ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಕ್ಕೆ ಬೇಕಿದೆ ವಿಶ್ವಸಂಚಾರ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗಣೇಶ ಮತ್ತು ಸುಬ್ರಹ್ಮಣ್ಯ ಅಣ್ಣತಮ್ಮಂದಿರು; ಶಿವ–ಪಾರ್ವತಿಯರ ಮಕ್ಕಳು. ಒಮ್ಮೆ ಇವರಿಬ್ಬರಿಗೂ ಪೈಪೋಟಿಯೊಂದು ಎದುರಾಯಿತು. ‘ಇಬ್ಬರಲ್ಲಿ ಮೊದಲು ಯಾರು ಜಗತ್ತನ್ನು ಮೂರು ಬಾರಿ ಸುತ್ತಿಬರುತ್ತಾರೆ.’ ಇದೇ ಆ ಪಂದ್ಯ.

ಇಲ್ಲೊಂದು ಸ್ವಾರಸ್ಯ ಉಂಟು. ನಮ್ಮ ಸುತ್ತಾಟಕ್ಕೆ ಅವಶ್ಯಕವಾದುದು ವಾಹನ ಅಲ್ಲವೆ? ಗಣೇಶ–ಸುಬ್ರಹ್ಮಣ್ಯರಿಗೂ ವಾಹನಗಳಿವೆ. ಗಣೇಶನ ವಾಹನ ಇಲಿ; ಸುಬ್ರಹ್ಮಣ್ಯನದ್ದು ನವಿಲು. ಇಲಿಯ ಮೇಲೆ ಸವಾರಿ ಹೊರಟವರು ಎಷ್ಟು ದೂರವನ್ನು ಕ್ರಮಿಸಿಯಾರು? ಅದೂ ಗಣೇಶನಂಥ ಭಾರಿ ದೇಹದವರು! ಇನ್ನು ನವಿಲು; ಅದು ಪಕ್ಷಿ. ಹಾರಾಟವೇ ಅದರ ಸಹಜ ಗುಣ.

ದೂರವನ್ನು ಕ್ರಮಿಸುವುದು ಅದಕ್ಕೆ ಇಲಿಗಿಂತಲೂ ಸುಲಭ; ವೇಗವೂ ಹೌದು. ನವಿಲಿನ ಮೇಲೆ ಹೊರಟ ಸುಬ್ರಹ್ಮಣ್ಯ ತಾನೆ ಬೇಗ ಜಗತ್ತನ್ನು ಸುತ್ತಿಬರಲು ಸಾಧ್ಯ? ಆದರೆ ಗಣೇಶ–ಸುಬ್ರಹ್ಮಣ್ಯರ ಪೈಪೋಟಿಯಲ್ಲಿ ನಡೆದ ವಿದ್ಯಮಾನವೇ ಬೇರೆ.

ಸುಬ್ರಹ್ಮಣ್ಯ ನವಿಲನ್ನು ಏರಿ ವಿಶ್ವಸಂಚಾರಕ್ಕೆ ಹೊರಟ. ಗಣೇಶ ಮನೆ ಬಿಟ್ಟು ಕದಲಲೇ ಇಲ್ಲ. ಅದಕ್ಕೆ ಬದಲಾಗಿ ಅವನು ತನ್ನ ಹೆತ್ತವರ ಪ್ರದಕ್ಷಿಣೆ ಮಾಡತೊಡಗಿದ. ಜಗತ್ತನ್ನು ಸುಬ್ರಹ್ಮಣ್ಯ ಸುತ್ತಿಬಂದ. ಆದರೆ ತೀರ್ಪುಗಾರರಾದ ದೇವತೆಗಳು ಗಣೇಶನೇ ವಿಶ್ವಸಂಚಾರ ಮಾಡಿದ ಮೊದಲಿಗ ಎಂದು ಘೋಷಿಸಿದರಂತೆ! ಇದರಿಂದ ಸುಬ್ರಹ್ಮಣ್ಯನಿಗೆ ಸಹಜವಾಗಿಯೇ ಸಿಟ್ಟು ಬಂದಿತು.

ಮನೆಯನ್ನೇ ಬಿಟ್ಟು ಕದಲದವನನ್ನು ವಿಶ್ವವನ್ನು ಸುತ್ತಿಬಂದವ ಎಂದು ಘೋಷಿಸುವುದು ಮೂರ್ಖತನವಲ್ಲವೆ ಎಂದು ವಾದಿಸಿದ. ಆಗ ದೇವತೆಗಳು ನುಡಿದರು: ‘ಹೆತ್ತವರೇ ಮಕ್ಕಳ ಪಾಲಿಗೆ ಜಗತ್ತು. ಅವರಿಗೆ ಮಾಡುವ ಪ್ರದಕ್ಷಿಣೆಯೇ ವಿಶ್ವಯಾತ್ರೆಗೆ ಸಮ.

ಈ ಯಾತ್ರೆಯ ನಿಜವಾದ ಅಂತರಾರ್ಥವನ್ನು ಅರಿತು, ಅದರಂತೆ ಶಿವ–ಪಾರ್ವತಿಯರಿಗೆ ಪ್ರದಕ್ಷಿಣೆ ಮಾಡಿದ ಗಣೇಶನೇ ದಿಟವಾಗಿ ವಿಶ್ವಸಂಚಾರ ಮಾಡಿದವನು. ಹೀಗಾಗಿ ಅವನೇ ವಿಜಯಿ’. ಇದು ಪುರಾಣದ ಕಲ್ಪನೆ. ಈ ಕಥೆಯ ಅಂತರಾರ್ಥ ನಮ್ಮ ಕಾಲಕ್ಕೂ ಸಲ್ಲುವಂಥದ್ದು; ಮಾರ್ಗದರ್ಶಕವಾಗಿರುವಂಥದ್ದು.

ನಮ್ಮ ಪ್ರಪಂಚ ಎಂದರೆ ಅದು ವಸ್ತುಪ್ರಪಂಚವೇ ಆಗಿದೆ. ವಸ್ತುರೂಪದಲ್ಲಿ ಕಾಣುವುದಕ್ಕಷ್ಟೆ ನಾವು ಮನ್ನಣೆಯನ್ನು ಕೊಡುವುದು. ನಮ್ಮ ಕುಟುಂಬದ ಸುಖವನ್ನು ನಮ್ಮ ಮನದ ನೆಮ್ಮದಿಯಲ್ಲಿ ಕಾಣುವ ಬದಲು ಮನೆಯ ವಿಸ್ತೀರ್ಣದಲ್ಲಿ ಹುಡುಕುತ್ತೇವೆ. ನಮ್ಮ ವಿದ್ಯೆಯ ಸಾರ್ಥಕತೆಯನ್ನು ಜೀವನಕ್ಕೆ ಬೇಕಾದ ವಿವೇಕದ ಬೆಳಕು ಎಂದು ಎಣಿಸಿದೆ ನಮ್ಮ ಆಸ್ತಿ ಸಂಪಾದನೆಯೊಂದಿಗೆ ಅದನ್ನು ಗಂಟು ಹಾಕುತ್ತೇವೆ.

ಸಂತೋಷ ಎನ್ನುವುದು ಅಂತರಂಗದ ನೆಮ್ಮದಿಯ ಸ್ಥಿತಿ ಎನ್ನುವುದನ್ನು ಮರೆತು ನಮ್ಮ ಅಧಿಕಾರ–ಐಶ್ವರ್ಯ–ಪದವಿಗಳ ಅಳತೆಗೋಲಿನಲ್ಲಿ ತೂಗುತ್ತೇವೆ. ಹೀಗೆ ಇಡೀ ಜೀವನವನ್ನೇ ನಮ್ಮಿಂದ ಹೊರಗೆ ಹುಡುಕುತ್ತಿರುತ್ತೇವೆ; ಬಾಹ್ಯಪರಿಕರಗಳಿಂದಲೇ ಅದನ್ನು ಕಟ್ಟಿಕೊಳ್ಳುತ್ತಿರುತ್ತೇವೆ.

ಒಮ್ಮೆಯಾದರೂ ನಮ್ಮ ಜೀವನದೃಷ್ಟಿಯನ್ನು ಒಳಮುಖವಾಗಿಸಿಕೊಂಡಾಗ ಜೀವನದ ಅರ್ಥವೇ ಹೊಸದಾಗಿ ಕಾಣುತ್ತದೆ. ಅಂಥ ದರ್ಶನಕ್ಕೆ ನಮ್ಮ ಭಾವ–ಬುದ್ಧಿಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಆದರೆ ನಮ್ಮ ಇಂದಿನ ಪರಿಸರದಲ್ಲಿ ಅಷ್ಟು ಸುಲಭವಾದ ಸಾಧನೆಯೆ? ಇದು ಪ್ರಶ್ನೆ.

ಈ ಕಥೆಯಲ್ಲಿಯ ಸುಬ್ರಹ್ಮಣ್ಯನ ನವಿಲು ನಮ್ಮ ಕಾಲದ ಮನಃಸ್ಥಿತಿಗೆ ಸಂಕೇತವಾಗಿದೆ. ಇಲಿಗಿಂತಲೂ ನವಿಲು ವೇಗವಾಗಿ ದೂರವನ್ನು ಕ್ರಮಿಸಬಲ್ಲದಷ್ಟೆ. ಇದು ನಮ್ಮ ಸಹಜ ಎಣಿಕೆ. ಆದರೆ ಈ ದೂರ ಹೊರಗಿನ ದೂರ; ಬಾಹ್ಯಪ್ರಪಂಚಕ್ಕೆ ಸಂಬಂಧಿಸಿದ್ದು. ಹೊರಗೆ ಪ್ರಪಂಚ ಇರುವಂತೆ ನಮ್ಮೊಳಗೂ ಪ್ರಪಂಚವ ಇದೆ; ವಿಶ್ವ ಇದೆ.

ಇದು ಹೊರಗಿ ಮಾನದಂಡಗಳಿಗೆ ಎಟುಕುವಂಥದ್ದಲ್ಲ. ಅಲ್ಲಿ ನಮ್ಮ ಭಾವ ಮತ್ತು ವಿವೇಕಗಳಿಗೆ ಮಾತ್ರವೇ ಮನ್ನಣೆ. ವಿಶ್ವಸಂಚಾರದ ನಿಜವಾದ ಭಾವವನ್ನು ಅರಿತವನು ಗಣೇಶ. ಅವನು ಅದನ್ನು ತನ್ನ ವಿವೇಕದಿಂದ ಯಶಸ್ವಿಯಾಗಿ ಪೂರ್ಣಗೊಳಿಸಿದ. ಹೆತ್ತವರಿಗೆ ಬೇಕಿರುವುದು ನಮ್ಮ ಪ್ರೀತಿ–ಕಾಳಜಿಗಳು.

ಅವನು ನಮ್ಮ ಭಾವದಿಂದ ಒಸರಬೇಕಾದ ಜೀವಸೆಲೆಗಳು. ನಮಗೆ ನಮ್ಮ ಕುಟುಂಬದ ಬಗ್ಗೆ ಪ್ರೀತಿ–ಕಾಳಜಿ–ಗೌರವಗಳು ದಿಟವಾಗಿದ್ದರೆ ಅದು ಕ್ರಮವಾಗಿ ವಿಸ್ತಾರವಾಗುತ್ತ ಇಡಿಯ ವಿಶ್ವಕ್ಕೂ ಹಬ್ಬಬಲ್ಲದು. ಅಂಥ ಆತ್ಮವಿಸ್ತಾರಕ್ಕೂ ವಿಶ್ವಾತ್ಮಭಾವಕ್ಕೂ ಗಣಪತಿ ಸಂಕೇತವಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT