ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದವೋ, ಆತಂಕವೋ?

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸಾಕಷ್ಟು ಸಲ ರೈಲು ಪ್ರಯಾಣ ಮಾಡಿದ್ದೇನೆ. ಆದರೆ 29ನೇ ಮಾರ್ಚ್ 2015ರ ಪ್ರಯಾಣ ಮಾತ್ರ ಎಂದಿಗೂ ಮರೆಯಲಾರದ್ದು. ನಾನು ಮತ್ತು ನನ್ನ ಇಬ್ಬರು ಸಹೋದ್ಯೋಗಿಗಳ ಮೂರೂ ಕುಟುಂಬಗಳು ಸೇರಿ ಉತ್ತರ ಭಾರತದ ಪ್ರವಾಸಕ್ಕೆ ಹೋಗುವ ಅವಕಾಶ ಸಿಕ್ಕಿತು.

ಶಿಮ್ಲಾದಿಂದ ದೆಹಲಿಗೆ ಬಸ್ಸಿನಲ್ಲಿ ಪಯಣಿಸುವುದೆಂದು ನಿರ್ಧಾರವಾಗಿತ್ತು. ಆದರೆ ಪ್ರಯಾಣದ ಹಿಂದಿನ ರಾತ್ರಿ ನಾವು ಉಳಿದುಕೊಂಡ ಹೋಟೆಲ್‌ನ ಮಾಲೀಕರು ರೈಲಿನಲ್ಲಿ ಪಯಣಿಸುವಂತೆ ಪ್ರೇರೇಪಿಸಿದರು.

ಅದಕ್ಕೆ ತಕ್ಕ ವಿವರಣೆಗಳನ್ನೂ ನೀಡಿದರು. ಅದರಂತೆ ನಾವೆಲ್ಲರೂ ಪರಸ್ಪರ ಚರ್ಚಿಸಿದಾಗ ಕೊನೆಗೆ ರೈಲಿನಲ್ಲೇ ಹೋಗುವುದೆಂದು ನಿರ್ಧಾರವಾಯ್ತು. ಬೆಳಿಗ್ಗೆ 8.30ಕ್ಕೆ ರೈಲು ಹೊರಡುವುದಿತ್ತು. ಮಾರ್ಚ್ ತಿಂಗಳಾದರೂ ಮೈ ಕೊರೆವ ಚಳಿ. ನಾವು ಹೋಗಬೇಕಾದ ರೈಲು ನೋಡಿ ಆಶ್ಚರ್ಯವಾಯ್ತು.

15–18 ಬೋಗಿಗಳ ರೈಲುಗಳನ್ನು ನೋಡಿರುವ ನಮಗೆ ಕೇವಲ ಎಂಟು ಬೋಗಿಗಳ ನ್ಯಾರೋಗೇಜ್ ರೈಲು ವಿಸ್ಮಯ ಎನಿಸಿತು. ಶಿಮ್ಲಾದಿಂದ ಕಲ್ಕಾ ಎಂಬಲ್ಲಿಗೆ ಹೋಗಬೇಕಾಗಿತ್ತು. ಕಲ್ಕಾಗೆ ಆರು ಗಂಟೆಗಳ ಪ್ರಯಾಣ.

ಜನಜಂಗುಳಿಯಿಂದ ತುಂಬಿರುವ ರೈಲುಗಳನ್ನು ನೋಡಿರುವ ನಮಗೆ ಸಂಪೂರ್ಣ ಖಾಲಿ ಇರುವ ಬೋಗಿ ನೋಡಿ ಸಂತೋಷವೂ ಆಶ್ಚರ್ಯವೂ ಒಟ್ಟಿಗೇ ಆಯ್ತು. ಎಲ್ಲರೂ ಕಿಟಕಿಗೆ ಕೂತು ಪ್ರಕೃತಿಯ ಸೌಂದರ್ಯ ಆಸ್ವಾದಿಸಲು ಉತ್ಸುಕರಾದೆವು.

ಶಿಮ್ಲಾದಿಂದ ಹೊರಟ ರೈಲು 10 ನಿಮಿಷಗಳ ನಂತರ ಕಡಿದಾದ ಗುಡ್ಡದಲ್ಲಿ ಹೊರಟಿತು. ಆ ಕಂದಕ ನೋಡಿ ಎಲ್ಲರೂ ಗಾಬರಿಯಾದೆವು. ಒಂದೆಡೆ ಬಂಡೆಗಳು ಉರುಳುತ್ತಿರುವ ಗುಡ್ಡ ಇದ್ದರೆ, ಇನ್ನೊಂದೆಡೆ ಆಳ ಪ್ರಪಾತ. ಒಬ್ಬರನ್ನೊಬರ ಮುಖ ನೋಡಿದರೆ ಎಲ್ಲರ ಮುಖದಲ್ಲೂ ಆತಂಕ.

ಮಕ್ಕಳೆಲ್ಲ ಅಂಜಿ ಕುಳಿತಿದ್ದವು. ಪ್ರಯಾಣಿಕರ ಜೀವಕ್ಕೆ ಈ ದಾರಿ ಮಾರಕವಾಗಿದ್ದರೆ ಸರ್ಕಾರ ಅದ್ಹೇಗೆ ಅನುಮತಿ ನೀಡುತ್ತಿತ್ತು, ಏನೂ ಆಗದು, ಪ್ರತಿದಿನ ಇಷ್ಟು ಜನ ಓಡಾಡುತ್ತಾರಲ್ಲ ಎಂದು ಒಬ್ಬರಿಗೊಬ್ಬರು ಧೈರ್ಯ ಹೇಳಿದರೂ ಎಲ್ಲರ ಮುಖದಲ್ಲೂ ಆತಂಕ. ಆದರೆ ಪ್ರಕೃತಿಯ ಅದ್ಭುತ ಸೌಂದರ್ಯ ಆತಂಕ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ಸುರಂಗ ಮಾರ್ಗಗಳು ಮಕ್ಕಳಿಗೆ ಅಚ್ಚರಿ ನೀಡಿದವು. ನಂತರ ಎಲ್ಲರೂ ಮೈಚಳಿ ಬಿಟ್ಟು ಆನಂದಿಸತೊಡಗಿದರು. ಮಧ್ಯಾಹ್ನವಾದರೂ ಚಳಿ ಕಡಿಮೆಯಾಗದೇ ಅದೊಂದು ರೀತಿಯ ಅನುಭವ ನೀಡಿತ್ತು. ಅಂತೂ ಕಲ್ಕಾ ತಲುಪಲು ಮಧ್ಯಾಹ್ನ 2 ಗಂಟೆಯಾಯ್ತು. ಕೆಳಗಿಳಿದಾಗ ನಿಟ್ಟುಸಿರು ಬಿಟ್ಟರೂ ಇಷ್ಟು ಬೇಗ ಬಂತಾ ಅನಿಸಿದ್ದು ಸುಳ್ಳಲ್ಲ.

ಕೆಲವು ದಿನಗಳ ನಂತರ, ಅದೇ ರೈಲಿನಲ್ಲಿ ಕಲ್ಕಾಗೆ ಬರುತ್ತಿದ್ದಾಗ ಎರಡು ಬೋಗಿಗಳು ಹಳಿ ತಪ್ಪಿದ್ದರಿಂದ ಇಬ್ಬರು ವಿದೇಶಿಯರ ಮರಣದ ಸುದ್ದಿ ಪತ್ರಿಕೆಗಳಲ್ಲಿ ಓದಿ ದೇವರಿಗೆ ಮನದಲ್ಲೇ ನಮಿಸಿದ್ದೆ. ಈ ಪಯಣ ನಮಗೆ ಆನಂದ ನೀಡಿತ್ತೋ ಆತಂಕ ನೀಡಿತ್ತೋ ಇಂದಿನವರೆಗೂ ಅರ್ಥವಾಗಿಲ್ಲ.
–ರೇಶ್ಮಾ ಅಮರನಾಥ ಪುಠಾಣೆ ವಿಜಯಪುರ

*
ನಾನೂ ಟ್ರೇನ್ ಗಾರ್ಡ್ ಆಗಿಬಿಟ್ಟೆ
ಹಾಸ್ಟೆಲ್ಲಿನ ಕಿಟಕಿಯಿಂದ ದಿನವೂ ರೈಲು ಹೋಗುವುದನ್ನು ನೋಡುತ್ತಿದ್ದ ನನಗೆ ಎಂದಿಗೂ ಅದರ ಚಾಲಕ ಸ್ಥಾನದಲ್ಲಿ ಕೂರಬೇಕು ಅನ್ನಿಸಿದ್ದಿಲ್ಲ. ಆದರೆ ಹಿಂದುಗಡೆ ಬಾವುಟ ಹಿಡಿದು ನಿಲ್ಲುವ ಟ್ರೇನ್ ಗಾರ್ಡ್‌ ಸ್ಥಾನದಲ್ಲಿ ಕುಳಿತು ಒಮ್ಮೆಯಾದರೂ ಪ್ರಯಾಣಿಸಬೇಕು ಎಂಬ ಆಸೆ. ಈ ಆಸೆ ಏಕೆ ಹುಟ್ಟಿತೋ ಗೊತ್ತಿಲ್ಲ ಅದನ್ನು ಹೇಳಿಕೊಂಡಾಗಲೆಲ್ಲ ನನ್ನ ರೂಮ್‌ ಮೇಟ್ ನನ್ನನ್ನು ಅಪಹಾಸ್ಯ ಮಾಡುತ್ತಿದ್ದಳು. ಆದರೆ ಮುಂದೊಂದು ದಿನ ಆ ಕನಸು ಕೈಗೂಡುತ್ತದೆ ಎಂದು ಅವಳಿಗಾಗಲೀ, ನನಗಾಗಲೀ ಗೊತ್ತೇ ಇರಲಿಲ್ಲ!

ಮೊದಲನೇ ವರ್ಷದ ಅಧ್ಯಯನ ಪ್ರವಾಸದ ಭಾಗವಾಗಿ ಕ್ಯಾಸಲ್ ರಾಕ್‌ಗೆ ಒಂದು ದಿನದ ಪ್ರವಾಸ ಏರ್ಪಾಡಾಗಿತ್ತು. ಬೆಳ್ಳಂಬೆಳಿಗ್ಗೆ ಎರಡು ಟೆಂಪೊದಲ್ಲಿ ನಾವು ಸುಮಾರು 40 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧಾರವಾಡ ಬಿಟ್ಟು ಕ್ಯಾಸಲ್ ರಾಕ್ ತಲುಪಿದಾಗ ಇನ್ನೂ ಬೆಳಗಿನ 8 ಗಂಟೆ. ಕ್ಯಾಸಲ್ ರಾಕ್ ಕಾಡಿನ ಒಳಗೆ ಸುತ್ತಾಟ ಪ್ರವಾಸದ ಭಾಗವಾಗಿತ್ತು. ಟೆಂಪೊ ಹೋಗುವವರೆಗೆ ಅದರಲ್ಲಿ ಪ್ರಯಾಣಿಸಿ ಅಲ್ಲಿಂದ ಮುಂದಕ್ಕೆ ಕಾಲ್ನಡಿಗೆಯಲ್ಲಿ ಹೊರಟೆವು. ಟೆಂಪೊ ಚಾಲಕರು ಸರಿಯಾಗಿ ಎಷ್ಟು ಗಂಟೆಗೆ ಹಿಂದಿರುಗಿ ಹೊರಡಬೇಕು ಎಂದು ಸಮಯ ಕೊಟ್ಟರು. ನಮ್ಮ ಕಾಡಿನ ಯಾತ್ರೆ ಹೀಗೆ ಪ್ರಾರಂಭವಾಯಿತು.

ಮುಂದೆ ಹಾದಿಯೇ ಇರದ ಡೆಡ್ ಎಂಡ್ ಎದುರಾದಾಗ ಹೌಹಾರುವಂತೆ ಆಯಿತು. ಆಗ ಹೊಳೆದ ಉಪಾಯ ಗುಡ್ಡವನ್ನು ಇಳಿದು ಸಮತಟ್ಟಾದ ಜಾಗಕ್ಕೆ ಕತ್ತಲಾಗುವುದರೊಳಗೆ ತಲುಪುವುದು. ಸುಮಾರು ಮೂರು ತಾಸು ಕಾಡಲ್ಲಿ ನಡೆದು, ಗುಡ್ಡ ಇಳಿದ ಮೇಲೆ ಸಿಕ್ಕಿದ್ದು ರೈಲುಮಾರ್ಗ!

ಆಗ ಆದ ಸಂತೋಷಕ್ಕೆ ಪಾರವೇ ಇಲ್ಲ. ಮಾರ್ಗದಲ್ಲಿ ಸುರಂಗ ದಾಟುವಾಗ ಗೋಡೆಯತ್ತ ಮುಖ ಮಾಡಿ ನಿಂತೆವು. ರೈಲು ಮೈಮೇಲೆ ಹಾದುಹೋದಂತಾಗಿ ಎದೆ ನಡುಗಿತ್ತು. ಸುರಂಗ ದಾಟಿ ಹೊರ ಬಂದಾಗ ಮೇಲಿನಿಂದ ನೀರು ಧುಮ್ಮಿಕ್ಕುವ ಜೋರಾದ ಶಬ್ದ.

ನಾವು ದೂಧ್ ಸಾಗರ ಜಲಪಾತದ ಹತ್ತಿರ ತಲುಪಿದ್ದೆವು. ಆಗ ಸಮಯ ಸಂಜೆ 6. ದೂಧ್ ಸಾಗರ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ನಿಲ್ಲುವುದು ಮಾರನೇ ದಿನ ಬೆಳಿಗ್ಗೆ. ಅಲ್ಲಿಯವರೆಗೆ ಹೆಣ್ಣುಮಕ್ಕಳೆಲ್ಲ ಸ್ಟೇಷನ್ ಮಾಸ್ಟರ್ ಅವರ ಕೋಣೆಯಲ್ಲಿ ಇರುವುದು, ಗಂಡುಮಕ್ಕಳೆಲ್ಲ ನಿಲ್ದಾಣದಲ್ಲೇ ಮಲಗುವುದು ಎಂದು ತೀರ್ಮಾನವಾಯಿತು.

ಆದರೆ ಅವರೇ ಹೆಣ್ಣುಮಕ್ಕಳನ್ನು ಇರಿಸಿಕೊಳ್ಳಲು ಹೆದರಿ ಗೂಡ್ಸ್ ರೈಲನ್ನು ನಿಲ್ಲಿಸಿ ಕಳಿಸುವ ಏರ್ಪಾಡು ಮಾಡಲು ಮುಂದಾದರು. ಆ ಗೂಡ್ಸ್ ರೈಲಿಗೆ ಅಲ್ಲಿ ನಿಲುಗಡೆ ಇರಲಿಲ್ಲ. ಅದಕ್ಕಾಗಿ ನಾವೆಲ್ಲ ಸ್ವಲ್ಪ ದೂರ ಅವರೊಂದಿಗೆ ನಡೆದು ಅವರು ನಿಲ್ಲಿಸಿದ ರೈಲಿನಲ್ಲಿ ಹತ್ತಿ ಕುಳಿತೆವು. ಅದು ರೈಲಿನ ಹಿಂದೆ ಬಾವುಟ ತೋರಿಸಲು ನಿಲ್ಲುವ ಜಾಗ! ಆ ರಾತ್ರಿ ಅದರಲ್ಲಿ ಕುಳಿತು 14 ಟನೆಲ್ಲುಗಳನ್ನು ದಾಟಿದ್ದು ಸಾಹಸವೇ. ನನ್ನ ಕನಸು ನನಸಾಗಿತ್ತು. ಮಾರನೇ ದಿನ ನನ್ನ ಕತೆ ಕೇಳಿದ ಗೆಳತಿಗೆ ಮಾತೇ ಹೊರಡಲಿಲ್ಲ. 
–ನೂತನ ದೋಶೆಟ್ಟಿ ಬೆಂಗಳೂರು

*
ಹಂಪಿ ಎಕ್ಸ್‌ಪ್ರೆಸ್‌ನ ಕೋಚಿಂಗ್‌ ಕ್ಲಾಸ್‌
ನಾನು, ನನ್ನಪ್ಪ ಹಾಗೂ ಕೆಲ ಸ್ನೇಹಿತರು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ ಪರೀಕ್ಷೆ ಬರೆಯಲು ಬೆಂಗಳೂರಿನಿಂದ ಕೊಪ್ಪಳಕ್ಕೆ ಹೋಗುವ ಸಂದರ್ಭ ಅದು. ರಾತ್ರಿ 10.30ಕ್ಕೆ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಹೊರಡಲು ಸಿದ್ಧರಾದೆವು. ಕೆಲ ಕಾರಣದಿಂದ ಟಿಕೆಟ್ ಬುಕ್ ಮಾಡಿಸಲು ಆಗಿರಲಿಲ್ಲ. ಸಾಮಾನ್ಯ ಬೋಗಿಯಲ್ಲೇ ಹೋಗಬೇಕಾಗಿ ಬಂತು.

ರೈಲ್ವೆ ನಿಲ್ದಾಣದ ತುಂಬ ನನ್ನ ಸಮ ವಯಸ್ಸಿನ ತರುಣ ತರುಣಿಯರೇ ತುಂಬಿದ್ದರು. ಟಿಕೆಟ್ ಪಡೆದಿದ್ದು ಒಂದು ಸಾಹಸವಾದರೆ, ರೈಲಿನಲ್ಲಿ ಹತ್ತಿದ್ದು ಮತ್ತೊಂದು ಸಾಹಸ. ಕಾಲಿಡಲೂ ಜಾಗವಿಲ್ಲದ ಸ್ಥಿತಿ. ರಾತ್ರಿ ಪೂರ್ತಿ ಪ್ರಯಾಣ ಮಾಡಬೇಕು. ಅಯ್ಯೋ ಹೇಗಪ್ಪ ಇದು ಎಂದು ಬೆಪ್ಪಾದೆ.

ದೂರದಲ್ಲಿ ‘ಸಾರ್ ಸಾರ್’ ಎಂಬ ಕೂಗು ಕಿವಿಗೆ ಬಿತ್ತು. ಆ ಕಡೆ ನೋಡಿದೆ. ‘ಸಾರ್ ಬನ್ನಿ ಇಲ್ಲಿ ಜಾಗ ಇದೆ’ ಎಂದು ನನ್ನಪ್ಪನನ್ನು ಕರೆದರು. ಅಪ್ಪ ಮೇಷ್ಟ್ರು, ಅವರ ಶಿಷ್ಯ ಸೀಟು ಕಾದಿರಿಸಿದ್ದು. ಅಪ್ಪ ನನ್ನ ಕೈ ಹಿಡಿದು ಮಂದೆಯೊಳಗೆ ನುಗ್ಗಿದರು. ತಲೆ ಎತ್ತಿ ನೋಡಲು ಅಸಾಧ್ಯ. ಅಬ್ಬಾ! ಮುಂದೆ ಆ ಪುಣ್ಯಾತ್ಮ ಎರಡು ಸೀಟು ಹಿಡಿದಿದ್ದ.

ಅಲ್ಲಿ ಅಪ್ಪ, ನಾನು ಮತ್ತು ನನ್ನ ಸಹೋದರ ಕುಳಿತು ಮಾತು ಪ್ರಾರಂಭಿಸಿದೆವು. ನಾಳಿನ ಪರೀಕ್ಷೆಗೆ ಹಿಂದೆ ಓದಿದ್ದೆಲ್ಲಾ ಒಮ್ಮೆ ಪುನರಾವರ್ತಿಸೋಣ ಎಂದು ಪಾಳಿಯಂತೆ ಒಮ್ಮೆ ನಾನು ಒಮ್ಮೆ ಅವನು ಪ್ರಶ್ನಾವಳಿ ಪ್ರಾರಂಭಿಸಿದೆವು. ಬಹಳ ಕಡಿಮೆ ಸಮಯದಲ್ಲಿ ನಮಗೆ ಅನೇಕ ಸ್ನೇಹಿತರು ಪರಿಚಿತರಾದರು. ಹೇಗೆ ಅಂತ ಕೇಳ್ತೀರ, ಅವರೂ ನಮ್ಮಂತೆ ಪರೀಕ್ಷೆ ಬರೆಯಲು ಬಂದಿದ್ದವರು.

ಬೋಗಿಯ ಅರ್ಧದಷ್ಟು ಅವರೇ. ಯಾರ ಕಣ್ಣಲ್ಲೂ ನಿದ್ರೆ ಇಲ್ಲ. ನಾಳೆಯ ಕನಸೇ ಎಲ್ಲ. ಕೆಲವರು ಈ ಹುಡುಗರ ಗಲಾಟೆ ಸಾಕಪ್ಪ ಅಂತ ಮುದುಡಿ ಮಲಗಿಬಿಟ್ಟರು. ಇನ್ನೂ ಕೆಲವರು ನಿದ್ದೆಬಾರದ ಸಂಕಟದಲ್ಲಿಯೂ ಕಷ್ಟಪಟ್ಟು ಮಲಗಲು ಪ್ರಯತ್ನಿಸುತ್ತಿದ್ದರು. ಈ ನಡುವೆ ನಮ್ಮ ಪ್ರಶ್ನಾವಳಿ ಕಾರ್ಯಕ್ರಮದ ವ್ಯಾಪ್ತಿ ವಿಸ್ತಾರವಾಯಿತು. ವಿವಿಧ ಮೂಲೆಗಳಿಂದ ಪ್ರಶ್ನೆಗಳ ಪ್ರಹಾರಕ್ಕೇ ಪ್ರತಿ ಉತ್ತರಗಳು ಸಜ್ಜಾಗಿ ನಿಲ್ಲುತ್ತಿದ್ದವು.

ಕನ್ನಡ, ಇಂಗ್ಲಿಷ್, ಗಣಿತ, ಸಮಾಜ, ವಿಜ್ಞಾನ, ಸಾಮಾನ್ಯ ಜ್ಞಾನ ಎಲ್ಲಾ ಅಂಶಗಳು ಮನನವಾಗುವ ಜೊತೆಗೆ ಕೆಲವು ಶಾರ್ಟ್‌ಕಟ್‌ಗಳೂ ಹರಿದವು. ಅದೊಂದು ರೀತಿ ಕೋಚಿಂಗ್ ಕ್ಲಾಸ್ ಆಗಿತ್ತು. ಅಲ್ಲಿ ಸೇರಿದವರೆಲ್ಲ ಭಾವಿ ಶಿಕ್ಷಕರೇ. 10 ಗಂಟೆಗಳ ಆ ಪ್ರಯಾಣ ಆಯಾಸವೆನಿಸದೆ ಹೊಸ ಆತ್ಮವಿಶ್ವಾಸ ಮೂಡಿಸಿತು.

ಮುಂಜಾನೆ ಚಾಯ್‌ ಚಾಯ್‌ ಎಂದು ಬಂದ ಹುಡುಗ ಸುಪ್ರಭಾತ ಹಾಡುತ್ತ ಬಿಸಿ ಚಾಯ್ ಕೊಟ್ಟ. ಅವನು ಕೊಟ್ಟ ಚಾಯ್‌ ಕುಡಿಯುವುದರಲ್ಲಿ ಕೊಪ್ಪಳ ನಿಲ್ದಾಣ ಬಂತು. ಎಲ್ಲಾ ಸ್ನೇಹಿತರ ಬಳಗಕ್ಕೆ ವಿದಾಯ ಪಡೆದೆವು. ಇಂದು ಶಿಕ್ಷಕಿಯಾಗಿ ಏಳು ವರ್ಷ ತುಂಬಿದೆ. ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಯಾವಾತ್ತು ಪ್ರಯಾಣಿಸಿದರೂ ಸೀಟು ಬುಕ್ ಮಾಡಿಯೇ ಹೋಗೋದು ಈಗ. ಪ್ರತಿ ಬಾರಿಯೂ ಆ ನೆನಪು ಒಂದು ಸಣ್ಣ ನಗುವನ್ನು ತರುತ್ತದೆ.
–ಜಹಾನ್ ಆರಾ ಕುಷ್ಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT