ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆ ಮುಗಿಸಿ ಬರುತ್ತಿದ್ದ ರೌಡಿಯ ಬರ್ಬರ ಹತ್ಯೆ

ಅಮಾವಾಸ್ಯೆ ಪ್ರಯುಕ್ತ ಗೆಳೆಯರ ಜತೆ ಪಾಂಡವಪುರದ ದೇವಾಲಯಕ್ಕೆ ತೆರಳಿದ್ದ ‘ಟ್ಯಾಬ್ಲೆಟ್’ ರಘು
Last Updated 22 ಆಗಸ್ಟ್ 2017, 20:16 IST
ಅಕ್ಷರ ಗಾತ್ರ

ಬೆಂಗಳೂರು: ತಲಘಟ್ಟಪುರ ಸಮೀಪದ ನೂರು ಅಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಕುಖ್ಯಾತ ರೌಡಿ ರಘು ಅಲಿಯಾಸ್ ‘ಟ್ಯಾಬ್ಲೆಟ್’ ರಘು (30) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಈ ಸಂಬಂಧ ಪೊಲೀಸರು ರೌಡಿ ವಜ್ರ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಮೀಪದ ಕಾಶಿನಗರ ನಿವಾಸಿಯಾದ ರಘು, ಅಮಾವಾಸ್ಯೆ ಪೂಜೆಗೆಂದು ಗೆಳೆಯರ ಜತೆ ಪಾಂಡವಪುರಕ್ಕೆ ಹೋಗಿದ್ದ.

ಅಲ್ಲಿಂದ ರಾತ್ರಿ 10.30ರ ಸುಮಾರಿಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ ದಾಳಿ ನಡೆಸಿರುವ ವಜ್ರ ಹಾಗೂ ಸಹಚರರು, ರಘುನನ್ನು ಮಚ್ಚು–ಲಾಂಗುಗಳಿಂದ ಕೊಚ್ಚಿ ಹಾಕಿದ್ದಾರೆ. ರಕ್ಷಣೆಗೆ ಮುಂದಾದ ಆತನ ಗೆಳೆಯ ಮಧು ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಅಂದು ಸ್ನೇಹ, ಇಂದು ದ್ವೇಷ: ‘ವಜ್ರ ಕೂಡ ಕುಮಾರಸ್ವಾಮಿ ಲೇಔಟ್ ನಿವಾಸಿ. ಒಂದೇ ಪ್ರದೇಶದವರಾದ ಕಾರಣ ಆತನಿಗೆ ರಘು ಜತೆ ಸ್ನೇಹ ಬೆಳೆದಿತ್ತು. ಒಟ್ಟಾಗಿ ರೌಡಿ ಚಟುವಟಿಕೆ ನಡೆಸುವಷ್ಟರ ಮಟ್ಟಿಗೆ ಅವರ ಗೆಳೆತನ ಮುಂದುವರಿದಿತ್ತು. ಆದರೆ, ಪಾತಕಲೋಕದ ಮೇಲೆ ಹಿಡಿತ ಸಾಧಿಸುವ ವಿಚಾರದಲ್ಲಿ ಇತ್ತೀಚೆಗೆ ಇಬ್ಬರೂ ಪೈಪೋಟಿಗೆ ಇಳಿದಿದ್ದರು. ಈ ವಿಚಾರವಾಗಿ ಪರಸ್ಪರರ ನಡುವೆ ಹೊಡೆದಾಟಗಳೂ ಸಾಮಾನ್ಯವಾಗಿದ್ದವು. ಒಬ್ಬರ ಮೇಲೊಬ್ಬರು ಕತ್ತಿ ಮಸೆಯಲಾರಂಭಿಸಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕ್ರಮೇಣ ತಮ್ಮ ವಲಯದಲ್ಲೇ ಸಹಚರರನ್ನು ಸೃಷ್ಟಿಸಿಕೊಂಡು ಎರಡು ಗ್ಯಾಂಗ್‌ಗಳನ್ನು ಕಟ್ಟಿಕೊಂಡರು. ಇವರ ಈ ಕೆಟ್ಟ ಬೆಳವಣಿಗೆಯಿಂದಾಗಿ ಕಾಶಿನಗರದ ನಿವಾಸಿಗಳೂ ಬೆಚ್ಚಿ ಬಿದ್ದಿದ್ದರು. ರಘು ಹತ್ಯೆಗೆ ಸಂಚು ರೂಪಿಸಿದ ವಜ್ರ, ಆತನ ಚಲನವಲನಗಳ ಮೇಲೆ ನಿಗಾ ಇಡಲಾರಂಭಿಸಿದ್ದ. ಅಮಾವಾಸ್ಯೆ ದಿನ ಆತ ಪಾಂಡವಪುರದಲ್ಲಿರುವ ದೇವಾಲಯಕ್ಕೆ ಹೋಗಿ ಬರುವ ವಿಚಾರ ಆತನಿಗೆ ಗೊತ್ತಿತ್ತು.’

‘ರಘು ಹಾಗೂ ಸ್ನೇಹಿತರು ಪಾಂಡವಪುರಕ್ಕೆ ತೆರಳಲು ಮನೆಯಿಂದ ಹೊರಟ ಮರುಕ್ಷಣವೇ ಆ ವಿಚಾರ ಸಹಚರನ ಮೂಲಕ ವಜ್ರನ ಕಿವಿಗೆ ಬಿದ್ದಿತ್ತು. ಸಹಚರರನ್ನು ಹೊಂದಿಸಿಕೊಂಡು ತಲಘಟ್ಟಪುರಕ್ಕೆ ಹೋದ ವಜ್ರ, ಸಂಜೆ 6.30ರಿಂದಲೇ ನೂರು ಅಡಿ ರಸ್ತೆಯಲ್ಲಿ ಎದುರಾಳಿಯ ಬರುವಿಕೆಗಾಗಿ ಕಾಯುತ್ತಿದ್ದ’ ಎಂದು ಮಾಹಿತಿ ನೀಡಿದರು.

‘ಬಂದ ಕಣ್ರೋ’: ವಜ್ರ ತನ್ನ ಸಚಹರನೊಬ್ಬನನ್ನು ಒಂದು ಕಿ.ಮೀ ದೂರದಲ್ಲಿ ನಿಲ್ಲಿಸಿದ್ದ. ರಘು ಕಾರು ಕಣ್ಣೆದುರು ಹಾದು ಹೋಗುತ್ತಿದ್ದಂತೆಯೇ ವಜ್ರನಿಗೆ ಕರೆ ಮಾಡಿದ ಆತ, ‘ರಘು ಬಂದ ಕಣ್ರೋ. ಈಗಷ್ಟೇ ಕಾರು ಪಾಸ್ ಆಯ್ತು’ ಎಂದು ಹೇಳಿದ್ದ. ತಕ್ಷಣ ಮಾರಕಾಸ್ತ್ರಗಳೊಂದಿಗೆ ಸಜ್ಜಾದ ಆರೋಪಿಗಳು, ಕಾರು ಬರುತ್ತಿದ್ದಂತೆಯೇ ತಮ್ಮ ಕಾರನ್ನು ಅಡ್ಡ ನಿಲ್ಲಿಸಿ ಮೇಲೆರಗಿದ್ದರು.

ಅನಿರೀಕ್ಷಿತವಾಗಿ ಎದುರಾದ ಶತ್ರುಪಡೆಯನ್ನು ನೋಡುತ್ತಿದ್ದಂತೆಯೇ ಮಧು ಹೊರತುಪಡಿಸಿ ಉಳಿದ ಗೆಳೆಯರೆಲ್ಲ ಜೀವಭಯದಿಂದ ಕಾಲ್ಕಿತ್ತರು. ರಘು ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಮಚ್ಚಿನೇಟಿನಿಂದ ಗಾಯಗೊಂಡು ಮಧು ಆಸ್ಪತ್ರೆಗೆ ದಾಖಲಾಗಿದ್ದಾನೆ. ಪೊಲೀಸರು ಮಂಗಳವಾರ ಬೆಳಗಿನ ಜಾವವೇ ವಜ್ರ ಹಾಗೂ ಆತನ ಕೆಲ ಸಹಚರರನ್ನು ವಶಕ್ಕೆ ಪಡೆದಿದ್ದಾರೆ.

10 ತಿಂಗಳ ಹಿಂದೆ ಮದುವೆ
‘ಕೊಲೆ, ಕೊಲೆ ಯತ್ನ ಸೇರಿದಂತೆ ರಘು ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಕುಮಾರಸ್ವಾಮಿ ಲೇಔಟ್‌ ಠಾಣೆಯ ರೌಡಿಪಟ್ಟಿಯಲ್ಲಿ ಆತನ ಹೆಸರು ಸೇರಿಸಲಾಗಿತ್ತು. ಹತ್ತು ತಿಂಗಳ ಹಿಂದಷ್ಟೇ ಆತನ ವಿವಾಹವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT