ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸೂಜಿ ದಾರ’ದ ಮೊದಲ ನೋಟ!

Last Updated 23 ಆಗಸ್ಟ್ 2017, 6:52 IST
ಅಕ್ಷರ ಗಾತ್ರ

ಮೌನೇಶ ಬಡಿಗೇರ ನಿರ್ದೇಶನದ ‘ಸೂಜಿ ದಾರ’ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿರುವುದು ಹಳೆ ಸುದ್ದಿ. ಈ ಚಿತ್ರದಲ್ಲಿ ಹರಿಪ್ರಿಯಾ ಯಾರ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿತ್ತು. ಆದರೆ ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ‘ಸೂಜಿ ದಾರ’ದ ನಾಯಕಿ ‘ಪದ್ಮಾ’ ಪಾತ್ರದ ‘ಮೊದಲ ನೋಟ’ದ ಚಿತ್ರಗಳು ಬಿಡುಗಡೆಯಾಗಿವೆ.

ರಾತ್ರಿ ಹೊತ್ತಿನಲ್ಲಿ ಬೀದಿ ದೀಪದ ಬೆಳಕಿನಲ್ಲಿ ತರಕಾರಿ ಚೀಲ ಹಿಡಿದುಕೊಂಡು ಮ್ಲಾನವದನರಾಗಿ ನಡೆದುಬರುತ್ತಿರುವ ಮತ್ತು ಮಳೆಯಲ್ಲಿ ಕೊಡೆ ಹಿಡಿದುಕೊಂಡು ಕಣ್ಣುಗಳಲ್ಲಿ ಚಿಂತೆಯ ಛಾಯೆ ತುಂಬಿಕೊಂಡು ನಿಂತಿರುವ ಚಿತ್ರಗಳಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.

ಮೊದಲ ನೋಟಕ್ಕೆ ಇದೊಂದು ಡಿ– ಗ್ಲಾಮರಸ್‌ ಪಾತ್ರ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ತಮ್ಮ ವಯಸ್ಸಿನಗೆ ಮೀರಿದ ಗೃಹಿಣಿಯ ಪಾತ್ರದಲ್ಲಿ ಹರಿಪ್ರಿಯ ನಟಿಸಲಿದ್ದಾರೆ ಎಂಬುದೂ ತಿಳಿಯುತ್ತದೆ.

ಹರಿಪ್ರಿಯಾ ಕೂಡ ‘ಇದು ನನ್ನ ವಯಸ್ಸಿಗೆ ಮೀರಿದ ಪ್ರಬುದ್ಧ ಪಾತ್ರ’ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಇಂಥದ್ದೊಂದು ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಲು ಅವರು ಸಾಕಷ್ಟು ಸಿದ್ಧತೆಯನ್ನೂ ನಡೆಸಿದ್ದಾರಂತೆ.

‘ನಮ್ಮದೇ ವಯಸ್ಸಿನ ಪಾತ್ರಗಳನ್ನು ತೆರೆಯ ಮೇಲೆ ನಿಭಾಯಿಸುವುದು ಸುಲಭ. ಆದರೆ ನಮ್ಮ ವಯಸ್ಸಿಗೆ ಮೀರಿದ  ಪ್ರಬುದ್ಧ ಪಾತ್ರಗಳನ್ನು ನಿಭಾಯಿಸುವಾಗ ಹೆಚ್ಚಿನ ಸಿದ್ಧತೆ ಬೇಕಾಗುತ್ತದೆ. ಈ ಚಿತ್ರದ ಪದ್ಮಾ ಎನ್ನುವ ಹುಡುಗಿಯ ಪಾತ್ರವೂ ಹಾಗೆಯೇ ಇದೆ. ಅಂಥವರ ಬಗ್ಗೆ ನಾನು ಕೇಳಿದ್ದೇನೆ. ಆದರೆ ನೋಡಿಲ್ಲ. ಹಾಗೆ ನೋಡಿಲ್ಲದ, ನನ್ನ ಅನುಭವಕ್ಕೆ ಮೀರಿದ ಪಾತ್ರದಲ್ಲಿ ನಟಿಸಬೇಕಾದರೆ ನಮ್ಮ ಮನಸ್ಸನ್ನು ಅದಕ್ಕೆ ಹದಗೊಳಿಸಿಕೊಳ್ಳಬೇಕಾಗುತ್ತದೆ. ಇಂಥ ಸಿದ್ಧತೆಗಾಗಿಯೇ ‘ಸೂಜಿ ದಾರ’ ಸಿನಿಮಾ ಕಚೇರಿಯಲ್ಲಿ ಮೂರು ದಿನದ ಕಾರ್ಯಾಗಾರವನ್ನೂ ಮಾಡಿದೆವು. ಅದಲ್ಲಿ ಚಿತ್ರಕಥೆ ವಾಚನ, ಸಂಭಾಷಣೆ, ಭಾವಾಭಿನಯದ ಕುರಿತು ಸಾಕಷ್ಟು ಚರ್ಚೆ ನಡೆಸಿದೆವು. ಅದರ ಮುಂದುವರಿಕೆಯಾಗಿಯೇ ಲುಕ್‌ ಟೆಸ್ಟ್‌ ಕೂಡ ಮಾಡಬೇಕು ಎಂದು ಈ ಫೋಟೊಶೂಟ್‌ ಮಾಡಿದ್ದೇವೆ’ ಎಂದು ವಿವರಿಸುತ್ತಾರೆ ಹರಿಪ್ರಿಯಾ.

ಯಾವುದೇ ಸೆಟ್‌ ಹಾಕದೆ, ಸ್ಟುಡಿಯೊವನ್ನೂ ಬಳಸಿಕೊಳ್ಳದೆ ತುಂಬ ಸಹಜ ಪರಿಸರದಲ್ಲಿಯೇ ಅವರು ಫೋಟೊಶೂಟ್‌ ಮಾಡಿದ್ದಾರೆ. ‘ಹೆಚ್ಚಿನ ಕೃತಕತೆ ಇಲ್ಲದೆಯೇ ಸಹಜ ಪರಿಸರದಲ್ಲಿ ಈ ಪಾತ್ರ ಹೇಗೆ ಕಾಣಿಸಬೇಕು ಎಂಬುದನ್ನು ನೋಡಬೇಕಿತ್ತು. ಅದಕ್ಕಾಗಿ ಯಾವ ಹೆಚ್ಚುವರಿ ಲೈಟಿಂಗ್‌ ಕೂಡ ಬಳಸಿಕೊಳ್ಳದೆ ಬೀದಿ ದೀಪದ ಬೆಳಕಿನಲ್ಲಿಯೇ ಫೋಟೊಶೂಟ್‌ ಮಾಡಿದೆವು. ಅದೇ ಸಮಯಕ್ಕೆ ಸರಿಯಾಗಿ ಮಳೆಯೂ ಬಂತು. ಅದನ್ನೂ ಫೋಟೊಶೂಟ್‌ನಲ್ಲಿ ಬಳಸಿಕೊಂಡಿದ್ದೇವೆ’ ಎಂದು ಪೋಟೊಶೂಟ್‌ನ ವಿಶೇಷತೆಗಳ ಬಗ್ಗೆ ಅವರು ಹೇಳುತ್ತಾರೆ.

ತಾವು ಒಂದಕ್ಕಿಂತ ಒಂದು ಭಿನ್ನ ಪಾತ್ರಗಳಲ್ಲಿ ನಟಿಸಲು ಅವಕಾಶ ಒದಗಿಬರುತ್ತಿರುವುದರ ಬಗ್ಗೆ ಹರಿಪ್ರಿಯಾಗೆ ಖುಷಿಯಿದೆ. ‘ಮೌನೇಶ ಬಡಿಗೇರ ಅವರು ತುಂಬಾ ಪ್ರತಿಭಾವಂತ ನಿರ್ದೇಶಕ. ಸೂಜಿ ದಾರ ಸಿನಿಮಾ ನನಗೆ ಖಂಡಿತ ಒಳ್ಳೆಯ ಹೆಸರು ತಂದುಕೊಡುತ್ತದೆ‍’ ಎಂಬ ನಂಬಿಕೆ ಅವರದ್ದು.

ಈ ಚಿತ್ರದಲ್ಲಿ ಹರಿಪ್ರಿಯಾ ಜತೆಗೆ ಯಶವಂತ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಭಿನ್ನಷಡ್ಜ ಸಂಗೀತ, ಅಶೋಕ್‌ ವಿ ರಾಮನ್‌ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT