ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ಗಳ ದರ ದುಪ್ಪಟ್ಟು

ಗೌರಿ–ಗಣೇಶ ಹಬ್ಬದ ರಜೆ: ಊರಿಗೆ ಹೋಗಲು ಪ್ರಯಾಣಿಕರು ಸಜ್ಜು
Last Updated 22 ಆಗಸ್ಟ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ–ಗಣೇಶ ಹಬ್ಬವನ್ನು ಆಚರಿಸಲು ಜನರು ನಗರದಿಂದ ತಮ್ಮೂರಿಗೆ ಹಾಗೂ ರಜೆಯಲ್ಲಿ ಪ್ರವಾಸಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಗರದಿಂದ ಬೀದರ್‌, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ಮತ್ತು ಪುಣೆ, ಚೆನ್ನೈ ನಗರಗಳಿಗೆ ತೆರಳುವ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ.

ಜನರ ಬೇಡಿಕೆಯ ಹೆಚ್ಚಳವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ ಕಂಪೆನಿಗಳು ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ಹಾಗೂ ಸ್ಲೀಪರ್‌ ಬಸ್‌ಗಳ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿವೆ.

ಹಬ್ಬದ ಪ್ರಯುಕ್ತ ಆಗಸ್ಟ್‌ 25ರ ಶುಕ್ರವಾರದಂದು ರಜೆ ಇದೆ. ಶನಿವಾರ ಒಂದಿನ ರಜೆ ಹಾಕಿದರೆ, ಭಾನವಾರವೂ ರಜೆ ಇರಲಿದೆ. ಹಾಗಾಗಿ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ನೌಕರರಿಗೆ 3 ದಿನಗಳ ರಜೆ ಸಿಗಲಿದೆ.

‘ರಜಾ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಹಬ್ಬ–ಹರಿದಿನಗಳ ಸಂದರ್ಭದಲ್ಲಿಯೇ ನಮಗೂ ಒಂದಷ್ಟು ಲಾಭವೂ ಆಗುತ್ತದೆ. ಸಾಮಾನ್ಯ ದಿನ
ಗಳಲ್ಲಿ ಬಹುತೇಕ ಸೀಟುಗಳು ಖಾಲಿಯಾಗಿ ಇರುತ್ತವೆ. ಅಂತಹ ದಿನಗಳ ನಷ್ಟವನ್ನು ಸರಿದೂಗಿಸಲು ಎಲ್ಲ ಸಾರಿಗೆ ಕಂಪೆನಿಗಳು ದರವನ್ನು ಹೆಚ್ಚಿಸುತ್ತವೆ’ ಎಂದು ಖಾಸಗಿ ಬಸ್‌ ಸೇವಾ ಕಂಪೆನಿಯ ಉದ್ಯೋಗಿಯೊಬ್ಬರು ತಿಳಿಸಿದರು.

‘ಹಬ್ಬಗಳ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿದರೂ, ಜನರ ಬೇಡಿಕೆಗೆ ತಕ್ಕಷ್ಟು ಸೀಟುಗಳನ್ನು ಒದಗಿಸಲು ಆಗುತ್ತಿಲ್ಲ’ ಎಂದು ಹೇಳಿದರು.

ಡಿಆರ್‌ಡಿಒನಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸ ನಿರ್ವಹಿಸುವ ಜ್ಯೋತಿಬಾ, ‘ನಮ್ಮೂರು ಬೆಳಗಾವಿಯಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಊರಿಗೆ ತೆರಳಲು ರೈಲ್ವೆ ಟಿಕೇಟ್‌ ಸಿಗಲಿಲ್ಲ. ದರ ಹೆಚ್ಚಿದ್ದರೂ ಅನಿವಾರ್ಯವಾಗಿ ಖಾಸಗಿ ಬಸ್‌ ನಲ್ಲಿಯೇ ಹೋಗಲು ನಿರ್ಧರಿಸಿದ್ದೇನೆ’ ಎಂದರು.

ಖಾಸಗಿ ಕಂಪೆನಿಯ ಉದ್ಯೋಗಿ ಸಂದೀಪ್‌, ‘ಸಾಲು ರಜೆಗಳು ಬಂದಾಗ ಖಾಸಗಿ ಬಸ್‌ ಕಂಪೆನಿಗಳು ದರವನ್ನು ದುಪ್ಪಟ್ಟು ಮಾಡುವ ಪ್ರವೃತ್ತಿ ಬೆಳೆಸಿಕೊಂಡಿವೆ. ಒಂದು ಊರಿಗೆ ಬಸ್‌ ತೆರಳುವ ದೂರ ಮತ್ತು ಬಳಸುವ ಡಿಸೇಲ್‌ನ ದರ ಹೆಚ್ಚಾಗದಿದ್ದರೂ, ಇದ್ದಕ್ಕಿದ್ದಂತೆ ಪ್ರಯಾಣ ದರ ಹೆಚ್ಚಿಸುತ್ತಾರೆ. ಖಾಸಗಿ ಸಾರಿಗೆ ಕಂಪೆನಿಗಳ ವಿರುದ್ಧ ಸಾರಿಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ರಜೆ ಪ್ರಯುಕ್ತ ನಗರದಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳ ನಗರಗಳಿಗೆ ಸಂಚರಿಸುವ ರೈಲುಗಳ ಬುಕ್ಕಿಂಗ್‌ ಸಹ ಭರ್ತಿಯಾಗಿದೆ. ಬಸ್‌ಗಳಿಗಿಂತ ಕಡಿಮೆ ಪ್ರಯಾಣ ದರವಿರುವುದರಿಂದ ತಿಂಗಳ ಮುನ್ನವೇ ಟಿಕೆಟ್‌ ಕಾಯ್ದಿರಿಸಿದ್ದಾರೆ. ಹೀಗಾಗಿ ಆಗಸ್ಟ್‌ 23ರಿಂದ 26ರವರೆಗೆ ಬಹುತೇಕ ರೈಲುಗಳ ಆಸನಗಳು ಭರ್ತಿಯಾಗಿವೆ.

ಬೆಂಗಳೂರಿನಿಂದ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರ (ಆಗಸ್ಟ್‌ 24ರಿಂದ 26ರವರೆಗೆ)ಮಾರ್ಗ  ಕನಿಷ್ಠ  ಗರಿಷ್ಠ
ಬೀದರ್‌  700  1000
ಬೆಳಗಾವಿ  1,000  2,500
ಹುಬ್ಬಳ್ಳಿ  900  3,000
ಮಂಗಳೂರು  900  1,500
ಶಿವಮೊಗ್ಗ  500  1,500
ಪುಣೆ  1,000  3,000
ಚೆನ್ನೈ  700  2,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT