ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಹಾರ ನೀಡಿ, ಶಾಶ್ವತ ಕ್ರಮ ಕೈಗೊಳ್ಳಿ’

Last Updated 23 ಆಗಸ್ಟ್ 2017, 5:29 IST
ಅಕ್ಷರ ಗಾತ್ರ

ಹಾವೇರಿ: ‘ಬರದಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರದ ಜೊತೆಗೆ ಕೆರೆಗೆ ನೀರು ತುಂಬಿಸುವ ಮತ್ತು ಕಾಡು ಬೆಳೆಸುವಂಥ ಶಾಶ್ವತ ಪರಿಹಾರ ಕಾರ್ಯಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ರೈತರು ಮಂಗಳವಾರ ನಗರದಲ್ಲಿ ಬೈಕ್‌, ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಪ್ರತಿಭಟನೆ ಮಾಡಿದರು.

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ‘ಮಳೆ ಕೊರತೆಯಿಂದ ಭೀಕರ ಸಮಸ್ಯೆ ಇದ್ದು, ತಾಲ್ಲೂಕನ್ನು ಕೂಡಲೇ ‘ಬರ ಪೀಡಿತ’ ಎಂದು ಘೋಷಿಸಬೇಕು.

ಸತತ ಬರದ ಪರಿಣಾಮ ರೈತರ ಬದುಕು ಸಂಕಷ್ಟದಲ್ಲಿದ್ದು, ಸಂಪೂರ್ಣ ಸಾಲ ಮನ್ನಾ ಮಾಡಬೇಕು. ತಾಲ್ಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ, ವರದಾ ನದಿಗಳಿಂದ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. 2016–17ನೇ ಸಾಲಿನ ಬೆಳೆ ನಷ್ಟ ಪರಿಹಾರವು ಇನ್ನೂ ಶೇ 35ರಷ್ಟು ರೈತರಿಗೆ ತಲುಪಿಲ್ಲ. ಇದನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು. ಇದೇ ಸಾಲಿನ ಬೆಳೆವಿಮೆ ಪರಿಹಾರವೂ ಎಲ್ಲ ರೈತರಿಗೆ ತಲುಪಿಲ್ಲ. ಕೂಡಲೇ ಅದನ್ನೂ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬಗರ್ ಹುಕುಂ ಸಾಗುವಳಿ ಮಾಡಿದ ಭೂ ರಹಿತ ರೈತರಿಗೆ ಹಕ್ಕುಪತ್ರ ನೀಡಬೇಕು. ಜಿಲ್ಲೆಯ ರೈತರು ಸಹಕಾರಿ ಬ್ಯಾಂಕ್‌ಗಳನ್ನು ಅವಲಂಬಿಸಿದ್ದಾರೆ. ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್‌ (ಡಿ.ಸಿ.ಸಿ.) ಸ್ಥಾಪನೆ ಮಾಡಬೇಕು’ ಎಂದು  ಅವರು ಆಗ್ರಹಿಸಿದರು.

‘ಮಳೆ ಇಲ್ಲದ ಕಾರಣ ಕೇವಲ ರೈತರು ಮಾತ್ರವಲ್ಲ, ಜಾನುವಾರುಗಳೂ ಸಂಕಷ್ಟಕ್ಕೆ ಸಿಲುಕಿವೆ. ಮೇವು ಬ್ಯಾಂಕ್‌ಗಳನ್ನು ಶೀಘ್ರವೇ ತೆರೆಯುವ ಮೂಲಕ ಜಾನುವಾರು ಸಾಕಾಣಿಕೆಗೆ ಅನುಕೂಲ ಮಾಡಿಕೊಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ‘ಇ–ಪಾವತಿ’ಯು ಕಷ್ಟಕರವಾಗಿದೆ. ಅದನ್ನು ರದ್ದುಪಡಿಸಬೇಕು. ಜಿಂಕೆ, ಚಿಗರೆ, ಹಂದಿ ಮತ್ತಿತರ ವನ್ಯಜೀವಿಗಳಿಂದ ರೈತರ ಬೆಳೆಗಳು ಹಾನಿಯಾಗುತ್ತಿವೆ. ತಾತ್ಕಾಲಿಕ ಪರಿಹಾರ ನೀಡಬೇಕು ಹಾಗೂ ಶಾಶ್ವತ ಪರಿಹಾರ ಯೋಜನೆಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರೈತರು ಗುಳೆ ಹೋಗಲು ಆರಂಭಿಸಿದ್ದಾರೆ. ಕೂಡಲೇ ಬೆಳೆವಿಮೆ ಹಾಗೂ ಬೆಳೆ ಪರಿಹಾರವನ್ನು ವಿತರಿಸಿ, ಉದ್ಯೋಗ ನೀಡಬೇಕು. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು, ‘ಪರಿಹಾರದ ಹಣ ನೀಡಿದ್ದೇವೆ’ ಎಂದು ಹೇಳುತ್ತಿದ್ದಾರೆ. ಆದರೆ, ಬಹುತೇಕ ರೈತರಿಗೆ ಹಣ ಜಮಾ ಆಗಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸಬೇಕು. ನಮ್ಮ ಬೇಡಿಕೆಗಳು 15 ದಿನಗಳೊಳಗೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದ ಅವರು, ‘ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲೇ ಬೇಕು’ ಎಂದು ಆಗ್ರಹಿಸಿದರು.

‘₹2 ಲಕ್ಷ ಕೋಟಿ ಕಾರ್ಪೊರೇಟ್‌ ಸಾಲವನ್ನು ಕೇಂದ್ರ ಮನ್ನಾ ಮಾಡಿದೆ. ಸುಮಾರು ₹6 ಲಕ್ಷ ಕೋಟಿ ಸಬ್ಸಿಡಿ ಮತ್ತಿತರ ರೂಪದಲ್ಲಿ ನೀಡಿದೆ. ಆದರೆ, ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ. ರೈತ ವಿರೋಧಿ ಧೋರಣೆಯನ್ನು ಸರ್ಕಾರ ಕೈ ಬಿಡಬೇಕು. ರಾಜ್ಯ ಸರ್ಕಾರವು ನೀರಾವರಿ ಯೋಜನೆಯನ್ನು ವೇಗಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ಶಿವಬಸಪ್ಪ ಗೋವಿ, ಅಡಿವೆಪ್ಪ ಆಲದಕಟ್ಟಿ, ಮಂಜುಳಾ ಅಕ್ಕಿ, ಮಂಜುನಾಥ ಕದಂ, ಹೇಮಣ್ಣ ಕೋಡಿಹಳ್ಳಿ, ಶಂಕರ ಅರಗುಂಬೆ, ಡಿಳ್ಳೆಪ್ಪ ಮಣ್ಣೂರ, ಶಿವಪುತ್ರಪ್ಪ ಗಾಣಿಗೇರ, ಸುಮಂಗಲಾ ಇಪ್ಪಿಕೊಪ್ಪ ಮತ್ತಿತರರು ಇದ್ದರು.

* * 

ಬರ ಪರಿಹಾರ ನೀಡುವ ಮಾನದಂಡ ಬದಲಿಸಿ ಸರ್ಕಾರವು ರೈತರನ್ನು ವಂಚಿಸಿದೆ. ಕೂಡಲೇ ತಿದ್ದುಪಡಿ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು
ಮಲ್ಲಿಕಾರ್ಜುನ ಬಳ್ಳಾರಿ
ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT