ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ತುಳಸೀ ಗಿಡ ಒಣಗಿಹೋಯ್ತು

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

‘ಏ ಬಳೆ ಇಟ್ಕೊಳ್ರೆ... ಬಳೆಗಾರ ಬಂದಿದಾನೆ’ ಎಂದು ಅತ್ತೆ ಕರೆದಾಗ ಕೈ ಸೆರಗಿಗೊರಿಸಿ ಓಡಿಹೋಗಿದ್ದೆ. ಅದೇನೋ ಗೊತ್ತಿಲ್ಲ, ಬಣ್ಣ ಬಣ್ಣದ ಗಾಜಿನ ಬಳೆಗಳನ್ನು ನೋಡಿದಾಗ ಆಕಾಶದಲ್ಲಿ ಕಾಮನಬಿಲ್ಲು ಕಂಡಷ್ಟು ಸಂಭ್ರಮ. ಯಾವ ಬಳೆ ಆರಿಸಲಿ ಎಂಬುದೇ ಗೊಂದಲ.

ಒಂದಕ್ಕಿಂತ ಒಂದು ಬಣ್ಣ ಚೆನ್ನಾಗಿಯೇ ಕಾಣುತ್ತದೆ. ಅಂತೂ ಇಂತೂ ನೀಲಿ ಬಳೆ ಖರೀದಿಸಿದ್ದೆ. ಅಕ್ಕಪಕ್ಕದ ಮನೆಯವರೂ ಜಗುಲಿಯ ಮೇಲೆ ಜಮಾಯಿಸಿದ್ದರು.

‘ಬಳೆ ತೊಟ್ಟಿದ್ದಾಯ್ತಲ್ಲಾ.. ಹಿತ್ತಲಿನ ಸೊಪ್ಪು ತಂದು ಪಲ್ಯಮಾಡು’ ಎಂದು ಅತ್ತೆ ಕೂಗಿದರು. ಮಾಗಿಯ ದಿನಗಳಲ್ಲಿ ನೆಲ ಹದಮಾಡಿ ಬೀಜ ಬಿತ್ತಿ ಮೇಲಿಂದ ಒಣಹುಲ್ಲು ಮುಚ್ಚಿದ್ದೆ. ಆರೈಕೆ ಕಂಡ ಗಿಡ ಸೊಂಪಾಗಿ ಬೆಳೆದಿತ್ತು. ನಾವು ಬೆಳೆದ ಬೆಳೆಯನ್ನು ಕಿತ್ತು ತಂದು ಅದರಿಂದ ಅಡುಗೆ ಮಾಡುವುದು ತುಂಬಾ ಖುಷಿ ಕೊಡುವ ಸಂಗತಿ. ಪಕ್ಕದ ಮನೆಯ ಅಜ್ಜಿ ಬಂದು ‘ಏನಿವತ್ತು ಸೊಪ್ಪಿನ ಅಡುಗೆಯಾ’ ಅಂದಾಗ ಅವರಿಗೂ ಸ್ವಲ್ಪ ಸೊಪ್ಪು ಕಿತ್ತು ಕೊಟ್ಟಿದ್ದೆ. ಹಂಚಿ ತಿನ್ನುವುದರಲ್ಲಿ ಸುಖವಿದೆ ನೋಡಿ. ಅಂತೂ ಸೊಪ್ಪಿನ ಪಲ್ಯ ತಿಂದಿದ್ದಾಯ್ತು.

ಸಂಜೆ ಮಕ್ಕಳು ಶಾಲೆಯಿಂದ ಬಂದವರು ತುಪ್ಪ, ಜೋನಿಬೆಲ್ಲ ಹಾಕಿ ದೋಸೆ ಮಾಡಿಕೊಡು ಎಂದಿದ್ದರು. ಹೌದು, ಆಲೆಮನೆಯ ಸಮಯ ಜೋನಿ ಬೆಲ್ಲ ಎಲ್ಲರಿಗೂ ಇಷ್ಟ. ಪಕ್ಕದಲ್ಲಿದ್ದ ಗಿಡದ ಎಲೆಯನ್ನು ದೊನ್ನೆಯಂತೆ ಮಾಡಿಕೊಂಡು ಬಿಸಿಬೆಲ್ಲ ಅದರಲ್ಲಿ ಹಾಕಿಕೊಂಡು ತಿನ್ನುವ ಮಜವೇ ಬೇರೆ. ಮಲೆನಾಡಿನಲ್ಲಿ ಆಲೆಮನೆಯೆಂದರೆ ಹಬ್ಬದ ವಾತಾವರಣ. ಅವರಿವರು ಎನ್ನುವ ಪ್ರಶ್ನೆಯೇ ಇಲ್ಲ. ಯಾರು ಬಂದರೂ ಕಬ್ಬು, ಕುಡಿಯುವಷ್ಟು ಕಬ್ಬಿನ ಹಾಲು, ತಿನ್ನುವಷ್ಟು ಬಿಸಿ ಬೆಲ್ಲ. ಇನ್ನು ಹತ್ತಿರದವರಿಗೋ ಖಾರ ಹಚ್ಚಿದ ಮಂಡಕ್ಕಿ ಗ್ಯಾರಂಟಿ. ಆದೊಂದು ಸಾರ್ವಜನಿಕ ಸಂಭ್ರಮ.

ಹಾಗೆಯೇ ಸುಗ್ಗಿ ಕೂಡ. ಅವರಿವರ ಮನೆಗೆ ಹೋಗಿ ಎಲ್ಲರ ಜೊತೆ ಅಡಿಕೆ ಸುಲಿಯುತ್ತಾ ಅದೂ ಇದೂ ಕಥೆ ಹೇಳಿ 2-3 ಡಬ್ಬ ಮಾಡಿ ಹಣ ತಂದರೆ ಊರ ದೇವರ ಜಾತ್ರೆಗೆ ಆ ಹಣ ಮಕ್ಕಳ ಸ್ವತ್ತು. ಮನೆಯ ಸುಗ್ಗಿಯಾದರಂತೂ ಮುಗಿದೇ ಹೋಯಿತು. ಕೂಲಿಕಾರನಿಗೆ, ಕೊನೆ ಹೊರುವವನಿಗೆ, ಅಡಿಕೆ ಆರಿಸುವವರಿಗೆ, ಸುಲಿಯುವವರಿಗೆ ಟೀ-ಕಾಫಿ, ಕಷಾಯ ಮಾಡಿಕೊಟ್ಟು ಮುಗಿಯುವುದೇ ಇಲ್ಲ. ಆದರೆ ತುಂಬು ಕುಟುಂಬದಲ್ಲಿ ಅವೆಲ್ಲಾ ಏನೂ ಅನಿಸದು. ಮಾತನಾಡುತ್ತಾ ಅಡಿಕೆ ಸುಲಿಯುತ್ತಿದ್ದರೆ ಮಲೆನಾಡ ಚಳಿ ಕೂಡ ಲೆಕ್ಕಕ್ಕೆ ಬರದಷ್ಟು ಹೆಂಗಸರಲ್ಲಿ ಹಾಡು, ಹಾಸ್ಯ, ಕಥೆ ತುಂಬಿರುತ್ತದೆ.

ಹಾಲು ಕರೆದುಕೊಡು ಬಾ ಎಲ್ರಿಗೂ ಕಾಫಿ ಕೋಡಬೇಕು ಎಂದು ಅತ್ತೆ ಕೂಗಿದಾಗ ಮೈದುನ ಬಿಂದಿಗೆ ತುಂಬಾ ನೊರೆಹಾಲು ಕರೆದು ತಂದಿದ್ದ. ಕೊಟ್ಟಿಗೆಯ ತುಂಬಾ ಹಸುಗಳು ತುಂಬಿರುವುದು ನೋಡುವುದೇ ಒಂದು ಆನಂದ. ಅವುಗಳ ಗಂಟೆನಾದ ಕಿವಿಗಿಂಪು. ದೀಪಾವಳಿಯೆಂದರೆ ಮಲೆನಾಡಿಗರ ಸಂಭ್ರಮದ ಹಬ್ಬ.

ಕೊಟ್ಟಿಗೆ ಶುಚಿಗೊಳಿಸಿ ವರ್ಷಪೂರ್ತಿ ನಮಗಾಗಿ ದುಡಿದು ಎತ್ತು- ಎಮ್ಮೆಯ ಮೈ ತೊಳೆದು ಅವುಗಳ ಮೈಗೆ ಜೇಡಿ ಕೆಮ್ಮಣ್ಣಿನ ಪಟ್ಟಿ ಬಳಿದು, ಬಾಗಿಲಿಗೆ ಅಡಿಕೆಯ ತೋರಣ ಕಟ್ಟಿ, ನೀರು ತುಂಬಿರುವ ಹಂಡೆಗೆ ಕಹಿ ಸೌತೆಯ ಬಳ್ಳಿಯಿಂದ ಅಲಂಕರಿಸಿ ಎದುರಿಗೆ ರಂಗೋಲಿ ಹಾಕಿ, ಅಡುಗೆ ಮನೆಯಿಂದ ಹೊಂಬಣ್ಣದ ಹೋಳಿಗೆಯ ಪರಿಮಳ ಬಂದಿತೆಂದರೆ ಹಬ್ಬಕ್ಕೆ ಸಿದ್ಧವಾದಂತೆಯೇ.

ಎಣ್ಣೆಸ್ನಾನ ಮಾಡಿ ಶುಚಿಯಾದ ಬಟ್ಟೆ ತೊಟ್ಟು ಬೂತಪ್ಪನ ಗುಡಿಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗಿ ಕಾಯಿ ಒಡೆದು ಬರಬೇಕಿತ್ತು. ಯಾವ ಆಡಂಬರ, ಅದ್ದೂರಿಯಿಲ್ಲದ ಮಲೆನಾಡಿಗರ ಸಂಭ್ರಮದ ಹಬ್ಬವಿದು. ತವರಿನಿಂದ ಅಣ್ಣ ಬಂದು ಹಬ್ಬಕ್ಕೆ ಕರೆದಿದ್ದ. ತವರಿಗೆ ಹೋಗದೇ ತುಂಬಾ ದಿನಗಳಾಗಿತ್ತು. ಎರಡು ದಿನದ ಮಟ್ಟಿಗಾದರೂ ಹೋಗಿ ಬರಬೇಕು ಎಂದುಕೊಂಡಿದ್ದೆ. ಪಾತ್ರೆ ಬಿದ್ದ ಶಬ್ದವಾಯಿತು.

‘ಏ ಸಾವಿತ್ರಿ ಪಕ್ಕದ ಮನೆ ಬೆಕ್ಕು ಬಂದಿರಬೇಕು ನೋಡೆ’ ಎಂದು ಗೂರುತ್ತಾ ನನ್ನವರು ಕೂಗಿದಾಗ ಬೆಚ್ಚಿಬಿದ್ದು ಎದ್ದು ಕುಳಿತೆ. ಇಷ್ಟು ಹೊತ್ತು ಹಳೆಯ ದಿನಗಳಿಗೆ ಮರಳಿ ಬಿಟ್ಟಿದ್ದೇನೆ ಎನ್ನುತ್ತಾ ಕೆಳಗಿದ್ದ ಕನ್ನಡಕ ಕಣ್ಣಿಗೇರಿಸಿದೆ. ಬಾಗಿಲಿಗೆ ಒರಗಿಸಿದ್ದ ಊರುಗೋಲು ಹಿಡಿದು ಅಡುಗೆ ಮನೆಗೆ ನಡೆದೆ. ದೊಡ್ಡ ಮನೆ ಖಾಲಿ... ಖಾಲಿ.

ಅತ್ತೆ-ಮಾವ ಈಗಿಲ್ಲ. ನಾದಿನಿಯರು ಮದುವೆಯಾಗಿ ಗಂಡನ ಮನೆ ಸೇರಿದರೆ, ಆಡಿಸಿ ಬೆಳೆಸಿದ ಮಕ್ಕಳು ವಿದೇಶ ಸೇರಿದ್ದಾರೆ. ಯಾಂತ್ರಿಕತೆಯ ಜೀವನ. ಯಾರಿಗೂ ಮಾತನಾಡಲು ಸಮಯವಿಲ್ಲ, ಮನೆಗೆ ಬರುವುದಂತೂ ದೂರದ ಮಾತೇಬಿಡಿ. ಧ್ವನಿಯಾದರೂ ಕೇಳೋಣವೆಂದರೆ ಫೋನ್ ಸರಿಯಿರುವುದೇ ಇಲ್ಲ. ಸಿಟಿಗಾದರೂ ಹೋಗೋಣವೆಂದರೆ ಉತ್ತು ಬಿತ್ತಿದ ಮಲೆನಾಡ ಮಣ್ಣು ನಮ್ಮನ್ನು ಬಿಡುತ್ತಿಲ್ಲ. ಇಲ್ಲಿ ಯಾರ ಹಂಗೂ ಇಲ್ಲ.

ನಮ್ಮದೇ ಕೈ... ನಮ್ಮದೇ ಬಾಯಿ. ಹೇಳುವವರು ಕೇಳುವವರು ಯಾರು ಇಲ್ಲ. ಜೇಡ ಬಲೆ ಹೆಣೆಯುತ್ತಿತ್ತು. ಮನೆ ತುಂಬಾ ಅದರದೇ ಕಾರುಬಾರು. ಒಂದು ಕಾಲದಲ್ಲಿ ಒಪ್ಪ ಒರಣವಾಗಿದ್ದ ನನ್ನ ಮನೆ, ಇಂದು ಹೆಗ್ಗಣದ ಗೂಡಾಗಿ ಮಾರ್ಪಟ್ಟಿದೆ. ಗೋಡೆಯಲ್ಲಿನ ಬಿರುಕಿನಂತೆ ಸಂಬಂಧಗಳು ಅಷ್ಟಕಷ್ಟೆ.

‘ಹಿತ್ತಲಲ್ಲಿ ತುಳಸೀ ಗಿಡ ಒಣಗಿದೆಯಲ್ಲೇ.. ತುಳಸಿ ಒಣಗಬಾರದು’ ಎಂದು ಗೂರಲು ಧ್ವನಿಯಲ್ಲಿ ನನ್ನವರು ನುಡಿದಿದ್ದರು. ಕಳೆದ ದಿನಗಳಲ್ಲಿ ತುಳಸೀ ಇರುವ ಜಾಗವನ್ನು ಸಗಣಿಯಿಂದ ಸಾರಿಸಿ, ರಂಗೋಲಿ ಹಾಕಿ, ಹೂ ಇಟ್ಟು ಅರಿಶಿಣ ಕುಂಕುಮ ಹಾಕಿ ಕೈ ಮುಗಿಯುತ್ತಿದ್ದೆ. ಇಂದು ಕೈಗಳು ನಡುಗುತ್ತಿವೆ. ನೆರಿಗೆ ಗಟ್ಟಿವೆ. ತುತ್ತು ಅನ್ನ ಬೇಯಿಸಲೂ ಶಕ್ತಿ ಇಲ್ಲ. ಮನೆಯ ಹೊಸಿಲಿಗೆ ರಂಗೋಲಿ ಹಾಕದೆ ಅದೆಷ್ಟು ವರುಷಗಳು ಕಳೆದು ಹೋದವೊ?

ಕಳೆದ ವರುಷದ ತೋರಣ ಬಾಗಿಲಲ್ಲಿ ಒಣಗಿ ನೇತಾಡುತ್ತಿದೆ. ಕೈ ಬಳೆಗಳೂ ಬಣ್ಣ ಕಳೆದುಕೊಂಡಿವೆ. ಬಳೆಗಾರ ಬಾರದೇ ಅದೆಷ್ಟು ವರ್ಷಗಳು ಸರಿದವೋ? ಟಿ.ವಿ ಯಿಂದಾಗಿ ಊರಲ್ಲಿ ಸ್ಮಶಾನ ಮೌನ. ಹಕ್ಕಿ ಗುಬ್ಬಿಗಳ ಸದ್ದೂ ಅಡಗಿ ಹೋಗಿದೆ. ಬೇಲಿ ಬದಿಯ ಮಲ್ಲಿಗೆ ಅರಳಿ ಅಲ್ಲೇ ಒಣಗುತ್ತಿದೆ. ತಲೆಬಾಚಲು ಶಕ್ತಿಯಿಲ್ಲದೆ ಕೂದಲು ಗಂಟು ಕಟ್ಟಿಕೊಂಡಿವೆ. ಇನ್ನು ಮಲ್ಲಿಗೆಯ ದಂಡೆ ಮುಡಿಯುವ ಮಾತು ಎಲ್ಲಿಂದ?
ಕೊಟ್ಟಿಗೆಯಲ್ಲಿ ಜಾನುವಾರಗಳ ಬದಲಿಗೆ ಕಟ್ಟಿಗೆ ಪೇರಿಸಲಾಗಿದೆ.

ದನ -ಕರುಗಳ ಕೂಗಂತೂ ಮರತೇಹೋಗಿದೆ. ಆಧುನೀಕತೆಯಿಂದ ಎಲ್ಲಾ ಬಂದಿವೆ . ಆದರೆ ಇರುವ ನೆಮ್ಮದಿ ಮಾಯವಾಗಿದೆ. ದುಡ್ಡುಕೊಟ್ಟರೆ ಎಲ್ಲಾ ಸಿಗಬಹುದು. ನೆಮ್ಮದಿಗೆ, ಭಾವನೆಗಳಿಗೆ ಬೆಲೆ ಕಟ್ಟಲಾದೀತೇ? ಹಿಂದೆ ಹಿಟ್ಟು ಮಾಡುತ್ತಿದ್ದೆವು. ರಾಗಿ ಬೀಸುತ್ತಿದ್ದೆವು. ಬೆಳೆದ ತರಕಾರಿ ತಿಂದು ಆರೋಗ್ಯವಾಗಿದ್ದೆವು. ಆದರೆ ಇಂದು ಎಲ್ಲದಕ್ಕೂ ಯಂತ್ರಗಳು, ಮಾನವ ಕೂಡ ಜೀವಂತ ಯಂತ್ರ.

ಗಂಟಲು ಒಣಗುತ್ತಿದೆ ನೀರು ಕುಡಿಯೋಣವೆಂದರೆ ಬಿಂದಿಗೆಯೂ ಖಾಲಿ. ಬೋರ್‌ವೆಲ್‌ಗಳ ಕಾರುಬಾರಿನಿಂದ ಸದಾಕಾಲ ತುಂಬಿ ತುಳುಕುತ್ತಿದ್ದ ನಮ್ಮ ಬಾವಿ ಕೂಡ ಬತ್ತಿ ಹೋಗಿದೆ. ನಲ್ಲಿ ನೀರೇ ಕುಡಿದು ದಾಹ ನೀಗಿಸಿಕೊಂಡೆ. ಎಷ್ಟೋ ಜನರಿಗೆ ಅಡುಗೆ ಮಾಡಿ ಬಡಿಸಿದ ಕೈ ಈಗ ತನ್ನ ತುತ್ತು ತಿನ್ನಲೂ ನಿತ್ರಾಣವಾಗಿದೆ. ಕಣ್ಣಂಚಿನ ಹನಿಯು ಜಾರಿ ಬೀಳದಂತೆ ಸೆರಗನ್ನು ಅಡ್ಡ ಹಿಡಿದಿದ್ದೆ. ಒಣಗಿದ ಅಡಿಕೆ ಮರಗಳ ನಡುವಿನ ಚಂದ್ರ ಸುಟ್ಟ ರೊಟ್ಟಿಯಂತೆ ಕಾಣುತ್ತಿದ್ದ. ಅವನಿಗೂ ಬದುಕು ಬೇಸರವೆನಿಸಿರಬೇಕು!
–ಸೌಮ್ಯ ಜಂಬೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT