ಉತ್ತಮ ಇಯರ್‌ಬಡ್

ಬೆಲೆಯಲ್ಲಿ ಸ್ವಲ್ಪ ದುಬಾರಿ ಎನಿಸಿದರೂ ಕಂಪನಾಂಕದ ಧ್ವನಿಯ ಪುನರುತ್ಪತ್ತಿಯಲ್ಲಿ ಈ ಇಯರ್‌ಬಡ್‌ನ ವಿಶೇಷತೆ ಅಡಗಿದೆ...

ಉತ್ತಮ ಇಯರ್‌ಬಡ್

ಆಂಪ್ಲಿಫೈಯರ್, ಸ್ಮಾರ್ಟ್‌ಫೋನ್, ಟಿ.ವಿ. –ಯಾವುದೇ ಇರಲಿ, ಅದರಲ್ಲಿ ಧ್ವನಿಯನ್ನು ಪುನರುತ್ಪತ್ತಿ ಮಾಡುವುದು ಸ್ಪೀಕರ್, ಇಯರ್‌ಬಡ್, ಇಯರ್‌ಫೋನ್ ಅಥವಾ ಹೆಡ್‌ಫೋನ್. ಇವುಗಳಲ್ಲಿ ಕಿವಿ ಕಾಲುವೆಯೊಳಗೆ ಕುಳಿತುಕೊಳ್ಳುವಂತಹವುಗಳಿಗೆ ಇಯರ್‌ಬಡ್ ಎಂಬ ಹೆಸರಿದೆ.

ಇವುಗಳ ಜೊತೆ ದೊರೆಯುವ ಹಲವು ಗಾತ್ರದ ಕುಶನ್‌ಗಳಲ್ಲಿ ನಿಮ್ಮ ಕಿವಿಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತಿ ಮುಖ್ಯವಾಗುತ್ತದೆ. ಇದು ಕಿವಿಯ ಕಾಲುವೆಯನ್ನು ಪೂರ್ತಿಯಾಗಿ ಮುಚ್ಚಿ ಕುಳಿತಾಗ ಮಾತ್ರ ಸಂಗೀತದ, ಅದರಲ್ಲೂ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ಸರಿಯಾಗಿ ಆಗುತ್ತದೆ.

ಈ ಸಲ ಅಂತಹ ಒಂದು ಸ್ವಲ್ಪ ದುಬಾರಿ ಆದರೆ ನೀಡುವ ಹಣಕ್ಕೆ ಸರಿಯಾದ ಇಯರ್‌ಬಡ್ ಕಡೆ ನಮ್ಮ ವಿಮರ್ಶಾದೃಷ್ಟಿ ಬೀರೋಣ. ಅದುವೇ ಸೆನ್‌ಹೈಸರ್ ಮೊಮೆಂಟಂ ಇನ್-ಇಯರ್ (Sennheiser Momentum In-Ear).

ಈ ಇಯರ್‌ಬಡ್‌ನ ಕೇಬಲ್ ವೃತ್ತಾಕಾರವೂ ಅಲ್ಲ, ಪಟ್ಟಿಯಾಕಾರವೂ ಅಲ್ಲ. ಬದಲಿಗೆ ಸ್ವಲ್ಪ ದೀರ್ಘವೃತ್ತಾಕಾರದ್ದು. ಆದುದರಿಂದ ಇದರ ಕೇಬಲ್ ಸಿಕ್ಕುಹಾಕಿಕೊಳ್ಳುವುದಿಲ್ಲ. ಈ ಕೇಬಲ್ ಕೆಂಪು ಮತ್ತು ಕಪ್ಪು ಎರಡು ಬಣ್ಣಗಳಲ್ಲಿದೆ. ಅಂದರೆ ಒಂದು ಭಾಗ ಕಪ್ಪು ಮತ್ತಿನ್ನೊಂದು ಭಾಗ ಕೆಂಪು ಬಣ್ಣದಲ್ಲಿದೆ. ನೋಡಲು ಸುಂದರವಾಗಿದೆ. ಕಿವಿಗೆ ಜೋಡಿಸಲು ಕೇಬಲ್ ಎರಡಾಗಿ ವಿಭಜನೆಯಾದ ನಂತರ ಕೇಬಲ್‌ಗಳನ್ನು ಒಟ್ಟಿಗೆ ಇಟ್ಟುಕೊಳ್ಳಲು ಒಂದು ಚಿಕ್ಕ ಸರಿಸಬಹುದಾದ ಜೋಡಣೆ ಇದೆ. ಆದುದರಿಂದ ಕೇಬಲ್‌ನ ಕೊನೆಯ ಭಾಗ ಕೂಡ ಸುಕ್ಕುಹಾಕಿಕೊಳ್ಳದಂತೆ ತಡೆಯಬಹುದು.

ಕಿವಿಯೊಳಗೆ ಕುಳಿತುಕೊಳ್ಳುವ ಇಯರ್‌ಬಡ್ ಅಂಗ ತುಂಬ ಚೆನ್ನಾಗಿದೆ. ಅದರ ಪೈಪ್ ಲೋಹದ್ದಾಗಿದೆ. ಉಳಿದ ಭಾಗಗಳು ಪ್ಲಾಸ್ಟಿಕ್ಕಿನವು. ಹಿಂಭಾಗದಲ್ಲಿ ಸೆನ್‌ಹೈಸರ್‌ನ ಲೋಗೊ ಇರುವ ಭಾಗ ಮಾತ್ರ ಲೋಹ. ಸಾಮಾನ್ಯವಾಗಿ ಬಹುತೇಕ ಇಯರ್‌ಬಡ್‌ ಜೊತೆ ಮೂರು ಜೊತೆ ಕುಶನ್ ನೀಡುತ್ತಾರೆ. ಆದರೆ ಇದರ ಜೊತೆ ನಾಲ್ಕು ಜೊತೆ ಕುಶನ್ ನೀಡಿದ್ದಾರೆ.

ಈ ಕುಶನ್‌ಗಳ ಗುಣಮಟ್ಟವೂ ಚೆನ್ನಾಗಿದೆ. 3.5 ಮಿ.ಮೀ. ಇಯರ್‌ಫೋನ್ ಕನೆಕ್ಟರ್ ಚಿನ್ನಲೇಪಿತವಾಗಿದ್ದು ಅತ್ಯುತ್ತಮ ಗುಣಮಟ್ಟದ್ದಾಗಿದೆ. ಈ ಕನೆಕ್ಟರ್ ಕೇಬಲ್‌ಗೆ 90 ಡಿಗ್ರಿ ಕೋನದಲ್ಲಿದೆ ಅಂದರೆ ಕೆಲವು ಇಯರ್‌ಫೋನ್‌ಗಳಂತೆ ನೇರವಾಗಿಲ್ಲ.

ಮಾತನಾಡಲು ಮೈಕ್ರೊಫೋನ್‌ ಇದೆ. ಈ ಮೈಕ್ರೊಫೋನ್‌ ಇರುವ ಸಾಧನದಲ್ಲೇ ಕರೆ ಬಂದಾಗ ಸ್ವೀಕರಿಸಲು ಮತ್ತು ಕರೆ ನಿಲ್ಲಿಸಲು ಬಟನ್ ಇದೆ. ಜೊತೆಗೆ ವಾಲ್ಯೂಮ್ ಹೆಚ್ಚು ಮತ್ತು ಕಡಿಮೆ ಮಾಡಲು ಬಟನ್‌ಗಳಿವೆ. ಬಲಕಿವಿಗೆ ಹೋಗುವ ಕೇಬಲ್‌ನಲ್ಲಿ ಇವು ಜೋಡಣೆಯಾಗಿವೆ.

ಫೋನ್ ಇಟ್ಟುಕೊಳ್ಳಲು ಒಂದು ಚಿಕ್ಕ ಪೆಟ್ಟಿಗೆ ನೀಡಿದ್ದಾರೆ. ಪೆಟ್ಟಿಗೆ ಎಂದು ಯಾಕೆ ಹೇಳಿದ್ದು ಅಂದರೆ ಇದು ಸ್ವಲ್ಪ ಗಡುಸಾಗಿದೆ. ಇದರಿಂದಾಗಿ ಇಯರ್‌ಬಡ್‌ ಸುರಕ್ಷಿತವಾಗಿರುತ್ತದೆ. ಇದಕ್ಕೆ ಸುತ್ತ ಝಿಪ್ ಇದೆ. ಇದು ನಿಜಕ್ಕೂ ಚೆನ್ನಾಗಿದೆ. ಪ್ರಯಾಣಕಾಲದಲ್ಲಿ ಉಪಯುಕ್ತ. ಈ ಇಯರ್‌ಬಡ್ ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಿಗೆ ಎಂದು ಎರಡು ಮಾದರಿಗಳಲ್ಲಿ ಲಭ್ಯ. ನಮ್ಮಲ್ಲಿರುವುದು ಆಂಡ್ರಾಯ್ಡ್‌ ಮಾದರಿ.

ಎಲ್ಲ ಕಂಪನಾಂಕಗಳ ಧ್ವನಿಯ ಪುನರುತ್ಪತ್ತಿ ನಿಜಕ್ಕೂ ತುಂಬ ಚೆನ್ನಾಗಿದೆ. ಇದರ ವಿಶೇಷತೆ ಇರುವುದು ಅತಿ ಕಡಿಮೆ ಕಂಪನಾಂಕದ ಧ್ವನಿಯ (bass) ಹಾಗೂ ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿಯಲ್ಲಿ. ಇವು ಅತ್ಯುತ್ತಮವಾಗಿವೆ.

ಇಯರ್‌ಬಡ್‌ಗಳಲ್ಲಿ ಉತ್ತಮ ಬಾಸ್ ಪಡೆಯುವುದು ಕೆಲವೇ ಕೆಲವು ಇಯರ್‌ಬಡ್‌ಗಳಲ್ಲಿ ಸಾಧ್ಯ. ಈ ಇಯರ್‌ಬಡ್ ಕೂಡ ಅದೇ ಜಾತಿಗೆ ಸೇರಿದ್ದು. ಉತ್ತಮ ಬಾಸ್ ಬೇಕು ಎನ್ನುವವರಿಗೆ ಇದು ತೃಪ್ತಿ ನೀಡಬಲ್ಲುದು. ತಬಲ, ಮೃದಂಗ ಇತ್ಯಾದಿಗಳನ್ನು ಆಲಿಸಿದಾಗ ಆ ಉಪಕರಣಗಳು ನಿಜಕ್ಕೂ ನಮ್ಮ ಕಿವಿಯೊಳಗೆ ಧ್ವನಿಸುತ್ತಿರುವಂತೆ ಭಾಸವಾಗುತ್ತದೆ.

ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿ ಈಗಾಗಲೇ ತಿಳಿಸಿದಂತೆ ಚೆನ್ನಾಗಿದೆ. ಆದರೆ ಈ ವಿಭಾಗದಲ್ಲಿ ಧ್ವನಿಯ ತೀಕ್ಷ್ಣತೆ ಸ್ವಲ್ಪ ಅಧಿಕ ಎನ್ನಿಸುತ್ತದೆ. ಮಧ್ಯಮ ಕಂಪನಾಂಕದ, ಅಂದರೆ ಮಾನವ ಧ್ವನಿಯ ಪುನರುತ್ಪತ್ತಿ ಇನ್ನೂ ಸ್ವಲ್ಪ ಉತ್ತಮವಾಗಿದ್ದು ಇನ್ನಷ್ಟು ನಿಖರವಾಗಿದ್ದರೆ ಉತ್ತಮವಾಗಿತ್ತು. ಆದರೂ ಸಂಗೀತ ಆಲಿಸುವಾಗ ಎಲ್ಲೂ ಕಿರಿಕಿರಿ ಎನ್ನಿಸುವುದಿಲ್ಲ. ಗಂಟೆಗಟ್ಟಲೆ ಬಳಸಿದರೆ ಕಿವಿಗೆ ಶ್ರಮವಾಗುವುದೂ ಇಲ್ಲ. ನಿಮ್ಮ ಕಿವಿಯ ಗಾತ್ರಕ್ಕೆ ಸರಿಯಾದ ಕುಶನ್ ಬಳಸುವುದು ಈ ಇಯರ್‌ಬಡ್‌ನಲ್ಲೂ ಅತಿ ಮುಖ್ಯವಾಗುತ್ತದೆ. ಸರಿಯಾದ ಕುಶನ್ ಬಳಸಿದರೆ ಹೊರಗಡೆಯ ಶಬ್ದ ಕಿವಿಯೊಳಗೆ ಬರುವುದು ಅತಿ ಕಡಿಮೆಯಾಗುತ್ತದೆ (noise isolation).

ಹಲವು ಇಯರ್‌ಬಡ್‌ಗಳಲ್ಲಿ ನೀಡುವಂತೆ ಇದರಲ್ಲಿ ಕೇಬಲ್ ಅನ್ನು ಅಂಗಿಗೆ ಜೋಡಿಸಲು ಒಂದು ಕ್ಲಿಪ್ ನೀಡಿಲ್ಲ. ಇಷ್ಟು ದುಬಾರಿ ಇಯರ್‌ಬಡ್‌ ಜೊತೆ ಒಂದು ಸಣ್ಣ ಕ್ಲಿಪ್ ನೀಡಿದ್ದರೆ ಚೆನ್ನಾಗಿತ್ತು. ಹಾಗೆಯೇ ವಿಮಾನದ ಮನರಂಜನೆಯ ಸಾಧನದ ಜೊತೆ ಬಳಸಲು ಒಂದು ಅಡಾಪ್ಟರ್ ನೀಡಬಹುದಿತ್ತು.

ವಾರದ ಆ್ಯಫ್‌(app): ಪ್ರಪಂಚ ಗಡಿಯಾರ
ನೀವು ಪ್ರಪಂಚ ಪರ್ಯಟನೆ ಮಾಡುತ್ತಿದ್ದೀರಾ? ನಿಮ್ಮ ಸ್ನೇಹಿತರು ಅಥವಾ ಬಂಧುಗಳು ಪ್ರಪಂಚದ ಯಾವುದೋ ದೇಶದ ಯಾವುದೋ ನಗರದಲ್ಲಿದ್ದಾರಾ? ಆ ಸ್ಥಳದಲ್ಲಿ ಈಗ ಸಮಯ ಎಷ್ಟು? ಅಂದರೆ ಪ್ರಪಂಚದ ಯಾವ ನಗರದಲ್ಲಿ ಈಗ ಎಷ್ಟು ಸಮಯ ಎಂದು ತಿಳಿಯಬೇಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ನಿಮಗೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಹಲವು ಗಡಿಯಾರದ ಕಿರುತಂತ್ರಾಂಶಗಳು (ಆ್ಯಪ್) ದೊರೆಯುತ್ತವೆ.

ಅಂತಹ ಒಂದು ಕಿರುತಂತ್ರಾಂಶ ಬೇಕಿದ್ದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ World Clock by timeanddate.com ಎಂದು ಹುಡುಕಿ ಅಥವಾ bit.ly/gadgetloka292 ಜಾಲತಾಣಕ್ಕೆ ಭೇಟಿ ನೀಡಿ. ಪ್ರಪಂಚದ ಬಹುತೇಕ ನಗರಗಳ ಆಯ್ಕೆ ಇದರಲ್ಲಿವೆ. ಎರಡು ಮೂರು ಗಡಿಯಾರಗಳನ್ನು ಹಾಕಿಕೊಂಡು ಒಂದರಲ್ಲಿ ನಿಮ್ಮೂರಿನ ಸಮಯ, ಇನ್ನೊಂದರಲ್ಲಿ ಇನ್ನೊಂದು ನಗರದ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಏಸುಸ್ ಕಂಪೆನಿಯ ಮೇಲೆ ಒಂದು ಆರೋಪವೇನೆಂದರೆ ಅದು ಒಂದೇ ಹೆಸರಿನಲ್ಲಿ ಐದಾರು ಬೇರೆ ಬೇರೆ ಗುಣವೈಶಿಷ್ಟ್ಯಗಳ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ ಎಂದು. ಉದಾಹರಣೆಗೆ ಝೆನ್‌ಫೋನ್ 2 ರಲ್ಲಿ ಆರು ವಿಭಿನ್ನ ಮಾದರಿಗಳಿದ್ದವು. ಈ ದೂರನ್ನು ಗಂಭೀರವಾಗಿ ತೆಗೆದುಕೊಂಡ ಏಸುಸ್ ಕಂಪೆನಿಯವರು ಹೊಸ ಝೆನ್‌ಫೋನ್ 4 ಫೋನ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಎಷ್ಟು ಮಾದರಿಗಳಿವೆ ಗೊತ್ತೆ? ಕೇವಲ ಆರು!

ಗ್ಯಾಜೆಟ್‌ ಸುದ್ದಿ: ಆಲ್ಗೋಬ್ರಿಕ್ಸ್
ಲೆಗೊ ಇಟ್ಟಿಗೆಗಳು ಗೊತ್ತು ತಾನೆ? ಇವುಗಳನ್ನು ಜೋಡಿಸಿ ಹಲವು ನಮೂನೆಯ ನಿರ್ಮಾಣಗಳನ್ನು ಮಾಡುವುದು ಮಕ್ಕಳಿಗೆ ಮಾತ್ರವಲ್ಲ ಮಕ್ಕಳಂತಹ ಮನಸ್ಸುಳ್ಳ ಎಲ್ಲರಿಗೂ ಇಷ್ಟವಾದ ಆಟ. ಗಣಕಗಳಲ್ಲಿ ಪ್ರೋಗ್ರಾಮಿಂಗ್ ಕಲಿಯುವ ಮೂಲಕ ಮೆದುಳನ್ನು ಚುರುಕು ಮಾಡಬಹುದು ಎಂಬುದು ತಿಳಿದ ವಿಷಯ. ಈಗ ಲೆಗೊ ಮತ್ತು ಪ್ರೋಗ್ರಾಮಿಂಗ್ ಒಂದು ಮಾಡೋಣ. ಅಲ್ಲಿಗೆ ಆಲ್ಗೊಬ್ರಿಕ್ಸ್‌ನ ಪ್ರವೇಶ. ಇವು ಮಾಮೂಲಿ ಲೆಗೊ ಇಟ್ಟಿಗೆಗಳಲ್ಲ. ಇವುಗಳಲ್ಲಿ ಪ್ರೋಗ್ರಾಮಿಂಗ್‌ನ ಮೂಲಭೂತ ತತ್ತ್ವಗಳು ಅಡಕವಾಗಿವೆ.

ಅಂದರೆ ಲೂಪ್, ಕಂಡಿಶನ್, ಫಂಕ್ಷನ್, ಪ್ಯಾರಾಮೀಟರ್, ಇತ್ಯಾದಿ. ಇವುಗಳನ್ನು ಆಯ್ಕೆ ಮಾಡಿಕೊಂಡು ಒಂದು ರೋಬಾಟ್ ಮೂಲಕ ಕೆಲಸ ಮಾಡಿಸಬಹುದು. ಉದಾಹರಣೆಗೆ ಲೂಪ್ ಎಂಬ ಇಟ್ಟಿಗೆಯ ಮೇಲೆ ಎರಡು ಎಂದು ಬರೆದ ಇಟ್ಟಿಗೆ ಇಟ್ಟರೆ ರೋಬಾಟ್ ಎರಡು ಸುತ್ತು ಬರುತ್ತದೆ. ಇವು ಸದ್ಯ ಮಾರುಕಟ್ಟೆಗೆ ಬಂದಿಲ್ಲ.

ಗ್ಯಾಜೆಟ್‌ ಸಲಹೆ: ಪ್ರಭು ಅವರ ಪ್ರಶ್ನೆ: ಬೇಡವಾದ ಕಿರುತಂತ್ರಾಂಶಗಳನ್ನು ತೆಗೆಯುವುದು ಹೇಗೆ?
ಉ:
Settings ನಲ್ಲಿ Apps ಅನ್ನು ಆಯ್ಕೆ ಮಾಡಿ. ಆಗ ಅದು ಇನ್‌ಸ್ಟಾಲ್ ಆಗಿರುವ ಎಲ್ಲ ಕಿರುತಂತ್ರಾಂಶಗಳನ್ನು (ಆ್ಯಪ್) ತೋರಿಸುತ್ತದೆ. ಅದರಲ್ಲಿ ನಿಮಗೆ ಬೇಡವಾದುದನ್ನು ಆಯ್ಕೆ ಮಾಡಿಕೊಂಡು UNINSTALL ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ.

Comments
ಈ ವಿಭಾಗದಿಂದ ಇನ್ನಷ್ಟು
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಫೋನ್‌ಗಳ ಸಾಲಿಗೆ ಮತ್ತೊಂದು ಸೇರ್ಪಡೆ

15 Mar, 2018
ಕಡಿಮೆ ಬೆಲೆಯ ಸಾಧನಗಳು

ಗ್ಯಾಜೆಟ್ ಲೋಕ
ಕಡಿಮೆ ಬೆಲೆಯ ಸಾಧನಗಳು

8 Mar, 2018
ನೋಟ್ 4ನ ಉತ್ತರಾಧಿಕಾರಿ

ಗ್ಯಾಜೆಟ್ ಲೋಕ
ನೋಟ್ 4ನ ಉತ್ತರಾಧಿಕಾರಿ

1 Mar, 2018
ಒಂದು ಉತ್ತಮ ಫೋನ್

ಗ್ಯಾಜೆಟ್ ಲೋಕ
ಒಂದು ಉತ್ತಮ ಫೋನ್

22 Feb, 2018
ಟಿ.ವಿ.ಯನ್ನು  ಸ್ಮಾರ್ಟ್ ಮಾಡಿ

ಗ್ಯಾಜೆಟ್ ಲೋಕ
ಟಿ.ವಿ.ಯನ್ನು ಸ್ಮಾರ್ಟ್ ಮಾಡಿ

15 Feb, 2018