ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣವೇ ಪರಿಪೂರ್ಣ ಜೀವನ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಾರುಕಟ್ಟೆ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ಎಂಬಿಎ ಮಾಡಿದರೆ ಸುಲಭವಾಗಿ ಉದ್ಯೋಗ ದೊರೆಯುತ್ತದೆ ಎಂಬ ಉದ್ದೇಶದೊಂದಿಗೆ ಎಂಬಿಎ ಸೇರಿದ್ದ ಅರ್ಜುನ್‌ ಮೆಹ್ರಾ ಇಂದು ಪ್ರಸಾಧನ ಉತ್ಪನ್ನಗಳನ್ನು ತಯಾರಿಸುವ ಕಂಪೆನಿ ಸ್ಥಾಪಿಸಿದ್ದಾರೆ. ತಮ್ಮ ಸಾಧನೆಯ ಹಾದಿಯಲ್ಲಿನ ಎಡರು ತೊಡರು ಸೇರಿದಂತೆ ಯಶಸ್ಸಿನ ಗುಟ್ಟನ್ನು ಅರ್ಜುನ್‌ ಹಂಚಿಕೊಂಡಿದ್ದಾರೆ.

ಜಾರ್ಖಂಡ್‌ ರಾಜ್ಯದ ಜೆಮ್‌ಶೆಡ್‌ಪುರ ನಮ್ಮ ಊರು. ನಮ್ಮದು ಮಧ್ಯಮವರ್ಗದ ಕುಟುಂಬ. ಅಪ್ಪ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಜೆಮ್‌ಶೆಡ್‌ಪುರದಲ್ಲೇ ಪದವಿ ಮುಗಿಸಿದೆ. ಬಳಿಕ ವಿದ್ಯಾರ್ಥಿ ವೇತನ ಪಡೆದು ಉನ್ನತ ವ್ಯಾಸಂಗಕ್ಕಾಗಿ ದೆಹಲಿಗೆ ಬಂದೆ.

ಈ ವೇಳೆ ವಿದ್ಯಾಭ್ಯಾಸ ಮುಗಿದ ಕೂಡಲೇ ಕೆಲಸ ಸಿಗುವಂತಹ ಕೋರ್ಸ್‌ ಮಾಡಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ಎಂಬಿಎ ಮಾರ್ಕೆಟಿಂಗ್‌ ಆಯ್ದುಕೊಂಡೆ. ಎಂಬಿಎ ಮಾಡುವಾಗ ಕ್ಷೇತ್ರಕಾರ್ಯಕ್ಕಾಗಿ ಆಯುರ್ವೇದ ಉತ್ಪನ್ನಗಳ ಕಂಪೆನಿಯೊಂದರ ಮಾರಾಟ ಪ್ರತಿನಿಧಿಯಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಹೊರಟೆ.

ಆಗ ನನ್ನ ಜತೆಯಲ್ಲಿ ಎಸ್ಸೆಸ್ಸೆಲ್ಸಿ ಫೇಲಾದವರೂ, ಪಾಸಾದವರೂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಇವುಗಳನ್ನು ಮಾರಾಟ ಮಾಡಲು ಎಂಬಿಎ ಓದಬೇಕಾ? ಎಂದು ಅನಿಸಿತು. ನಂತರ ಆ ಕಂಪೆನಿಯ ಉತ್ಪನ್ನಗಳ ಕಡೆ ಗಮನಹರಿಸಿದೆ. ಆಯುರ್ವೇದದ ಬಗ್ಗೆ ಓದಿಕೊಂಡೆ, ಕೆಲ ಕೆಮಿಸ್ಟ್‌ಗಳನ್ನು ಭೇಟಿ ಮಾಡಿ, ಕೆಮಿಕಲ್‌ ಇಲ್ಲದೆ ಪ್ರಸಾಧನ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಮಾಹಿತಿ ಪಡೆದೆ. ಎಂಬಿಎ ಮುಗಿದ ಎರಡೇ ವರ್ಷಗಳಲ್ಲಿ 80 ಸಾವಿರ ರೂಪಾಯಿ ಬಂಡವಾಳದಲ್ಲಿ ಗ್ರೀನ್‌ಬೇರಿ ಆರ್ಗ್ಯಾನಿಕ್ಸ್‌ ಎಂಬ ಕಂಪೆನಿ ಸ್ಥಾಪಿಸಿದೆ.

ಮುಖದ ಕಾಂತಿ ಮತ್ತು ಚರ್ಮದ ಆರೋಗ್ಯಕ್ಕಾಗಿ ಗ್ರೀನ್‌ಬೇರಿ ಆರ್ಗ್ಯಾನಿಕ್‌ ಉತ್ಪನ್ನಗಳನ್ನು ಗ್ರಾಹಕರು ಬಳಸಬಹುದು. ನಮ್ಮ ಪ್ರಸಾಧನ ಉತ್ಪನ್ನಗಳು ಯಾವುದೇ ಅಡ್ಡ ಪರಿಣಾಮ ಉಂಟುಮಾಡುವುದಿಲ್ಲ ಎಂದು ಅರ್ಜುನ್‌ ಹೇಳುತ್ತಾರೆ.
www.facebook.com/FreshGreenBerry

*

ನೀತು ಶರ್ಮಾ
ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಇದ್ದರೆ ಓದುವ ಹಂಬಲಕ್ಕೆ ಬಡತನ ಅಡ್ಡಿಯಾಗದು ಎಂಬುದಕ್ಕೆ ನೀತು ಶರ್ಮಾ ಸಾಕ್ಷಿ.

ಮನೆಯಲ್ಲಿ ಬಡತನ ಇದುದ್ದರಿಂದ ಶಾಲೆ ಬಿಡುವಂತೆ ನೀತು ತಂದೆ ಹೇಳಿದ್ದರು! ಓದಿ ಶಿಕ್ಷಕಿಯಾಗಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಇವರು, ಹಾಲು ಮಾರುತ್ತ ಶಿಕ್ಷಣ ಮುಂದುವರೆಸಿದರು. ನಿತ್ಯ ಹಾಲು ಮಾರಿ ವಿದ್ಯಾಭ್ಯಾಸ ಮಾಡುತ್ತಿರುವ ನೀತು ಹಲವರಿಗೆ ಮಾದರಿಯಾಗಿದ್ದಾರೆ.

ನೀತು ರಾಜಸ್ಥಾನದ ಬಂದೋರ್‌ ಜಿಲ್ಲೆಯವರು. ಇವರ ತಂದೆ ತಾಯಿ ಕೃಷಿ ಕಾರ್ಮಿಕರು. ಬರುವ ಸಂಪಾದನೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿರುವಾಗ ಮಕ್ಕಳನ್ನು ಓದಿಸುವುದು ಅಸಾಧ್ಯ ಎಂದು ನೀತುಗೆ ಶಾಲೆ ಬಿಡುವಂತೆ ಅವರ ತಂದೆ ಹೇಳಿದ್ದರು!

ಶಿಕ್ಷಕಿಯಾಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ನೀತು, ಹೇಗಾದರೂ ಮಾಡಿ ವಿದ್ಯಾಭ್ಯಾಸ ಮುಂದುವರೆಸಬೇಕು ಎಂದು ನಿರ್ಧರಿಸಿದರು. ಆಗ ಅವರಿಗೆ ಕಂಡಿದ್ದು ಹಾಲು ಮಾರುವ ಉದ್ಯೋಗ. ಮುಂಜಾನೆ 4 ಗಂಟೆಗೆ ಎದ್ದು ಮನೆ ಮನೆಗೆ ಹೋಗಿ ಹಾಲು ಸಂಗ್ರಹಿಸುವುದು, ನಂತರ ಪಟ್ಟಣಕ್ಕೆ ಹೋಗಿ ಮಾರಾಟ ಮಾಡಿದ ಬಳಿಕ ಶಾಲೆಗೆ ಹೋಗುತ್ತಿದ್ದರು. ಹೀಗೆ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ್ದು, ಕಂಪ್ಯೂಟರ್‌ ಶಿಕ್ಷಣ ಕೋರ್ಸ್‌ ಓದುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶಿಕ್ಷಕಿಯಾಗುವ ಅವರ ಕನಸು ನನಸಾಗಲಿದೆ.

ನೀತು, ಗಂಡು ಮಕ್ಕಳಂತೆ ಬೈಕ್‌ ಓಡಿಸಿಕೊಂಡು ನಿತ್ಯ 90 ಲೀಟರ್‌ ಹಾಲು ಮಾರಾಟ ಮಾಡುತ್ತಾರೆ. ಇದರಿಂದ ತಿಂಗಳಿಗೆ 12 ಸಾವಿರ ರೂಪಾಯಿ ಸಂಪಾದನೆಯಾಗುತ್ತದೆ. ಈ ಹಣವನ್ನು ಸಹೋದರಿಯರ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದಾರೆ. ಕಂಪ್ಯೂಟರ್‌ ಶಿಕ್ಷಕಿಯ ಕೆಲಸ ಸಿಕ್ಕರೆ ಹಾಲು ಮಾರುವ ಉದ್ಯೋಗ ನಿಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.

ಅಂದು ಅಪ್ಪನ ಮಾತಿಗೆ ಬೆಲೆ ಕೊಟ್ಟು ಶಾಲೆ ಬಿಟ್ಟಿದ್ದರೆ ಊರಿನಲ್ಲಿ ಕೂಲಿ ಮಾಡಬೇಕಿತ್ತು. ಬಡತನ ಎಂಬುದು ಕ್ಷಣಿಕವಾದುದು, ಅದಕ್ಕೆ ಅಂಜದೇ ಪರ್ಯಾಯ ದಾರಿ ಹುಡುಕಿಕೊಂಡು ಮುನ್ನಡೆದರೆ ಯಶಸ್ಸು ಸಿಗುತ್ತದೆ ಎಂದು ಕಿವಿ ಮಾತು ಹೇಳುತ್ತಾರೆ.

*


ಸ್ವಾತಿ ಕುಮಾರಿ
ಆತ್ಮಹತ್ಯೆ ಮಾಡಿಕೊಳ್ಳದಂತೆ ಯುವ ಜನರಲ್ಲಿ ಜಾಗೃತಿ ಮೂಡಿಸುವ ಹೋರಾಟದಲ್ಲಿ ಸಕ್ರಿಯರಾಗಿರುವ ಸ್ವಾತಿ ಕುಮಾರಿಯ ಸಾಧನೆಯ ಕಥೆ ಇದು.

ಸ್ವಾತಿ ಕಾನ್ಪುರ ನಿವಾಸಿ. ಅವರದ್ದು ಅವಿಭಕ್ತ ಕುಟುಂಬ. ಉದ್ಯಮ ಸ್ಥಾಪಿಸಬೇಕು ಎಂಬ ಗುರಿಯೊಂದಿಗೆ ಸ್ವಾತಿ ಎಂಬಿಎಗೆ ಸೇರಿದರು. ನಂತರ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಶೈಕ್ಷಣಿಕ ನಿಧಿಯಿಂದ ವಿದ್ಯಾರ್ಥಿ ವೇತನ ಪಡೆದು ಫ್ರಾನ್ಸ್‌ನಲ್ಲಿ ಬ್ಯುಸಿನೆಸ್‌ ಆ್ಯಂಡ್ ಕಾಮರ್ಸ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಭಾರತಕ್ಕೆ ವಾಪಸ್ಸಾದರು.

ಸ್ವಾತಿ ಉದ್ಯಮ ಆರಂಭಿಸುವ ತಯಾರಿಯಲ್ಲಿ ಇರುವಾಗಲೇ ಅವರ ತಾಯಿ ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ಅಮ್ಮನ ಅಗಲಿಕೆಯಿಂದಾಗಿ ಖಿನ್ನತೆಗೆ ಒಳಗಾದ ಸ್ವಾತಿ ಹಾಸಿಗೆ ಹಿಡಿದರು. ಈ ವೇಳೆ ಅವರ ಚಿಕ್ಕಪ್ಪ ಕೌನ್ಸೆಲಿಂಗ್‌ ಕೊಡಿಸಿ ಸ್ವಾತಿಗೆ ಹೊಸ ಬದುಕು ರೂಪಿಸಿಕೊಳ್ಳಲು ನೆರವಾದರು.

ನಿಧಾನವಾಗಿ ಚೇತರಿಸಿಕೊಂಡ ಸ್ವಾತಿ ಆತ್ಮಹತ್ಯೆ ಕುರಿತಂತೆ ಹಲವು ಪುಸ್ತಕಗಳನ್ನು ಓದಿದರು. ಈ ವಿಷಯದ ಬಗ್ಗೆ ಮನಃಶಾಸ್ತ್ರಜ್ಞರ ಬಳಿ ಚರ್ಚಿಸಿದರು. ನಂತರ ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸುವ ಸಲುವಾಗಿ ಎರಡು ಪುಸ್ತಕಗಳನ್ನು ಬರೆದರು. ಈ ಪುಸ್ತಕಗಳಲ್ಲಿ ಆತ್ಮಹತ್ಯೆ ಕುರಿತಾದ ಮನೋ ವೈಜ್ಞಾನಿಕ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಕಷ್ಟಗಳಿಗೆ ಪರಿಹಾರವಲ್ಲ, ಈ ಜಗತ್ತಿನಲ್ಲಿ ಇದ್ದು ಗೆಲ್ಲಬೇಕೇ ವಿನಾ ಇಲ್ಲದೇ ಏನನ್ನೂ ಜಯಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

ಆತ್ಮಹತ್ಯೆ ಜಾಗೃತಿ ಅಭಿಯಾನ ಆರಂಭಿಸಿರುವ ಸ್ವಾತಿ, ಉಪನ್ಯಾಸ ನೀಡುವುದು ಹಾಗೂ ಆತ್ಮಹತ್ಯೆ ತಡೆಗಾಗಿ ಬೀದಿ ನಾಟಕಗಳನ್ನು ಆಡಿಸುವ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಆತ್ಮಹತ್ಯೆ ಕುರಿತಂತೆ ಅಮ್ಯಾರಾ ಮತ್ತು ವಿತೌಟ್‌ ಎ ಗುಡ್‌ಬೈ ಎಂಬ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಈ ಎರಡು ಪುಸ್ತಕಗಳು ಸ್ವಾತಿಗೆ ಉತ್ತಮ ಹೆಸರು ತಂದುಕೊಟ್ಟಿವೆ.
www.facebook.com/SwatiKumari.Swatz

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT