ಟಿನಲ್ಲಿ ಇದೊಂದು ಅತ್ಯಂತ ಪ್ರಬಲ ಕ್ರಮ

–ನರೇಂದ್ರ ಮೋದಿ, ಪ್ರಧಾನಿ

*

ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಾರ್ಹ. ನ್ಯಾಯಕ್ಕಾಗಿ ಹೋರಾಡಿದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸುತ್ತೇನೆ

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

*

ತೀರ್ಪು ಈಗ ನೆಲದ ಕಾನೂನು ಆಗಿದೆ. ವೈಯಕ್ತಿಕ ಕಾನೂನುಗಳು ಪ್ರಗತಿಪರವಾಗಿರಬೇಕು ಎಂದು ನಂಬಿರುವವರಿಗೆ ಸಿಕ್ಕಿದ ದೊಡ್ಡ ಗೆಲುವು

–ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು, ರಕ್ಷಣಾ ಸಚಿವ

*

ಈ ತೀರ್ಪು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಪಾಳಕ್ಕೆ ನೀಡಿದ ಹೊಡೆತ ಆಗಿರಬಹುದು. ಆದರೆ, ಇದರಿಂದ ಖಂಡಿತವಾಗಿಯೂ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಸಿಗದು. ಇದಕ್ಕಾಗಿ ಸಮಾನತೆ ಆಧರಿತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲೇಬೇಕು.

–ತಸ್ಲೀಮಾ ನಸ್ರೀನ್‌, ಬಾಂಗ್ಲಾದೇಶದ ಲೇಖಕಿ

*

ಚರಿತ್ರಾರ್ಹ ನಿರ್ಧಾರ. ಈ ತೀರ್ಪು, ಕೋಟ್ಯಂತರ ಮಹಿಳೆಯರಿಗೆ ಸಮಾನತೆ ಮತ್ತು ಘನತೆಯಿಂದ ಬಾಳುವ ಹಕ್ಕನ್ನು ನೀಡಿದೆ. ಮುಸ್ಲಿಂ ಮಹಿಳೆಯರ ಪಾಲಿಗೆ ಸ್ವಯಂ ಗೌರವ ಮತ್ತು ಸಮಾನತೆಯ ಯುಗಾರಂಭವಾಗಿದೆ.

–ಅಮಿತ್‌ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

*

ಸುಪ್ರೀಂ ಕೋರ್ಟ್‌ ತೀರ್ಪಿನ ಅನುಷ್ಠಾನ ಕಷ್ಟದ ಕೆಲಸ. ವೈಯಕ್ತಿಕ ಕಾನೂನುಗಳು ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುವುದರಿಂದ ಅವುಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಹೇಳಿರುವುದು ಸ್ವಾಗತಾರ್ಹ. ತ್ರಿವಳಿ ತಲಾಖ್‌ ವಿವಾದಾತ್ಮಕ ವಿಷಯ. ಹಾಗಾಗಿಯೇ ನ್ಯಾಯಮೂರ್ತಿಗಳಿಗೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ

–ಅಸಾದುದ್ದೀನ್‌ ಒವೈಸಿ, ಎಐಎಂಐಎಂ ಮುಖ್ಯಸ್ಥ

*

ಸ್ವಾಗತಾರ್ಹ ಕ್ರಮ. ಯಾರನ್ನು ಕೂಡ ದೀರ್ಘ ಸಮಯದವರೆಗೆ ನ್ಯಾಯದಿಂದ ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ. ಮಹಿಳಾ ಸಬಲೀಕರಣದಲ್ಲಿ ಇದೊಂದು ಮೈಲಿಗಲ್ಲು.

–ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

*

ತ್ರಿವಳಿ ತಲಾಖ್‌ ವಿಚಾರದಲ್ಲಿ ನ್ಯಾಯಾಂಗವನ್ನು ರಕ್ಷಾ ಕವಚವಾಗಿ ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಯೋಜನೆಗೆ ತೀರ್ಪಿನಿಂದ ಹಿನ್ನಡೆಯಾಗಿದೆ. ಎಲ್ಲ ಪಕ್ಷಗಳಿಂದ ಸಲಹೆ ಪಡೆದು ಸರ್ಕಾರ ಕರಡು ಶಾಸನ ರೂಪಿಸಬೇಕು.

–ನವಾಬ್‌ ಮಲಿಕ್‌, ಎನ್‌ಸಿಪಿ ವಕ್ತಾರ

*

ಸುಪ್ರೀಂ ಕೋರ್ಟ್‌ನ ಈ ತೀರ್ಪು ನನಗೆ ಖುಷಿ ತಂದಿದೆ. ಮೂರು ಬಾರಿ ತಲಾಕ್‌ ಹೇಳುವ ಪದ್ಧತಿ ಈಗ ಇತಿಹಾಸ. ಇದಕ್ಕೆ ನನ್ನ ಅಭಿನಂದನೆ.

ಮುಸ್ಲಿಂ ಮಹಿಳೆಯರಿಗೆ ಮಾನಸಿಕವಾಗಿ ಆಗುತ್ತಿದ್ದ ಹಿಂಸೆ ಇದರಿಂದ ತಪ್ಪುತ್ತದೆ. ತಲಾಕ್‌ ನೀಡುವುದರಿಂದ ಕೇವಲ ಬಡ ಹೆಣ್ಣು ಮಕ್ಕಳು ತೊಂದರೆ ಅನುಭವಿಸುತ್ತಾರೆ ಎನ್ನುವ ಭಾವನೆ ಇದೆ. ಆದರೆ, ಶ್ರೀಮಂತ ಹೆಣ್ಣು ಮಕ್ಕಳು ಸಹ ಅವರಷ್ಟೇ ಹಿಂಸೆ ಅನುಭವಿಸುತ್ತಾರೆ. ಸಮಾಜದಲ್ಲಿ ತೋರುವ ಅಗೌರವ ಅವರನ್ನು ಮಾನಸಿಕವಾಗಿ ಕುಂದಿಸುತ್ತದೆ.

ಮೌಲ್ವಿ, ಇಮಾಮರ ಮಾತುಗಳಿಗೆ ಬೆಂಬಲಿಸದೆ ಮಹಿಳೆಯರ ಪರವಾಗಿ ಬಂದ ಈ ತೀರ್ಪು ನ್ಯಾಯಾಲಯದ ಮೇಲೆ ನಂಬಿಕೆಯನ್ನು ಹೆಚ್ಚಿಸಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನೂ ಸರ್ಕಾರ ನಿಷೇಧಿಸಬೇಕು.

–ನಫೀಜಾ ಫಜಲ್‌, ಸಮಾಜ ಸೇವಕಿ

*
ಸುಪ್ರೀಂಕೋರ್ಟ್‌ನ ತೀರ್ಪು ಸ್ವಾಗತಾರ್ಹ. ದೇಶದಲ್ಲಿ ಅಪಾರ ಸಂಖ್ಯೆಯಲ್ಲಿರುವ ಮುಸ್ಲಿಂ ಹೆಣ್ಣು ಮಕ್ಕಳ ಪಾಲಿಗೆ ಇದು ವರದಾನ.

ದೀರ್ಘ ಕಾಲದಿಂದ ತ್ರಿವಳಿ ತಲಾಖ್‌ ವಿರುದ್ಧ ಹೋರಾಟ ನಡೆಸುತ್ತಿದ್ದವರಿಗೆ ದೊರೆತ ಜಯವಿದು. ಕ್ಷುಲ್ಲಕ ಕಾರಣಕ್ಕೆ ಬಲಿಯಾಗುತ್ತಿದ್ದ ಹೆಣ್ಣು ಮಕ್ಕಳ ಬದುಕಿನಲ್ಲಿ, ಬದಲಾವಣೆಯ ಹೊಂಗಿರಣ ಮೂಡಿದ ದಿನವಿದು.

ಬಹು ದಿನಗಳ ಹೋರಾಟ, ಬೇಡಿಕೆಗೆ ಸುಪ್ರೀಂಕೋರ್ಟ್‌ ಇದೀಗ ಮನ್ನಣೆ ನೀಡಿದ್ದು, ನನಗೆ ಅತೀವ ಸಂತಸ ಉಂಟು ಮಾಡಿದೆ.

–ಪ್ರೊ.ಸಬಿಹಾ ಭೂಮಿಗೌಡ, ಕುಲಪತಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

*

ತ್ರಿವಳಿ ತಲಾಖ್ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಈ ತೀರ್ಪು ಮುಸ್ಲಿಂ ಮಹಿಳೆಯರ ಹಕ್ಕು ಎತ್ತಿಹಿಡಿದಿದ್ದು, ಲಿಂಗ ಅಸಮಾನತೆ ಹೋಗಲಾಡಿಸಲು ಸಹಕಾರಿಯಾಗಿದೆ. ಈಗಾಗಲೇ ಹಲವು ದೇಶಗಳಲ್ಲಿ ಈ ಪದ್ಧತಿ ರದ್ದುಪಡಿಸಲಾಗಿದೆ. ಆದರೆ, ಈ ತೀರ್ಪು ಹಲವು ಚರ್ಚೆಗಳಿಗೆ ಆಸ್ಪದ ಮಾಡಿಕೊಡಬಹುದು.

ಏಕರೂಪ ನಾಗರಿಕ ಸಂಹಿತೆ ಜಾರಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂತ್ರಗಾರಿಕೆ ಪ್ರಯೋಗಿಸಬಹುದು. ಅದಕ್ಕೆ ಸಂಸತ್‌ನಲ್ಲಿ ಬಹುಮತ ಕೂಡ ಇದೆ. ಅಲ್ಲದೆ, ಬಿಜೆಪಿ ಬಗ್ಗೆ ಮುಸ್ಲಿಂ ಮಹಿಳೆಯರಿಗೆ ಅನುಕಂಪ ಸೃಷ್ಟಿಯಾಗಬಹುದು.

ಧಾರ್ಮಿಕ ರಾಜಕೀಯಕ್ಕೆ ದಾರಿ ಮಾಡಿಕೊಡುವ ಸಂಭವವೂ ಇದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ಉಳಿದಂತೆ ಪಕ್ಷಗಳು ರಾಜಕೀಯ ಲಾಭ ಪಡೆಯಲು ತಂತ್ರಗಾರಿಕೆ ನಡೆಸುವ ಸಾಧ್ಯತೆ ಇದ್ದೇ ಇದೆ.

–ಪ್ರೊ.ಮುಜಪ್ಫರ್‌ ಅಸ್ಸಾದಿ, ರಾಜಕೀಯಶಾಸ್ತ್ರ ಪ್ರಾಧ್ಯಾಪಕ, ಮೈಸೂರು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT