ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನಲ್ಲಿ ಮತ್ತೆ ಬಿಕ್ಕಟ್ಟು ಆಡಳಿತದ ಮೇಲೆ ಕೆಟ್ಟ ಪರಿಣಾಮ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನಮ್ಮ ನೆರೆಯ ತಮಿಳುನಾಡಿನಲ್ಲಿ ಮತ್ತೆ ಗಂಭೀರ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ. ಜಯಲಲಿತಾ ನಿಧನದ ನಂತರದ ಬೆಳವಣಿಗೆಯಲ್ಲಿ ಹೋಳಾಗಿದ್ದ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಎರಡು ಬಣಗಳು ವಿಲೀನಗೊಂಡು ದಿನ ಕಳೆಯುವುದರ ಒಳಗೆ ಇಡೀ ರಾಜಕೀಯ ಹೊಸ ತಿರುವು ಪಡೆದುಕೊಂಡಿದೆ. ಅದೇ ಪಕ್ಷದ 19 ಶಾಸಕರು ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ. ಸರ್ಕಾರಕ್ಕೆ ಊರುಗೋಲಾಗಿದ್ದ ಮಿತ್ರಪಕ್ಷ ಪಿಎಂಕೆಯ ಮೂವರು ಶಾಸಕರೂ ಇದೇ ದಾರಿ ತುಳಿದಿದ್ದಾರೆ. ಹೀಗಾಗಿ, 234 ಸದಸ್ಯರ ವಿಧಾನಸಭೆಯ ಸಂಖ್ಯಾಬಲ ಪರಿಗಣಿಸಿದರೆ ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದ ಸರ್ಕಾರದ ಬೆಂಬಲಿಗರ ಸಂಖ್ಯೆ 112ಕ್ಕೆ ಇಳಿದಿದೆ. ಸರಳ ಬಹುಮತಕ್ಕೆ ಇನ್ನೂ ಆರು ಶಾಸಕರ ಬೆಂಬಲ ಬೇಕು. ಅಂದರೆ ಅದರ ಅಸ್ತಿತ್ವವೇ ಅಪಾಯದಲ್ಲಿದೆ. ಇನ್ನೊಂದು ಕಡೆ, ಸರ್ಕಾರದ ವಿರುದ್ಧ ಪ್ರತಿಪಕ್ಷ ಡಿಎಂಕೆ ಕತ್ತಿ ಝಳಪಿಸುತ್ತಿದೆ. ವಿಶ್ವಾಸಮತ ಕೇಳಲು ಮುಖ್ಯಮಂತ್ರಿಗೆ ಸೂಚಿಸುವಂತೆ ರಾಜ್ಯಪಾಲ ರನ್ನು ಒತ್ತಾಯಿಸಿದೆ. ಸದ್ಯಕ್ಕೇನೋ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೃಪೆ, ಆಶೀರ್ವಾದ ಇರುವುದರಿಂದ ಪಳನಿಸ್ವಾಮಿ ಅವರು ಹಾಗೂಹೀಗೂ ಒಂದಿಷ್ಟು ದಿನ ತಳ್ಳಬಹುದು. ಆದರೆ ಸಂಸದೀಯ ಜನತಂತ್ರದಲ್ಲಿ ಸಂಖ್ಯಾಬಲವೇ ಮುಖ್ಯ. ಸದನದ ಒಳಗೆ ಬಹುಮತವನ್ನು ಸಾಬೀತು ಮಾಡಲೇಬೇಕಾಗುತ್ತದೆ. ಇದು ಶಾಸಕರ ಖರೀದಿ, ಒತ್ತಡ ಹೇರುವುದು, ಆಮಿಷ ಒಡ್ಡುವುದು ಮುಂತಾದ ತಂತ್ರಗಾರಿಕೆಗೆ, ಅಕ್ರಮಕ್ಕೆ ಎಡೆ ಮಾಡಿಕೊಟ್ಟರೂ ಆಶ್ಚರ್ಯ ಇಲ್ಲ.

ಇಷ್ಟಕ್ಕೂ, ಭಿನ್ನಮತೀಯ ಚಟುವಟಿಕೆಯನ್ನು ಪೋಷಿಸುತ್ತ ಈ ಎಲ್ಲ ಆಟಗಳನ್ನು ಆಡಿಸುತ್ತಿರುವವರು ಈಗ ಬೆಂಗಳೂರು ಜೈಲಿನಲ್ಲಿ ಇರುವ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ. ಅವರ ನಿಕಟ ಸಂಬಂಧಿಯೂ ಆದ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ. ದಿನಕರನ್‌ ಹೊರಗೆ ನಿಂತು ದಾಳ ಉರುಳಿಸುತ್ತಿದ್ದಾರೆ. ಅಂದರೆ, ತಮಿಳುನಾಡಿನ ರಾಜಕಾರಣದಲ್ಲಿ ತನ್ನನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದು ಶಶಿಕಲಾ ಅವರು ಕಂಬಿಯ ಹಿಂದೆ ಇದ್ದುಕೊಂಡೇ ಸಾಬೀತು ಮಾಡಲು ಹೊರಟಿದ್ದಾರೆ. ಜಯಾ ನೆರಳಿನಲ್ಲಿಯೇ ಬೆಳೆದ ಅವರು ಜಯಾ ಸಾವಿನ ಬೆನ್ನಲ್ಲೇ ಇಡೀ ಪಕ್ಷವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಹವಣಿಸಿದ್ದಲ್ಲದೇ ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿದ್ದರು. ಅದಕ್ಕಾಗಿ ರೆಸಾರ್ಟ್ ರಾಜಕಾರಣಕ್ಕೂ ಕೈಹಾಕಿ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದರು. ಇಷ್ಟೆಲ್ಲ ನಡೆದರೂ ಜನಾಭಿಪ್ರಾಯ ಅವರ ಪರವಾಗಿರಲಿಲ್ಲ. ಪ್ರಕರಣವೊಂದರಲ್ಲಿ ಜೈಲು ಸೇರಬೇಕಾಯಿತು. ಮುಖ್ಯಮಂತ್ರಿ ಹುದ್ದೆ ಕನಸಾಗಿಯೇ ಉಳಿದರೂ ಜೈಲಿನಿಂದಲೇ ರಿಮೋಟ್‌ ಕಂಟ್ರೋಲ್‌ ಮೂಲಕ ನಿಯಂತ್ರಿಸುವ ಪ್ರಯತ್ನವನ್ನೇನೂ ಅವರು ಕೈಬಿಟ್ಟಂತಿಲ್ಲ. ಸರ್ಕಾರದ ಬುಡವನ್ನೇ ಅಲ್ಲಾಡಿಸುವಷ್ಟು ಶಕ್ತಿವಂತರಾಗಿದ್ದಾರೆ. ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಬಣ ವಿಲೀನದಿಂದ ಅವರು ಮತ್ತು ಅವರ ಬೆಂಬಲಿಗರು ವಿಚಲಿತರಾದಂತಿದೆ. ಶಶಿಕಲಾ ಮತ್ತು ದಿನಕರನ್‌ ಅವರನ್ನೇ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟಿಸುವುದು ಕೂಡ ವಿಲೀನದ ಷರತ್ತುಗಳಲ್ಲಿ ಒಂದಾಗಿತ್ತು. ಅದೀಗ ಏನಾಗುತ್ತದೋ ಕಾದು ನೋಡಬೇಕಿದೆ.

ಇದು ಆಡಳಿತ ಪಕ್ಷದೊಳಗಿನ ಬಂಡಾಯ ಎಂದು ಸುಮ್ಮನಾಗುವಂತೆಯೂ ಇಲ್ಲ. ಏಕೆಂದರೆ ಇದರಿಂದ ಸೃಷ್ಟಿಯಾಗುವ ಅಭದ್ರತೆ, ಅನಿಶ್ಚಯ ಯಾವ ರಾಜ್ಯಕ್ಕೂ ಒಳ್ಳೆಯದಲ್ಲ. ಇದು ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ಅವರಿಂದ ಕೆಲಸ ಮಾಡಿಸಿಕೊಳ್ಳಲು ಕಷ್ಟವಾಗುತ್ತದೆ. ಇದರ ಕಹಿಫಲ ಅನುಭವಿಸಬೇಕಾದವರು ಜನಸಾಮಾನ್ಯರು. ಆದ್ದರಿಂದ ಪಕ್ಷದ ಒಳಗಿನ ವಿದ್ಯಮಾನಗಳು ರಾಜ್ಯಾಡಳಿತದ ಮೇಲೆ ಪ್ರಭಾವ ಬೀರದಂತೆ ಮುಖ್ಯಮಂತ್ರಿ ನೋಡಿಕೊಳ್ಳಬೇಕು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಬೇಕು. ಅಲ್ಲಿನ ಅಸ್ಥಿರತೆ ಬೇಗ ಅಂತ್ಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT